ADVERTISEMENT

ಕಾರ್ಮಿಕರ ಚಿಲ್ಲರೆ ಹಣದುಬ್ಬರ ಇಳಿಕೆ

ಏಪ್ರಿಲ್‌ನಲ್ಲಿ ಶೇ 3.87ರಷ್ಟು ದಾಖಲು: ಕಾರ್ಮಿಕ ಸಚಿವಾಲಯ

ಪಿಟಿಐ
Published 8 ಜೂನ್ 2024, 16:00 IST
Last Updated 8 ಜೂನ್ 2024, 16:00 IST
   

ನವದೆಹಲಿ: ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರ ದರವು ಏಪ್ರಿಲ್‌ನಲ್ಲಿ ಶೇ 3.87ಕ್ಕೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ 5.09ರಷ್ಟಿತ್ತು ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್‌ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ–ಕೈಗಾರಿಕಾ ಕಾರ್ಮಿಕರು (ಸಿಪಿಐ–ಐಡಬ್ಲ್ಯು) ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ.

2023ರ ಮಾರ್ಚ್‌ನಲ್ಲಿ ಶೇ 5.79ರಷ್ಟಿದ್ದ ಹಣದುಬ್ಬರ ದರವು ಪ್ರಸಕ್ತ ಮಾರ್ಚ್‌ನಲ್ಲಿ ಶೇ 4.20ರಷ್ಟಕ್ಕೆ ಇಳಿದಿದೆ. ಕಳೆದ ಫೆಬ್ರುವರಿಯಲ್ಲಿ ಶೇ 6.16ರಷ್ಟಿದ್ದ ದರವು ಈ ವರ್ಷದ ಫೆಬ್ರುವರಿಗೆ ಶೇ 4.90ಕ್ಕೆ ಕುಸಿದಿದೆ. 

ADVERTISEMENT

ದೇಶದ 88ಕ್ಕೂ ಹೆಚ್ಚು ಕೈಗಾರಿಕೆಗಳ ಪ್ರಮುಖ ಕೇಂದ್ರದ 317 ಮಾರುಕಟ್ಟೆಗಳಿಂದ ಚಿಲ್ಲರೆ ಬೆಲೆಗಳ ಆಧಾರದ ಮೇಲೆ ಪ್ರತಿ ತಿಂಗಳು ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕವನ್ನು ಸಂಗ್ರಹಿಸಲಾಗುತ್ತದೆ.

ಅಖಿಲ ಭಾರತ ಸಿಪಿಐ–ಐಡಬ್ಲ್ಯು ಫೆಬ್ರುವರಿಯಲ್ಲಿ 0.3 ಅಂಶದಷ್ಟು ಏರಿಕೆಯಾಗಿ, 139.2ಕ್ಕೆ ಮುಟ್ಟಿತು. ಆದರೆ, ಮಾರ್ಚ್‌ನಲ್ಲಿ 0.3 ಅಂಶ ಕಡಿಮೆಯಾಗಿ 138.9ಕ್ಕೆ ಇಳಿದಿತ್ತು. ಏಪ್ರಿಲ್‌ನಲ್ಲಿ 0.5 ಅಂಶ ಹೆಚ್ಚಳವಾಗಿ 139.4ಕ್ಕೆ ಮುಟ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಸಿಪಿಐ–ಐಡಬ್ಲ್ಯುಯನ್ನು ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ನಿರ್ಧರಿಸಲು ಮತ್ತು ಪಿಂಚಣಿದಾರರಿಗೆ ಪರಿಹಾರಕ್ಕಾಗಿ ಬಳಸಲಾಗುತ್ತದೆ.

ಇದೇ ವೇಳೆ ಸಚಿವಾಲಯವು ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಅಂಕಿ–ಅಂಶಗಳನ್ನೂ ಸಹ ಬಿಡುಗಡೆ ಮಾಡಿದೆ.

2024ರ ಮಾರ್ಚ್‌ನಲ್ಲಿ ಸಿಪಿಐ–ಎಎಲ್‌ ಮತ್ತು ಸಿಪಿಐ–ಆರ್‌ಎಲ್‌ ವರ್ಷದ ಹಣದುಬ್ಬರ ದರವು ಕ್ರಮವಾಗಿ ಶೇ 7.15 ಮತ್ತು ಶೇ 7.08ರಷ್ಟಿದೆ. ಏಪ್ರಿಲ್‌ನಲ್ಲಿ ಇದು ಶೇ 7.03 ಮತ್ತು ಶೇ 6.96ರಷ್ಟು ದಾಖಲಾಗಿತ್ತು.

ಸಚಿವಾಲಯವು ಪ್ರತಿ ತಿಂಗಳು ಕೃಷಿ ಕಾರ್ಮಿಕರು (ಸಿಪಿಐ–ಎಎಲ್‌) ಮತ್ತು ಗ್ರಾಮೀಣ ಕಾರ್ಮಿಕರಿಗಾಗಿ (ಸಿಪಿಐ–ಆರ್‌ಎಲ್‌) ಚಿಲ್ಲರೆ ಬೆಲೆಯ ಆಧಾರದ ಮೇಲೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು 20ಕ್ಕೂ ಹೆಚ್ಚು ರಾಜ್ಯಗಳ 600 ಹಳ್ಳಿಗಳಿಂದ ಸಂಗ್ರಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.