ADVERTISEMENT

ಕೃಷಿ ಮೂಲಸೌಕರ್ಯಕ್ಕೆ ₹23 ಸಾವಿರ ಕೋಟಿ ಬಂಡವಾಳ ಪ್ರಸ್ತಾವ: ನರೇಂದ್ರ ಸಿಂಗ್ ತೋಮರ್

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 18:48 IST
Last Updated 15 ಜುಲೈ 2022, 18:48 IST

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಮೂಲಸೌಕರ್ಯ ನಿಧಿಗೆ ₹23,000 ಕೋಟಿಯಷ್ಟು ಬಂಡವಾಳ ಹೂಡುವ ಪ್ರಸ್ತಾವಗಳು ಬಂದಿದ್ದು, ಆ ಪೈಕಿ ₹9,000ಕೋಟಿ ಈಗಾಗಲೇ ರೈತರಿಗೆ ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ವಿತರಣೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.

ನಗರದಲ್ಲಿ ನಡೆದ ರಾಜ್ಯ ಕೃಷಿ ಮತ್ತು ತೋಟಗಾರಿಕಾ ಸಚಿವರ ರಾಷ್ಟ್ರೀಯ ಸಮ್ಮೇಳನದ ಕೊನೆಯ ದಿನವಾದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2025–26ರ ಹೊತ್ತಿಗೆ ₹1 ಲಕ್ಷ ಕೋಟಿಯನ್ನು ಕೃಷಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾಲದ ರೂಪದಲ್ಲಿ ವಿತರಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಸಹಕಾರ, ಖಾಸಗಿ ಸಂಸ್ಥೆಗಳು, ಸ್ವಯಂ ರೈತ ಸಂಘಟನೆಗಳು ಯಾರೇ ಈ ಸಾಲ ಪೂರೈಕೆ ನಿಧಿಗೆ ಬಂಡವಾಳ ಒದಗಿಸಲು ಪ್ರಸ್ತಾವ ಸಲ್ಲಿಸಬಹುದಾಗಿದೆ. ರೈತರಿಗೆ ವಿವಿಧ ಯೋಜನೆಗಳಲ್ಲಿ ₹ 2 ಕೋಟಿವರೆಗೆ ಗ್ಯಾರಂಟಿ ಇಲ್ಲದೆ ಸಾಲ ವಿತರಿಸಲು ಇದರಿಂದ ಸಾಧ್ಯವಾಗಲಿದೆ. ದೊಡ್ಡ ಉದ್ಯಮಪತಿಗಳ್ಯಾರೂ ಇದರಲ್ಲಿ ಬಂಡವಾಳ ತೊಡಗಿಸಿಲ್ಲ ಎಂದು ಮಾಹಿತಿ ನೀಡಿದರು.

ADVERTISEMENT

ರೈತರು ಕೃಷಿ ಉತ್ಪನ್ನಗಳನ್ನು ಗಡಿಗಳನ್ನು ಮೀರಿ ಮಾರಾಟ ಮಾಡಲು ಅನುಕೂಲವಾಗುವಂತೆ ಇ–ನ್ಯಾಮ್ ಅಡಿಯಲ್ಲಿ ಪ್ಲಾಟ್‌ಫಾರ್ಮ್ ಆಫ್ ಪ್ಲಾಟ್‌ಫಾರ್ಮ್ಸ್‌ (ಪಿಒಪಿಗಳು) ಸ್ಥಾಪಿಸಲಾಗಿದೆ ಎಂದು ಹೇಳಿದರು.

ಇ–ವಹಿವಾಟಿನ ವ್ಯಾಪ್ತಿಗೆ 1000 ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳನ್ನು ಈಗ ತರಲಾಗಿದೆ. ಕೋವಿಡ್‌ ಪೂರ್ವದಲ್ಲಿ 500 ಮಾರಾಟ ಕೇಂದ್ರಗಳಷ್ಟೆ ಈ ವ್ಯಾಪ್ತಿಯಲ್ಲಿದ್ದವು. ಮುಂದೆ ಇನ್ನಷ್ಟು ಕೃಷಿ ವಹಿವಾಟು ಡಿಜಿಟಲ್ ಆಗಲಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಕೃಷಿ ಮೂಲಸೌಕರ್ಯ ನಿಧಿಯಿಂದ ಸಾಲ ಪಡೆದು ರೈತರಿಗೆ ಅಗತ್ಯವಿರುವ ಶೈತ್ಯಾಗಾರ, ಸಂಗ್ರಹಾಗಾರಗಳನ್ನು ಗ್ರಾಮೀಣ ಪ್ರದೇಶಗಳಲ್ಲೂ ನಿರ್ಮಿಸಬಹುದಾಗಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಸಹಜ ಕೃಷಿ ಹಾಗೂ ಸಾವಯವ ಕೃಷಿಗೆ ನಿರಂತರವಾಗಿ ಒತ್ತು ನೀಡಲಾಗುತ್ತಿದ್ದು, 2023ನೇ ಇಸವಿಯನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸುವ ಪ್ರಸ್ತಾವವನ್ನು ಸಂಯುಕ್ತ ರಾಷ್ಟ್ರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿರಿಧಾನ್ಯದ ಮಾರ್ಕೆಟಿಂಗ್ ಹೇಗೆ ಮಾಡುವುದು ಎಂಬ ಚರ್ಚೆ ಆ ವರ್ಷ ನಡೆಯಲಿದೆ ಎಂದು ಭಾರತದ ಸರ್ಕಾರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಕರ್ನಾಟಕದ ಕೃಷಿ ಸಚಿವ ಬಿ.ಸಿ. ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.