ADVERTISEMENT

ಉಳಿತಾಯ ಖಾತೆ: ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿ ದರ ತಗ್ಗಿಸಿದ ಎಸ್‌ಬಿಐ

ಪಿಟಿಐ
Published 30 ಏಪ್ರಿಲ್ 2019, 16:15 IST
Last Updated 30 ಏಪ್ರಿಲ್ 2019, 16:15 IST
   

ನವದೆಹಲಿ: ಉಳಿತಾಯ ಖಾತೆಯಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ನೀಡುವ ಬಡ್ಡಿದರವನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ತಗ್ಗಿಸಿದೆ.

ಬುಧವಾರದಿಂದಲೇ (ಮೇ 1ರಿಂದ) ಜಾರಿಗೆ ಬರುವಂತೆ ಶೇ 3.25ರಷ್ಟಿದ್ದ ಬಡ್ಡಿ ದರವನ್ನು ಶೇ 2.75ಕ್ಕೆ ಇಳಿಕೆ ಮಾಡಿದೆ.

ಖಾತೆಯಲ್ಲಿ ₹ 1 ಲಕ್ಷಕ್ಕಿಂತ ಕಡಿಮೆ ಮೊತ್ತ ಇದ್ದರೆ ಬಡ್ಡಿದರ ಶೇ 3.5ರಷ್ಟು ಮುಂದುವರಿಯಲಿದೆ ಎಂದು ಬ್ಯಾಂಕ್‌ ತನ್ನ ಜಾಲತಾಣದಲ್ಲಿ ತಿಳಿಸಿದೆ.

ADVERTISEMENT

ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ (ರೆಪೊ) ಶೇ 6ರಷ್ಟಿದೆ. ಇದು ಹೆಚ್ಚಾದರೆ, ಅದಕ್ಕೆ ಅನುಗುಣವಾಗಿ ಉಳಿತಾಯ ಠೇವಣಿಗಳ ಬಡ್ಡಿದರದಲ್ಲಿಯೂ ಏರಿಕೆಯಾಗಲಿದೆ.

2019ರ ಏಪ್ರಿಲ್‌ 30ರವರೆಗೆಉಳಿತಾಯ ಖಾತೆಯಲ್ಲಿ ₹ 1 ಕೋಟಿಯವರೆಗಿನ ಮೊತ್ತಕ್ಕೆ ಶೇ 3.5 ಮತ್ತು ಅದಕ್ಕೂ ಹೆಚ್ಚಿನ ಮೊತ್ತಕ್ಕೆ ಶೇ 4ರಷ್ಟು ಬಡ್ಡಿದರ ನೀಡಿದೆ.

ಮೇ 1 ರಿಂದ ಜಾರಿಗೆ ಬರುವಂತೆತನ್ನ ಉಳಿತಾಯ ಠೇವಣಿ ಮತ್ತು ಅಲ್ಪಾವಧಿ ಸಾಲದ ಬಡ್ಡಿ ದರವನ್ನು ರೆಪೊ ದರದ ಜತೆ ತಳಕು ಹಾಕುವುದಾಗಿ ಎಸ್‌ಬಿಐ ಮಾರ್ಚ್‌ನಲ್ಲಿಯೇ ತಿಳಿಸಿತ್ತು.

₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಉಳಿತಾಯ ಖಾತೆ ಠೇವಣಿಗಳು, ಎಲ್ಲಾ ನಗದು ಸಾಲ ಖಾತೆಗಳು ಹಾಗೂ ಓವರ್‌ಡ್ರಾಫ್ಟ್‌ಗಳ ಬಡ್ಡಿ ದರಗಳು ರೆಪೊ ದರದ ಬದಲಾವಣೆಗಳಿಗೆ ಒಳಪಡಲಿವೆ. ಇದರಿಂದ ಆರ್‌ಬಿಐ ರೆಪೊ ದರದಲ್ಲಿ ಬದಲಾವಣೆ ಮಾಡಿದಾಗೆಲ್ಲಾ ಅದರ ಲಾಭವನ್ನು ಗ್ರಾಹಕರಿಗೆ ತ್ವರಿತವಾಗಿ ವರ್ಗಾವಣೆ ಮಾಡಲು ಅನುಕೂಲ ಆಗಲಿದೆ ಎಂದು ಎಸ್‌ಬಿಐ ಹೇಳಿದೆ.

ಚಿಲ್ಲರೆ ಗ್ರಾಹಕರನ್ನುಮಾರುಕಟ್ಟೆಯ ಅನಿಶ್ಚಿತತೆಯಿಂದ ಕಾಪಾಡಲು ಸಣ್ಣ ಠೇವಣಿ ಮತ್ತು ಸಾಲಗಳನ್ನು ‘ಎಂಸಿಎಲ್‌ಆರ್‌’ ಅಡಿಯಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.