ADVERTISEMENT

ಎಸ್‌ಬಿಐ ನಿವ್ವಳ ಲಾಭ ಇಳಿಕೆ

ಪಿಟಿಐ
Published 3 ಮೇ 2025, 13:00 IST
Last Updated 3 ಮೇ 2025, 13:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) 2024–25ನೇ ಮಾರ್ಚ್‌ ತ್ರೈಮಾಸಿಕದಲ್ಲಿ ₹18,643 ಕೋಟಿ ನಿವ್ವಳ ಲಾಭ ಗಳಿಸಿದೆ. 

2023–24ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹20,698 ಕೋಟಿ ಲಾಭ ಗಳಿಸಿತ್ತು. ಈ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಶೇ 10ರಷ್ಟು ಕಡಿಮೆಯಾಗಿದೆ. 

ಈ ಮಾರ್ಚ್‌ ತ್ರೈಮಾಸಿಕದಲ್ಲಿ ₹1.43 ಲಕ್ಷ ಕೋಟಿ ವರಮಾನಗಳಿಸಲಾಗಿದೆ. ಬಡ್ಡಿ ವರಮಾನ ₹1.19 ಲಕ್ಷ ಕೋಟಿ ಆಗಿದೆ ಎಂದು ಬ್ಯಾಂಕ್‌, ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಬ್ಯಾಂಕ್‌ನ ಸಾಲ ವಸೂಲಾತಿ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 2.24ರಿಂದ ಶೇ 1.82ಕ್ಕೆ ತಗ್ಗಿದೆ. ನಿವ್ವಳ ಎನ್‌ಪಿಎ ಶೇ 0.57ರಿಂದ ಶೇ 0.47ಕ್ಕೆ ಇಳಿಕೆಯಾಗಿದೆ. 

2024–25ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ ₹70,901 ಕೋಟಿ ನಿವ್ವಳ ಲಾಭ ಗಳಿಸಿದೆ. 2023–24ರಲ್ಲಿ ₹61,077 ಕೋಟಿ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 16ರಷ್ಟು ಏರಿಕೆಯಾಗಿದೆ. 

ಪ್ರತಿ ಷೇರಿಗೆ ₹15.90 ಲಾಭಾಂಶ ನೀಡಲು ಬ್ಯಾಂಕ್‌ನ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ. 2025–26ನೇ ಆರ್ಥಿಕ ವರ್ಷದಲ್ಲಿ ಷೇರುಗಳ ಮಾರಾಟದ ಮೂಲಕ ₹25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಒಪ್ಪಿಗೆ ನೀಡಿದೆ. ಅರ್ಹ ಸಾಂಸ್ಥಿಕ ಹೂಡಿಕೆ (ಕ್ಯೂಐಪಿ) ಅಥವಾ ಷೇರು ಮಾರಾಟ ಪ್ರಕ್ರಿಯೆ ಮೂಲಕ ಈ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.