ADVERTISEMENT

ಸೆನ್ಸೆಕ್ಸ್‌: 50 ಸಾವಿರದ ಗಡಿ ದಾಟಿ ವಹಿವಾಟು ಅಂತ್ಯ

ಪಿಟಿಐ
Published 3 ಫೆಬ್ರುವರಿ 2021, 19:51 IST
Last Updated 3 ಫೆಬ್ರುವರಿ 2021, 19:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆಯು ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿ ವಹಿವಾಟು ಮುಕ್ತಾಯಗೊಳಿಸಿದೆ. ಬಜೆಟ್ ನಂತರದ ಖರೀದಿ ಭರಾಟೆಯು ಮೂರನೇ ದಿನವೂ ಮುಂದುವರಿಯಿತು. ವಿದೇಶಿ ಬಂಡವಾಳ ಒಳಹರಿವು ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ಚಲನೆಯು ದೇಶಿ ಷೇರುಪೇಟೆಗಳ ಏರುಮುಖ ಚಲನೆಗೆ ಉತ್ತೇಜನ ನೀಡಿತು ಎಂದು ತಜ್ಞರು ಹೇಳಿದ್ದಾರೆ.

ಬ್ಯಾಂಕಿಂಗ್‌, ಹಣಕಾಸು ಮತ್ತು ಔಷಧ ವಲಯದ ಷೇರುಗಳು ಉತ್ತಮ ವಹಿವಾಟಿಗೆ ಒಳಗಾದವು. ಸಿಮೆಂಟ್‌ ಮತ್ತು ಎಫ್‌ಎಂಸಿಜಿ ಷೇರುಗಳು ಲಾಭಗಳಿಕೆಯ ವಹಿವಾಟಿಗೆ ಒಳಗಾಗಿ ಇಳಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮಧ್ಯಂತರ ವಹಿವಾಟಿನಲ್ಲಿ 50,526 ಅಂಶಗಳ ಸಾರ್ವವಾಲಿಕ ಗರಿಷ್ಠ ಮಟ್ಟ ತಲುಪಿತ್ತು. ವಹಿವಾಟಿನ ಅಂತ್ಯದ ವೇಳೆಗೆ 458 ಅಂಶಗಳ ಏರಿಕೆಯೊಂದಿಗೆ 50,255 ಅಂಶಗಳಿಗೆ ತಲುಪಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 142 ಅಂಶ ಹೆಚ್ಚಾಗಿ 14,790 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಮಧ್ಯಂತರ ವಹಿವಾಟಿನಲ್ಲಿ 14,869 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು.

ಇಂಡಸ್‌ಇಂಡ್ ಬ್ಯಾಂಕ್‌ ಷೇರು ಶೇ 7.65ರಷ್ಟು ಗರಿಷ್ಠ ಗಳಿಕೆ ಕಂಡಿತು. ಪವರ್‌ಗ್ರಿಡ್‌, ಡಾ. ರೆಡ್ಡೀಸ್‌, ಸನ್‌ ಫಾರ್ಮಾ, ಎನ್‌ಟಿಪಿಸಿ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳ ಬೆಲೆಯೂ ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.47ರವರೆಗೂ ಏರಿಕೆ ಕಂಡಿವೆ.

‘ಅಲ್ಪಾವಧಿಗೆ ಆರ್‌ಬಿಐನ ಹಣಕಾಸು ನೀತಿಯ ಬಗ್ಗೆ ಷೇರುಪೇಟೆ ಗಮನ ಹರಿಸಿದ್ದು, ಅದು ಅನುಕೂಲಕರವಾಗಿ ಇರುವ ನಿರೀಕ್ಷೆ ಮಾಡಲಾಗಿದೆ’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ವಿನೋದ್‌ ಮೋದಿ ಹೇಳಿದ್ದಾರೆ.

ಏಷ್ಯಾದಲ್ಲಿ ಶಾಂಘೈ ಹೊರತುಪಡಿಸಿ ಉಳಿದ ಷೇರುಪೇಟೆಗಳು ಸಕಾರಾತ್ಮಕವಾಗಿ ವಹಿವಾಟು ಅಂತ್ಯಗೊಳಿಸಿದವು. ಯುರೋಪ್‌ನ ಷೇರುಪೇಟೆಗಳಲ್ಲಿಯೂ ಸೂಚ್ಯಂಕಗಳು ಏರುಮುಖವಾಗಿದ್ದವು.

ಹೂಡಿಕೆದಾರರ ಸಂಪತ್ತು ವೃದ್ಧಿ: ಮೂರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 12.31 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯವು ದಾಖಲೆಯ ₹ 198.43 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.