ADVERTISEMENT

ಮುಂಬೈ: ಶೇ 1ರವರೆಗೆ ಇಳಿದ ಸೆನ್ಸೆಕ್ಸ್‌

ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ; ವಿದೇಶಿ ಬಂಡವಾಳ ಹಿಂತೆಗೆತ

ಪಿಟಿಐ
Published 3 ಮಾರ್ಚ್ 2023, 5:07 IST
Last Updated 3 ಮಾರ್ಚ್ 2023, 5:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ : ದೇಶದ ಷೇರುಪೇಟೆಗಳು ಗುರುವಾರದ ವಹಿವಾಟಿನಲ್ಲಿ ಶೇಕಡ 1ರವರೆಗೆ ಇಳಿಕೆ ಕಂಡವು. ಜಾಗತಿಕ ಷೇರುಪೇಟೆಗಳಲ್ಲಿ ನಡೆದ ನಕಾರಾತ್ಮಕ ವಹಿವಾಟು ಮತ್ತು ವಿದೇಶಿ ಬಂಡವಾಳ ಹೊರಹರಿವು ಸೂಚ್ಯಂಕಗಳ ಇಳಿಕೆಗೆ ಪ್ರಮುಖ ಕಾರಣಗಳು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 501 ಅಂಶ ಇಳಿಕೆ ಕಂಡು 58,909 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 129 ಅಂಶ ಇಳಿಕೆಯಾಗಿ 17,321 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಏಷ್ಯಾದ ಷೇರುಪೇಟೆಗಳಲ್ಲಿ ಇಳಿಮುಖ ವಹಿವಾಟು ನಡೆದಿದ್ದರಿಂದ ನಿಫ್ಟಿ ಸೂಚ್ಯಂಕ ಇಳಿಕೆ ಕಂಡಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ದೀಪಕ್‌ ಜಸನಿ ಹೇಳಿದ್ದಾರೆ.

ADVERTISEMENT

ಟೆಕ್‌ ಶೇ 1.33, ಐ.ಟಿ. ಶೇ 1.24 ಮತ್ತು ಬ್ಯಾಂಕಿಂಗ್‌ ವಲಯದ ಸೂಚ್ಯಂಕ ಶೇ 0.87ರಷ್ಟು ಇಳಿಕೆ ಕಂಡವು.

‘ಅಮೆರಿಕದಲ್ಲಿ ಹಣದುಬ್ಬರ ಪ್ರಮಾಣವು ಬಹು ಕಾಲದವರೆಗೆ ಗರಿಷ್ಠ ಮಟ್ಟದಲ್ಲಿಯೇ ಇರಲಿದೆ ಎನ್ನುವುದನ್ನು ಈಚೆಗೆ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ. ಹೀಗಾಗಿ ಅಮೆರಿಕದ 10 ವರ್ಷಗಳ ಬಾಂಡ್ ಗಳಿಕೆಯು ಶೇ 4ನ್ನು ದಾಟಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಅಮೆರಿಕದ ಬಾಂಡ್‌ ಗಳಿಕೆ ಹೆಚ್ಚಾಗುತ್ತಿರುವುದು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಂದ ವಿದೇಶಿ ಬಂಡವಾಳ ಹೊರಹರಿವಿಗೆ ಕಾರಣವಾಗುತ್ತಿದೆ.

ಸತತ ಆರನೇ ದಿನವೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರುಗಳನ್ನು ಮಾರಾಟ ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.51ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 84.74 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.