ADVERTISEMENT

ಮತ್ತೆ 60 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್‌

ಸತತ ಮೂರನೇ ದಿನವೂ ಮುಂದುವರಿದ ಸಕಾರಾತ್ಮಕ ಓಟ

ಪಿಟಿಐ
Published 31 ಅಕ್ಟೋಬರ್ 2022, 13:00 IST
Last Updated 31 ಅಕ್ಟೋಬರ್ 2022, 13:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರದ ವಹಿವಾಟಿನಲ್ಲಿ ಮತ್ತೆ 60 ಸಾವಿರದ ಗಡಿ ದಾಟಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 18 ಸಾವಿರದ ಗಡಿ ದಾಟಿತು. ಜಾಗತಿಕ ಮಾರುಕಟ್ಟೆಗಳಲ್ಲಿನ ಮಿಶ್ರ ವಹಿವಾಟಿನ ನಡುವೆಯೂ ದೇಶದಲ್ಲಿ ನಡೆದ ಉತ್ತಮ ಖರೀದಿಯಿಂದಾಗಿ ಸೂಚ್ಯಂಕಗಳು ಏರಿಕೆ ಕಂಡವು.

ಸೆನ್ಸೆಕ್ಸ್‌ 787 ಅಂಶ ಜಿಗಿತ ಕಂಡು 60,746 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಎನ್‌ಎಸ್‌ಇ ನಿಫ್ಟಿ 225 ಅಂಶ ಹೆಚ್ಚಾಗಿ 18,012 ಅಂಶಗಳಿಗೆ ತಲುಪಿತು. ಅಲ್ಟ್ರಾಟೆಕ್‌ ಸಿಮೆಂಟ್‌ ಷೇರು ಮೌಲ್ಯವು ಶೇ 4.18ರಷ್ಟು ಹೆಚ್ಚಾಯಿತು.

ಅಮೆರಿಕದ ಫೆಡರಲ್‌ ರಿಸರ್ವ್‌, ಬಡ್ಡಿ ದರ ಹೆಚ್ಚಳವನ್ನು ಕಡಿಮೆ ಪ್ರಮಾಣದಲ್ಲಿ ಮಾಡಲಿದೆ ಎಂಬ ನಿರೀಕ್ಷೆಯನ್ನು ಹೂಡಿಕೆದಾರರು ಇಟ್ಟುಕೊಂಡಿದ್ದಾರೆ. ಇದರಿಂದಾಗಿ ಷೇರುಪೇಟೆಗಳ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡುಕೊಂಡವು ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿ ಸಂಶೋಧನಾ ವಿಭಾಗದ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ADVERTISEMENT

ಒಂದೊಮ್ಮೆ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಕೆಗೆ ಮುಂದಾದಲ್ಲಿ ಷೇರುಪೇಟೆಯಲ್ಲಿ ಹೆಚ್ಚಿನ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.24 ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 0.45ರಷ್ಟು ಏರಿಕೆ ಕಂಡವು.

ಏಷ್ಯಾದಲ್ಲಿ ಸೋಲ್‌ ಮತ್ತು ಟೋಕಿಯೊ ಷೇರುಪೇಟೆಗಳು ಗಳಿಕೆ ಕಂಡರೆ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 0.31ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 95.47 ಡಾಲರ್‌ಗೆ ತಲುಪಿತು.

ವಲಯವಾರು ಗಳಿಕೆ (%)

ಆಟೊ;1.57

ಟೆಕ್‌;1.45

ಕೈಗಾರಿಕೆ;1.43

ದೂರಸಂಪರ್ಕ;1.35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.