ADVERTISEMENT

ಮಾರಾಟದ ಒತ್ತಡ: ಸೆನ್ಸೆಕ್ಸ್‌ 1,172 ಅಂಶ ಕುಸಿತ

ಇನ್ಫೊಸಿಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಮೌಲ್ಯ ಇಳಿಕೆ

ಪಿಟಿಐ
Published 18 ಏಪ್ರಿಲ್ 2022, 13:43 IST
Last Updated 18 ಏಪ್ರಿಲ್ 2022, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಇನ್ಫೊಸಿಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದ ಕಾರಣದಿಂದಾಗಿ ಸೋಮವಾರ ದೇಶದ ಷೇರುಪೇಟೆಗಳ ವಹಿವಾಟು ಭಾರಿ ಇಳಿಕೆ ಕಂಡಿತು.

ಇನ್ಫೊಸಿಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ತ್ರೈಮಾಸಿಕ ಸಾಧನೆಯು ಮಾರುಕಟ್ಟೆ ನಿರೀಕ್ಷೆಗಿಂತಲೂ ಕಡಿಮೆ ಇದೆ ಎನ್ನುವ ಕಾರಣಕ್ಕೆ ಈ ಕಂಪನಿಗಳ ಷೇರುಗಳು ಮಾರಾಟದ ಒತ್ತಡ ಎದುರಿಸಿದವು.

ರೂಪಾಯಿ ಮೌಲ್ಯ ಇಳಿಕೆ ಮತ್ತು ಹಣದುಬ್ಬರ ಹೆಚ್ಚಳದ ಮಾಹಿತಿಯು ಕೂಡ ವಹಿವಾಟಿನ ಮೇಲೆ ಪರಿಣಾಮ ಉಂಟುಮಾಡಿತು ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,172 ಅಂಶ ಕುಸಿತ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 17,200ರ ಮಟ್ಟದಿಂದ ಕೆಳಗಿಳಿಯಿತು.

ದಿನದ ವಹಿವಾಟಿನಲ್ಲಿ ಇನ್ಫೊಸಿಸ್‌ ಷೇರು ಮೌಲ್ಯ ಶೇಕಡ 7.27ರಷ್ಟು ಗರಿಷ್ಠ ನಷ್ಟ ಕಂಡಿತು. ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರು ಮೌಲ್ಯ ಶೇ 4.74ರಷ್ಟು ಇಳಿಕೆ ಆಗಿದೆ. ಎಚ್‌ಡಿಎಫ್‌ಸಿ, ಟೆಕ್‌ ಮಹೀಂದ್ರ, ವಿಪ್ರೊ, ಟಿಸಿಎಸ್‌ ಮತ್ತು ಎಚ್‌ಸಿಎಲ್‌ ಟೆಕ್‌ ಕಂಪನಿಗಳ ಷೇರು ಮೌಲ್ಯವೂ ಇಳಿಕೆ ಆಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ ಮತ್ತು ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಆತಂಕದಿಂದಾಗಿ ಮುಂಬರುವ ದಿನಗಳಲ್ಲಿ ಮಾರುಕಟ್ಟೆಯು ಇನ್ನಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ ಎಂದು ಈಕ್ವಿಟಿ99 ಕಂಪನಿಯ ಸಂಶೋಧನಾ ಮುಖ್ಯಸ್ಥ ರಾಹುಲ್‌ ಶರ್ಮ ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಶೇ 1.01ರಷ್ಟು ಮತ್ತು ಮಿಡ್‌ ಕ್ಯಾಪ್‌ ಶೇ 0.95ರಷ್ಟು ಇಳಿಕೆ ಕಂಡಿವೆ. ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.18ರಷ್ಟು ಇಳಿಕೆ ಆಗಿ ಒಂದು ಬ್ಯಾರಲ್‌ಗೆ 111.5 ಡಾಲರ್‌ಗಳಂತೆ ಮಾರಾಟವಾಯಿತು.

ಸಂಪತ್ತು ಇಳಿಕೆ: ನಕಾರಾತ್ಮಕ ವಹಿವಾಟಿನಿಂದಾಗಿ ಮುಂಬೈ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 2.58 ಲಕ್ಷ ಕೋಟಿ ಕರಗಿದೆ. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 269.44 ಲಕ್ಷ ಕೋಟಿಗಳಿಗೆ ಇಳಿಕೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.