ADVERTISEMENT

ಶಿವಮೊಗ್ಗ ಕೃಷಿ ಮಾರುಕಟ್ಟೆಯಲ್ಲಿ ವರ್ತಕರ ಸೆಸ್‌ ಇಳಿಕೆ: 27ರಿಂದ ವಹಿವಾಟು ಆರಂಭ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:52 IST
Last Updated 25 ಜುಲೈ 2020, 12:52 IST
ಎಪಿಎಂಸಿ ಮಾರುಕಟ್ಟೆಯೊಂದರ ದೃಶ್ಯ
ಎಪಿಎಂಸಿ ಮಾರುಕಟ್ಟೆಯೊಂದರ ದೃಶ್ಯ    

ಶಿವಮೊಗ್ಗ: ಕೃಷಿ ಮಾರುಕಟ್ಟೆ ಒಳಗೆ ವ್ಯವಹಾರ ನಡೆಸುವ ವರ್ತಕರಿಗೆ ವಿಧಿಸುವ ಶುಲ್ಕವನ್ನು ಶೇ 1ರಿಂದ ಶೇ 0.35ಕ್ಕೆ ಇಳಿಸಿದ ಕಾರಣ ಜುಲೈ 27ರಿಂದ ವಹಿವಾಟು ಮತ್ತೆ ಆರಂಭವಾಗಲಿವೆ.

ಎಪಿಎಂಸಿ ಸೆಸ್ ವಿಷಯ ಹಲವು ದಿನಗಳಿಂದ ಗೊಂದಲ ಸೃಷ್ಟಿಸಿತ್ತು. ಎಪಿಎಂಸಿ ವರ್ತಕರು ವ್ಯಾಪಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದರು. ಸಚಿವ ಕೆ.ಎಸ್.ಈಶ್ವರಪ್ಪ ಅವರ ಸಲಹೆಯಂತೆ ಸಂಸದ ರಾಘವೇಂದ್ರ ಅವರ ಜತೆಗೂಡಿ ಎಪಿಎಂಸಿ ವರ್ತಕರೊಡನೆ ನಿಯೋಗ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ಮನವಿ ಮಾಡಿದ್ದೆವು. ಜುಲೈ 23ರಂದು ನಡೆದ ಸಂಪುಟ ಸಭೆಯಲ್ಲಿ ನಮ್ಮ ಮನವಿ ಮನ್ನಿಸಿದ ಸರ್ಕಾರ ಮಾರುಕಟ್ಟೆ ಶುಲ್ಕ ಇಳಿಸಿದೆ. ಮನವಿ ಪುರಸ್ಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಎಂದು ಅಡಿಕೆ ಟಾಸ್ಕ್ಫೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಹೊಸ ಎಪಿಎಂಸಿ ಕಾಯ್ದೆ ಜಾರಿಗೆ ತಂದಿದೆ. ಹೊಸ ನೀತಿಯ ಅನ್ವಯ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಒಳಗೆ ಅಥವಾ ಮಾರುಕಟ್ಟೆಯ ಹೊರಗೆ ಮಾರಾಟ ಮಾಡಬಹುದು. ಅವರಿಗೆ ದುಪ್ಪಟ್ಟು ಬೆಲೆ ಸಿಗುವ ನಿರೀಕ್ಷೆ ಇದೆ. ಸೆಸ್ ಜಾಸ್ತಿ ಇದ್ದರೆ ರೈತರು ಮಾರುಕಟ್ಟೆ ಒಳಗೆ ಬರುವುದಿಲ್ಲ. ಹಾಗಾಗಿ, ಸೆಸ್ ಕಡಿಮೆ ಮಾಡಲಾಗಿದೆ. ಇದರಿಂದ ಟೆಂಡರ್‌ಗಳು ಹೆಚ್ಚಾಗಿ ರೈತರಿಗೂ ಒಳ್ಳೆಯ ಬೆಲೆ ಸಿಗುತ್ತದೆ ಎಂದರು.

ADVERTISEMENT

ಮಾರುಕಟ್ಟೆ ಶುಲ್ಕ ರದ್ದು ಮಾಡುವಂತೆ ಒತ್ತಾಯಿಸಿ ವರ್ತಕರು ಅಡಿಕೆ ಸೇರಿದಂತೆ ಎಲ್ಲ ರೀತಿಯ ವಹಿವಾಟು ಬಂದ್‌ ಮಾಡಿದ್ದರು. ಎರಡು ವಾರಗಳು ಯಾವುದೇ ವ್ಯವಹಾರ ನಡೆದಿರಲಿಲ್ಲ. ಸರ್ಕಾರ ಸೆಸ್ ಕಡಿಮೆ ಮಾಡಿದ ಕಾರಣ ಬಂದ್‌ ನಿರ್ಧಾರ ಹಿಂದಕ್ಕೆ ಪಡೆದಿರುವುದಾಗಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮ್ಯಾಮ್‌ಕೋಸ್‌ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಮುಖಂಡರಾದ ಡಿ.ಎಸ್.ಅರುಣ್, ಶ್ರೀಕಾಂತ್, ವಾಸುದೇವ್, ವಿರೂಪಾಕ್ಷಪ್ಪ, ಈಶ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.