ADVERTISEMENT

ತೆರಿಗೆ ಸಂಗ್ರಹ ₹4 ಲಕ್ಷ ಕೋಟಿ ಹೆಚ್ಚಳ

ಕೇಂದ್ರ ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಅಂದಾಜು

ಪಿಟಿಐ
Published 23 ನವೆಂಬರ್ 2022, 16:01 IST
Last Updated 23 ನವೆಂಬರ್ 2022, 16:01 IST
ತರುಣ್ ಬಜಾಜ್
ತರುಣ್ ಬಜಾಜ್   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ತೆರಿಗೆ ಸಂಗ್ರಹ ಮೊತ್ತವು ಬಜೆಟ್ ಅಂದಾಜಿಗಿಂತ ₹ 4 ಲಕ್ಷ ಕೋಟಿಯಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಅಂದರೆ, ಬಜೆಟ್‌ ಅಂದಾಜಿಗಿಂತ ತೆರಿಗೆ ಸಂಗ್ರಹವು ಶೇಕಡ 14ರಷ್ಟು ಹೆಚ್ಚು ಇರಲಿದೆ.

ಆದಾಯ ತೆರಿಗೆ, ಸೀಮಾ ಸುಂಕ ಮತ್ತು ಜಿಎಸ್‌ಟಿ ಸಂಗ್ರಹ ಹೆಚ್ಚಾಗಿರುವುದು ಈ ಏರಿಕೆಗೆ ಕಾರಣ ಎಂದು ಅವರು ತಿಳಿಸಿದ್ದಾರೆ.

ತೆರಿಗೆ ಆದಾಯದಲ್ಲಿ ಆಗುವ ಹೆಚ್ಚಳದ ಪ್ರಮಾಣವು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

2023ರ ಮಾರ್ಚ್‌ 31ಕ್ಕೆ ಕೊನೆಗೊಳ್ಳುವ ಹಾಲಿ ಆರ್ಥಿಕ ವರ್ಷದಲ್ಲಿ ತೆರಿಗೆಗಳ ಮೂಲಕ ಒಟ್ಟು ₹ 27.50 ಲಕ್ಷ ಕೋಟಿ ಸಂಗ್ರಹವಾಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜು ಮಾಡಲಾಗಿದೆ.

ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆಯನ್ನು ಒಳಗೊಂಡಿರುವ ನೇರ ತೆರಿಗೆ ಸಂಗ್ರಹವು ಅಂದಾಜು ₹ 17.50 ಲಕ್ಷ ಕೋಟಿ ಆಗಲಿದೆ. ಜಿಎಸ್‌ಟಿ, ಸೀಮಾ ಸುಂಕ, ಎಕ್ಸೈಸ್‌ ಸುಂಕವನ್ನು ಒಳಗೊಂಡಿರುವ ಪರೋಕ್ಷ ತೆರಿಗೆ ಮೂಲಕ ಸಂಗ್ರಹವಾಗುವ ಮೊತ್ತವು ಸರಿಸುಮಾರು ₹ 14 ಲಕ್ಷ ಕೋಟಿ ಇರಲಿದೆ ಎಂದು ಬಜಾಜ್ ಹೇಳಿದ್ದಾರೆ.

2022–23ರಲ್ಲಿ ಆಗಲಿರುವ ಒಟ್ಟು ತೆರಿಗೆ ಸಂಗ್ರಹವು ₹ 31.50 ಲಕ್ಷ ಕೋಟಿ ಇರಲಿದೆ. ‘ನಾವು ಬಹಳಷ್ಟು ದತ್ತಾಂಶಗಳನ್ನು ಬಳಸುತ್ತಿದ್ದೇವೆ. ಅರ್ಥ ವ್ಯವಸ್ಥೆಯಲ್ಲಿನ ವಹಿವಾಟುಗಳು ಹೆಚ್ಚು ಪ್ರಮಾಣದಲ್ಲಿ ಲೆಕ್ಕಕ್ಕೆ ಸಿಗುತ್ತಿರುವುದು ತೆರಿಗೆ ಸಂಗ್ರಹ ಹೆಚ್ಚಾಗುವಲ್ಲಿ ನೆರವಿಗೆ ಬಂದಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.