ADVERTISEMENT

ಬಿಪಿಸಿಎಲ್‌ ಮಾರಾಟಕ್ಕೆ ಹಿನ್ನಡೆ

ಬಿಡ್‌ನಿಂದ ಹಿಂದೆ ಸರಿದ ಬಿಪಿ ಮತ್ತು ಟೋಟಲ್‌ ಕಂಪನಿಗಳು

ಪಿಟಿಐ
Published 29 ಜುಲೈ 2020, 13:52 IST
Last Updated 29 ಜುಲೈ 2020, 13:52 IST
ಬಿಪಿಸಿಎಲ್‌
ಬಿಪಿಸಿಎಲ್‌   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಕಂಪನಿಯನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಅಡ್ಡಿಯಾಗಿದೆ.

ಬಿಪಿಸಿಎಲ್‌ನ ತೈಲ ಸಂಸ್ಕರಣಾಗಾರಗಳು ವಹಿವಾಟು ನಡೆಸಲು ಸೂಕ್ತವಲ್ಲದ ಸ್ಥಳಗಳಲ್ಲಿವೆ. ಇದಲ್ಲದೆ, ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಇಂಧನ ಮಾರುಕಟ್ಟೆಯನ್ನು ಪ್ರವೇಶಿಸಲು ಇಲ್ಲಿನ ಕಾರ್ಮಿಕ ಕಾಯ್ದೆಗಳು ತೊಡಕಾಗಿವೆ ಎನ್ನುವ ಕಾರಣಗಳನ್ನು ನೀಡಿ ಬ್ರಿಟನ್‌ನ ಬಿಪಿ ಪಿಎಲ್‌ಸಿ ಮತ್ತು ಫ್ರಾನ್ಸ್‌ನ ಟೋಟಲ್‌ ಕಂಪನಿಗಳು ಬಿಡ್‌ನಿಂದ ಹಿಂದೆ ಸರಿದಿವೆ.

ಮುಖ್ಯವಾಗಿ ಮುಂಬೈ ಮತ್ತು ಕೊಚ್ಚಿಯಲ್ಲಿ ಇರುವ ಸಂಸ್ಕರಣಾ ಘಟಕಗಳ ವಿಸ್ತರಣೆ ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಹೆಚ್ಚುವರಿ ಭೂಮಿ ದೊರೆಯುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಡಿಮೆ ಪ್ರಮಾಣದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಬಯಸುವ ವಿದೇಶಿ ಅಥವಾ ಖಾಸಗಿ ಕಂಪನಿಗಳಿಗೆ ಇಲ್ಲಿನ ಕಾರ್ಮಿಕ ಕಾನೂನು ಮತ್ತೊಂದು ಸವಾಲು. ಹೆಚ್ಚುವರಿ ಕೆಲಸಗಾರರನ್ನು ತೆಗೆಯುವುದು ಕಷ್ಟವಾಗಲಿದೆ ಎಂದು ಮೂಲವೊಂದುಹೇಳಿದೆ. ಈ ಕುರಿತು ಎರಡೂ ಕಂಪನಿಗಳ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ.

ಕಂಪನಿಯಲ್ಲಿ ಸರ್ಕಾರ ಹೊಂದಿರುವ ಶೇಕಡ 52.98ರಷ್ಟು ಷೇರುಗಳಿಗೆ ಬಿಡ್ಡಿಂಗ್‌ ಸಲ್ಲಿಸಲು ಶುಕ್ರವಾರ ಕೊನೆಯ ದಿನ. ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವ ಸಂಭವನೀಯ ಕಂಪನಿಗಳ ಪಟ್ಟಿಯಲ್ಲಿ ರಷ್ಯಾದ ರೋಸ್‌ನೆಫ್ಟ್‌, ಸೌದಿ ಅರೇಬಿಯಾದ ಸೌದಿ ಆರಾಮ್ಕೊ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಸಹ ಇವೆ ಎಂದು ಮೂಲಗಳು ತಿಳಿಸಿವೆ.

ಮುಂಬೈ, ಕೇರಳದ ಕೊಚ್ಚಿ ಮತ್ತು ಮಧ್ಯಪ್ರದೇಶದ ಬಿನಾದಲ್ಲಿ ಇರುವ ಮೂರು ತೈಲ ಸಂಸ್ಕರಣಾಗಾರಗಳ ಜತೆಗೆ 16,309 ಪೆಟ್ರೋಲ್‌ ಪಂಪ್‌ಗಳು, 6,113 ಎಲ್‌ಪಿಜಿ ವಿತರಣಾ ಸಂಸ್ಥೆಗಳ ಒಡೆತನವು ಖರೀದಿದಾರರಿಗೆ ಸಿಗಲಿದೆ.

ಅಂಕಿ–ಅಂಶ

* ಬಿಪಿಸಿಎಲ್‌ ಮಾರುಕಟ್ಟೆ ಮೌಲ್ಯ-₹ 98 ಸಾವಿರ ಕೋಟಿ

* ಸರ್ಕಾರ ಹೊಂದಿರುವ ಷೇರಿನ ಮೌಲ್ಯ-₹ 52 ಸಾವಿರ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.