ವಾರೆನ್ ಬಫೆಟ್
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಉದ್ಯಮಿ ವಾರೆನ್ ಬಫೆಟ್ ಅವರು ತಮ್ಮ ಬರ್ಕಶೈರ್ ಹಾಥ್‌ವೇ ಕಂಪನಿಯ ಸುಮಾರು ₹ 51,000 ಕೋಟಿ (6 ಬಿಲಿಯನ್ ಡಾಲರ್) ಮೊತ್ತದ ಷೇರುಗಳನ್ನು ಗೇಟ್ಸ್ ಫೌಂಡೇಷನ್ ಹಾಗೂ ಇತರ ದತ್ತಿ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ಎರಡು ದಶಕಗಳ ಹಿಂದೆಯೇ ದೇಣಿಗೆ ನೀಡಲಾರಂಭಿಸಿರುವ ಬಫೆಟ್ ಅವರು ವಾರ್ಷಿಕವಾಗಿ ನೀಡಿದ ಅತಿಹೆಚ್ಚು ಮೊತ್ತದ ದೇಣಿಗೆ ಇದಾಗಿದೆ.
ಸದ್ಯ ಒಟ್ಟು 1.23 ಕೋಟಿ ಷೇರುಗಳನ್ನು ದಾನ ಮಾಡಿದ್ದಾರೆ. ಇದರಲ್ಲಿ ಗೇಟ್ಸ್ ಫೌಂಡೇಷನ್‌ಗೆ 94.3 ಲಕ್ಷ ಷೇರುಗಳು, ಪತ್ನಿಯ ಹೆಸರಲ್ಲಿರುವ ಸುಸಾನ್ ಥಾಮ್ಸನ್ ಬಫೆಟ್ ಫೌಂಡೇಷನ್‌ಗೆ 9.43 ಲಕ್ಷ ಷೇರುಗಳನ್ನು ಹಾಗೇಯೇ ತಲಾ 6.60 ಲಕ್ಷ ಷೇರುಗಳನ್ನು ತಮ್ಮ ಮಕ್ಕಳಾದ ಹೊವಾರ್ಡ್ (ದಿ ಹೊವಾರ್ಡ್ ಜಿ. ಬಫೆಟ್ ಫೌಂಡೇಷನ್), ಸುಸೀ (ಶೇರ್ವೂಡ್ ಫೌಂಡೇಷನ್) ಮತ್ತು ಪೀಟರ್ (ನೊವೊ ಫೌಂಡೇಷನ್‌ಗೆ) ಅವರು ಮುನ್ನಡೆಸುತ್ತಿರುವ ಫೌಂಡೇಷನ್‌ಗಳಿಗೆ ವಿತರಿಸಿದ್ದಾರೆ.
ಇದರೊಂದಿಗೆ, 94 ವಯಸ್ಸಿನ ಬಫೆಟ್ ಅವರು ಈವರೆಗೆ ನೀಡಿರುವ ಒಟ್ಟಾರೆ ದಾನದ ಪ್ರಮಾಣ ಅಂದಾಜು ₹ 51.29 ಲಕ್ಷ ಕೋಟಿಗೆ ಏರಿದೆ.
ಇಷ್ಟು ದಾನ ಮಾಡಿದ ಹೊರತಾಗಿಯೂ ಬಫೆಟ್ ಅವರು ಬರ್ಕಶೈರ್ ಹಾಥ್‌ವೇ ಕಂಪನಿಯಲ್ಲಿ ಶೇ 13.8ರಷ್ಟು ಪಾಲು ಹೊಂದಿದ್ದಾರೆ.
ಶುಕ್ರವಾರ ದೇಣಿಗೆ ನೀಡುವ ಮುನ್ನ ಬಫೆಟ್ ಅವರ ಸಂಪತ್ತಿನ ನಿವ್ವಳ ಮೌಲ್ಯವು ಸುಮಾರು ₹ 13 ಲಕ್ಷ ಕೋಟಿಯಷ್ಟಿತ್ತು. ಅದರೊಂದಿಗೆ ಅವರು, ವಿಶ್ವದ ಸಿರಿವಂತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರು ಎಂದು ಫೋರ್ಬ್ಸ್ ನಿಯತಕಾಲಿಕೆ ವರದಿ ಮಾಡಿತ್ತು. ಇದೀಗ ಅವರು, 6ನೇ ಸ್ಥಾನದಲ್ಲಿದ್ದಾರೆ.
ಸಂಪತ್ತು ದಾನ ಮಾಡುವುದನ್ನು 2006ರಲ್ಲಿ ಆರಂಭಿಸಿರುವ ಬಫೆಟ್, ಬರ್ಕಶೈರ್ ಹಾಥ್‌ವೇ ಕಂಪನಿಯ ಷೇರುಗಳನ್ನು ಮಾರಾಟ ಮಾಡುವ ಉದ್ದೇಶ ತಮಗಿಲ್ಲ ಎಂದು ಹಿಂದೊಮ್ಮೆ ಹೇಳಿದ್ದರು.
ತಾವು ಗೇಟ್ಸ್ ಫೌಂಡೇಷನ್‌ಗೆ ದೇಣಿಗೆ ನೀಡುವುದನ್ನು ನಿಲ್ಲಿಸುವುದು ನಿಧನರಾದಾಗಲಷ್ಟೇ ಎಂದು 2024ರ ಜೂನ್‌ನಲ್ಲಿ ಹೇಳಿದ್ದ ಬಫೆಟ್, ಅದೇ ವರ್ಷ ತಮ್ಮ ಉಯಿಲಿನಲ್ಲಿ ಬದಲಾವಣೆ ಮಾಡಿದ್ದರು. ತಾವು ಮೃತಪಟ್ಟ ಬಳಿಕ, ತಮ್ಮ ಸಂಪತ್ತಿನ ಶೇ 99.5 ರಷ್ಟು ಮಕ್ಕಳ ದತ್ತಿ ಸಂಸ್ಥೆಗಳಿಗೆ ಹೋಗಬೇಕು ಎಂದು ಉಲ್ಲೇಖಿಸಿದ್ದರು.
ಆ ಹಣವನ್ನು ಯಾವುದಕ್ಕೆ ಬಳಸಬೇಕು ಎಂಬುದನ್ನು ನಿರ್ಧರಿಸಲು ಮಕ್ಕಳಿಗೆ ಒಂದು ದಶಕದ ಸಮಯವಿರುತ್ತದೆ. ಸದ್ಯ ಸುಸೀ ಬಫೆಟ್ ಅವರಿಗೆ 71, ಹೊವಾರ್ಡ್ ಬಫೆಟ್‌ಗೆ 70 ಮತ್ತು ಪೀಟರ್‌ಗೆ 67 ವರ್ಷ ವಯಸ್ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.