ADVERTISEMENT

ವಿಪ್ರೊ: ಷೇರು ಮರುಖರೀದಿ ಯೋಜನೆಗೆ ಒಪ್ಪಿಗೆ

ಪಿಟಿಐ
Published 13 ಅಕ್ಟೋಬರ್ 2020, 14:54 IST
Last Updated 13 ಅಕ್ಟೋಬರ್ 2020, 14:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಪ್ರೊ ಕಂಪನಿಯು ₹ 9,500 ಕೋಟಿ ಮೊತ್ತದ ಷೇರು ಮರುಖರೀದಿ ಯೋಜನೆಯನ್ನು ಮಂಗಳವಾರ ಪ್ರಕಟಿಸಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)‌ ಕಂಪನಿಯು ₹ 16 ಸಾವಿರ ಕೋಟಿ ಮೊತ್ತದ ಷೇರು ಮರುಖರೀದಿ ಯೋಜನೆ ಪ್ರಕಟಿಸಿದ ಒಂದು ವಾರದ ಬಳಿಕ ವಿಪ್ರೊ ಈ ಘೋಷಣೆ ಮಾಡಿದೆ.

ಪ್ರತಿ ಷೇರಿಗೆ ₹ 400ರಂತೆ 23.75 ಕೋಟಿ ಷೇರುಗಳನ್ನು ಮರುಖರೀದಿಸಲು ನಿರ್ದೇಶಕರ ಮಂಡಳಿ ಒಪ್ಪಿಗೆ ನೀಡಿದೆ ಎಂದು ವಿಪ್ರೊ ಮಂಗಳವಾರ ಷೇರುಪೇಟೆಗೆ ಮಾಹಿತಿ ನೀಡಿದೆ.

ಮಂಗಳವಾರದ ವಹಿವಾಟಿನ ಅಂತ್ಯದಲ್ಲಿ ಕಂಪನಿಯ ಷೇರಿನ ಬೆಲೆ ಬಿಎಸ್‌ಇನಲ್ಲಿ ₹ 375.5ರಷ್ಟಾಗಿದೆ. ಇದಕ್ಕಿಂತ ಶೇಕಡ 6.4ರಷ್ಟು ಹೆಚ್ಚಿನ ಬೆಲೆಗೆ ಷೇರು ಮರುಖರೀದಿ ನಡೆಯಲಿದೆ.

ADVERTISEMENT

ಕಂಪನಿಯ ಪ್ರವರ್ತಕರು ಮತ್ತು ಪ್ರವರ್ತಕರ ಸಮೂಹದ ಸದಸ್ಯರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್‌ 9ರವರೆಗಿನ ಮಾಹಿತಿಯ ಪ್ರಕಾರ ಪ್ರವರ್ತಕರು ಮತ್ತು ಪ್ರವರ್ತಕರ ಸಮೂಹದ ಸದಸ್ಯರು ಕಂಪನಿಯಲ್ಲಿ ಶೇ 74.02ರಷ್ಟು ಷೇರು ಪಾಲು ಹೊಂದಿದ್ದಾರೆ. ಉದ್ದೇಶಿತ ಮರುಖರೀದಿ ಯೋಜನೆಗೆ ಷೇರುದಾರರ ಅನುಮತಿ ಪಡೆಯಲಾಗುವುದು ಎಂದು ಕಂಪನಿ ತಿಳಿಸಿದೆ. ಹಿಂದಿನ ವರ್ಷ ಕಂಪನಿಯು 32.31 ಕೋಟಿ ಷೇರುಗಳನ್ನು ಮರು ಖರೀದಿ ಮಾಡಿತ್ತು.

ನಿವ್ವಳ ಲಾಭ ಇಳಿಕೆ: ಸೆಪ್ಟೆಂಬರ್‌ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವಿಪ್ರೊ ನಿವ್ವಳ ಲಾಭ ಶೇ 3.4ರಷ್ಟು ಇಳಿಕೆಯಾಗಿದ್ದು, ₹2,465.7 ಕೋಟಿಗಳಿಗೆ ತಗ್ಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 2,552.7 ಕೋಟಿ ನಿವ್ವಳ ಲಾಭ ಗಳಿಸಿತ್ತು. ಸೆಪ್ಟೆಂಬರ್‌ ತ್ರೈಮಾಸಿಕಕ್ಕೆ ಕಂಪನಿಯ ವರಮಾನ ₹ 15,114.5 ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.