ADVERTISEMENT

ಫಾರಂ-16 ಇಲ್ಲದಿದ್ದರೂ ಐಟಿ ಫೈಲಿಂಗ್

ಕ್ಲಿಯೋನ್ ಡಿಸೋಜ
Published 21 ಜುಲೈ 2019, 20:00 IST
Last Updated 21 ಜುಲೈ 2019, 20:00 IST
ಕ್ಲಿಯೋನ್ ಡಿಸೋಜ
ಕ್ಲಿಯೋನ್ ಡಿಸೋಜ   

ಜುಲೈ 31ರ ಒಳಗೆ ಐಟಿ ರಿಟರ್ನ್ಸ್ ಸಲ್ಲಿಸಬೇಕು ಎಂದು ವೇತನದಾರರಿಗೆ ಆದಾಯ ತೆರಿಗೆ ಇಲಾಖೆ ಕಟ್ಟಪ್ಪಣೆ ಮಾಡಿದೆ. ಇಲಾಖೆಯ ಸೂಚನೆಯಂತೆ ಸಮಯಕ್ಕೆ ಸರಿಯಾಗಿ ಐಟಿ ರಿಟರ್ನ್ಸ್ ಸಲ್ಲಿಸಬೇಕಾದರೆ ‘ಫಾರಂ-16’ ಬೇಕೇ ಬೇಕು. ಆದರೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸಕ್ಕೆ ಸೇರುವುದು ಸೇರಿ ಹಲವು ಕಾರಣಗಳಿಂದ ಕೆಲವರಿಗೆ ಸಕಾಲದಲ್ಲಿ ಫಾರಂ-16 ಸಿಕ್ಕಿರುವುದಿಲ್ಲ. ಇಂತಹ ಸಮಯದಲ್ಲಿ ಐ.ಟಿ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವೇ ಎನ್ನುವ ಸಂದೇಹಕ್ಕೆ ವಿವರ ಇಲ್ಲಿದೆ.

ಫಾರಂ-16 ಎಂದರೇನು: ಕಂಪನಿಗಳ ಮಾಲೀಕರು ಉದ್ಯೋಗಿಗೆ ಕಡ್ಡಾಯವಾಗಿ ನೀಡಬೇಕಾದ ಮಹತ್ವದ ದಾಖಲೆಯೇ ಫಾರಂ-16. ಉದ್ಯೋಗಿಯ ವಾರ್ಷಿಕ ಆದಾಯ, ಖರ್ಚು, ಉಳಿತಾಯ ಸೇರಿ ಮೂಲದಲ್ಲೇ ತೆರಿಗೆ ಕಡಿತದ (ಟಿಡಿಎಸ್) ವಿವರವನ್ನು ಇದು ಒಳಗೊಂಡಿರುತ್ತದೆ.

ಫಾರಂ-16 ಅನ್ನು ಕಡ್ಡಾಯವಾಗಿ ಎಲ್ಲಾ ಕಂಪನಿಗಳು ಮಾಜಿ ಅಥವಾ ಹಾಲಿ ಉದ್ಯೋಗಿಗಳಿಗೆ ನಿಗದಿತ ಸಮಯದೊಳಗೆ ಒದಗಿಸಬೇಕು ಎಂಬ ನಿಯಮವಿದೆ. ನಿಯಮಾನುಸಾರ ನಡೆದುಕೊಳ್ಳದ ಕಂಪನಿಗಳಿಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ADVERTISEMENT

ಫಾರಂ-16 ಇಲ್ಲದಿದ್ದರೆ..?: ವಾಸ್ತವದಲ್ಲಿ ಫಾರಂ-16 ಇಲ್ಲದೆಯೂ ಐಟಿ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಿದೆ. ಮೊದಲಿಗೆ ಆ ನಿಗದಿತ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ ಬಂದಿರುವ ಒಟ್ಟು ಆದಾಯವನ್ನು ಲೆಕ್ಕಹಾಕಬೇಕು. ವೇತನದಿಂದ ಬಂದಿರುವ ಆದಾಯ ಲೆಕ್ಕ ಹಾಕಲು ಸ್ಯಾಲರಿ ಸ್ಲಿಪ್ (ವೇತನ ಮಾಹಿತಿ ಪತ್ರ) ನೆರವಾಗುತ್ತದೆ. ಒಟ್ಟು ಆದಾಯ ಲೆಕ್ಕ ಹಾಕಿದ ಮೇಲೆ, ಅದರಲ್ಲಿ ತೆರಿಗೆಗೆ ಒಳಪಡುವ ಮೊತ್ತ ಎಷ್ಟು ಎನ್ನುವುದನ್ನು ಅರಿಯಬೇಕು.

ನಂತರದಲ್ಲಿ ಆರೋಗ್ಯ ವಿಮೆ, ಜೀವ ವಿಮೆ, ಸುಕನ್ಯಾ ಸಮೃದ್ಧಿ, ಸೇರಿ ತೆರಿಗೆ ಉಳಿತಾಯಕ್ಕೆ ನೆರವಾಗುವಂತಹ ಎಲ್ಲ ಹೂಡಿಕೆಗಳ ಮಾಹಿತಿ ಕಲೆಹಾಕಬೇಕು. ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)ಯನ್ನು ತೆರಿಗೆ ಆದಾಯದಲ್ಲಿ ಕಡಿತಗೊಳಿಸಬೇಕು. ನಿಯಮದಂತೆ ಇರುವ ಎಲ್ಲ ವಿನಾಯಿತಿಗಳನ್ನೂ ಪಡೆದುಕೊಳ್ಳಬೇಕು. ನಿಮ್ಮ ಸ್ಯಾಲರಿ ಸ್ಲಿಪ್ ಪ್ರಕಾರ ಎಷ್ಟು ಟಿಡಿಎಸ್ (ಫಾರಂ-26ಎಎಸ್ ನಲ್ಲಿ ತೆರಿಗೆ ಕಡಿತದ ಮಾಹಿತಿ ಸಿಗುತ್ತದೆ) ಕಡಿತಗೊಳಿಸಿದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕು. ನಂತರದಲ್ಲಿ ಆದಾಯವು ತೆರಿಗೆ ವಿನಾಯಿತಿ ವ್ಯಾಪ್ತಿಯನ್ನು ದಾಟಿದ್ದರೇ, ಹೆಚ್ಚುವರಿ ತೆರಿಗೆ ಪಾವತಿಸಿ ಅಂತಿಮವಾಗಿ ಐಟಿ ರಿಟರ್ನ್ಸ್‌ ಸಲ್ಲಿಸಬೇಕು.

ತಡವಾಗಿ ಫಾರಂ-16 ಸಿಕ್ಕರೆ ಏನು ಮಾಡಬೇಕು?: ನೀವು ಈಗಾಗಲೇ ಫಾರಂ-16 ಇಲ್ಲದೆ ಐಟಿ ರಿಟರ್ನ್ಸ್ ಸಲ್ಲಿಸಿದ್ದು , ಫಾರಂ 16 ನಲ್ಲಿರುವ ಮಾಹಿತಿಗೂ ನೀವು ಐಟಿ ರಿಟರ್ನ್ಸ್ ಸಲ್ಲಿಸಿರುವುದಕ್ಕೂ ಕೆಲ ವ್ಯತ್ಯಾಸಗಳು ಕಂಡುಬಂದರೆ ನೀವು ಐಟಿ ರಿಟರ್ನ್ಸ್ ಅನ್ನು ಪರಿಷ್ಕರಿಸಬಹುದು. ಆದರೆ ಪರಿಷ್ಕರಣೆಯನ್ನು ನೀವು ಮಾರ್ಚ್ 2020 ರ ಒಳಗೆ ಮಾಡಬೇಕು.

ಎರಡು ಫಾರಂ-16 ಇದ್ದರೂ ಫೈಲಿಂಗ್ ಸಾಧ್ಯ: ಇತ್ತೀಚಿನ ದಿನಗಳಲ್ಲಿ ಒಂದು ವರ್ಷದಲ್ಲಿ ಎರಡರಿಂದ ಮೂರು ಬಾರಿ ಕೆಲಸ ಬದಲಿಸುವುದು ಸಾಮಾನ್ಯ ಸಂಗತಿ. ಹೆಚ್ಚಿನ ವೇತನ, ಹೆಚ್ಚಿನ ಸೌಲಭ್ಯ, ಬಡ್ತಿ ಮುಂತಾದ ಕಾರಣಗಳಿಗಾಗಿ ಉದ್ಯೋಗ ಬದಲಾಗುತ್ತಿರುತ್ತದೆ. ಆದರೆ ಐಟಿ ರಿಟರ್ನ್ಸ್ ಸಲ್ಲಿಸಲು ಇದರಿಂದ ಯಾವುದೇ ಸಮಸ್ಯೆ ಇಲ್ಲ. ಎರಡು ಕಂಪನಿಗಳ ಫಾರಂ-16 ಪಡೆದುಕೊಂಡು, ಆ ನಿಗದಿತ ಆರ್ಥಿಕ ವರ್ಷದ ಒಟ್ಟಾರೆ ಆದಾಯವನ್ನು ಗಣನೆಗೆ ತೆಗೆದುಕೊಂಡು ರಿಟರ್ನ್ಸ್ ಸಲ್ಲಿಸಬಹುದು.

ಷೇರುಪೇಟೆಯಲ್ಲಿ ತಗ್ಗದ ಬಜೆಟ್ ತಲ್ಲಣ

ಬಜೆಟ್‌ನ ಕೆಲ ಪ್ರಸ್ತಾವಗಳಿಂದ ಪೇಟೆ ಇನ್ನೂ ಚೇತರಿಸಿಕೊಂಡಿಲ್ಲ. ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ಭಾರ ಮತ್ತು ವಿದೇಶಿ ಹೂಡಿಕೆದಾರರಿಗೆ ಸರ್ಜಾರ್ಜ್‌ ಹೆಚ್ಚಳದಿಂದ ಪೇಟೆಯಲ್ಲಿ ಮಾರಾಟದ ಒತ್ತಡ ನಿರ್ಮಾಣವಾಗಿದೆ. ಇದರಿಂದಾಗಿ ಮಾರುಕಟ್ಟೆಯ ಒಟ್ಟಾರೆ ಮೌಲ್ಯವು ಈಗ ₹ 145 ಲಕ್ಷ ಕೋಟಿಗೆ ಇಳಿದಿದೆ.

ವಿವಿಧ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಕೂಡ ಆಶಾದಾಯಕವಾಗಿ ಕಂಡುಬರದ ಕಾರಣ ಸೂಚ್ಯಂಕಗಳು ಕುಸಿತದ ಹಾದಿಯಲ್ಲೇ ಇವೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 1 ರಷ್ಟು ಇಳಿಕೆ ಕಂಡು 38,337 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ್ದರೆ, ನಿಫ್ಟಿ ಶೇ 1.1 ರಷ್ಟು ಕುಸಿದು 11,419 ರಲ್ಲಿ ವಹಿವಾಟು ಮುಗಿಸಿದೆ.

ನಿಫ್ಟಿ ವಲಯವಾರು: ‘ನಿಫ್ಟಿ’ಯಲ್ಲಿ ಐ.ಟಿ ವಲಯವು ಶೇ 0.8 ರಷ್ಟು ಏರಿಕೆ ದಾಖಲಿಸಿರುವುದನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ವಲಯದ ಸೂಚ್ಯಂಕಗಳು ಈ ಬಾರಿ ನೆಲಕಚ್ಚಿವೆ. ನಿಫ್ಚಿ ವಾಹನ ತಯಾರಿಕಾ ವಲಯವು ಶೇ 6 ರಷ್ಟು ಗರಿಷ್ಠ ಕುಸಿತ ಕಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸೂಚ್ಯಂಕ ಶೇ 5 ರಷ್ಟು ಕುಸಿದಿದೆ. ಇನ್ನು ಮಾಧ್ಯಮ ವಲಯ ಶೇ 1.8 ರಷ್ಟು ತಗ್ಗಿದೆ.

ಗಳಿಕೆ: ಮೊದಲನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಕಂಡಿರುವ ಪರಿಣಾಮ ಇನ್ಫೊಸಿಸ್ ಶೇ 7.5 ರಷ್ಟು ಏರಿಕೆ ಕಂಡು ಈ ವಾರ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ. ರೇಟಿಂಗ್ ಏಜೆನ್ಸಿ ಮೋರ್ಗನ್ ಸ್ಟ್ಯಾನ್ಲಿ, ಸನ್ ಫಾರ್ಮಾದ ರೇಟಿಂಗ್ ಹೆಚ್ಚಿಸಿದ ಪರಿಣಾಮ ಕಂಪನಿಯ ಷೇರುಗಳಲ್ಲಿ ಶೇ 3.5 ರಷ್ಟು ಏರಿಕೆ ದಾಖಲಾಯಿತು.

ವಿಶೇಷ ಲಾಭಾಂಶ ಪ್ರಕಟಣೆ ಮಾಡುವ ಬಗ್ಗೆ ಸಭೆ ಸೇರಲಾಗುವುದು ಎಂದು ಎಚ್‌ಡಿಎಫ್‌ಸಿ ಹೇಳಿದ ಕಾರಣ ಷೇರುಗಳ ಬೆಲೆಯಲ್ಲಿ ಶೇ 2.5 ರಷ್ಟು ಏರಿಕೆಯಾಯಿತು. ವಿಪ್ರೊದ ನಿರ್ವಹಣಾ ಲಾಭಾಂಶ ಪ್ರಮಾಣವು ಲೆಕ್ಕಾಚಾರಗಳಿಗೆ ಮೀರಿ ಸಕಾರಾತ್ಮಕವಾಗಿ ಕಂಡುಬಂದಿದ್ದರಿಂದ ಷೇರುಗಳ ಬೆಲೆಯಲ್ಲಿ ಶೇ 2.1 ರಷ್ಟು ಏರಿಕೆ ಕಂಡುಬಂತು. ಇನ್ನು ಎನ್‌ಟಿಪಿಸಿ ಶೇ 1.9 ಹಾಗು ಕೋಟಕ್ ಬ್ಯಾಂಕ್ ಶೇ 1.5 ರಷ್ಟು ಗಳಿಸಿಕೊಂಡವು.

ಇಳಿಕೆ: ನಿವ್ವಳ ಲಾಭಾಂಶದ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇ 91 ರಷ್ಟು ಕುಸಿತ ಕಂಡುಬಂದಿದ್ದರಿಂದ ಯೆಸ್ ಬ್ಯಾಂಕ್‌ನ ಷೇರುಗಳಲ್ಲಿ ಶೇ 12.3 ರಷ್ಟು ಹಿನ್ನಡೆಯಾಗಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ರೇಟಿಂಗ್ ಅನ್ನು ಸಿಎಲ್ಎಸ್‌ಎ ಕಡಿತಗೊಳಿಸಿದ್ದರಿಂದ ಕಂಪನಿಯ ಷೇರುಗಳಲ್ಲಿ ಶೇ 9.4 ರಷ್ಟು ಕುಸಿತ ದಾಖಲಾಗಿದೆ.

ಬೇಡಿಗೆ ತಗ್ಗಿರುವ ಕಾರಣದಿಂದ ಇನ್ನಿತರ ವಾಹನ ತಯಾರಿಕಾ ಕಂಪನಿಗಳ ಷೇರುಗಳು ಕೂಡ ಕುಸಿತ ಅನಭವಿಸಿವೆ. ಐಷರ್ ಮೋಟರ್ಸ್ ಶೇ 6.7, ಹೀರೊ ಮೋಟೊ ಕಾರ್ಪ್ ಶೇ 6.4 ಮತ್ತು ಬಜಾಜ್ ಶೇ 6.1 ರಷ್ಟು ಹಿನ್ನಡೆ ಕಂಡಿವೆ.

ಮುನ್ನೋಟ: ಯುರೋಪ್‌ ಕೇಂದ್ರೀಯ ಬ್ಯಾಂಕ್‌ನ ಬಡ್ಡಿ ದರ ನಿರ್ಧಾರ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಪ್ರಕಟಿಸಲಿರುವ ಆರ್ಥಿಕ ಮುನ್ನೋಟ, ಇಂಗ್ಲೆಂಡ್‌ಗೆ ಹೊಸ ಪ್ರಧಾನಿ ಘೋಷಣೆ, ದೈತ್ಯ ಕಂಪನಿಗಳ ತ್ರೈಮಾಸಿಕ ಸಾಧನೆ ವರದಿ ಸೇರಿ ಇನ್ನು ಹಲವು ಸಂಗತಿಗಳು ಈ ವಾರ ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ಟಿವಿಎಸ್ ಮೋಟರ್, ಎಚ್ಎಫ್‌ಎಲ್, ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್ , ಏಷಿಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಲೈಫ್, ಕೋಟಕ್ ಬ್ಯಾಂಕ್, ಟಾಟಾ ಮೋಟರ್ಸ್, ಬಜಾಜ್ ಆಟೊ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶವು ಈ ವಾರ ಹೊರಬೀಳಲಿದ್ದು, ಪೇಟೆಯ ದಿಕ್ಕನ್ನು ನಿರ್ಧರಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.