ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 19 ಏಪ್ರಿಲ್ 2023, 3:05 IST
Last Updated 19 ಏಪ್ರಿಲ್ 2023, 3:05 IST
   

ಹನುಮಂತ ರಾಜು, ಊರು ತಿಳಿಸಿಲ್ಲ

l ಪ್ರಶ್ನೆ: ನಾನು ಸಾರ್ವಜನಿಕ ಸಂಸ್ಥೆಯೊಂದರಲ್ಲಿ 32 ವರ್ಷ ಕರ್ತವ್ಯ ನಿರ್ವಹಿಸಿ ಸ್ವಇಚ್ಛೆಯಿಂದ ಮಾರ್ಚ್‌ 31ರಂದು ನಿವೃತ್ತಿ ಪಡೆದಿದ್ದೇನೆ. ಈಗ ನನಗೆ ಸುಮಾರು ₹ 80 ಲಕ್ಷ ಮೊತ್ತ ನಿವೃತ್ತಿಯಿಂದ ದೊರಕಬಹುದು, ಸುಮಾರು 3 ತಿಂಗಳ ನಂತರ ₹ 60,000 ನಿವೃತ್ತಿ ವೇತನ ಸಿಗಬಹುದು. ಈಗ ಸಿಗುವ ₹ 80 ಲಕ್ಷವನ್ನು ಕಡಿಮೆ ತೆರಿಗೆ ಬರುವಂತೆ ಯಾವ ಯೋಜನೆಗಳಲ್ಲಿ ತೊಡಗಿಸಬಹುದು?

ಉತ್ತರ: ನೀವು ಈಗಾಗಲೇ ಸ್ವಯಂ ನಿವೃತ್ತಿ ಹೊಂದಿದ್ದೀರಿ, ಮುಂದೆ ಪಿಂಚಣಿ ಗಳಿಸುವವರಿದ್ದೀರಿ. ಈ ಮೊತ್ತ ವಾರ್ಷಿಕವಾಗಿ ₹ 7.20 ಲಕ್ಷ ಆಗಲಿದೆ. ಅದರೊಡನೆ ನೀವು ₹ 80 ಲಕ್ಷ ನಿಯೋಜಿಸಿ, ಆ ಮೊತ್ತಕ್ಕೆ ಬರುವ ಬಡ್ಡಿ ಅಥವಾ ಹೂಡಿಕೆಯಿಂದ ಬರುವ ಡಿವಿಡೆಂಡ್ ಇತ್ಯಾದಿಗೂ ತೆರಿಗೆ ಅನ್ವಯವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಈ ಕೆಳಗಿನ ಸೂಕ್ತವಾದ ಆಯ್ಕೆ ಮಾಡಿಕೊಳ್ಳಬಹುದು.

ADVERTISEMENT

1. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್): ನೀವು ಸ್ವಯಂ ನಿವೃತ್ತಿ ಪಡೆದಿರುವುದರಿಂದ, ಸಮೀಪದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನಿಮ್ಮ ಹಾಗೂ ನಿಮ್ಮ ಪತ್ನಿಯ ಹೆಸರಲ್ಲಿ ಜಂಟಿ ಖಾತೆ ತೆರೆದು ₹ 30 ಲಕ್ಷದ ತನಕ ಹೂಡಿಕೆ ಮಾಡಬಹುದು. ಈಗ ಇದರ ಮೇಲೆ ಶೇ 8.20ರಷ್ಟು ಬಡ್ಡಿ ಸಿಗುತ್ತಿದೆ. ನಿಮಗೆ ನಿವೃತ್ತಿಯಿಂದ ಸಿಕ್ಕ ಹಣವನ್ನು ಸೂಕ್ತ ದಾಖಲೆಗಳೊಂದಿಗೆ ಒಂದು ತಿಂಗಳಲ್ಲಿ ಇದರಲ್ಲಿ ತೊಡಗಿಸಿ.

2. ಮಾಸಿಕ ಆದಾಯ ಯೋಜನೆ (ಎಂಐಎಸ್): ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯ ಅಡಿ ಜಂಟಿ ಖಾತೆ ತೆರೆದು ₹ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದರ ಮೇಲೆ ಪ್ರಸ್ತುತ ಶೇ 7.10ರಷ್ಟು ಬಡ್ಡಿ ಸಿಗುತ್ತದೆ.

3. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಇದು ಏಕ ಕಂತಿನ ಹೂಡಿಕೆಯಲ್ಲ. 15 ವರ್ಷಗಳವರೆಗೆ ವಾರ್ಷಿಕವಾಗಿ ₹ 1.50 ಲಕ್ಷದಷ್ಟು ಹೂಡಿಕೆಗೆ ಅವಕಾಶವಿದೆ. ಇದರ ಮೇಲೆ ಬರುವ ಬಡ್ಡಿಯು ತೆರಿಗೆಯಿಂದ ಸಂಪೂರ್ಣವಾಗಿ ಮುಕ್ತ. ಇದರ ಮೇಲೆ ಶೇ 7.10ರಷ್ಟು ಬಡ್ಡಿ ಸಿಗುತ್ತದೆ.

4. ಉಡುಗೊರೆ ಮೊತ್ತದ ಹೂಡಿಕೆ: ನಿಮ್ಮ ಒಂದಷ್ಟು ಹಣವನ್ನು ನಿಮ್ಮ ಕುಟುಂಬದವರಿಗೆ (ಪತ್ನಿ, ಮಕ್ಕಳು, ತಂದೆ-ತಾಯಿ ಇತ್ಯಾದಿ) ಉಡುಗೊರೆ ನೀಡಿ ಆ ಮೊತ್ತವನ್ನು ಅವರು ಹೂಡಿಕೆ ಮಾಡಬಹುದು. ಆದರೆ ಅವರಿಗೆ ಸ್ವಂತ ಆದಾಯಕ್ಕೆ ಯಾವ ತೆರಿಗೆ ದರ ಅನ್ವಯಿಸುತ್ತದೋ ಅದರಂತೆ ತೆರಿಗೆ ನಿರ್ಣಯವಾಗುತ್ತದೆ. ಈ ರೀತಿ ಉಡುಗೊರೆ ಹಣ ನೀಡುವ ಮೊದಲು ಸೂಕ್ತ ‘ಉಡುಗೊರೆ ಪತ್ರ’ ಹೊಂದುವುದು ಸೂಕ್ತ. ಇಂತಹ ಮೊತ್ತದ ವರ್ಗಾವಣೆ ಆದಾಯ ತೆರಿಗೆಯ ಸೆಕ್ಷನ್ 56(2) ಅಡಿ ವಿನಾಯಿತಿ ಹೊಂದಿದೆ.

5. ಚಿನ್ನದ ಬಾಂಡ್: ಕೇಂದ್ರ ಸರ್ಕಾರ ವಾರ್ಷಿಕವಾಗಿ ಬಿಡುಗಡೆ ಮಾಡುವ ಚಿನ್ನದ ಬಾಂಡ್‌ಅನ್ನು ಹೂಡಿಕೆಗೆ ಆಯ್ಕೆ ಮಾಡಬಹುದು. ಇದರ ಮೇಲೆ ಬರುವ ವಾರ್ಷಿಕ ಬಡ್ಡಿ (ಶೇ. 2.50) ಆದಾಯ ತೆರಿಗೆಯ ಸೆಕ್ಷನ್ 10(15)(vi) ಅಡಿ ತೆರಿಗೆಯಿಂದ ಮುಕ್ತವಾಗಿದೆ. ಹೂಡಿಕೆಯ ಪೂರ್ಣ ಅವಧಿ (8 ವರ್ಷ) ಪೂರೈಸಿದ ಬಾಂಡ್‌ಗಳ ಮೌಲ್ಯವರ್ಧನೆಗೆ ತೆರಿಗೆ ಇರುವುದಿಲ್ಲ.

6. ಷೇರು/ಮ್ಯೂಚುವಲ್ ಫಂಡ್: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 112(ಎ) ಪ್ರಕಾರ ಈಕ್ವಿಟಿ ಷೇರುಗಳು, ಈಕ್ವಿಟಿ-ಆಧಾರಿತ ಮ್ಯೂಚುವಲ್ ಫಂಡ್‌ಗಳ ಮಾರಾಟದಿಂದ ಬರುವ ದೀರ್ಘಾವಧಿಯ ಬಂಡವಾಳ ವೃದ್ಧಿ ಲಾಭದ ಮೇಲೆ ವಾರ್ಷಿಕ ₹ 1 ಲಕ್ಷದ ತನಕ ತೆರಿಗೆ ವಿನಾಯಿತಿ ಇದೆ. ಅದಕ್ಕೂ ಮೇಲ್ಪಟ್ಟ ಮೊತ್ತಕ್ಕೆ ಶೇ 10ರಷ್ಟು ದೀರ್ಘಾವಧಿ ಬಂಡವಾಳ ವೃದ್ಧಿ ಲಾಭ ತೆರಿಗೆ ಇರುತ್ತದೆ. ಇಂತಹ ಹೂಡಿಕೆಗಳಲ್ಲಿ ಮಾರುಕಟ್ಟೆಯ ಅಪಾಯವೂ ಇರುವ ಕಾರಣ ಈ ಕ್ಷೇತ್ರದಲ್ಲಿ ಹೂಡಿಕೆಗೆ ಅನುಭವ ಬೇಕು.

ನೀವು ಆಯ್ಕೆ ಮಾಡುವ ತೆರಿಗೆ ವಿಧಾನ ಅನುಸರಿಸಿ (ಹಳೆಯ ತೆರಿಗೆ ಪದ್ದತಿ), ಬಡ್ಡಿಯ ಮೇಲೆ ವಾರ್ಷಿಕವಾಗಿ ₹ 50,000 ಹಾಗೂ ಎಸ್‌ಸಿಎಸ್‌ಎಸ್ ಅಥವಾ ಪಿಪಿಎಫ್ ಮೇಲೆ ₹ 1.50 ಲಕ್ಷದತನಕ ವಿನಾಯಿತಿ ಸಿಗುತ್ತದೆ. ಆದರೆ ನಿಮಗೆ ಈ ಎಲ್ಲಾ ಹೂಡಿಕೆಯ ಸನ್ನಿವೇಶದಲ್ಲಿ ಯಾವ ತೆರಿಗೆ ಪದ್ಧತಿ ಸೂಕ್ತ (ಹೊಸ ಅಥವಾ ಹಳೆಯ ತೆರಿಗೆ ಪದ್ದತಿ) ಎನ್ನುವುದನ್ನು ಎಲ್ಲಾ ಆದಾಯ ಹಾಗೂ ವಿನಾಯಿತಿಗಳನ್ನು ತುಲನೆ ಮಾಡಿ ನಿರ್ಧರಿಸಿ.

ಕೇಶವ ನಾಯಕ್, ಜೆ.ಪಿ.ನಗರ, ಬೆಂಗಳೂರು.

l ಪ್ರಶ್ನೆ: ನಾನು ಹಿರಿಯ ನಾಗರಿಕ, ವಯಸ್ಸು 75 ವರ್ಷ. ಆಧಾರ್-ಪ್ಯಾನ್ ಜೋಡಣೆ ಬಗ್ಗೆ ಈಚೆಗೆ ಪದೇ ಪದೇ ಸುದ್ದಿ ಬರುತ್ತಿದೆ. ನಾನು ಬಡ್ಡಿ ಆದಾಯ ಮಾತ್ರದಿಂದ ಬದುಕು ನಿರ್ವಹಿಸುತ್ತಿದ್ದೇನೆ. ನನ್ನ ಆದಾಯ ವರ್ಷಕ್ಕೆ ₹ 2.75 ಲಕ್ಷ, ತೆರಿಗೆ ಬರುವುದಿಲ್ಲ. ಹಾಗಿದ್ದರೂ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವೇ?

ಉತ್ತರ: ಆಧಾರ್‌-ಪ್ಯಾನ್ ಜೋಡಣೆ ಪ್ರಕ್ರಿಯೆ ಕಳೆದ ಕೆಲವು ತಿಂಗಳಿನಿಂದ ಚಾಲ್ತಿಯಲ್ಲಿದ್ದರೂ ಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದಕ್ಕಾಗಿ ಜೋಡಣೆ ಮಾಡದಿರುವುದರ ಅಡ್ಡ ಪರಿಣಾಮವನ್ನು ತುಸುವೇ ಸಡಿಲಿಸಿ ಜೂನ್ 30ರತನಕ ₹ 1000 ಪಾವತಿಸಿ ಜೋಡಣೆಗೆ ಅವಕಾಶ ಕೊಟ್ಟಿದೆ. ಮುಖ್ಯವಾಗಿ 80 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಹಾಗೂ ಅನಿವಾಸಿ ಭಾರತೀಯರಿಗೆ, ವಿದೇಶಿ ನಾಗರಿಕರಿಗೆ, ಜಮ್ಮು-ಕಾಶ್ಮೀರ, ಅಸ್ಸಾಂ, ಮೇಘಾಲಯ ರಾಜ್ಯದ ನಿವಾಸಿಗಳಿಗಷ್ಟೇ ಇದರಿಂದ ವಿನಾಯಿತಿ ಇದೆ. ಹೀಗಾಗಿ ಯಾರು ಪ್ಯಾನ್ ಹೊಂದಿದ್ದಾರೋ ಅವರು ಆದಾಯದ ಪರಿಮಿತಿ ಇಲ್ಲದೆ ಆಧಾರ್‌-ಪ್ಯಾನ್ ಜೋಡಣೆ ಮಾಡಬೇಕು.

ಪ್ಯಾನ್ ಹೊಂದಿರುವ ಮತ್ತು ಆಧಾರ್ ಸಂಖ್ಯೆ ಪಡೆಯಲು ಅರ್ಹರಾಗಿರುವ ಪ್ರತಿ ವ್ಯಕ್ತಿಯೂ ಪ್ಯಾನ್ ನಿಷ್ಕ್ರಿಯವಾಗುವುದನ್ನು ತಪ್ಪಿಸಲು ಇವೆರಡನ್ನು ಜೋಡಿಸಬೇಕು. 2017ರ ಜುಲೈ 01ರ ನಂತರ ಆದಾಯ ತೆರಿಗೆ ವಿವರ ಸಲ್ಲಿಸುವ ಸಂದರ್ಭದಲ್ಲಿ, ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಬೇಕಾಗುತ್ತದೆ. ಇದು ಕೂಡ ಅನಿವಾರ್ಯವಾಗಿ ನಿಮ್ಮ ಪ್ಯಾನ್‌ಅನ್ನು ಆಧಾರ್‌ನೊಂದಿಗೆ ಜೋಡಿಸುವ ಅವಕಾಶ ಕೊಡುತ್ತದೆ. ಈ ಪ್ರಕ್ರಿಯೆಗೆ ಒಳಗಾಗದವರು ಆಧಾರ್-ಪ್ಯಾನ್ ಜೋಡಣೆ ಮಾಡಿಕೊಳ್ಳಲು ಇನ್ನೂ ಅವಕಾಶವಿದೆ.

ಒಂದು ವಿವರಣೆ

ಮಾರ್ಚ್‌ 12ರ ‘ಪ್ರಶ್ನೋತ್ತರ’ ಅಂಕಣದಲ್ಲಿ ಪ್ರಕಟವಾದ ಹಿರಿಯ ನಾಗರಿಕರ ಉಳಿತಾಯ ಖಾತೆಯಲ್ಲಿನ ಹೂಡಿಕೆಗೆ ಸಂಬಂಧಿಸಿದ ಉತ್ತರದಲ್ಲಿ ‘ವಯಸ್ಸು 60 ದಾಟಿದ ಹಿರಿಯ ನಾಗರಿಕರು ತಮ್ಮ ನಿವೃತ್ತಿಯ ನಂತರ ಸ್ವಂತ ಉಳಿತಾಯದಿಂದ ಹೂಡಿಕೆ ಮಾಡಲು ಅವಕಾಶವಿಲ್ಲ’ ಎಂದಿದೆ. ಆದರೆ ವಯಸ್ಸಿನ ಈ ನಿಬಂಧನೆಯು 55 ಮತ್ತು 60 ವರ್ಷ ವಯಸ್ಸಿನ ನಡುವೆ ನಿವೃತ್ತಿ ಹೊಂದಿದವರಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ 60 ವರ್ಷ ವಯಸ್ಸು ದಾಟಿದ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ವಿಚಾರವನ್ನು ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಗೋಸಾಡ ಕೃಷ್ಣ ಭಟ್ ಅವರು ಗಮನಕ್ಕೆ ತಂದಿದ್ದಾರೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ,
ಬೆಂಗಳೂರು–560001 ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.