ADVERTISEMENT

ಪ್ರಶ್ನೋತ್ತರ: ಸೈನಿಕರ ಮಾಸಿಕ ಪಿಂಚಣಿಗೆ ತೆರಿಗೆ ವಿನಾಯಿತಿ ಇದೆಯೇ?

ಪ್ರಮೋದ್ ಶ್ರೀಕಾಂತ್ ದೈತೋಟ ಅವರ ಪ್ರಶ್ನೋತ್ತರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 7 ಫೆಬ್ರುವರಿ 2024, 3:06 IST
Last Updated 7 ಫೆಬ್ರುವರಿ 2024, 3:06 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಜೇಂದ್ರ ಎಸ್., ಮೈಸೂರು.

ಪ್ರಶ್ನೆ: ನಾನು ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಬಳಿಕ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕನಾಗಿ 2004ರ ನವೆಂಬರ್ 30ರಿಂದ 2022ರ ಮೇ 31ರ ವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ಪ್ರಸ್ತುತ ನನ್ನ ಆದಾಯ ಈ ರೀತಿ ಇದೆ. ಸೇನಾ ಮಾಸಿಕ ಪಿಂಚಣಿ ₹32,131, ಬಾಕಿ ಸೇನಾ ಪೆನ್ಶನ್ ₹1,03,128, ಎನ್‌ಪಿಎಸ್‌ನಿಂದ ಪಡೆದ ಶೇ 60 ಹಣ ಹಾಗೂ ಉಳಿತಾಯ ಮಾಡಿದ್ದ ಹಣವನ್ನು ಹಿರಿಯ ನಾಗರಿಕರ ಉಳಿತಾಯ ಖಾತೆಯಲ್ಲಿ ಹೂಡಿ ಮಾಡಿ ಅದರಿಂದ ವಾರ್ಷಿಕ ₹1,11,000 ಬಡ್ಡಿ ಪಡೆಯುತ್ತಿರುವೆ. ಇದಲ್ಲದೆ ಎನ್‌ಪಿಎಸ್‌ನಿಂದ ಮಾಸಿಕ ಪಿಂಚಣಿ ₹4,181, ಉಳಿತಾಯದ ಹಣಕ್ಕೆ ಬರುವ ವಾರ್ಷಿಕ ಬಡ್ಡಿ ₹6,500 ಕೂಡ ಸಿಗುತ್ತಿದೆ. ನಾನು ಮಾಸಿಕ ₹10,750 ಮನೆ ಬಾಡಿಗೆ ಕಟ್ಟುತ್ತಿದ್ದು, ಇದಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆಯೇ? ಹಾಗೂ ಸೈನಿಕರ ಮಾಸಿಕ ಪಿಂಚಣಿಗೆ ವಿನಾಯಿತಿ ಇದೆಯೇ ಎಂಬುದನ್ನು ದಯವಿಟ್ಟು ತಿಳಿಸಿ.

ADVERTISEMENT

ಉತ್ತರ: ವೃತ್ತಿಯಲ್ಲಿದ್ದಾಗ ಪಡೆಯುವ ವೇತನಕ್ಕೆ ತೆರಿಗೆ ಅನ್ವಯವಾಗುವಂತೆ ಅದೇ ವ್ಯಕ್ತಿ ನಿವೃತ್ತಿಯಾದಾಗ ಬರುವ ಪಿಂಚಣಿಗೂ ಆದಾಯ ತೆರಿಗೆ ಅನ್ವಯವಾಗುತ್ತದೆ. ಅದು ಕೂಡ ವೇತನ ಆದಾಯದ ವ್ಯಾಪ್ತಿಯೊಳಗೆ ಬರುತ್ತದೆ. ಹೀಗಾಗಿ, ಪಿಂಚಣಿ ಆದಾಯಕ್ಕೆ ವಿಶೇಷ ವಿನಾಯಿತಿ ಇಲ್ಲ. ನೀವು ಕೊಟ್ಟಿರುವ ಮಾಹಿತಿಯಂತೆ, ವಾರ್ಷಿಕವಾಗಿ ಸುಮಾರು ₹3.85 ಲಕ್ಷ ಪಿಂಚಣಿ ಬರುತ್ತಿದೆ. ಇದಕ್ಕೆ ವಾರ್ಷಿಕವಾಗಿ ₹50 ಸಾವಿರದ ಸ್ಟ್ಯಾಂಡರ್ಡ್ ಡಿಡೆಕ್ಷನ್ ಇದೆ. ಉಳಿದ ಮೊತ್ತವಷ್ಟೆ ತೆರಿಗೆಗೊಳಪಡುವ ಆದಾಯ ಆಗಿರುತ್ತದೆ. 

ಇನ್ನು ಹಿಂದಿನ ಪೆನ್ಶನ್ ವಿಚಾರವಾಗಿ ಹೇಳುವುದಾದರೆ, ಅದು ಹಳೆಯ ವರ್ಷಗಳ ಬಾಕಿ ಮೊತ್ತವಾಗಿರುವ ಕಾರಣ ಅದೂ ಮೇಲೆ ತಿಳಿಸಿರುವಂತೆ ಪೆನ್ಶನ್ ಭಾಗವಾಗಿಯೇ ತೆರಿಗೆಗೊಳಪಡುತ್ತದೆ. ಆದರೆ, ಹಿಂದಿನ ಅನೇಕ ವರ್ಷಗಳ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿರುವ ಕಾರಣ ನಿಮಗೆ ಆದಾಯ ತೆರಿಗೆಯ ಸೆಕ್ಷನ್ 89ರಡಿ ವಿನಾಯಿತಿ ಪಡೆದುಕೊಳ್ಳಬಹುದು. ಈ ಬಗ್ಗೆ ತೆರಿಗೆ ಲೆಕ್ಕ ಹಾಕಲು ನಿಮ್ಮ ಹಿಂದಿನ ವರ್ಷಗಳ ಆದಾಯ ಮಾಹಿತಿ, ಬಾಕಿ ಪಾವತಿಗೆ ಸಂಬಂಧಿಸಿದ ಆರ್ಥಿಕ ವರ್ಷ ಮತ್ತು ಮೊತ್ತ ಇತ್ಯಾದಿ ವಿವರವನ್ನು ಸ್ಥಳೀಯ ತೆರಿಗೆ ಸಲಹೆಗಾರರಿಗೆ ತೋರಿಸಿ ವಿನಾಯಿತಿ ಲೆಕ್ಕ ಹಾಕಿಸಿ.

ಇದಕ್ಕಾಗಿ ಫಾರಂ 10ಇ ಅನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮೊದಲು ಭರ್ತಿ ಮಾಡಿ ಸಲ್ಲಿಸಬೇಕು. ಇದಲ್ಲದೆ ಎನ್‌ಪಿಎಸ್‌ನಿಂದ ಮಾಸಿಕ ಪಿಂಚಣಿಯೂ ಬರುವುದಾಗಿ ತಿಳಿಸಿದ್ದೀರಿ. ಇದು ನಿಮ್ಮ ಪಿಂಚಣಿ ಆದಾಯದ ಭಾಗವಾಗಿ ತೆರಿಗೆಗೆ ಒಳಪಡುತ್ತದೆ.

ಇನ್ನು ಬಡ್ಡಿ ಆದಾಯಕ್ಕೆ ಸಂಬಂಧಿಸಿ, ಈ ಆದಾಯ ಇತರೆ ಆದಾಯ ವರ್ಗದಡಿ ತೆರಿಗೆಗೊಳಪಡುತ್ತದೆ. ಹಿರಿಯ ನಾಗರಿಕರಿಗೆ ಬರುವ ಬಡ್ಡಿ ಆದಾಯಕ್ಕೆ ₹50 ಸಾವಿರದ ತನಕ ಸೆಕ್ಷನ್ 80ಟಿಟಿಬಿ ಇದರಡಿ ಒಟ್ಟಾರೆ ವಿನಾಯಿತಿ ಇದೆ. ನೀವು ಮನೆ ಬಾಡಿಗೆಯನ್ನು ಕಟ್ಟುತ್ತಿರುವುದಾಗಿ ಹೇಳಿದ್ದೀರಿ. ನಿಮಗೆ ಯಾವುದೇ ಮನೆ ಬಾಡಿಗೆ ಭತ್ಯೆ ಬರುತ್ತಿಲ್ಲದ ಕಾರಣ, ಸೆಕ್ಷನ್ 80ಜಿಜಿ ಪ್ರಕಾರ ವಿನಾಯಿತಿ ಪಡೆಯುವ ಅವಕಾಶವಿದೆ. ವಿನಾಯಿತಿಗೆ ಲೆಕ್ಕಾಚಾರಕ್ಕೆ ಸಂಬಂಧಿಸಿ, ತಿಂಗಳಿಗೆ ಗರಿಷ್ಠ ₹5,000 ತನಕ ವಿನಾಯಿತಿ ಸಿಗುತ್ತದೆ. ಇದಕ್ಕಾಗಿ ಫಾರಂ 10ಬಿಎ ಅನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮೊದಲು ಸಲ್ಲಿಸಬೇಕು. ವಾರ್ಷಿಕ ಬಾಡಿಗೆ ₹1 ಲಕ್ಷ ಮೀರುವ ಕಾರಣ ನಿಮ್ಮ ಮನೆಯ ಮಾಲೀಕರ ಹೆಸರು, ಪ್ಯಾನ್, ವಿಳಾಸ ಇತ್ಯಾದಿ ಕೆಲವು ವಿವರವನ್ನು ನೀಡಬೇಕಾಗುತ್ತದೆ. ಪ್ರಸ್ತುತ ಇರುವ ನಿಮ್ಮ ಆದಾಯಕ್ಕೆ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಿ. ಒಟ್ಟಾರೆ ತೆರಿಗೆ ಬರಲಾರದು.

ಲಲಿತಾ ಎಂ., ಬೆಂಗಳೂರು.

ಪ್ರಶ್ನೆ: ಈ ಸಾಲಿನಲ್ಲಿ ಕಡಿಮೆ ತೆರಿಗೆ ಅನ್ವಯವಾಗುವ ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡು, ಮುಂದಿನ ಸಾಲಿನಲ್ಲಿ ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ಹೆಚ್ಚಾದಲ್ಲಿ ಹಳೆಯ ತೆರಿಗೆ ಪದ್ಧತಿಗೆ ಬದಲಾಯಿಸಿಕೊಳ್ಳಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ. ನಮ್ಮ ಪ್ರತಿ ವರ್ಷದ ಆದಾಯಕ್ಕೆ ತಕ್ಕಂತೆ ಹೊಸ/ ಹಳೆಯ ತೆರಿಗೆ ಪದ್ಧತಿಗಳನ್ನು ಆಯ್ಕೆ ಮಾಡಲು ನಿಯಮಗಳಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರುತ್ತೇನೆ.

ಉತ್ತರ: ತೆರಿಗೆದಾರರಿಗೆ ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯಡಿ ತಮಗೆ ಸೂಕ್ತವೆಂಬ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ಅವಕಾಶವಿದೆ. ಒಂದು ವೇಳೆ ವರ್ಷದ ಆರಂಭದಲ್ಲಿ ಉದ್ಯೋಗದಾತರಿಗೆ ತಮ್ಮ ಆಯ್ಕೆಯ ತೆರಿಗೆ ಪದ್ಧತಿಯನ್ನು ಈಗಾಗಲೇ ನೀಡಿದ್ದರೆ, ತಾವು ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ತೆರಿಗೆ ಲಾಭದಾಯಕವಾದ ಪದ್ಧತಿಗೆ ಬದಲಾಯಿಸಿ ರಿಟರ್ನ್ಸ್ ಸಲ್ಲಿಸಲು ಅವಕಾಶವಿದೆ. ಇನ್ನು ಮುಂದಿನ ವರ್ಷಗಳಲ್ಲೂ ತಮ್ಮ ಅನುಕೂಲಕರ ಆಯ್ಕೆಯನ್ನು ಮಾಡಲು ಅವಕಾಶವಿದೆ.

ಪ್ರಮೋದ ಶ್ರೀಕಾಂತ ದೈತೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.