ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 19:30 IST
Last Updated 23 ಜುಲೈ 2019, 19:30 IST
puranik
puranik   

ಅವಿವಾಹಿತ. ಎನ್‌ಜಿಒ ದಲ್ಲಿ ಕೆಲಸ. ಸಂಬಳ ₹ 13,000. ಕಡಿತದ ನಂತರ ₹ 10 ಸಾವಿರ ಸಿಗುತ್ತದೆ. ನನ್ನೊಡನೆ ₹ 60 ಸಾವಿರ ನಗದು ಇದೆ. ಒಂದೆರಡು ವರ್ಷ ಗಳಿಗೆ ಈ ಹಣ ಎಲ್ಲಿ ಹೂಡಲಿ?

–ಪ್ರಸಾದ್‌ ಕೊಪ್ಪಳ

ಉತ್ತರ: ನಿಮ್ಮೊಡನಿರುವ ₹ 60 ಸಾವಿರ ನಗದನ್ನು ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ಒಮ್ಮೆಲೆ ಬಡ್ಡಿ ಬರುವ (Re investment Deposit) ಯೋಜನೆಯಲ್ಲಿ ಇಡಿ. ಕೆಲ ಬ್ಯಾಂಕ್‌ಗಳು ಈ ಠೇವಣಿಯನ್ನು ನಗದು ಸರ್ಟಿಫಿಕೇಟ್‌ ಎಂಬುದಾಗಿಯೂ ಕರೆಯುತ್ತವೆ. ಇಲ್ಲಿ ನಿಮ್ಮ ಹಣ ಚಕ್ರ ಬಡ್ಡಿಯಲ್ಲಿ ಬೆಳೆಯುತ್ತದೆ. ಶೇ 7.5 ಬಡ್ಡಿದರದಲ್ಲಿ ₹ 60 ಸಾವಿರ ಎರಡು ವರ್ಷದಲ್ಲಿ ಬಡ್ಡಿ ಸಮೇತ ₹ 69,612 ಆಗಿ ನಿಮ್ಮ ಕೈಸೇರುತ್ತದೆ. ಸಾಧ್ಯವಾದರೆ ತಿಂಗಳಿಗೆ ₹ 2 ಸಾವಿರದ ಆರ್‌.ಡಿ ಮಾಡಿ. ಅದೇ ಬ್ಯಾಂಕ್‌ನಲ್ಲಿ 2 ವರ್ಷಗಳ ಅವಧಿಗೆ ಮಾಡಿ.

ADVERTISEMENT

ಎಲ್‌ಐಸಿಯಿಂದ ಬರುವ ಠೇವಣಿ ಮೇಲಿನ ಬಡ್ಡಿಗೆ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯ್ತಿ ಇದೆಯೇ?

–ಬಾಲಕೃಷ್ಣ, ಬೆಂಗಳೂರು

ಉತ್ತರ: ಸೆಕ್ಷನ್ 80TTB ಆಧಾರದ ಮೇಲೆ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಠೇವಣಿಗಳಲ್ಲಿ ಮಾತ್ರ ಗರಿಷ್ಠ₹ 50,000ರದವರೆಗೆ ಹಿರಿಯ ನಾಗರಿಕರಿಗೆ ವಿನಾಯ್ತಿ ಇದೆ. ಬೇರೆ ಯಾವ ತರಹದ ಬಡ್ಡಿ ಆದಾಯ ವಿನಾಯ್ತಿ ಇರುವುದಿಲ್ಲ.

ನನ್ನ ತಿಂಗಳ ಸಂಬಳ ₹ 28,000, ಕಡಿತ P.T. ₹ 200, NPS ₹ 2,400, PPF ₹ 1,000, ಹಬ್ಬದ ಮುಂಗಡ ₹ 2,400. ಕೈಗೆ ಸಿಗುವುದು₹ 22,000. ತೆರಿಗೆ ಉಳಿತಾಯದ ಬಗ್ಗೆ ತಿಳಿಸಿರಿ.

–ಹೆಸರು, ಊರು ಬೇಡ

ಉತ್ತರ: 2019–20 (1–4–2019 ರಿಂದ 31–3–2020) ಈ ಅವಧಿಗೆ ನಿಮಗೆ ತೆರಿಗೆ ಬರುವುದಿಲ್ಲ. ಇನ್ನು ನಿಮ್ಮ ಖರ್ಚು ಕಳೆದು ಕನಿಷ್ಠ ₹ 5,000 ಆರ್.ಡಿ. 10 ವರ್ಷಗಳ ಅವಧಿಗೆ ಮಾಡಿರಿ. ಆರ್‌ಡಿ ಪೂರ್ಣಗೊಂಡಾಗ ಅಗತ್ಯ ಇರುವಷ್ಟು ಬ್ಯಾಂಕ್ ಸಾಲ ಮಾಡಿ 30X40 ಅಳತೆ ನಿವೇಶನ ಕೊಳ್ಳಿರಿ.

ನನ್ನ ವಯಸ್ಸು 77. ನನ್ನ ಅರೆಕೆರೆ ಮೈಕೊ ಬಡಾವಣೆಯಲ್ಲಿನ ಮನೆ ಮಾರಾಟ ಮಾಡಿ ಬರುವ ಹಣವನ್ನು ನನಗೆ, ನನ್ನ ಹೆಂಡತಿಗೆ, ನನ್ನ ಹಿರಿಯ ಹಾಗೂ ಕಿರಿಯ ಮಗನಿಗೆ ಹಂಚ ಬೇಕೆಂದಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿರಿ.

–ಟಿ. ಗೋವಿಂದರಾಜ್, ಬೆಂಗಳೂರು

ಉತ್ತರ: ನೀವು ಪಿಂಚಣಿದಾರರಲ್ಲವೆಂದು ತಿಳಿಯುತ್ತೇನೆ. ಯಾವುದೋ ಕಾರಣಕ್ಕೆ ದಿಢೀರನೆ ಮನೆ ಮಾರಾಟ ಮಾಡುವುದು ಸರಿಯಲ್ಲ. ಸ್ಥಿರ ಆಸ್ತಿ ಜೀವಕ್ಕೆ ದೊಡ್ಡ ಭದ್ರತೆ. ಮಾರಲೇ ಬೇಕೆಂದಿದ್ದರೆ ನೀವು ಗರಿಷ್ಠ ಶೇ 50 ನಿಮ್ಮೊಡನೆ ಉಳಿಸಿ, ಉಳಿದುದನ್ನು ನಿಮಗೆ ಸರಿ ಕಂಡಂತೆ ಹಂಚಿರಿ. ನೀವು ಮನೆ ಮಾರಾಟ ಮಾಡುವಾಗ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್ ಬರುತ್ತದೆ ತಿಳಿದಿರಲಿ.

ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದಾರೆ. ಎಲ್ಲರಿಗೂ ಮದುವೆಯಾಗಿದೆ. 18 ವರ್ಷಗಳ ಹಿಂದೆ ನನ್ನ ಮಗಳನ್ನು ಸರ್ಕಾರಿ ನೌಕರಿ ಯಲ್ಲಿರುವ ಹೈದರಾಬಾದ್‌ ವರನಿಗೆ ಮದುವೆ ಮಾಡಿಕೊಟ್ಟಿದ್ದೇನೆ. ಈಗ ಅಳಿಯ ಮತ್ತು ಆತನ ತಂದೆ ಕುಡಿದು ಎಲ್ಲಾ ಹಾಳುಮಾಡಿ, ತವರಿನಿಂದ ಹಣ ತರುವಂತೆ ಮಗಳನ್ನು ಪೀಡಿಸುತ್ತಾರೆ. ಮಗಳಿಗೆ ಅನುಕೂಲ ಆಗುವಂತೆ ಏನಾದರೂ ಆಸ್ತಿ ಮಾಡಿದರೆ ಅದನ್ನು ಮಾರಾಟ ಮಾಡಬಹುದು ಎನ್ನುವ ಭಯ. ನನ್ನ ಆಸ್ತಿಯಲ್ಲಿ ಕೂಡಾ ಆತ ಪಾಲು ಕೇಳಬಹುದು. ಮಾರ್ಗದರ್ಶನ ಮಾಡಿ.

–ಹೆಸರು–ಊರು ಬೇಡ

ಉತ್ತರ: ನಿಮ್ಮ ಸಮಸ್ಯೆ ಬಹಳ ಕಠಿಣವಾಗಿದೆ. ಮಗಳ ಹೆಸರಿನಲ್ಲಿ ಆಸ್ತಿ ಮಾಡಿದರೆ ಅದನ್ನು ಮಾರಾಟ ಮಾಡುವಂತೆ ಅಳಿಯ ಒತ್ತಡ ತರಬಹುದು. ಅದೇ ರೀತಿ ಮಗಳಿಗೆ ಬೆದರಿಸಿ ನಿಮ್ಮ ಆಸ್ತಿಯಲ್ಲಿ ಪಾಲು ಕೇಳಬಹುದು. ನೀವು ನಿಮ್ಮ ಮೊಮ್ಮಕ್ಕಳ ಸಲುವಾಗಿ ಸಂಪತ್ತನ್ನು ಠೇವಣಿ ಮಾಡಿ. ಆಸ್ತಿಯನ್ನು ಉಯಿಲು ಮೂಖಾಂತರ, ಹಣವನ್ನು ನಾಮನಿರ್ದೇಶನದ ಮೂಲಕ ಅವರಿಗೆ ಸಿಗುವಂತೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.