ADVERTISEMENT

ಆರ್‌ಬಿಐ ಬಡ್ಡಿ ದರದ ಭೀತಿ..!

ಕೆ.ಜಿ ಕೃಪಾಲ್
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಇದರಿಂದ ರೆಪೊ ದರ, ಅಂದರೆ ರಿಸರ್ವ್ ಬ್ಯಾಂಕ್ ಇತರೆ ಬ್ಯಾಂಕ್‌ಗಳಿಗೆ ನೀಡುವ ಸಾಲದ ದರ ಶೇ 8 ರಿಂದ ಶೇ 8.25ಕ್ಕೆ ಏರಿದೆ. ಇಂತಹ ಏರಿಕೆಯು ಸಾಮಾನ್ಯವಾಗಿ ಬ್ಯಾಂಕಿಂಗ್‌ವಲಯ ಮತ್ತು ಅದನ್ನು ಅವಲಂಭಿಸಿರುವ ರಿಯಲ್ ಎಸ್ಟೇಟ್, ಆಟೊವಲಯಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.

ಹಿಂದಿನ ವಾರ ಸಂವೇದಿ ಸೂಚ್ಯಂಕವು 66 ಅಂಶಗಳಷ್ಟು ಏರಿಕೆ ಪಡೆಯಿತು. ಆದರೆ ಆಸಕ್ತಿ ಕಳೆದು ಕೊಂಡಿರುವ ಸಣ್ಣ ಹೂಡಿಕೆದಾರರ ಚಟುವಟಿಕೆ ಮತ್ತಷ್ಟು ಕ್ಷೀಣವಾಗುತ್ತಿರುವುದನ್ನು ಬಿಂಬಿಸುತ್ತಿತ್ತು. ಈ ಮಧ್ಯೆ ಷೇರುಪೇಟೆಯಲ್ಲಿ ಸ್ವಲ್ಪಮಟ್ಟಿನ ಉತ್ಸಾಹ ಮೂಡಿಸಬಹುದೆಂಬ ಭಾವನೆ ಮೂಡಿಸಿದ್ದ ಒಎನ್‌ಜಿಸಿ ಷೇರಿನ ಸಾರ್ವಜನಿಕ ವಿತರಣೆ ಮತ್ತೊಮ್ಮೆ ಮುಂದೂಡಿದ್ದು ನಿರುತ್ಸಾಹ ಸುದ್ದಿಯಾಗಿದೆ.

ಮಧ್ಯಮ ಶ್ರೇಣಿಯ ಸೂಚ್ಯಂಕ ವಾರದಲ್ಲಿ 45 ಅಂಶಗಳಷ್ಟು  ಹಾನಿ ಅನುಭವಿಸಿದರೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 91 ಅಂಶಗಳಷ್ಟು ಹಾನಿಗೊಳಗಾಯಿತು. ವಾರದ ಆರಂಭದ ದಿನ ವಿದೇಶೀ ವಿತ್ತೀಯ ಸಂಸ್ಥೆಗಳು ರೂ 934 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿ ಸೂಚ್ಯಂಕವನ್ನು 365 ಅಂಶಗಳು ಕುಸಿಯುವುದಕ್ಕೆ ಕಾರಣವಾದವು. ಒಟ್ಟು ರೂ.917 ಕೋಟಿ ಮೌಲ್ಯದ ಷೇರು ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಮಾರಾಟವಾದರೆ ಸ್ವದೇಶೀ ವಿತ್ತೀಯ ಸಂಸ್ಥೆಗಳು ರೂ.410 ಕೋಟಿ ಮೌಲ್ಯದ ಖರೀದಿಯಿಂದ ಸಮತೋಲನ ಮೂಡಿಸುವ ಕಾರ್ಯ ಮಾಡಿವೆ. ಷೇರು ಪೇಟೆ ಬಂಡವಾಳೀಕರಣ ಮೌಲ್ಯವು ರೂ. 61.52 ಲಕ್ಷ ಕೋಟಿಯಿಂದ ರೂ. 61.78 ಲಕ್ಷ ಕೋಟಿಗೆ ಹೆಚ್ಚಾಗಿತ್ತು.

ಬೋನಸ್ ಷೇರಿನ ವಿಚಾರ
*ಕಮ್ಮಿನ್ಸ್ ಇಂಡಿಯಾ ಕಂಪೆನಿ ವಿತರಿಸಲಿರುವ 2:5ರ ಬೋನಸ್ ಷೇರಿಗೆ ಸೆಪ್ಟೆಂಬರ್ 21 ನಿಗದಿತ ದಿನವಾಗಿದೆ.

*ನಿತಿನ್ ಫೈರ್ ಪ್ರೊಟೆಕ್ಷನ್ ಇಂಡಸ್ಟ್ರೀಸ್ ಕಂಪೆನಿ ವಿತರಿಸಲಿರುವ 5:26ರ ಅನುಪಾತದ ಬೋನಸ್‌ಗೆ ಸೆಪ್ಟೆಂಬರ್ 23 ನಿಗದಿತ ದಿನವಾಗಿದೆ.

*ಇಂಡಿಯಾ ನಿಪ್ಪಾನ್ ಎಲೆಕ್ಟ್ರಿಕಲ್ಸ್ ಕಂಪೆನಿಯು ವಿತರಿಸಲಿರುವ 2:5ರ ಅನುಪಾತದ ಬೋನಸ್‌ಗೆ ಸೆಪ್ಟೆಂಬರ್ 21 ನಿಗದಿತ ದಿನವಾಗಿದೆ.

*`ಟಿ~ ಗುಂಪಿನಲ್ಲಿ ವಹಿವಾಟಾಗುತ್ತಿರುವ ಆನಂದ್ ಎಲೆಕ್ಟ್ರಿಕಲ್ ಸಪ್ಲೈ ಕಂಪೆನಿಯು 17:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

*ಟಿ ಗುಂಪಿನಲ್ಲಿ ವಹಿವಾಟಾಗುವ ಸೌಭಾಗ್ಯ ಮೀಡಿಯಾ ಲಿ. ಕಂಪೆನಿಯು ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಸೆಪ್ಟೆಂಬರ್ 21 ನಿಗದಿತ ದಿನವಾಗಿದೆ.

ಹೊಸ ಷೇರಿನ ವಿಚಾರ
*ಸರ್ಕಾರಿ ವಲಯದ ಒಎನ್‌ಜಿಸಿಯ ಮತ್ತೊಮ್ಮೆ ವಿತರಣಾ ಕಾರ್ಯವು 20 ರಿಂದ ಆರಂಭವಾಗಬೇಕಿದ್ದು ವಿತರಣಾ ಫಾರಂಗಳು ಪೇಟೆಯಲ್ಲಿ ಹಂಚಲಾಗಿದ್ದು ವಿತರಣೆಯ ಬೆಲೆಯನ್ನು ಪ್ರಕಟಿಸಬೇಕಿತ್ತು. ಈ ಹಂತದಲ್ಲಿ ವಿತರಣೆಯನ್ನು ಮುಂದೂಡಲಾಗಿದೆ.

*ಇತ್ತೀಚೆಗೆ ಪ್ರತಿ ಷೇರಿಗೆ ರೂ.58ರಂತೆ ಸಾರ್ವಜನಿಕ ವಿತರಣೆ ಮಾಡಿದ ಹರ್ಯಾಣದ ಎಸ್.ಆರ್.ಎಸ್. ಲಿ. ಕಂಪೆನಿಯು 16 ರಂದು `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದಂದು ರೂ.61.40ರಿಂದ ರೂ.31.80ರ ವರೆಗೂ ಏರಿಳಿತ ಕಂಡು ರೂ.33.65 ರಲ್ಲಿ ವಾರಾಂತ್ಯಕಂಡಿತು.

*ಅಲೆಂಬಿಕ್ ಫಾರ್ಮಸ್ಯುಟಿಕಲ್ಸ್ ಕಂಪೆನಿಯು ಅಲೆಂಬಿಕ್ ಲಿ. ಕಂಪೆನಿಯ ಫಾರ್ಮ್ ಚಟುವಟಿಕೆಯನ್ನು ಬೇರ್ಪಡಿಸಿ ರೂ.2ರ ಮುಖಬೆಲೆಯ ಷೇರನ್ನು 1:1ರ ಅನುಪಾತದಲ್ಲಿ ವಿತರಿಸಲಾಗಿದ್ದು 20 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಮಾಡಲಾಗುವುದು.

ಹಕ್ಕಿನ ಷೇರಿನ ವಿಚಾರ
ಹಿಂದೂಸ್ಥಾನ್ ಕಂಪೆನಿಯು ವಿತರಿಸಲಿರುವ ರೂ.36 ರಂತೆ ಪ್ರತಿ ಷೇರಿಗೆ 2:1ರ ಅನುಪಾತದ ಹಕ್ಕಿನ ಷೇರಿಗೆ ಸೆಪ್ಟೆಂಬರ್ 22 ನಿಗದಿತ ದಿನ.

ಮುಖ ಬೆಲೆ ಸೀಳಿಕೆ ವಿಚಾರ
ಮುಂಜಾಲ್ ಆಟೊ ಇಂಡಸ್ಟ್ರೀಸ್ ಕಂಪೆನಿಯು 24 ರಂದು ಷೇರಿನ ಮುಖ ಬೆಲೆ ಸೀಳಿಕೆ ಪರಿಶೀಲಿಸಲಿದೆ.

ಕಂಪೆನಿಯ ಆರ್ಥಿಕ ಸುಧಾರಣೆ
ಇನ್ನೊವೇಟಿವ್ ಟೆಕ್ ಪ್ಯಾಕ್ ಲಿ. ಕಂಪೆನಿಯು ಅಗಾಧವಾದ ಹಾನಿಯ ಕಾರಣ ಬಿಐಎಫ್‌ಆರ್ ನಲ್ಲಿ ರೋಗಗ್ರಸ್ತವೆಂದು ಘೋಷಿಸಲಾಗಿತ್ತು. ಆದರೆ 30ನೇ ಏಪ್ರಿಲ್‌ನಂದು ಕಂಪೆನಿಯು ಉತ್ತಮ ಕಾರ್ಯನಿರ್ವಹಣೆಯ ಕಾರಣ ಲಾಭಗಳಿಕೆಯತ್ತ ತಿರುಗಿ ಉತ್ತಮ ಆರ್ಥಿಕ ಸಾಮರ್ಥ್ಯ ಗಳಿಸಿದೆ. ಈ ಕಾರಣದಿಂದ ಬಿಐಎಫ್‌ಆರ್ ವ್ಯಾಪ್ತಿಯಿಂದ ಹೊರಬಂದಿದೆ.

1992ರ ಹಗರಣದ ಕೇಂದ್ರ ಬಿಂದುವಾಗಿದ್ದ ಹರ್ಷದ್ ಮೆಹ್ತಾರವರ ಆಸ್ತಿಯ ವಿಚಾರದಲ್ಲಿ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿ ರೂ.345.76 ಕೋಟಿಯನ್ನು ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕಿಗೆ, ರೂ.259.65 ಕೋಟಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ, ರೂ.28.34 ಕೋಟಿಯನ್ನು ಆದಾಯ ತೆರಿಗೆ ಇಲಾಖೆಗೆ ಹಾಗೂ ರೂ.16.25 ಕೋಟಿಯನ್ನು ಎಸ್.ಬಿ.ಐ.  ಕ್ಯಾಪ್ಸ್‌ಗೆ ಬಿಡುಗಡೆ ಮಾಡಲು ತಿಳಿಸಿದೆ. ಈ ಹಿಂದೆ ಮಾರ್ಚ್‌ನಲ್ಲಿ ರೂ. 2 ಸಾವಿರ ಕೋಟಿ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಬಿಡುಗಡೆಯಾಗಿತ್ತು.

ಜೆ.ಟಿ.ಎಲ್ ಕಂಪೆನಿಯ ಷೇರುಗಳು ಮೂಲಾಧಾರಿತ ಪೇಟೆಯ ವಹಿವಾಟಿನಿಂದ 16ನೇ ಸೆಪ್ಟೆಂಬರ್‌ನಿಂದ ಹೊರ ಬಂದಿದೆ. ಅಂದಿನಿಂದ ಹೊಸ ಕಾಂಟ್ರಾಕ್ಟ್‌ಗಳು ವಿತರಣೆಯಾಗುವುದಿಲ್ಲ.
 

ವಾರದ ಪ್ರಶ್ನೆ
ಐಪಿಒ ಗಳ ಮೂಲಕ ಹೊಸದಾಗಿ ಲಿಸ್ಟಿಂಗ್ ಆದ ಕಂಪೆನಿಗಳು ವಿತರಣೆ ದರಕ್ಕಿಂತ ಅತಿ ಕಡಿಮೆ ಬೆಲೆಯಲ್ಲಿ ಟ್ರೇಡ್ ಆಗುತ್ತಿದೆ. ಐಪಿಒ ಎಷ್ಟರಮಟ್ಟಿಗೆ ಅನುಕೂಲಕರ ದಯವಿಟ್ಟು ತಿಳಿಸಿ?

ಉತ್ತರ: ತಮ್ಮ ಅನಿಸಿಕೆ ಸರಿಯಾಗಿದೆ. ಇತ್ತೀಚಿನ ಬಹುತೇಕ ಐಪಿಒಗಳು ಹೂಡಿಕೆದಾರರ ಶಾಪಕ್ಕೆ ಗುರಿಯಾಗುತ್ತಿವೆ. ಅಕ್ರೂಪೆಟಲ್ ಟೆಕ್ನಾಲಜೀಸ್ ರೂ. 90ಕ್ಕೆ ವಿತರಣೆ ಮಾಡಿ ರೂ. 20ರ ಸಮೀಪ ವಹಿವಾಟಾಗುತ್ತಿದೆ, ಸಾಂಘವಿ ಪೋರ್ಜಿಂಗ್ ರೂ. 85 ರಲ್ಲಿ ವಿತರಿಸಿದ್ದು ಈಗ ರೂ.29ರ ಸಮೀಪವಿದೆ. ಇದೇ ರೀತಿ ಕಳೆದ ಕೆಲವು ದಿನಗಳ ಹಿಂದೆ ವಹಿವಾಟಿಗೆ ಬಿಡುಗಡೆಯಾದ ಬ್ರೂಕ್ಸ್ ಲ್ಯಾಬೊರೇಟರಿಸ್ ವಿತರಣೆ ಬೆಲೆ ರೂ.100ಕ್ಕೆ ಬದಲಾಗಿ ರೂ.33ರ ಸಮೀಪವಿದೆ. ಕಳೆದವಾರ ಲಿಸ್ಟಿಂಗ್ ಆದ ಎಸ್‌ಆರ್‌ಎಸ್ ಒಂದೇ ದಿನ ಶೇ 42 ರಷ್ಟರ ಹಾನಿಗೊಳಗಾಯಿತು. ಮೊದಲನೆಯ ದಿನದ ವಹಿವಾಟಿನಲ್ಲಿ ಭಾರಿ ಕುಸಿತಕ್ಕೊಳಗಾದ ಕಂಪೆನಿಗಳ ಪಟ್ಟಿಯಲ್ಲಿ ರೆಡಿಮೇಡ್ ಸ್ಟೀಲ್, ಭಾರತೀಯ ಗ್ಲೋಬಲ್, ಟಿಂಬರ್ ಹೌಸ್, ಸರ್ವ ಲಕ್ಷ್ಮಿ ಪೇಷರ್ಸ್, ಶಿಲ್ಪ ಕೇಬಲ್ಸ್, ಪಿಟಿಸಿ ಇಂಡಿಯಾ ಫೈನಾನ್ಸ್‌ಗಳೂ ಸೇರಿವೆ.

ಲಾರ್ಸನ್ ಅಂಡ್ ಟ್ಯೂಬ್ರೋ ಅಂಗ ಸಂಸ್ಥೆಯಾದ ಎಲ್ ಅಂಡ್ ಟಿ ಫೈನಾನ್ಸ್ ಸಹ ವಿತರಣೆ ಬೆಲೆಗಿಂತ ಕಡಿಮೆ ಬೆಲೆಗೆ ಇಳಿದು ಈಗ ವಿತರಣೆ ಬೆಲೆ ಸಮೀಪ ವಹಿವಾಟಾಗುತ್ತಿದೆ. ಅದೇ ಒಂದು ಸ್ಟಾರ್ ಪಡೆದ ಐಪಿಒ. ಆಂಜನೇಯ ಲೈಫ್ ಉತ್ತಮ ಏರಿಕೆಯಿಂದ ಗಮನ ಸೆಳೆದಿದೆ. ಲವಬಲ್ ಲಿಂಗರಿ ಸಹ ಆಕರ್ಷಕ ಲಾಭಗಳಿಸಿದೆ.

ಐಪಿಒಗಳು ಎಲ್ಲವೂ ಒಳ್ಳೆಯವೆಂದು ತೀರ್ಮಾನಿಸುವುದು ತಪ್ಪು. ಕಂಪೆನಿಗಳು ಉತ್ತಮವಾಗಿದ್ದರೂ ವಿತರಣೆ ಬೆಲೆಯನ್ನು ಗಮನಿಸಬೇಕು. ಪ್ರತಿ ಐಪಿಒಗಳೂ ಇತ್ತೀಚೆಗೆ ಲಿಸ್ಟಿಂಗ್ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿರುವ ಈಗಿನ ದಿನಗಳಲ್ಲಿ ಸಣ್ಣ ಹೂಡಿಕೆದಾರರಿಗೆ ಶೇ 5ರ ರಿಯಾಯ್ತಿಯ ಸುದ್ದಿಗೆ ಬಲಿಯಾಗದೆ, ಸ್ಟಾರ್ ರೇಟಿಂಗ್‌ಗಳಿಗೂ ಗಮನವೀಯದೆ ಕೇವಲ ಕಂಪೆನಿಗಳ ವಿತರಣೆ ದರ ಗುಣಮಟ್ಟಕ್ಕನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸಿ ನಿರ್ಧರಿಸಿರಿ. ಅವಕಾಶ ತಪ್ಪಿದರೂ ಪರವಾಗಿಲ್ಲ, ಹಣದ ಹಾನಿ ಬೇಡ.

ಒಎನ್‌ಜಿಸಿ ಷೇರು ವಿತರಣೆ ಹಿಂಪಡೆದುದು  ಆಡಳಿತ ವರ್ಗದ ಹಣದ ದಾಹವೇ ಕಾರಣವೆನ್ನಬಹುದು. ಈ ಸಂದರ್ಭದಲ್ಲಿ ಪೇಟೆಯ ನಿಯಂತ್ರಕರು ಎಲ್ಲಾ ಆರಂಭಿಕ ಷೇರು ವಿತರಣೆ ವಿತರಕರಿಗೆ ವಿತರಣೆ ನಂತರದಲ್ಲಿ ಒಂದು ವರ್ಷ ಕಾಲ ಷೇರು ಅಲಾಟ್ ಆದವರಿಂದ ವಿತರಣೆ ಬೆಲೆಯಲ್ಲಿ ಹಿಂಕೊಳ್ಳಲು ಕಡ್ಡಾಯ ನಿಯಮ `ಸುರಕ್ಷ್ ಜಾಲ~ ನೀಡುವ, ಜಾರಿಗೊಳಿಸಿದಲ್ಲಿ ವಿತರಣೆ ಬೆಲೆಗಳು ಸಹಜ ಸ್ಥಿತಿಗೆ ಬರಬಹುದಲ್ಲವೇ? ಈ ಹಿಂದೆ ಐಪಿಒ ಗಳು ಸೆಕಂಡರಿ ಪೇಟೆಗೆ ಪೂರಕವಾಗಿದ್ದವು. ಈಗ ಮಾರಕವಾಗಿವೆ ಎನ್ನಬಹುದು. ಈಗ ನೆನಪಿನಲ್ಲಿಡಬೇಕಾದ್ದು ಅರಿತು ಹೂಡಿಕೆ ಮಾಡಿ.

  98863-13380
 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT