ADVERTISEMENT

ತ್ರೈಮಾಸಿಕ ಫಲಿತಾಂಶ ನಿರೀಕ್ಷೆಯಲ್ಲಿ...

ಕೆ.ಜಿ ಕೃಪಾಲ್
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಸಂವೇದಿ ಸೂಚ್ಯಂಕದ ಏರಿಳಿತಗಳ ವೇಗವು ಇತ್ತೀಚಿನ ದಿನಗಳಲ್ಲಿ ಹ್ಯಾಂಗ್‌ಸೆಂಗ್ ಸೂಚ್ಯಂಕದ ಹಾದಿಯಲ್ಲೇ ಇದೆ. ಕಳೆದವಾರದ ಚಟುವಟಿಕೆ ನಾಲ್ಕು ದಿನಗಳಿಗೆ ಸೀಮಿತವಾಗಿದ್ದರೂ ಸೂಚ್ಯಂಕಗಳ ಚಲನೆಯ ವೇಗವು ಅತಿಯಾಗಿದ್ದು ಸಣ್ಣ ಹೂಡಿಕೆದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಶ್ರಮಪಡಬೇಕಾಯಿತು.
 
ಬಹುತೇಕ ಹೆಚ್ಚಿನ ಕಂಪೆನಿಗಳ ವಾರ್ಷಿಕ ಸಾಮಾನ್ಯ ಸಭೆಗಳು ಮುಗಿದಿದ್ದು ಮುಂದಿನ ದಿನಗಳಲ್ಲಿ ಎರಡನೆ ತ್ರೈಮಾಸಿಕ ಫಲಿತಾಂಶಗಳ ಮಹಾಪೂರವು ಪೇಟೆಗೆ ಹೊಸ ದಿಸೆ ತೋರಲಿದೆ.
 
ಕಳೆದ ವಾರದ ವಿಶೇಷವೆಂದರೆ, ಈಗಾಗಲೇ ವಾರ್ಷಿಕ ಗರಿಷ್ಠ ಮಟ್ಟದಿಂದ ಶೇ 50 ರಷ್ಟು ಕುಸಿದು ಕನಿಷ್ಠ ಮಟ್ಟದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಆರ್ಥಿಕ ಸಾಮರ್ಥ್ಯವನ್ನು ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಮೂಡಿಸ್, ಒಂದು ಹಂತ ಇಳಿಸಿ ಡಿ+ರೇಟಿಂಗ್ ನೀಡಿದೆ. ಇದು ಸಹಜವೇ ಇರಬಹುದಾದರೂ, ಈ ರೇಟಿಂಗ್ ಕಂಪೆನಿಯು ಜರುಗಿಸಿದ ಕ್ರಮದ ಸಮಯ ಸೂಕ್ತವಲ್ಲವೆನ್ನಬಹುದು.
 
`ಎಸ್‌ಬಿಐ~ ಕಳೆದ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲೇ ವಸೂಲಾಗದ ಸಾಲದ ಮಟ್ಟ (ಎನ್‌ಪಿಎ) ಹೆಚ್ಚಾಗಿದ್ದು ಅದನ್ನು ನಿಭಾಯಿಸಲು ಹೆಚ್ಚಿನ ಹಣ ಮೀಸಲಿಟ್ಟಿರುವುದನ್ನು ಪ್ರಕಟಿಸಿತ್ತು.

ಆಗಿನ ದರ ರೂ.2,500ರ ಸಮೀಪವಿದ್ದು ಅಲ್ಲಿಂದ ಸುಮಾರು ಒಂದು ಸಾವಿರದಷ್ಟು ಕುಸಿತ ಕಂಡ ನಂತರ ರೇಟಿಂಗ್ ಇಳಿಸಿರುವುದು ಕೇವಲ ಹೂಡಿಕೆದಾರರ ಭಾವನೆಯೊಂದಿಗೆ ಚಕ್ಕಂದವಾಡುವ ಕ್ರಮವೆನಿಸುತ್ತದೆ. ಈ ಸಂದರ್ಭವು ಹೂಡಿಕೆಗೆ ಅನುಕೂಲಕರವೆಂಬುದನ್ನು ಪರಿಶೀಲಿಸಿ ನಿರ್ಧರಿಸುವುದು ಒಳಿತು.

ಕಳೆದವಾರ ಸೂಚ್ಯಂಕವು 221 ಅಂಶಗಳಷ್ಟು  ಕುಸಿತ ಕಂಡಿತ್ತು. ವಿದೇಶಿ  ವಿತ್ತೀಯ ಸಂಸ್ಥೆಗಳು ರೂ.2,415 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದವು. ಮಧ್ಯಮ ಶ್ರೇಣಿ ಸೂಚ್ಯಂಕ 170 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 159 ಅಂಶಗಳಷ್ಟುಇಳಿಕೆ ಕಂಡಿತು. ಈ ಅವಧಿಯಲ್ಲಿ ಷೇರುಪೇಟೆಯ ಬಂಡವಾಳೀಕರಣ ಮೌಲ್ಯ ರೂ.58.63 ಲಕ್ಷ ಕೋಟಿಗೆ ಇಳಿದಿದೆ.


ಹೊಸ ಷೇರಿನ ವಿಚಾರ
ಇತ್ತೀಚೆಗೆ ಪ್ರತಿ ಷೇರಿಗೆ ರೂ.138 ರಂತೆ ಸಾರ್ವಜನಿಕ ವಿತರಣೆ ಮಾಡಿದ ಪ್ರಕಾಶ್ ಕನ್ಸ್‌ಟ್ರುವಲ್ ಲಿಮಿಟೆಡ್ ಕಂಪೆನಿಯು 4 ರಂದು `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ರೂ.112 ರಿಂದ ರೂ.245ರ         ವರೆಗೂ ಏರಿಳಿತ ಪ್ರದರ್ಶಿಸಿ ರೂ.173 ರಲ್ಲಿ ವಾರಾಂತ್ಯ ಕಂಡಿತು.

*ಪ್ರತಿ ಷೇರಿಗೆ ರೂ.79 ರಂತೆ ಸಾರ್ವಜನಿಕ ವಿತರಣೆ ಮಾಡಿದ ಆರ್‌ಡಿಬಿ ರಸಮಾನ್ಸ್ ಲಿ. ಕಂಪೆನಿಯು 7 ರಂದು `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಅಂದು ರೂ.19.80 ರಿಂದ ರೂ.93.15 ರವರೆಗೆ ಏರಿಳಿತ ಕಂಡು ರೂ.26.50 ರಲ್ಲಿ ವಾರಾಂತ್ಯ ಕಂಡಿತು.

*ಸಾರ್ವಜನಿಕ ವಲಯದ ಬಿಎಚ್‌ಇಎಲ್ ಕಂಪೆನಿಯಲ್ಲಿನ ಶೇ 5 ರಷ್ಟು ಬಂಡವಾಳ ಹಿಂತೆಗೆಯಲು, ಷೇರು ಮರು ವಿತರಣೆಗೆ ಕಂಪೆನಿ ಸೆಬಿಗೆ ಅರ್ಜಿ ಸಲ್ಲಿಸಿದೆ.
ಗುಂಪಿನಲ್ಲಿ ಬದಲಾವಣೆ

ಈ ಕೆಳಗಿನ ಕಂಪೆನಿಗಳನ್ನು 10 ರಿಂದ ಎ ಗುಂಪಿಗೆ ವರ್ಗಾಯಿಸಲಾಗಿದೆ.
ಅಲ್‌ಸ್ತೋಮ್ ಪ್ರಾಜೆಕ್ಟ್ಸ್, ಆಮ್‌ಟೆಕ್ ಆಟೋ, ಬಾಟಾ ಇಂಡಿಯಾ, ಬ್ರಿಟಾನಿಯಾ ಇಂಡಸ್ಟ್ರೀಸ್, ಸಿಇಎಸ್‌ಇ ಲಿ., ಕ್ರಿಸಿಲ್, ಇಐಎಚ್ ಲಿ., ಗೀತಾಂಜಲಿ ಜೆಮ್ಸ, ಗಾಡ್ರೇಜ್ ಪ್ರಾಪರ್ಟಿಸ್, ಗುಜರಾತ್ ಪ್ಲೊರೊ ಕಂಪೆನಿ, ಗುಜರಾತ್ ಗ್ಯಾಸ್,
 
ಗುಜರಾತ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್, ಇಂಡಿಯಾ ಸೆಕ್ಯುರಿಟೀಸ್, ಐಎನ್‌ಜಿ ವೈಶ್ಯ, ಮ್ಯಾಕ್ಸ್ ಇಂಡಿಯಾ, ಮುತ್ತೂಟ್ ಫೈನಾನ್ಸ್, ಪಿಡಿಲೈಟ್ ಇಂಡಸ್ಟ್ರೀಸ್, ರೆಡಿಂಗ್‌ಟನ್ (ಇಂಡಿಯಾ), ಟೊರೆಂಟ್ ಫಾರ್ಮಾ, ಟಿಟಿಕೆ ಪ್ರೆಸ್ಟೀಜ್, ಯುಟಿವಿ ಸಾಫ್ಟ್‌ವೇರ್ ಮತ್ತು ವೊಕಾರ್ಡ್ ಲಿ. ಕಂಪೆನಿಗಳನ್ನು ಎ ಗುಂಪಿಗೆ ವರ್ಗಾಯಿಸಲಾಗುವುದು.

ಈ ಕೆಳಗಿನ ಕಂಪೆನಿಗಳನ್ನು `ಎ~ ಗುಂಪಿನಿಂದ `ಬಿ~ ಗುಂಪಿಗೆ ಅಕ್ಟೋಬರ್ 10 ರಿಂದ ವರ್ಗಾಯಿಸಲಾಗುವುದು. ಅಬ್ಬನ್ ಆಫ್ ಷೋರ್, ಅರೇವಾಟಿಡಿ, ಬಿಎಫ್ ಯುಟಿಲಿಟಿ, ಬಿಜಿಆರ್ ಎನರ್ಜಿ, ಸೆಂಚುರಿ ಟೆಕ್ಸ್‌ಟೈಲ್ಸ್, ಕೋರ್ ಎಜುಕೇಷನ್ ಟೆಕ್ನಾಲಜೀಸ್, ಡಿ.ಬಿ. ರಿಯಾಲ್ಟಿ,

ಜಿ.ಇ. ಶಿಪ್ಪಿಂಗ್, ಜಿ.ವಿ.ಕೆ. ಪವರ್, ಎಚ್.ಎಂ.ಟಿ., ಇಂಡಿಯಾ ಬುಲ್ ಪವರ್, ಜಿಂದಾಲ್ ಸಾ, ನ್ಯಾಶನಲ್ ಫರ್ಟಿಲೈಸರ್ಸ್, ಓಬೆರಾಯ್ ರಿಯಾಲ್ಟಿ, ಕಂಪ್ಯೂಟರ್, ರಾಜೇಶ್ ಎಕ್ಸ್‌ಪೋರ್ಟ್ಸ್, ರಿಲಿಗರ್ ಎಂಟರ್‌ಪ್ರೈಸಸ್, ಶಿಪ್ಪಿಂಗ್ ಕಾರ್ಪೊರೇಷನ್, ಎಸ್‌ಕೆಎಸ್ ಮೈಕ್ರೊ ಫೈನಾನ್ಸ್, ಸ್ಟರ್ಲಿಂಗ್ ಇಂಟರ್‌ನ್ಯಾಶನಲ್ ಎಂಟರ್‌ಪ್ರೈಸಸ್, ವಿಜಯ ಬ್ಯಾಂಕ್‌ಗಳು ಬಿ ಗುಂಪಿಗೆ ವರ್ಗಾಯಿಸಲ್ಪಡಲಿವೆ.

ಈ ಕೆಳಗಿನ ಕಂಪೆನಿಗಳನ್ನು ಮಧ್ಯಮ ಶ್ರೇಣಿಯಿಂದ ಕೆಳಮಧ್ಯಮ ಶ್ರೇಣಿ ವರ್ಗಕ್ಕೆ ಬದಲಾಯಿಸಲಾಗಿದೆ. ಈ ಕ್ರಮ 10 ರಿಂದ ಜಾರಿಯಾಗಲಿದೆ. ಬಾಂಬೆ ಡೈಯಿಂಗ್, ಜಿಟಿಎಲ್, ಜಿಟಿಎಲ್ ಇನ್‌ಫ್ರಾ, ಐವಿಆರ್‌ಸಿಎಲ್, ಜಿಂದಾಲ್ ಪೊಲಿ ಫಿಲಂಸ್, ಕೆ.ಜಿ.ಎನ್.
ಇಂಡಸ್ಟ್ರೀಸ್, ಮಹೇಂದ್ರ ಲೈಫ್ ಸ್ವೆಸ್ ಡೆವೆಲಪರ್ಸ್,

ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸ್, ಪರ್ಸಿಸ್ಟಂಟ್ ಸಿಸ್ಟಂ, ಸಿಂಪ್ಲೆಕ್ಸ್ ಇನ್‌ಫ್ರಾ, ಸ್ಪೈಸ್ ಜೆಟ್, ಟೆಕ್‌ಪ್ರೊ ಸಿಸ್ಟಂ, ಯೂನಿಕೆಂ ಲ್ಯಾಬ್, ಉಷಾ ಮಾಟಿನ್ ಮತ್ತು ವರ್ಧಮಾನ್ ಟೆಕ್ಸ್‌ಟೈಲ್.

ಈ ಕೆಳಗಿನ ಕಂಪೆನಿಗಳನ್ನು 10 ರಿಂದ ಮಧ್ಯಮ ಶ್ರೇಣಿಗೆ ವರ್ಗಾಯಿಸಲಾಗಿದೆ.
ಬಜಾಜ್ ಕಾರ್ಫ್, ಬಾಲಕೃಷ್ಣ ಇಂಡಸ್ಟ್ರೀಸ್, ಎರೋಸ್ ಇಂಟರ್‌ನ್ಯಾಶನಲ್ ಮೀಡಿಯಾ, ಗೃಹ ಫೈನಾನ್ಸ್, ಜೆಪಿ ಇನ್‌ಫ್ರಾಟೆಕ್, ಗಣೇಶ್ ಸ್ಪಿನ್ನರ್ಸ್, ವರಾದ ವೆಂಚರ್ಸ್, ವಿಎಸ್‌ಟಿ ಇಂಡಸ್ಟ್ರೀಸ್.

ಬೋನಸ್ ಷೇರಿನ ವಿಚಾರ
*ಆಮ್‌ಟೆಕ್ ಇಂಡಿಯಾ ಕಂಪೆನಿಯು 12 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
`ಟಿ~ ಗುಂಪಿನಲ್ಲಿ ವಹಿವಾಟಾಗುತ್ತಿರುವ ಯುರೋ ಫಿನ್‌ಮಾರ್ಟ್ ಲಿ. ಕಂಪೆನಿಯು 4:1ರ ಬೋನಸ್ ಷೇರು ವಿತರಣೆಗೆ ಅಕ್ಟೋಬರ್ 18 ನಿಗದಿತ ದಿನವಾಗಿದೆ. ಈ ಕಂಪೆನಿಯ ಪ್ರವರ್ತಕರು ಕೇವಲ 2.24% ರಷ್ಟು ಭಾಗಿತ್ವ ಹೊಂದಿದ್ದಾರೆಂಬುದು ಎಚ್ಚರಿಕೆ ಗಂಟೆ.

ವಾರದ ಪ್ರಶ್ನೆ
ಷೇರುಪೇಟೆಯ ನೀರಸ ವಾತಾವರಣದಲ್ಲಿಯೂ ಆರು ಕಂಪೆನಿಗಳ `ಐಪಿಒ~ ಹೆಚ್ಚಿನ ಪ್ರೀಮಿಯಂನೊಂದಿಗೆ ಬಂದಿದ್ದು ಮತ್ತು ಅವು ಯಶ ಕಂಡದ್ದು ಆಶ್ಚರ್ಯಕರವಲ್ಲವೇ? ಹಾಗಿದ್ದರೂ, ಒಎನ್‌ಜಿಸಿ ವಿತರಣೆಯಿಂದ ಹಿಂದೆ ಸರಿದದ್ದು ಯಾಕೆ?

ಉತ್ತರ: ಯಾವುದೇ ಒಂದು ವಿಷಯವನ್ನು ವಿಶ್ಲೇಷಿಸುವಾಗ ಕೇವಲ ಒಂದಂಶದಿಂದ ನಿರ್ಧರಿಸಲಾಗದು.  ಕಳೆದವಾರ ಒನ್‌ಲೈಫ್ ಕ್ಯಾಪಿಟಲ್ ಅಡ್ವೈಸರ್ಸ್ ಕಂಪೆನಿ ರೂ. 100ರಿಂದ ರೂ.110 ರಂತೆ ವಿತರಿಸಲು ಯಶಸ್ವಿಯಾಯಿತು. ತಕ್ಷಶೀಲ್ ಸೊಲೂಷನ್ಸ್ ರೂ.130 ರಿಂದ  ರೂ.150ರಲ್ಲಿ ವಿತರಿಸಿತು. 

ಎಂಅಂಡ್‌ಬಿ ಸ್ವಿಚ್‌ಗೇರ್ಸ್‌  ರೂ.180 ರಿಂದ ರೂ.186 ರಲ್ಲಿ ವಿತರಿಸಿದೆ. ಇಂಡೋತಾಯ್ ಸೆಕ್ಯುರಿಟೀಸ್ ರೂ.70 ರಿಂದ ರೂ.84 ರಲ್ಲಿ ವಿತರಿಸಿತು. ಇದಕ್ಕೆ ಕ್ವಾಲಿಫೈಡ್ ಇನ್ಸ್‌ಟಿಟ್ಯೂಷನಲ್ ಬಯರ್ಸ್ ಮತ್ತು ಸಾಂಸ್ಥಿಕರಲ್ಲದ ಹೂಡಿಕೆದಾರರ ಬೆಂಬಲ ಪೂರ್ಣವಾಗಿ ಇಲ್ಲದ ಪರಿಸ್ಥಿತಿ ಎದುರಿಸಿತು.

 ಫ್ಲೆಕ್ಸಿಟಫ್ ಇಂಟರ್‌ನ್ಯಾಷನಲ್ ರೂ.145 ರಿಂದ  ರೂ.155ರಂತೆ ವಿತರಣೆ ಮಾಡಿತು. ಇಲ್ಲಿಯೂ ಸಹ ಕ್ವಾಲಿಫೈಡ್ ಇನ್ಸ್‌ಟಿಟ್ಯೂಷನಲ್ ಬಯರ್ಸ್ ಬೆಂಬಲ ಕೇವಲ ಅರ್ಧದಷ್ಟು ಮಾತ್ರವಿದ್ದು ಪೂರ್ಣವಾಗಿರಲಿಲ್ಲ.
 
ಇತ್ತೀಚಿಗೆ ಪೇಟೆ ಪ್ರವೇಶಿಸಿದ ರೆಡಿಮೇಡ್ ಸ್ಟೀಲ್, ಬ್ರೂಕ್‌ಲ್ಯಾಬ್, ಎಸ್‌ಆರ್‌ಎಸ್‌ಗಳ ಜೊತೆಗೆ ನಿನ್ನೆ ತಾನೇ ಪೇಟೆ ಪ್ರವೇಶಿಸಿದ ಆರ್‌ಡಿಬಿ ರಸಾಯನ್ಸ್‌ನಂತಹವು ಹೂಡಿಕೆದಾರರ ಬಂಡವಾಳ ಕರಗಿಸುವ ಉದ್ದೇಶದಿಂದಲೇ ಐಪಿಒ ವಿತರಿಸಿದ ಭಾವನೆ ಮೂಡಿಸಿವೆ. ಆರಂಭದ ದಿನವೇ ಶೇ 50 ರಿಂದ ಶೇ 70 ರಷ್ಟು ಹಣ ಕರಗಿಸಿದ ನಕಾರಾತ್ಮಕ ಬೆಳವಣಿಗೆಗಳನ್ನು ಸಹ ಕಂಡಿದ್ದೇವೆ.

ಕಳೆದವಾರ ಸಾರ್ವಜನಿಕ ವಿತರಣೆ ಮಾಡಿದ ಸ್ವಜಾಸ್ ಏರ್ ಚಾರ್ಟರ್ಸ್ ಲಿ. ಕಂಪೆನಿಯು ಉತ್ತಮ ಸ್ಪಂದನದ ಕೊರತೆಯ ಕಾರಣ ವಿತರಣೆಯ ಬೆಲೆಯನ್ನು ಮೊಟಕುಗೊಳಿಸಿ ಅಂತಿಮ ದಿನವನ್ನು ಮುಂದೂಡಿ ಯಶಸ್ಸು ಕಂಡಿತು.

ಪಿಜಿ ಎಲೆಕ್ಟ್ರೊಪ್ಲಾಸ್ಮ್ ಕಂಪೆನಿಯು ಸೆಪ್ಟೆಂಬರ್ 26 ರಂದು ವಹಿವಾಟಿಗೆ ಬಿಡುಗಡೆಯಾಗಿ 30 ರಂದು ಕೊನೆಯ ಅರ್ಧ ಗಂಟೆಯ ಸಮಯದಲ್ಲಿ ರೂ.270 ರಿಂದ ರೂ.364 ರವರೆಗೂ ಜಿಗಿದು ರೂ.258ರ ಸಮೀಪಕ್ಕೆ ಇಳಿಕೆಯಾದದ್ದು ಎಂತಹ ಹೂಡಿಕೆದಾರರನ್ನು  ದಿಗ್ಭ್ರಮೆಗೊಳಿಸುವ ಸಂಗತಿಯಾಗಿದೆ.

ಪಂಚತಾರಾ ರೇಟಿಂಗ್ ಪಡೆದ ಎಲ್‌ಅಂಡ್‌ಟಿ ಫೈನಾನ್ಸ್ ಕಂಪೆನಿಯ ಪೇಟೆ ದರವು ವಿತರಣೆ ಬೆಲೆಗಿಂತ ಕಡಿವೆು ದರದಲ್ಲಿ ವಹಿವಾಟಾಗುತ್ತಿದ್ದು ಏಕತಾರಾ ರೇಟಿಂಗ್ ಪಡೆದ ಆಂಜನೇಯ ಲೈಫ್‌ಕೇರ್ ನಂತಹ ಕಂಪೆನಿಗಳು ಆಕರ್ಷಕವಾಗಿ ವಿಜೃಂಭಿಸುತ್ತಿವೆ.

ಇದಕ್ಕೆಲ್ಲಾ ಸುಲಭ ಪರಿಹಾರವೆಂದರೆ ಇಂತಹ `ಐಪಿಒ~ಗಳಿಗೆ ಸ್ವಯಂ ಬಹಿಷ್ಕಾರ ಹಾಗೂ ಇಂತಹ ಕಂಪೆನಿಗಳ ಮರ್ಚಂಟ್ ಬ್ಯಾಂಕರ್‌ರ ವಿತರಣೆಗಳಿಂದಲೂ ದೂರ ಸರಿಯಬೇಕು.

ಇನ್ನು ಒಎನ್‌ಜಿಸಿ  ಹಿಂಪಡೆದ ಬಗ್ಗೆ ಹೇಳಬೇಕಾದರೆ `ಎಫ್‌ಪಿಒ~ ಆರಂಭದ ದಿನ ಪ್ರಕಟಣೆ ಮತ್ತು ಹಿಂಪಡೆಯುವ ದಿನಗಳ ಪೇಟೆ ದರಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ ಪೇಟೆಯ ಪರಿಸ್ಥಿತಿ ಕಾರಣ ಹಿಂಪಡೆಯಲಾಗಿದೆ.  ಈ ಕಾರಣವು ಸಕಾರಣವಲ್ಲ. ಅದರ ಹಿಂದಿನ ಸೆಳೆತ ಎಳೆತಗಳೇ ಬೇರೆ ಇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT