ADVERTISEMENT

ಪೇಟೆಯ ನಿರೀಕ್ಷೆ ಹೆಚ್ಚಿಸಿದ ‘ಜಿಡಿಪಿ’

ಕೆ.ಜಿ ಕೃಪಾಲ್
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಹೂಡಿಕೆಯ ಶಿಸ್ತು ಮತ್ತು ಷೇರುಪೇಟೆಯಲ್ಲಿ ಸ್ಥಿರತೆ ವಿಚಾರ­ಗಳೆರಡೂ ಸುಸ್ತಾಗಿ ಮೂಲೆಗುಂ­ಪಾಗಿವೆ. ಕಂಪೆನಿಗಳ ಸಾಧನೆಯನ್ನು ಗಣನೆಗೆ ತೆಗೆದು­ಕೊಳ್ಳದೆ ಕೇವಲ ಸುದ್ದಿ ಸಮಾಚಾರಗಳಿಗೆ ಮಣೆ ಹಾಕಲಾಗುತ್ತಿದೆ. ಎಲೆಕ್ಟ್ರಾನಿಕ್‌ ಮಾಧ್ಯಮ­ಗಳಲ್ಲಿನ ವಿಶ್ಲೇಷಣೆಗಳೂ ಸಹ ಕಂಪೆನಿಗಳ ಸಾಧನೆಗಿಂತ ಕೇವಲ ಷೇರಿನ ಬೆಲೆಗಳ ಏರುಪೇರಿಗೆ ಮಹತ್ವ ನೀಡಿ ಅಸ್ಥಿರತೆಗೆ ಪೂರಕ ವಾತಾವರಣ ನಿರ್ಮಿಸಿವೆ.

ಈ ವಾರದ ಮಹತ್ವದ ಸುದ್ದಿ ಎಂದರೆ ಟಾಟಾ ಸಮೂಹವು ಬ್ಯಾಂಕಿಂಗ್‌ ಲೈಸೆನ್‌್ಸ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿರುವುದು. ಇದಕ್ಕೆ ನೀಡಿರುವ ಕಾರಣವೂ ಸಹ ಒಪ್ಪುವಂ­ತಹುದಾಗಿದೆ. ಈ ಸಮೂಹದ ವೈವಿಧ್ಯಮಯ ಚಟು­ವಟಿಕೆಗೆ ಭಂಗವಾಗಬಾರ­ದೆಂಬ ಕಾರಣ­ಕ್ಕಾಗಿ ಬ್ಯಾಂಕಿಂಗ್‌ ಲೈಸೆನ್‌್ಸ ಅರ್ಜಿ ವಾಪಸ್‌ ಪಡೆಯುತ್ತಿರುವುದಾಗಿ ಹೇಳಿರುವುದು ಸೂಕ್ತವಾಗಿದೆ.
ಫಾರ್ಮಾ ವಲಯದ ಕಂಪೆನಿಗಳ ಮೇಲೆ ಅಮೆರಿ­ಕದ ಎಫ್‌ಡಿಎ ತನ್ನ ಪ್ರಭಾವ ಬೀರುತ್ತಿ­ರುವುದಕ್ಕೆ ವೊಕಾರ್ಡ್‌ ಕಂಪೆನಿಯ ಚಿಕಲ್‌ತಾನ ಘಟಕದ ಉತ್ಪನ್ನಗಳಿಗೆ ನಿಷೇಧ ವಿಧಿಸಿರುವುದು ಸಾಕ್ಷಿಯಾಗಿದೆ.

ಈ ಘಟಕದಲ್ಲಿ ಉತ್ಪಾದನೆಯಾ­ಗುವ ಟೊಪ್‌ರೊಲ್‌ ಎಂಬ ಔಷಧವು ಕಂಪೆನಿಯ ಒಟ್ಟು ವಹಿವಾಟಿಗೆ ಶೇ 11ರಷ್ಟು ಕೊಡುಗೆ ನೀಡುತ್ತಿದೆ. ಈ ಔಷಧವು ಅಮೆರಿಕದಲ್ಲಿ ಹಿಂದಿನ ವರ್ಷ ಸುಮಾರು ₨720 ಕೋಟಿ ಮೌಲ್ಯದಷ್ಟು ಮಾರಾಟದ ದಾಖಲೆ ನಿರ್ಮಿಸಿದ್ದು, ಈ ವರ್ಷ ₨1,500 ಕೋಟಿ ವಹಿವಾಟು ನಡೆಸುವ ಅಂದಾಜಿದೆ. ಈ ಹಿಂದೆ ವೊಕಾರ್ಡ್‌ ಕಂಪೆನಿಯ ಔರಂಗಾಬಾದ್‌ನಲ್ಲಿನ  ವಾಲೂಜ್‌ ಘಟಕ ನಿಷೇಧಕ್ಕೊಳಗಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಅತಿ ವಿರಳವಾದ ಚಟು­ವಟಿಕೆ ಪ್ರದರ್ಶಿಸುತ್ತಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಕಂಪೆನಿಗಳನ್ನು ‘ಪೀರಿಯಾ­ಡಿಕ್‌ ಕಾಲ್‌ ಆಕ್ಷನ್‌’ ಗುಂಪಿಗೆ ವರ್ಗಾಯಿ­ಸಿದ್ದರಿಂದ ಅವುಗಳ ವಹಿವಾಟು ಮತ್ತಷ್ಟು ಕ್ಷೀಣಿ­ಸು­ವಂತಾಗಿದೆ. ಇದಕ್ಕೆ ಹೆಚ್ಚಿನ ತಜ್ಞರು ವಿರೋಧ ವ್ಯಕ್ತಪಡಿಸಿದ ಕಾರಣ ಈ ಯೋಜನೆಯಲ್ಲಿ ಮಾರ್ಪಾಟು ತರಲು ‘ಸೆಬಿ’ ಯೋಚಿಸಿದೆ.

ಷೇರುಪೇಟೆ ದೀರ್ಘ ಕಾಲದಿಂದ ನಿರುತ್ಸಾಹ­ದಾಯಕ ವಾತಾವರಣದಲ್ಲಿಯೇ ಇದೆ. ಈ ಮಧ್ಯೆ,   ಶುಕ್ರವಾರದ ವಹಿವಾಟಿನ ನಂತರ ಪ್ರಕಟ­ವಾದ, ‘ಜಿಡಿಪಿ’ ಪ್ರಗತಿ ಶೇ 4.8ರಷ್ಟಿದೆ ಎಂಬ ಅಂಕಿ ಅಂಶ ದೇಶದ ಆರ್ಥಿಕತೆಯು ಚುರುಕು­ಗೊಳ್ಳುತ್ತಿರುವುದರ ಸಂಕೇತವಾಗಿ­ರಬಹುದು. ಈ ನಿರೀಕ್ಷೆಯ ಕಾರಣ ಹೆಚ್ಚಿನ ಕಂಪೆನಿಗಳ ಷೇರುಗಳು ಗಮನಾರ್ಹ ಮುನ್ನಡೆಯಿಂದ ಹೂಡಿಕೆದಾರರ ಆಸಕ್ತಿ ಕೆರಳಿಸಿದಂತಿವೆ.

ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಬ್ಯಾಂಕ್‌ ಆಫ್‌ ಬರೋಡ, ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ಗಳಲ್ಲದೆ ಖಾಸಗಿ ವಲಯದ ಯೆಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ಗಳು ಶುಕ್ರವಾರದ ವಹಿವಾಟಿನಲ್ಲಿ ಚುರುಕಾದ ಏರಿಕೆ ತೋರಿದ್ದರಿಂದ ‘ಬ್ಯಾಂಕೆಕ್‌್ಸ ಸೂಚ್ಯಂಕ’ 275 ಅಂಶಗಳಷ್ಟು ಜಿಗಿತ ಕಾಣುವಂತೆ ಆಯಿತು. ಮತ್ತೊಮ್ಮೆ ಬ್ಯಾಂಕಿಂಗ್‌ ಸಂಸ್ಥೆಗಳು ತಮ್ಮ ಸಾರ್ವಭೌಮತ್ವ ಪ್ರದರ್ಶಿಸಿದವು.

ಎಸ್‌ಆರ್‌ಎಫ್‌ ಕಂಪೆನಿಯ ಷೇರು ಶೇ 20ರಷ್ಟು ಏರಿಕೆಯಿಂದ ₨206/40 ರಲ್ಲಿ ಆವರಣ ಮಿತಿಯನ್ನು ತಲುಪಿತ್ತು. ಸಿಂಡಿಕೇಟ್‌ ಬ್ಯಾಂಕ್‌, ಜಿಎಂಡಿಸಿ, ಎನ್‌ಎಂಡಿಸಿ, ಸಿಸಾ ಸ್ಟರ್ಲೈಟ್‌ಗಳೂ ಸಹ ಹೊಸ ಚುಕ್ತಾ ಚಕ್ರದಲ್ಲಿ ಚುರುಕಾದ ಏರಿಕೆ ಪಡೆದವು. ಒಟ್ಟು ಈ ವಾರ 574 ಅಂಶಗಳ ಏರಿಕೆ ಪಡೆದ ಸಂವೇದಿ ಸೂಚ್ಯಂಕವು, ಮಧ್ಯಮ ಶ್ರೇಣಿಯ ಸೂಚ್ಯಂಕದಲ್ಲಿ 170 ಅಂಶಗಳು ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕದಲ್ಲಿ 105 ಅಂಶಗಳ ಏರಿಕೆಗೆ ಕಾರಣವಾಯಿತು.

ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ₨1,298 ಕೋಟಿ ಹೂಡಿಕೆಯಿಂದ ಪೇಟೆಯನ್ನು ಬೆಂಬಲಿ­ಸಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₨978 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ಹಿಂದಿನವಾರದ ₨66.39 ಲಕ್ಷ ಕೋಟಿಯಿಂದ ಈಗ ₨68.10 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಲಾಭಾಂಶ ವಿಚಾರ
ಆಟೋಮೊಟಿವ್‌ ಆಕ್ಸಲ್‌ ಶೇ 20, ಐಎಸ್‌ಜಿಇಸಿ ಹೆವಿ ಎಂಜಿನಿಯರಿಂಗ್‌ ಶೇ 100, ವೈಯತ್‌ ಲಿ. ಶೇ 1,450, ಕಾಲ್ಗೆಟ್‌ ಪಾಲ್ಮೊಲಿವ್‌ ಶೇ 900 ಹೀಲಿಯೋಸ್‌ ಅಂಡ್‌ ಮ್ಯಾತೆಸನ್ ಶೇ 50, ಫೈಜರ್‌ ಶೇ 3,600, ವಾಲ್‌ಚಂದ್‌ ನಗರ್‌ ಇಂಡಸ್ಟ್ರೀಸ್‌ ಶೇ 20 (ಮು.ಬೆ. ₨2).
ಮುಖಬೆಲೆ ಸೀಳಿಕೆ ವಿಚಾರ
* ಎಂ.ಪಿ ಪೊಲಿ ಪ್ರೊಪೆಲಿನ್‌ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ₨10ರಿಂದ ₨1ಕ್ಕೆ ಸೀಳಲು 16ನೇ ಡಿಸೆಂಬರ್‌ ನಿಗದಿತ ದಿನಾಂಕವಾ­ಗಿದೆ.
*ಮಾ ಜಗದಾಂಬ ಟ್ರೇಡ್‌ ಲಿಂಕ್‌್ಸ ಲಿ. (ಟಿ. ವಿಭಾಗದ ಕಂಪೆನಿ) ಷೇರಿನ ಮುಖಬೆಲೆಯನ್ನು ₨10ರಿಂದ ₨2ಕ್ಕೆ ಸೀಳಲು ನಿರ್ಧರಿಸಿದೆ.
*ಸ್ಯಾಮ್‌ ಲೀಸ್‌ ಕೊ ಲಿ. ಕಂಪೆನಿಯ ಷೇರಿನ ಮುಖಬೆಲೆ ಸೀಳಿಕೆ ವಿಚಾರ  ಡಿಸೆಂಬರ್‌ 3ರಂದು ಪರಿಶೀಲನೆಗೊಳಪಡಲಿದೆ.

ಫೈಜರ್‌ನಲ್ಲಿ ವೈಯತ್‌ ವಿಲೀನ
ಪ್ರತಿ 10 ವೈಯತ್‌ ಕಂಪೆನಿಯ ಷೇರಿಗೆ ಫೈಜರ್‌ ಲಿ.ನ ಏಳು ಷೇರುಗಳನ್ನು ನೀಡುವ ಯೋಜನೆ ಇದೆ. ಆ ಮೂಲಕ ಫೈಜರ್‌ನಲ್ಲಿ ಅಂತರರಾಷ್ಟ್ರೀಯ ಕಂಪೆನಿ ವೈಯತ್‌ ಲಿ. ವಿಲೀನಗೊಳಿಸಲು ಎರಡೂ ಕಂಪೆನಿಯ ಆಡಳಿತ ಮಂಡಳಿ ನಿರ್ಧರಿಸಿವೆ. ಈ ಯೋಜನೆಯನ್ನು ಈ ಎರಡೂ ಕಂಪೆನಿಗಳು ಪ್ರಕಟಿಸಿರುವ ಲಾಭಾಂಶಗಳ ವಿತರಣೆಯನ್ನಾಧರಿಸಿ ನಿರ್ಧರಿಸಲಾಗಿದೆ. ಈ ಎರಡೂ ಕಂಪೆನಿಗಳ ಷೇರುದಾರರು, ‘ಸೆಬಿ’, ವಿದೇಶಿ ಹೂಡಿಕೆ ಪ್ರವರ್ತಕ ಮಂಡಳಿ, ಮುಂಬೈ ಹೈಕೋರ್ಟ್‌ ಸಮ್ಮತಿ ನಂತರ ಈ ವಿಲೀನ ಪ್ರಕ್ರಿಯೆ ಕಾರ್ಯರೂಪಕ್ಕೆ ಬರಲಿದೆ.

ಷೇರು ಖರೀದಿ ಮುಕ್ತ ಆಹ್ವಾನ
ಮಾರಿಷಸ್‌ನ ಸಮರ ಕ್ಯಾಪಿಟಲ್‌ ಪಾರ್ಟ್‌ನರ್ಸ್‌ ಫಂಡ್‌ ಲಿ. ಸಂಸ್ಥೆಯು ಏಷ್ಯನ್‌ ಆಯಿಲ್ ಫೀಲ್‌್ಡ ಸರ್ವಿಸಸ್‌ ಲಿ.ನ ಶೇ 26ರಷ್ಟು ಭಾಗಿತ್ವದ ಷೇರುಗಳನ್ನು ಸಾರ್ವಜನಿಕರಿಂದ ಪ್ರತಿ ಷೇರಿಗೆ ₨21.50ರಂತೆ ಖರೀದಿಸಲು ಮುಕ್ತ ಆಹ್ವಾನ ನೀಡಿದೆ. ಈ ಆಹ್ವಾನವು ನವೆಂಬರ್‌ 29ರಿಂದ ಡಿಸೆಂಬರ್‌ 13 ರವರೆಗೂ ಮುಕ್ತವಾಗಿದೆ. ಡಿಸೆಂಬರ್‌ 30ರಂದು ಅಂತಿಮ ಚಿತ್ರಣ ಹೊರಬೀಳಲಿದೆ.

ಷೇರು ಹಿಂಕೊಳ್ಳುವ ವಿಚಾರ
ಕೈರ್ನ್ ಇಂಡಿಯಾ ಲಿ. ಕಂಪೆನಿಯ ಪ್ರವರ್ತ­ಕರು­(ಅದರ ಸಮೂಹ, ಅದರೊಂದಿಗೆ ಇರುವವ­ರನ್ನು ಹೊರತುಪಡಿಸಿ) ಸಾರ್ವಜನಿಕ ಷೇರುದಾರ­ರಿಂದ ₨5725 ಕೋಟಿಗೆ ಮೀರದಂತೆ, ಪ್ರತಿ ಷೇರಿಗೆ ಗರಿಷ್ಠ ಬೆಲೆ ₨335ರವರೆಗೂ ನೀಡಿ ಷೇರು ಹಿಂಕೊ­ಳ್ಳುವಿಕೆಗೆ ಆಸಕ್ತಿ ಹೊಂದಿರು­ವುದಾಗಿ ಪ್ರಕಟಣೆ ಹೊರಡಿಸಿದ್ದಾರೆ. ಆ ಮೂಲಕ 17,08,95,522 ಷೇರುಗಳನ್ನು, ಅಂದರೆ ಶೇ 8.9ರಷ್ಟು ಷೇರು ಬಂಡವಾಳವನ್ನು ಕಡಿಮೆ ಮಾಡಿಕೊಳ್ಳಲಿದ್ದಾರೆ. ಈ ಷೇರು ಹಿಂಕೊಳ್ಳುವ ಪ್ರಕ್ರಿಯೆಯು ಷೇರು ವಿನಿಮಯ ಕೇಂದ್ರಗಳ ಮೂಲಕ ನಡೆಯಲಿದೆ.

ಕಂಪೆನಿ ಹೆಸರು ಬದಲು
ಮಹೀಂದ್ರಾ ಫೋರ್ಜಿಂಗ್‌ ಲಿ. ಕಂಪೆನಿಯ ಹೆಸರನ್ನು ‘ಮಹೀಂದ್ರಾ ಸಿಐಇ ಆಟೋಮೇಷನ್‌ ಲಿ.’ ಎಂದು ಬದಲಿಸಲು ಷೇರುದಾರರು ಅಂಚೆ ಮತದಾನದ ಮೂಲಕ ವಿಶೇಷ ಗೊತ್ತುವಳಿ ಅಂಗೀಕರಿಸಿದ ಕಾರಣ, ನ. 27ರಿಂದಲೇ ಕಂಪೆನಿಯ ಹೆಸರನ್ನು ಬದಲಿಸಲಾಗಿದೆ.
ಪವರ್‌ಗ್ರಿಡ್‌ ಕಾರ್ಪೊರೇಷನ್‌ ಎಫ್‌ಪಿ–2 ಈ ಕಂಪೆನಿಯ ಎಫ್‌ ಪಿ 2 ಬೆಲೆಯನ್ನು ₨85.90 ಎಂದು ನಿಗದಿ ಪಡಿಸಲಾಗಿದೆ.

ವಾರದ ವಿಶೇಷ
ಪವರ್‌ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ವಿತರಿಸಲಿರುವ 78.70 ಕೋಟಿ ಷೇರುಗಳ ವಿತರಣೆ ಬೆಲೆಯನ್ನು ₨85 ರಿಂದ ₨90ರ  ಅಂತರದಲ್ಲಿ ನಿಗಧಿ ಪಡಿಸಿರುವುದು ನ್ಯಾಯಸಮ್ಮತವಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಈಗಾಗಲೇ ಷೇರುಪೇಟೆಗಳಿಂದ ದೂರಸರಿಯುತ್ತಿರುವ ಸಣ್ಣ ಹೂಡಿಕೆದಾರರ ನಿರ್ಗಮನಕ್ಕೆ ಹೆಚ್ಚು ಒತ್ತು ನೀಡಿದಂತಾಗಿದೆ. ಷೇರುಪೇಟೆಯಲ್ಲಿ ಸ್ಥಿರತೆ ಮೂಡಿಸುವುದು ಇಂತಹ ವಿತರಣೆಗಳಿಂದ ಸಾಧ್ಯವಿಲ್ಲ. ಪೇಟೆಯ ದರ ₨95ರ ಸಮೀಪವಿರುವಾಗ ₨85 ರಿಂದ 90ರ ದರ ನಿಗದಿ ಸಮಂಜಸವಲ್ಲ.

ಈ ಹಿಂದೆ ಹಿಂದೂಸ್ತಾನ್‌ ಕಾಪರ್‌ ಕಂಪೆನಿಯಲ್ಲಿ ಬಂಡವಾಳ ಹಿಂತೆಗೆತ ಕಾರ್ಯದಲ್ಲಿ ಪೇಟೆಯ ಬೆಲೆ ₨260ರ ಸಮೀಪವಿದ್ದಾಗ ₨155ರಂತೆ ಎಂ.ಎಂ.ಟಿ.ಸಿ ಷೇರಿನ ಬೆಲೆ ₨212ರ ಸಮೀಪವಿದ್ದಾಗ ₨60ರಂತೆ ಬೆಲೆ ನಿಗದಿ ಪಡಿಸಿ ‘ಆಫರ್‌ ಫಾರ್‌ ಸೇಲ್‌’(ಒಎಫ್‌ಎಸ್‌) ಮೂಲಕ ಮಾರಾಟ ಮಾಡಿದ ಈ ಕ್ರಮ ಹಾಗೂ ಈಗ ಎಫ್‌ಪಿ 2 ಬೆಲೆ ನಿಗದಿ ಮಾಡಿರುವ ಎರಡೂ ಕ್ರಮಗಳು ಸರಿಯಲ್ಲ.

2012ರಲ್ಲಿ ಹಿಂದೂಸ್ತಾನ್‌ ಕಾಪರ್‌ ಕಂಪೆನಿಯ ಷೇರನ್ನು ₨155ರಂತೆ ವಿತರಿಸಿದರೆ ಅದೇ ಕಂಪೆನಿಯ ಷೇರನ್ನು 2013ರಲ್ಲಿ ₨70ರಂತೆ ಮತ್ತೊಮ್ಮೆ ವಿತರಣೆ ಮಾಡಿದ್ದು ಕೇವಲ ಒಂದೇ ವರ್ಷದ ಅಂತರದಲ್ಲಿ ₨155ರ ದರದಿಂದ ₨70ಕ್ಕೆ ಮರು ವಿತರಣೆ ಮಾಡಿರುವುದು ಪೇಟೆಯಲ್ಲಿನ ನಿರುತ್ಸಾಹ ಹಾಗೂ ಅಸಹಜ ವಾತಾವರಣವೇ ಕಾರಣವಾಗಿದೆ.

ಎಂ.ಎಂ.ಟಿ.ಸಿ ವಿತರಣೆಯಲ್ಲಿ ₨212ರ ಸಮೀಪ ವಹಿವಾಟಾಗುತ್ತಿದ್ದ ಕ್ರಮವೂ ಸಹ ಪ್ರಶ್ನಾರ್ಹವಾಗಿದೆ. ಈ ಕ್ರಮದಿಂದ ಷೇರಿನ ಬೆಲೆಯು ₨37.15ರವರೆಗೂ ಆಳದ ಅರಿವಿಲ್ಲದೆ, ಷೇರು ಉಳ್ಳವರು ನಿರ್ಗಮಿಸಲು ಸಾಧ್ಯವಾಗದ ರೀತಿ ಕುಸಿಯುವಂತೆ ಮಾಡಲಾಗಿ ಈಗಲೂ ಷೇರಿನ ಬೆಲೆಯು ₨52ರ ಸಮೀಪವಿದ್ದು ವಿತರಣೆ ಬೆಲೆ ತಲುಪಿಲ್ಲ. ಆಫರ್‌ ಫಾರ್‌ ಸೇಲ್‌ನಲ್ಲಿ ಹೆಚ್ಚಿನ ರಿಯಾಯ್ತಿ ಬೆಲೆಯಲ್ಲಿ ಮಾರಾಟ, ‘ಫರ್ದರ್‌ ಪಬ್ಲಿಕ್‌ ಆಫರ್‌’(ಎಫ್‌ಪಿಒ)ನಲ್ಲಿ ಪೇಟೆಯ ಬೆಲೆಗೆ ಸಮೀಪದ ದರವನ್ನೇ ನಿಗದಿ ಮಾಡಿರುವುದು ಯಸಮ್ಮತವಲ್ಲ. ಸಾರ್ವಜನಿಕ ವಿತರಣೆಯಲ್ಲಿ ಷೇರುಗಳನ್ನು ಕಡಿಮೆ ಬೆಲೆಯಲ್ಲಿ ವಿತರಿಸಿ ಹೆಚ್ಚಿನ ಸಾರ್ವಜನಿಕರು ವಿತರಣೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದಲ್ಲಿ ಪೇಟೆಯ ಚಟುವಟಿಕೆಯು ಸ್ಥಿರತೆ ಕಾಣಲು ಸಹಕಾರಿಯಾಗುತ್ತಿತ್ತು.

2009ರಲ್ಲಿ ಎನ್‌.ಎಚ್‌.ಪಿ.ಸಿ ಕಂಪೆನಿಯಲ್ಲಿ ಬಂಡವಾಳ ಹಿಂತೆಗೆತದ ಕಾರಣ ಪ್ರತಿ ಷೇರಿಗೆ ₨36ರಂತೆ ಸಾರ್ವಜನಿಕ ವಿತರಣೆ ಮಾಡಲಾಯಿತು. ನಾಲ್ಕು ವರ್ಷಗಳ ನಂತರ ಅದೇ ಕಂಪೆನಿಯು ಪ್ರತಿ ಷೇರಿಗೆ ₨19.25ರಂತೆ ಹಿಂಕೊಳ್ಳುವ ಕರೆ ನೀಡಿದೆ. ನಾಲ್ಕು ವರ್ಷಗಳಲ್ಲಿ ₨36ಕ್ಕೆ ಮಾರಿ ₨19.25 ಖರೀದಿಸುವ ಈ ಕ್ರಮವು ಎಷ್ಟರ ಮಟ್ಟಿಗೆ ಸಮಂಜಸ?

ಈ ಹಿಂದೆ, ರಿಲಯನ್‌್ಸ ಪವರ್‌ ಹೆಚ್ಚಿನ ಬೆಲೆಯಲ್ಲಿ ವಿತರಣೆ ಮಾಡಿದ್ದಕ್ಕೆ ಪರಿಹಾರವಾಗಿ ಪ್ರವರ್ತ­ಕರನ್ನು ಹೊರತುಪಡಿಸಿ ಬೋನಸ್‌ ಷೇರು ನೀಡಿತು. ಅದೇ ರೀತಿ ಈ ಕಂಪೆನಿ (ಎಸ್‌.ಎಚ್‌.ಪಿ.ಸಿ) ಹೆಚ್ಚಿನ ಮೀಸಲು ನಿಧಿ ಹೊಂದಿರುವುದನ್ನು ಆಕರ್ಷಕ ಲಾಭಾಂಶ ಅಥವಾ ಬೋನಸ್‌ ಷೇರು ನೀಡಿ ಷೇರುದಾರ­ರನ್ನು ಉಲ್ಲಾಸಗೊ­ಳಿಸಬಹುದಿತ್ತು. ಖಾಸಗಿ ಕಂಪೆನಿಗಳೂ ನಡೆದರೆ ಸಣ್ಣ ಹೂಡಿಕೆದಾರರ ಹಿತ ಕಾಪಾಡುವವ­ರಾರು? ಒಟ್ಟಿನಲ್ಲಿ ಪವರ್‌ಗ್ರಿಡ್‌ ಕಾರ್ಪೊರೇಷನ್‌ನ ವಿತರಣೆ ಬೆಲೆಯನ್ನು ₨85ರಿಂದ 90ರಂತೆ ನಿಗದಿ ಮಾಡಿರುವುದು ಸರಿಯಲ್ಲ. ಸಾಮಾನ್ಯವಾಗಿ ವಹಿವಾಟಾಗುತ್ತಿದ್ದ ಷೇರಿನ ಗಾತ್ರದಲ್ಲಿ ಕೆಲವು ದಿನಗಳಿಂದ ಎರಡು ಪಟ್ಟು ಹೆಚ್ಚು ವಹಿವಾಟಾಗುತ್ತಿರುವುದು ಗಮನಾರ್ಹವಾಗಿದೆ.

ADVERTISEMENT

m 98863&13380
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.