ADVERTISEMENT

ಮಾರಾಟ ಒತ್ತಡಕ್ಕೆ ಕುಸಿದ ಷೇರುಪೇಟೆ

ಕೆ.ಜಿ ಕೃಪಾಲ್
Published 13 ಆಗಸ್ಟ್ 2017, 19:44 IST
Last Updated 13 ಆಗಸ್ಟ್ 2017, 19:44 IST

ಸಣ್ಣ ಪುಟ್ಟ ಕಾರಣಗಳಿಂದ ರಭಸದ ಏರಿಕೆ ಕಂಡಿದ್ದ ಎಲ್ಲಾ ಕಂಪೆನಿಗಳ ಷೇರುಗಳು ಮಾರಾಟ ಒತ್ತಡ ಎದುರಿಸಬೇಕಾದ ಪರಿಸ್ಥಿತಿಯು ಈ ವಾರ ನಿರ್ಮಾಣವಾಗಿದೆ.
ಈ ಕುಸಿತವು ಎಷ್ಟು ಹರಿತವಾಗಿತ್ತೆಂದರೆ, ಕೆಲವು ಷೇರುಗಳ ವಾರದ ಆರಂಭಿಕ ಬೆಲೆಗೂ ಮತ್ತು ವಾರಾಂತ್ಯದ ಬೆಲೆಗೂ ಕಂಡುಬರುವ ವ್ಯತ್ಯಾಸ ಗಮನಾರ್ಹವಾಗಿತ್ತು. ಉದಾಹರಣೆಗೆ ಒಂದು ತಿಂಗಳ ಹಿಂದಷ್ಟೇ ₹424 ರವರೆಗೂ ಏರಿಕೆ ಕಂಡಿದ್ದ ಬಯೋಕಾನ್ ಷೇರಿನ ಬೆಲೆಯು ಈ ವಾರ ₹322 ರ ವರೆಗೂ ಕುಸಿದು ₹340 ರವರೆಗೂ ಚೇತರಿಕೆ ಕಂಡಿತು.

ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ, ಷೇರಿನ ಬೆಲೆಯು ₹424 ಕ್ಕೆ ತಲುಪುವ ಮುನ್ನ ಅಂದರೆ ಜುಲೈ 10 ರಂದು ₹305 ರ ಕನಿಷ್ಠ ಮಟ್ಟ ತಲುಪಿ ಕೇವಲ ಎರಡು ಮೂರು ದಿನಗಳಲ್ಲಿ ₹424ಕ್ಕೆ ಏರಿ ಭಾರಿ ಕುಸಿತದೊಂದಿಗೆ ₹322 ರ ಸಮೀಪಕ್ಕೆ ಬಂದಿರುವ ವೇಗವು ಪೇಟೆ ಒದಗಿಸಬಹುದಾದ ಅವಕಾಶಗಳಿಗೆ ಹಿಡಿದ ಕನ್ನಡಿಯಾಗಿದೆ. ₹424 ರ ಸಮೀಪಕ್ಕೆ ತಲುಪಿದಾಗ ಕೊಳ್ಳುವ ಮುಂಚೆ ಅದರ ಹಿಂದೆ ಕಂಡಿರುವ ಏರಿಳಿತಗಳ ಬಗ್ಗೆ ಅರಿಯಬೇಕಾದುದು ಅನಿವಾರ್ಯ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸುಮಾರು ₹60 ಕ್ಕೂ ಹೆಚ್ಚಿನ ಏರಿಳಿತ ಪ್ರದರ್ಶಿಸಿದರೆ, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ₹65 ರಷ್ಟು ಏರಿಳಿತ ಪ್ರದರ್ಶಿಸಿದೆ. ಫಾರ್ಮಾ ಕಂಪೆನಿಗಳಲ್ಲಿ ಈ ವಾರ ಹೆಚ್ಚು ಶಿಕ್ಷೆ ಪಡೆದ ಕಂಪೆನಿ ಎಂದರೆ ನ್ಯಾಟ್ಕೋ ಫಾರ್ಮಾ. ಈ ಕಂಪೆನಿಯ ಷೇರಿನ ಬೆಲೆಯು  ಒಂದು ತಿಂಗಳಲ್ಲಿ ₹1027 ರಿಂದ ₹671 ರವರೆಗೂ ಕುಸಿದಿದೆ ಎಂದರೆ ಕುಸಿತದ ಪ್ರಮಾಣ ಅರಿವಾಗುವುದು.

ಇನ್ನು ಸ್ಟ್ರೈಡ್ಸ್ ಶಾಸೂನ್ ಕಂಪೆನಿಯ ಷೇರಿನ ಬೆಲೆಯು ಶುಕ್ರವಾರ ₹954 ರಿಂದ ₹865 ರವರೆಗೂ ಕುಸಿದು ₹875ರ ಸಮೀಪ ಕೊನೆಗೊಂಡಿದೆ.
ಒಂದೇ ದಿನ ₹80 ಕ್ಕೂ ಹೆಚ್ಚಿನ ದರ ಬದಲಾವಣೆ ಪ್ರದರ್ಶಿಸಿದೆ. ಇನ್ನು ವಿಡಿಯೊಕಾನ್ ಇಂಡಸ್ಟ್ರೀಸ್, ಎಚ್ ಡಿ ಐ ಎಲ್ ಕಂಪೆನಿಗಳು ತಮ್ಮ ಆಂತರಿಕ ತೊಂದರೆಗಳ ಕಾರಣ ಕುಸಿತ ಕಂಡರೆ ಪ್ರಮುಖ ಬ್ಯಾಂಕಿಂಗ್‌ಗಳಾದ ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಬರೋಡಾಗಳ ಕಳೆದ ತ್ರೈಮಾಸಿಕ ಸಾಧನೆಯು ತೀರಾ ಕಳಪೆಯಾಗಿದೆ ಎಂಬ ಕಾರಣಕ್ಕೆ ಮಾರಾಟದ ಒತ್ತಡಕ್ಕೊಳಗಾದವು.

2016 ರ ಮೇ ತಿಂಗಳಲ್ಲಿ ಬ್ಯಾಂಕ್ ವಲಯದ ಎನ್‌ಪಿಎ ಅಧಿಕವಾಗಿದೆ ಎಂಬ ಕಾರಣಕ್ಕಾಗಿ ಬ್ಯಾಂಕಿಂಗ್ ಷೇರುಗಳು ಹೆಚ್ಚಿನ ಕುಸಿತ ಕಂಡಿದ್ದವು. ಆದರೆ ಒಂದೇ ವರ್ಷದಲ್ಲಿ ಅಂದರೆ 2017 ರ ಮೇ ತಿಂಗಳ ಸಮಯದಲ್ಲಿ ಹೆಚ್ಚಿನ ಬ್ಯಾಂಕಿಂಗ್ ಕಂಪೆನಿಗಳು  ಎರಡು ಪಟ್ಟಿಗೂ ಹೆಚ್ಚಿನ ಏರಿಕೆ ಕಂಡು ಉತ್ತುಂಗದಲ್ಲಿದ್ದವು.

ಅಂದರೆ, 2016ರ ಕನಿಷ್ಠ ಬೆಲೆಯು ವ್ಯಾಲ್ಯೂ ಪಿಕ್‌ಗೆ ಅವಕಾಶ ನೀಡಿದರೆ 2017 ರ ಬೆಲೆಯು ಪ್ರಾಫಿಟ್ ಬುಕ್‌ಗೆ ಸುವರ್ಣಾವಕಾಶ ಒದಗಿಸಿದೆ. ಅಲ್ಪ ಬಡ್ಡಿದರದ ಯುಗದಲ್ಲಿ ಹೆಚ್ಚಿನ ಆದಾಯ, ಲಾಭ ಗಳಿಕೆಗೆ ಈಗಿನ ಪೇಟೆಗಳು ಬೆಂಬಲಿಸುತ್ತಿರುವ ಕಾರಣ  ತೀವ್ರ ಏರಿಕೆ ಇಳಿಕೆಗಳು ಉಂಟಾಗಿ ಉತ್ತಮ ಕಂಪೆನಿಗಳ ಷೇರಿನ ಬೆಲೆಗಳು ಕುಸಿತ ಕಂಡಾಗ ವ್ಯಾಲ್ಯೂ ಪಿಕ್, ಅನಿರೀಕ್ಷಿತ ಏರಿಕೆ ಕಂಡಾಗ ಪ್ರಾಫಿಟ್ ಬುಕ್‌ಗೆ ಆಧ್ಯತೆ ನೀಡಿದಲ್ಲಿ ಮಾತ್ರ ಹೂಡಿದ ಬಂಡವಾಳ ಅಲ್ಪಮಟ್ಟಿನ ಸುರಕ್ಷಿತ ಬೆಳವಣಿಗೆ ಕಾಣಬಹುದಾಗಿದೆ.

ಸಕ್ಕರೆ ವಲಯದ ಕಂಪೆನಿಗಳು ಪ್ರದರ್ಶಿಸಿದ ಏರಿಳಿತಗಳು ಮತ್ತಷ್ಟು ಆಸಕ್ತಿದಾಯಕವಾಗಿವೆ. ದ್ವಾರಿಕೇಶ್ ಷುಗರ್ ಇಂಡಸ್ಟ್ರೀಸ್ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲಿರುವ ಕಾರಣ ಹೆಚ್ಚಿನ ಏರಿಕೆ ಪ್ರದರ್ಶಿಸಿತು.

ಒಂದೇ ತಿಂಗಳಲ್ಲಿ ₹425 ರ ಸಮೀಪದಿಂದ ₹759 ರವರೆಗೂ ಏಕ ಮುಖವಾಗಿ ಏರಿಕೆ ಕಂಡಿದೆ. ಇದು ಸೋಮವಾರ ಸಕ್ಕರೆ ವಲಯದ ಷೇರುಗಳಾದ ಬಲರಾಂಪುರ್ ಚಿನ್ನಿ ದರವನ್ನು ₹180 ನ್ನು ತಲುಪಿಸಿತು. ಶುಕ್ರವಾರ ಇದೆ ಷೇರು ₹155 ಕ್ಕೆ ಕುಸಿಯಿತು. ಹಾಗೆಯೇ ದಾಲ್ಮಿಯಾ ಭಾರತ್ ಷುಗರ್ ₹189 ನ್ನು ತಲುಪಿ ಶುಕ್ರವಾರ ₹130 ಕ್ಕೆ ಕುಸಿಯಿತು. ಇದು ಪೇಟೆಯ ಚಲನೆಯ ವೇಗ ತೋರಿಸುತ್ತದೆ.

ಒಟ್ಟಾರೆ ಈ ವಾರ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹4,498 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರೂ ಸಹ ಸಂವೇದಿ ಸೂಚ್ಯಂಕ 1,111 ಅಂಶಗಳ ಭಾರಿ ಇಳಿಕೆ ಕಂಡಿದೆ. ಅಂದರೆ ಈ ಸಂಸ್ಥೆಗಳು ಸೂಚ್ಯಂಕೇತರ ಷೇರುಗಳ ಖರೀದಿಯಲ್ಲಿ ತೊಡಗಿಸಿಕೊಂಡಿರಬಹುದು. ವಿದೇಶಿ ವಿತ್ತೀಯ ಸಂಸ್ಥೆಗಳು ₹2,615 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದ ₹132.59 ಲಕ್ಷ ಕೋಟಿಯಿಂದ ₹127.03 ಲಕ್ಷ ಕೋಟಿಗೆ ಕುಸಿದಿದೆ.
ಬೋನಸ್ ಷೇರು: ಸರ್ಕಾರಿ ವಲಯದ ಮೊಯಿಲ್ ಲಿಮಿಟೆಡ್, ಖಾಸಗಿ ವಲಯದ ಭಾರತ್ ಫೋರ್ಜ್, ಮನ್ ಪಸಂದ್ ಬಿವರೇಜಸ್ ಕಂಪೆನಿಗಳು 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿವೆ.

ಬಿಎಚ್‌ಇಎಲ್‌ 1:2 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಕಲ್ಲಮ್ ಸ್ಪಿನ್ನಿಂಗ್ ಮಿಲ್ಸ್ 26ರಂದು ಬೋನಸ್ ಷೇರು ಪ್ರಕಟಿಸಲಿದೆ.

ಲಾಭಾಂಶ: ಎಸ್ ಆರ್ ಎಫ್ : ಪ್ರತಿ ಷೇರಿಗೆ ₹ 6, ಮ್ಯಾಕ್ ಚಾರ್ಲ್ಸ್ (ಇಂಡಿಯಾ)   ₹10, ಸ್ಯಾಮ್ ಕ್ರಿಗ್ ಪಿಸ್ಟನ್   ₹4.50, ಅಕ್ಸಲ್ಯಾ ಕಾಳೆ ಕಾನ್ಸಲ್ ಟಂಟ್ಸ್   ₹೪೦, ನ್ಯಾಟ್ಕೋ ಫಾರ್ಮಾ   ₹1.25 (ಮು ಬೆಲೆ ₹2), ಸನ್ ಟಿ ವಿ   ₹2.50 (ಮು ಬೆಲೆ ₹5), ಕಾವೇರಿ ಸೀಡ್ಸ್ ₹3.

ಮುಖಬೆಲೆ ಸೀಳಿಕೆ: ಇಂದ್ರಪ್ರಸ್ಥ ಗ್ಯಾಸ್ ಕಂಪೆನಿ ಷೇರಿನ ಬೆಲೆಯು ₹10 ರಿಂದ ₹2 ಕ್ಕೆ ಸೀಳಲಿದೆ.
*
ವಾರದ ವಿಶೇಷ
ಷೇರುಪೇಟೆಯಲ್ಲಿ ಇತ್ತೀಚಿಗೆ ಕಂಡಿದ್ದ ದಾಖಲೆಯ ಏರಿಕೆಗೆ ಈ ವಾರ ತೆರೆ ಎಳೆದಿದೆ. ಪ್ರಮುಖವಾದ ಬೆಳವಣಿಗೆಯೊಂದರಲ್ಲಿ ಪೇಟೆಯ ನಿಯಂತ್ರಕ ‘ಸೆಬಿ’, 331 ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಿ, ಈ ಕಂಪೆನಿಗಳ ಷೇರುಗಳಲ್ಲಿ ವಹಿವಾಟು ನಡೆಸಲು ಹತ್ತಾರು ಬಿಗಿಯಾದ ಕ್ರಮಗಳನ್ನು ವಿಧಿಸಿದೆ.

ಕಪ್ಪು ಹಣದ ಪ್ರಭಾವವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಸುಮಾರು 36 ಲಕ್ಷಕ್ಕೂ ಹೆಚ್ಚಿನ ಹೂಡಿಕೆದಾರರು ತೊಂದರೆಗೆ ಒಳಗಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಎಲ್ಲಾ ಕಂಪೆನಿಗಳನ್ನು ಗ್ರೇಡೆಡ್ ಸರ್ವೇಲನ್ಸ್ ಮೇಷುರ್ - 4ನೇ ಹಂತದ ಅಡಿಯಲ್ಲಿ ಸೇರಿಸಲಾಗಿದೆ.

ಈ ಗ್ರೇಡೆಡ್ ಸರ್ವೇಲನ್ಸ್ ಮೇಷುರ್ - 4ನೇ ಹಂತದ ಕಂಪೆನಿಗಳಲ್ಲಿ ವಹಿವಾಟು ನಡೆಸಬೇಕಾದರೆ ಹೆಚ್ಚಿನ ಕಾಳಜಿ ಅಗತ್ಯ. ಕಾರಣ ಈ ಸಮೂಹದ ಕಂಪೆನಿ ಷೇರುಗಳನ್ನು ಖರೀದಿಸಿದಲ್ಲಿ ಶೇ 200ರಷ್ಟು ಹಣ ಠೇವಣಿ ಇಡಬೇಕಾಗುತ್ತದೆ.

ADVERTISEMENT

ಈ ಹಣವನ್ನು ಷೇರು ವಿನಿಮಯ ಕೇಂದ್ರಗಳು ಐದು ತಿಂಗಳ ನಂತರ ಹಿಂದಿರುಗಿಸುತ್ತವೆ. ಈ ಷೇರುಗಳು ದಿನವೂ ಚಟುವಟಿಕೆಯಲ್ಲಿರುವುದಿಲ್ಲ. ತಿಂಗಳಿಗೆ ಒಂದು ಬಾರಿ ಅಂದರೆ ತಿಂಗಳ ಮೊದಲ ಸೋಮವಾರ ಮಾತ್ರ ಈ ಷೇರುಗಳಲ್ಲಿ ಚಟುವಟಿಕೆ ನಡೆಸಬಹುದಾಗಿದೆ. ಷೇರು ವಿನಿಮಯ ಕೇಂದ್ರಗಳು ಸ್ವತಂತ್ರವಾದ ಲೆಕ್ಕ ಪರಿಶೋಧಕರನ್ನು ನೇಮಿಸಿ ತನಿಖೆ ನಡೆಸಿ, ಕಂಪೆನಿಗಳ ಅಸ್ತಿತ್ವದ ಬಗ್ಗೆ ಸಂದೇಹವಿದ್ದು ಸೂಕ್ತ ದಾಖಲೆಗಳು ಇರದಿದ್ದಲ್ಲಿ ಅವುಗಳನ್ನು ಕಡ್ಡಾಯವಾಗಿ ಡಿಲೀಸ್ಟ್ ಮಾಡಲಾಗುವುದು.

ಇಂತಹ ಕಂಪೆನಿಗಳಿಗೆ ಸಹಾಯ ಮಾಡಿದ ಸುಮಾರು 26 ಚಾರ್ಟರ್ಡ್ ಅಕೌಂಟಂಟ್‌ಗಳನ್ನು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ ಗುರುತಿಸಿದೆ. ಕಾರ್ಪೊರೇಟ್ ವ್ಯವಹಾರಗಳ ಮಂತ್ರಾಲಯವು ನಿಷ್ಕ್ರಿಯಾವಸ್ಥೆಯಲ್ಲಿರುವ ಸುಮಾರು 1.62 ಲಕ್ಷ ಕಂಪೆನಿಗಳ ರಿಜಿಸ್ಟ್ರೇಷನ್ ರದ್ದು ಪಡಿಸಿದೆ.

ಈ ಗ್ರೇಡೆಡ್ ಸರ್ವೇಲನ್ಸ್ ಮೇಷುರ್ - 4 ನೇ ಹಂತದ ಷೇರುಗಳಲ್ಲಿ ಹೂಡಿಕೆ ಮಾಡಿದವರು ಪೇಟೆಯ ಮಹತ್ತರವಾದ ಸಕಾರಾತ್ಮಕ ಅಂಶವಾದ 'ರೆಡಿ ಲಿಕ್ವಿಡಿಟಿ' ಸವಲತ್ತಿನಿಂದ ವಂಚಿತರಾದಂತಾಗಿದೆ. ಇದರಿಂದ ಈ ಷೇರುಗಳನ್ನು ಮಾರಾಟ ಮಾಡಲು ಕೊಳ್ಳುವವರ ಕೊರತೆಯುಂಟಾಗುವ ಕಾರಣ, ಹರಸಾಹಸ ಮಾಡಬೇಕಾಗುವುದು. ಇನ್ನು ಮಾರ್ಜಿನ್ ಟ್ರೇಡಿಂಗ್ ನಂತಹ ಸೌಲಭ್ಯಗಳೊಂದಿಗೆ ವಹಿವಾಟು ನಡೆಸುವವರ ಬವಣೆಯಂತೂ ಹೇಳತೀರದು.

(ಮೊ: 9886313380 ಸಂಜೆ 4.30 ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.