ADVERTISEMENT

ವಹಿವಾಟು ನಿರ್ಧರಿಸಲಿರುವ ಆರ್‌ಬಿಐ

ಕೆ.ಜಿ ಕೃಪಾಲ್
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಷೇರು ಪೇಟೆಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ದಿಶೆ ಬದಲಾಯಿಸುತ್ತಿರುತ್ತವೆ. ಈ ಕಾರಣ ಪೇಟೆಯ ದರಗಳು, ಚಿಂತನೆಗಳು, ವಿಶ್ಲೇಷಣೆಗಳ  ದಿಕ್ಕು  ಸಹ ಬದಲಾಗುತ್ತವೆ. ಹೆಚ್ಚಿನ ಬದಲಾವಣೆಗಳು ಅನಿರೀಕ್ಷಿತವೂ ಆಗಿರುತ್ತದೆ. ಇದು ಸಕಾರಾತ್ಮಕವಾಗಿಯೂ ಪರಿಣಾಮ ಬೀರಬಹುದು.

ಉದಾಹರಣೆಗೆ ಭಾರತೀಯ ರಿಸ   ರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ಶುಕ್ರವಾರ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) 75 ಮೂಲಾಂಶಗಳಷ್ಟೂ ಕಡಿತಗೊಳಿಸಿ ಅರ್ಥವಲಯದಲ್ಲಿ ಎಲ್ಲರನ್ನು ಚಕಿತಗೊಳಿಸಿದೆ.

ಈ ಕ್ರಮದಿಂದ ಸುಮಾರು ರೂ48 ಸಾವಿರ ಕೋಟಿಗಳಷ್ಟು  ಹಣವೂ ಮಾರುಕಟ್ಟಗೆ ಚಲಾವಣೆಗೆ ಬರಲಿದೆ. ಹಣದ ಬಿಗಿತದ ಹಿಡಿತವು ಸಡಿಲವಾಗಿ ಪೇಟೆಗಳು ಸಕಾರಾತ್ಮಕವಾಗಿ ಸ್ಪಂದಿಸುವ ಸಾಧ್ಯತೆ ಇದೆ. ಕಳೆದ ಜನವರಿಯಲ್ಲಿ `ಆರ್‌ಬಿಐ~ ನಗದು ಮೀಸಲು ಅನುಪಾತವನ್ನು 50 ಮೂಲಾಂಶದಷ್ಟೂ ಕಡಿತಗೊಳಿಸಿದ್ದನ್ನು  ಇಲ್ಲಿ ಸ್ಮರಿಸಬಹುದು.

ಉತ್ತರ ಪ್ರದೇಶದ ಫಲಿತಾಂಶ ಮತ್ತು ತದನಂತರದ ಹೇಳಿಕೆಗಳು ಪೇಟೆಯಲ್ಲಿ ನಿರುತ್ಸಾಹ ಮೂಡಿಸಿದವು.  ರಭಸದ ಏರಿಳಿತಗಳು ಒಂದೇ ದಿನ ದಾಖಲಾದವು.
ಕಳೆದ ವಾರದ, ಕೇವಲ ನಾಲ್ಕು ದಿನಗಳ ವಹಿವಾಟಿನ ಅವಧಿಯಲ್ಲಿ ಸಂವೇದಿ ಸೂಚ್ಯಂಕ ಒಟ್ಟು 133 ಅಂಶಗಳಷ್ಟು ಇಳಿಕೆ ಕಂಡಿತು.

ಇದರೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕ 15 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 78 ಅಂಶಗಳಷ್ಟು ಇಳಿಕೆ ದಾಖಲಿಸಿತು. ಇಂತಹ ವಾತಾವರಣದಲ್ಲಿ ಆಟೊವಲಯದ ಸೂಚ್ಯಂಕ 143 ಅಂಶಗಳಷ್ಟು ಏರಿಕೆಯಿಂದ ವಿಜೃಂಭಿಸಿತು.

ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆ ಸಹ ಅಸಹಜವಾಗಿತ್ತು. ಕಳೆದ ಮಂಗಳವಾರ ಮತ್ತು ಬುಧವಾರ ವಿತ್ತೀಯ ಸಂಸ್ಥೆಗಳು ಮಾರಾಟದ ಹಾದಿಯಲ್ಲಿದ್ದರೆ ಶುಕ್ರವಾರ ಬೃಹತ್ ಖರೀದಿಗೆ ಮುಂದಾಗಿದ್ದವು. ಸ್ವದೇಶೀ ವಿತ್ತೀಯ ಸಂಸ್ಥೆಗಳ ಒಟ್ಟು ರೂ221 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದವು.

ಪೇಟೆಯ ಬಂಡವಾಳ ಮೌಲ್ಯವು 63.15 ಲಕ್ಷ ಕೋಟಿಯಿಂದ ರೂ 62.78 ಲಕ್ಷ ಕೋಟಿಗೆ ಕುಸಿದಿದೆ. ಲೋಹ ವಲಯದ ಸೂಚ್ಯಂಕ 469 ಅಂಶಗಳಷ್ಟು ರಿಯಾಲ್ಟಿ ಸೂಚ್ಯಂಕ 19 ಅಂಶಗಳಷ್ಟು ಇಳಿಕೆ ದಾಖಲಿಸಿದವು.

ಬೋನಸ್ ಷೇರಿನ ವಿಚಾರ
ಪಿ.ಎಂ. ಸ್ಟ್ರಿಪ್ಸ್ ಲಿ. ಎಂಬ ಹೆಸರಿನಿಂದ ಕಳೆದ ವರ್ಷ ಕೆ ಮೈಲ್ಸ್ ಸಾಪ್ಟ್‌ವೇರ್ ಸರ್ವಿಸಸ್ ಲಿ ಎಂದು ಹೆಸರು ಬದಲಿಸಿಕೊಂಡಿರುವ ಈ ಕಂಪೆನಿಯು `ಟಿ~ ಗುಂಪಿನಲ್ಲಿ ವಹಿವಾಟಾಗುತ್ತಿದ್ದು ಮಾರ್ಚ್ 14 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಹಕ್ಕಿನ ಷೇರಿನ ವಿಚಾರ
ಎಲ್.ಜಿ.ಬಿ ಫೋರ್ಜ್ ಲಿ. ಕಂಪೆನಿಯು 1:2ರ ಅನುಪಾತದಲ್ಲಿ ರೂ1ರ ಮುಖಬೆಲೆಯ ಷೇರನ್ನು ರೂ2.75 ರಂತೆ ಹಕ್ಕಿನ ರೂಪದಲ್ಲಿ ವಿತರಿಸಲಿದ್ದು ಮಾ ರ್ಚ್ 21ನ್ನು ನಿಗದಿತ ದಿನವನ್ನಾಗಿಸಿದೆ.

ಅಮಾನತು ತೆರವು
ಫೆಬ್ರುವರಿ 2001 ರಿಂದ ಅಮಾನತಿನಲ್ಲಿದ್ದ ಝೆನಿತ್ ಕ್ಯಾಪಿಟಲ್ ಕಂಪೆನಿಯು, ಅಮಾನತು ತೆರವುಗೊಳಿಸಿಕೊಂಡು 14 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.

ಹೊಸ ಷೇರಿನ ವಿಚಾರ
*ಇತ್ತೀಚೆಗೆ ಪ್ರತಿ ಷೇರಿಗೆ ರೂ1032 ರಂತೆ ಸಾರ್ವಜನಿಕ ವಿತರಣೆ ಮಾಡಿದ ಮಲ್ಟಿ ಕಮಾಡಿಟೀಸ್ ಎಕ್ಸ್‌ಚೆಂಜ್ ಆಫ್ ಇಂಡಿಯಾ ಕಂಪೆನಿಯು 9 ರಿಂದ `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದಲ್ಲಿ ಬಿರುಸಿನ ಏರಿಕೆ ಕಂಡು ಗರಿಷ್ಠ ರೂ1426 ರ ವರೆಗೂ ಏರಿಕೆ ಕಂಡಿತು.
 
ನಂತರ ಲಾಭದ ನಗದೀಕರಣದ ಕಾರಣ ಮಾರಾಟದ ಒತ್ತಡ ನಿರ್ಮಾಣವಾಗಿ ರೂ1282ರ ವರೆಗೂ ಕುಸಿದು ರೂ1297ರಲ್ಲಿ ವಾರಂತ್ಯ ಕಂಡಿತು. ವಿತರಣೆ ಬೆಲೆಗಿಂತ ಹೆಚ್ಚಿನ ದರದಲ್ಲಿ ವಹಿವಾಟಾಗಿ 2012ರ ಸಾರ್ವಜನಿಕ ವಿತರಣೆ ಆರಂಭ ಲಾಭದಾಯಕಗೊಳಿಸಿತು.

*ಓರಿಯಂಟ್ ರಿಫ್ರಾಕ್ಟರೀಸ್ ಲಿ. ಕಂಪೆನಿಯು ಓರಿಯಂಟ್ ಅಬ್ರೆಸಿವ್ಸ್‌ನಿಂದ ಬೇರ್ಪಡಿಸಿದ ರಿಫ್ರಾಕ್ಟರೀಸ್ ಚಟುವಟಿಕೆಯುಳ್ಳ ಕಂಪೆನಿಯಾಗಿದ್ದು, 1:1 ರಂತೆ ಪ್ರತಿ ಓರಿಯಂಟ್ ಅಬ್ರೆಸಿವ್ಸ್ ಷೇರಿಗೆ ನೀಡಿದ್ದು 9 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ರೂ30.90 ತಲುಪಿ ರೂ 28.55 ರಲ್ಲಿ ವಾರಾಂತ್ಯ ಕಂಡಿತು.

`ಎಫ್‌ಸಿಸಿಬಿ~
ಈ ಹಿಂದೆ ಇನ್ನಾರೆಡ್ಡಿ ಕಂಪ್ಯೂಟರ್ ಸಾಫ್ಟ್‌ವೇರ್ ಅಸೋಸಿಯೇಟ್ಸ್ (ಇಂಡಿಯಾ) ಲಿ. ಎಂದಿದ್ದು ಈಗ ಐಸಿಎಸ್‌ಎ (ಇಂಡಿಯಾ) ಲಿ. ಎಂದಾಗಿರುವ ಈ ಕಂಪೆನಿಯು 21 ದಶಲಕ್ಷ ಡಾಲರ್‌ಗಳ ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ಸ್‌ಗಳು ಪಕ್ವವಾಗಿದ್ದು, ಈ ಹಣವನ್ನು ಪಾವತಿಸಲು ಪರ್ಯಾಯ ವ್ಯವಸ್ಥೆ ರೂಪಿಸುತ್ತಿದೆ.

ಇದನ್ನು ಎಫ್‌ಸಿಸಿಬಿ ಬಾಂಡ್‌ದಾರರ ಅನುಮತಿ ಮೇರೆಗೆ ಮಾಡಬೇಕಾಗಿರುವುದರಿಂದ ವ್ಯವಸ್ಥೆ ಪೂರ್ಣಗೊಳಿಸಿದ ನಂತರ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ತಿಳಿಸುವುದಾಗಿ ಕಂಪೆನಿ ತಿಳಿಸಿದೆ.

ಆರ್ಬಿಟ್ರೇಷನ್ ತೀರ್ಪು
ಅಮೆರಿಕದ ಗ್ಲೋಬಲ್ ವೆಹಿಕಲ್ಸ್ ಇಂಕ್‌ನ `ಕ್ಲಾಸ್ ಆಕ್ಷನ್ ಸೂಟ್~ ಭಾರತದ ಮಹೀಂದ್ರ ಅಂಡ್ ಮಹೀಂದ್ರ ಲಿ. ಮೇಲೆ ದಾಖಲಾಗಿದ್ದು, ಗ್ಲೋಬಲ್ ವೆಹಿಕಲ್ಸ್ ಆರೋಪವೆಂದರೆ ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿಯು ವಿತರಣಾ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂಬುದಾಗಿತ್ತು. ಇಂಟರ್ ನ್ಯಾಶನಲ್ ಆರ್ಬಿಟ್ರೇಷನ್ ಪೇನಾಲ್ ಈ ವಾದವನ್ನು ತಳ್ಳಿ ಹಾಕಿ ಮಹೀಂದ್ರ ಅಂಡ್ ಮಹೀಂದ್ರ ವಾದ ಎತ್ತಿಹಿಡಿದಿದೆ.

ಮುಖಬೆಲೆ ಸೀಳಿಕೆ ವಿಚಾರ
*ಜೆಆರ್‌ಐ ಇಂಡಸ್ಟ್ರೀಸ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಯ ಷೇರಿನ ಮುಖ ಬೆಲೆ ಸದ್ಯದ ರೂ10 ರಿಂದ ರೂ2ಕ್ಕೆ ಸೀಳಲಿದ್ದು, ಮಾರ್ಚ್ 23 ನಿಗದಿತ ದಿನವಾಗಿದೆ.ಗ್ರಾವಿಟಾ ಇಂಡಿಯಾ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ 2ಕ್ಕೆ ಸೀಳಲಿದೆ.

ವ್ಯವಸ್ಥಿತ ವಿಲೀನ ಯೋಜನೆ
*ಗ್ರಾಬಲ್ ಅಲೋಕ್ ಇಂಪೆಕ್ಸ್ ಲಿ. ಕಂಪೆನಿಯು ಅಲೋಕ ಇಂಡಸ್ಟ್ರೀಸ್ ಕಂಪೆನಿಯಲ್ಲಿ ವಿಲೀನಗೊಳ್ಳಲಿದ್ದು ಪ್ರತಿ ಒಂದು ಗ್ರಾಬಲ್ ಅಲೋಕ ಇಂಪೆಕ್ಸ್ ಷೇರಿಗೆ ಒಂದು ಅಲೋಕ ಇಂಡಸ್ಟ್ರೀಸ್ ಷೇರು ವಿತರಿಸಲಾಗುವುದು ಇದಕ್ಕಾಗಿ ಮಾರ್ಚ್ 14ನ್ನು ನಿಗದಿತ ದಿನವನ್ನಾಗಿಸಿದೆ.

*ಅರವಿಂದ ಪ್ರಾಡಕ್ಟ್ಸ್ ಕಂಪೆನಿಯು ಅರವಿಂದ್ ಲಿಮಿಟೆಡ್‌ನಲ್ಲಿ ವಿಲೀನಗೊಳ್ಳಲಿದ್ದು ಪ್ರತಿ 21 ಅರವಿಂದ್ ಪ್ರಾಡಕ್ಟ್ಸ್ ಷೇರಿಗೆ ಒಂದು ಅರವಿಂದ ಲಿಮಿಟೆಡ್ ಷೇರನ್ನು ನೀಡಲಾಗುವುದು.  ಮಾರ್ಚ್ 20 ನಿಗದಿತ ದಿನ.

ನನ್ನ ಬಳಿ ಟಿಟಾಗರ್ ಪೇಪರ್ ಮಿಲ್ಸ್ ಷೇರುಗಳಿವೆ. ಈಗ ಈ ಷೇರು `ಕೋಟ್~ ಆಗುತ್ತಿಲ್ಲ. ಕಂಪೆನಿಯ ಬಗ್ಗೆ ತಿಳಿಸಿ.
ಉತ್ತರ: ಟಿಟಾಗರ್ ಪೇಪರ್ ಮಿ ಲ್ಸ್ ಕಂಪೆನಿಯು ಕೊಲ್ಕತ್ತಾ ಸಮೀಪದಲ್ಲಿ ಉತ್ತಮವಾದ ವಿಶೇಷ ಕಾಗದವನ್ನು ತಯಾರಿಸುತ್ತಿದ್ದ ಕಂಪೆನಿ. ಸೆಕ್ಯುರಿಟಿ ಪೇಪರ್ ಸಹ ತಯಾರಿಸುತ್ತಿದ್ದ ಈ ಕಂಪೆನಿಯನ್ನು ಟಿಟಾಗರ್ ಇಂಡಸ್ಟ್ರೀಸ್ 1994ರಲ್ಲಿ ಸ್ವಾಧೀನಪಡಿಸಿಕೊಂಡಿತು.

ಬೋರ್ಡ್ ಪೇಪರ್, ಎಸ್‌ಎಸ್ ಮ್ಯಾಪ್‌ಲಿಕೊ, ಕಾರ್ಟ್ರಿಡ್ಜ್ ಪೇಪರ್, ಪೋಸ್ಟರ್ ಪೇಪರ್, ಕ್ರಾಪ್ಟ್ ಪೇಪರ್, ಸ್ಟಾಂಪ್ ಪೇಪರ್, ನಾನ್ ಜುಡಿಶಿಯಲ್ ಇಂಪ್ರೆಸ್ಡ್ ಸ್ಟಾಂಪ್ ಪೇಪರ್‌ಗಳನ್ನು ತಯಾರಿಸುತ್ತಿದ್ದ ಈ ಕಂಪೆನಿಯು ತನ್ನ ವಿಸ್ತರಣಾ ಯೋಜನೆಯಲ್ಲಿ ನ್ಯೂಸ್ ಪ್ರಿಂಟ್, ಟಿಶ್ಯು ಮತ್ತು ಸಿಗರೇಟ್ ಟಿಶ್ಯು ಮುಂತಾದವನ್ನು ತಯಾರಿಸುವ ಯೋಜನೆ ಇತ್ತು.
 
2000 ನೇ ಸಾಲಿನಲ್ಲಿ ರೋಗ ಗ್ರಸ್ತವಾದ ಕಾರಣ ಬಿ.ಐ.ಎಫ್.ಆರ್. ಮುಂದೆ ಪುನಶ್ಚೇತನಕ್ಕಾಗಿ ಬಂದಿತ್ತು ಆದರೆ ಮುಂದೆ ಟಿಟಾಗರ್ ಸ್ಟೀಲ್ಸ್ ಲಿ. ಎಂದು ಬದಲಿಸಲಾಯಿತು. ಆ ಸಂದರ್ಭದಲ್ಲಿ ವಿದೇಶೀ ಹೂಡಿಕೆದಾರರನ್ನು ಹುಡುಕುತ್ತಿತ್ತು.

ಆದರೆ ಇತ್ತೀಚಿನ ವರದಿಗಳ ಪ್ರಕಾರ ಇದರ ಸಮೂಹ ಕಂಪೆನಿ ಟಿಟಾಗರ್ ವ್ಯಾಗನ್ಸ್ ನೌಕೆ ನಿರ್ಮಾಣ ವಲಯದ ಕಂಪೆನಿ ಟಿಟಾಗರ್ ಮೈನ್ಸ್‌ನಲ್ಲಿನ ಭಾಗಿತ್ವವನ್ನು ಶೇ 98.90 ರವರೆಗೂ ಹೆಚ್ಚಿಸಿಕೊಂಡು ಅಂಗಸಂಸ್ಥೆಯನ್ನಾಗಿಸಿಕೊಂಡು ಹೊಸ ವಲಯಕ್ಕೆ ಪ್ರವೇಶಿಸಲಿದೆ.

ಈಗ ಸ್ಥಗಿತಗೊಂಡಿರುವ ಟಿಟಾಗರ್ ಇಂಡಸ್ಟ್ರೀಸ್‌ನ 60 ಎಕರೆ ಪ್ರದೇಶವನ್ನು ಉಪಯೋಗಿಸಲಿದೆ. ಉಳಿದಂತೆ 447 ಎಕರೆ ಪ್ರದೇಶಕ್ಕೆ ಅರ್ಜಿ ಸಲ್ಲಿಸಿದೆ. ಈ ಕಂಪೆನಿಯ ಸಮೂಹ ಒಟ್ಟು ರೂ 650 ಕೋಟಿ ಹೂಡಿಕೆಯಿಂದ ಕಾಕಿನಾರ ಮತ್ತು ಕುಲ್ಪಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ಇಷ್ಟೆಲ್ಲಾ ಬೆಳವಣಿಗೆ ಇದ್ದರೂ ಕಂಪೆನಿಯು ಟಿಟಾಗರ್ ಇಂಡಸ್ಟ್ರೀಸ್‌ನಿಂದ ಪಡೆದಿರುವ 60 ಎಕರೆ ಪ್ರದೇಶಕ್ಕೆ ಯಾವ ರೀತಿಯ ಪರಿಹಾರ ಅಥವಾ ಪರ್ಯಾಯ ಫಲ ನೀಡುವುದೆಂಬುದು ಸ್ಪಷ್ಟವಾಗಿಲ್ಲ. ಮುಂದೆ ಈ ಅಂಶವು ಬಹಿರಂಗಗೊಳ್ಳಬಹುದು ಎಂದು ಆಶಿಸೊಣ. ಯಾವುದೇ ಕಾರಣಕ್ಕೂ ಭೌತಿಕ ಸರ್ಟಿಫಿಕೇಟ್‌ಗಳನ್ನು ಸುರಕ್ಷಿತವಾಗಿರಿಸಿರಿ.

 ಞ 98863-13380
 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.