ADVERTISEMENT

ಷೇರುಪೇಟೆ:ನೀರಸ ವಹಿವಾಟು..!

ಕೆ.ಜಿ ಕೃಪಾಲ್
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಷೇರುಪೇಟೆ ಸೂಚ್ಯಂಕಗಳ ಆಧಾರದ ಮೇಲೆ ವಿಶ್ಲೇಷಿಸಿದರೆ ಕಳೆದ ವಾರ ತಟಸ್ಥ ವಾರ ಎನ್ನಬಹುದು. ಅಂತರರಾಷ್ಟ್ರೀಯ ಹೆಗ್ಗುರುತು ಹೊಂದಿರುವ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು ಕಳೆದ ಒಂದು ವಾರದಲ್ಲಿ 7 ಅಂಶಗಳಷ್ಟು ಮಾತ್ರ ಏರಿಕೆ ಕಂಡಿದೆ. ಮಧ್ಯಮಶ್ರೇಣಿ ಸೂಚ್ಯಂಕವು 5 ಅಂಶಗಳಷ್ಟು ಇಳಿದಿದೆ.
 
ಕೆಳಮಧ್ಯಮ ಶ್ರೇಣಿ ಸೂಚ್ಯಂಕವು ಸುಮಾರು 60 ಅಂಶಗಳಷ್ಟು ಏರಿಕೆ ಪಡೆದಿದೆ. ವಿವಿಧ ವಲಯದ ಸೂಚ್ಯಂಕಗಳನ್ನು ಪರಿಶೀಲಿಸಿದಾಗ ಎಫ್‌ಎಂಸಿಜಿ ವಲಯ 152 ಅಂಶ, ಬ್ಯಾಂಕೆಕ್ಸ್ 106 ಅಂಶಗಳಷ್ಟು ಏರಿಕೆ ಪಡೆದಿವೆ. ಲೋಹ ವಲಯ ರಿಯಲ್ ಎಸ್ಟೇಟ್ ಮತ್ತು ತಾಂತ್ರಿಕ ವಲಯ ಕುಸಿತದಲ್ಲಿತ್ತು.

ಕಳೆದ ವಾರ ಪ್ರಕಟಗೊಂಡ ಆಕ್ಸಿಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್‌ಗಳ ಫಲಿತಾಂಶವು ಆ ವಲಯದ ಇತರೆ ಕಂಪೆನಿಗಳಲ್ಲಿ ಚುರುಕುತನ ಮೂಡಿಸಿದ ಕಾರಣ ಆಂಧ್ರ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮುಂತಾದವು ಚುರುಕಾದ ಮುನ್ನಡೆ ಕಂಡುಕೊಂಡವು.
 
ಎಚ್‌ಸಿಎಲ್ ಟೆಕ್ ಉತ್ತಮ ಫಲಿತಾಂಶ ನೀಡಿದ ಕಾರಣ ಷೇರಿನ ಬೆಲೆಯು ರೂ600 ದಾಟಿತ್ತು. ಡಾಕ್ಟರ್ ಅಗರ್‌ವಾಲ್ ಐ ಹಾಸ್ಪಿಟಲ್ಸ್ ಕಳೆದ ಒಂದು ವಾರದಲ್ಲಿ ರೂ90 ರಿಂದ ರೂ146.35ರವರೆಗೂ ಏರಿಕೆ ಕಂಡು ಮಿಂಚಿದರೆ, ಎರಡು ವರ್ಷಗಳ ಹಿಂದೆ ಪ್ರತಿ ಷೇರಿಗೆ ರೂ100/110 ರಂತೆ ಸಾರ್ವಜನಿಕ ವಿತರಣೆಯಿಂದ ಪೇಟೆ ಪ್ರವೇಶಿಸಿದ ಪ್ರದೀಪ್ ಓವರ್ಸಿಸ್ ಕಂಪೆನಿಯು ತನ್ನ ಎಸ್‌ಇಝಡ್ ಯೋಜನೆ ಕೈಬಿಟ್ಟು ಕೈಗಾರಿಕಾ ವಸಾಹತು ಸ್ಥಾಪನೆಗೆ ಕೈಹಾಕಿದ್ದು ಷೇರಿನ ಬೆಲೆಯನ್ನು ರೂ76.85 ರಿಂದ ರೂ51.25ಕ್ಕೆ ಕುಸಿಯುವಂತೆ ಮಾಡಿತು.

ಎಸ್. ಬ್ಯಾಂಕ್ ಮತ್ತು ಝೈಲಾಗ್ ಸಿಸ್ಟಂಸ್‌ಗಳ ಗಜಗಾತ್ರದ ಮಾರಾಟ ಷೇರಿನ ಬೆಲೆ ಕುಸಿಯುವಂತೆ ಮಾಡಿತು. ಕಳೆದ ವಾರ ವಿದೇಶಿ ವಿತ್ತೀಯ ಸಂಸ್ಥೆಗಳು ರೂ188 ಕೋಟಿ ಮೌಲ್ಯದ ಷೇರು ಖರೀದಿಸಿದವು. ಪೇಟೆಯ ಬಂಡವಾಳ ಮೌಲ್ಯರೂ65.68 ಕೋಟಿಗಳಷ್ಟಾಗಿದೆ.

ಹೊಸ ಷೇರಿನ ವಿಚಾರ
*ಇತ್ತೀಚೆಗೆ ಪ್ರತಿ ಷೇರಿಗೆ ರೂ 10 ರಂತೆ ಸಾರ್ವಜನಿಕ ವಿತರಣೆ ಮಾಡಿದ ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್ ಸಮೂಹದ ಆರ್‌ಸಿಎಲ್ ರೀಟೇಲ್ ಲಿ. ಕಂಪೆನಿಯು ಎಂ.ಟಿ. ಗುಂಪಿನಲ್ಲಿ 16 ರಿಂದ ವಹಿವಾಟಿಗೆ ಬಿಡುಗಡೆಯಾಗಿದೆ. ವಹಿವಾಟಿನ ಗುಚ್ಚ ಹತ್ತು ಸಾವಿರ ಷೇರುಗಳಾಗಿದೆ.

*ಸಿನೆಮ್ಯಾಕ್ಸ್ ಸಮೂಹದ ಚಿತ್ರಮಂದಿರ ಪ್ರದರ್ಶನದ ವ್ಯವಹಾರವನ್ನು ಬೇರ್ಪಡಿಸಿ ಸಿನೆಮಾಕ್ಸ್ ಇಂಡಿಯಾದಲ್ಲಿ ಸೇರಿಸಿದ ಈ ಹೊಸ ಕಂಪೆನಿ 18 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ರಿಸಾ ಇಂಟರ್‌ನ್ಯಾಶನಲ್ ಲಿ. ಕಂಪೆನಿಯ ಷೇರು ಬಂಡವಾಳವನ್ನು, ಷೇರಿನ ಮುಖಬೆಲೆ ರೂ10 ರಿಂದ ರೂ. 1ಕ್ಕೆ ಕಡಿತಗೊಳಿಸುವ ಮೂಲಕ, ಶೇ 90 ರಷ್ಟು ಕಡಿತಗೊಳಿಸಿ, ನಂತರ ರೂ1ರ ಮುಖಬೆಲೆ ಷೇರನ್ನು ರೂ10ಕ್ಕೆ ಕ್ರೋಡೀಕರಣ ಮಾಡಿ ಅಕ್ಟೋಬರ್ 23 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಲಾಭಾಂಶ ವಿಚಾರ
ರಿದ್ದಿ ಸಿದ್ದಿ ಗ್ಲೂಕೊ ಶೇ 250, ಕ್ರಿಸಿಲ್ ಲಿ. ಶೇ 300 (ಮು.ಬೆ. ರೂ1), ಎಚ್.ಸಿ.ಎಲ್. ಟೆಕ್ ಶೇ 100 (ಮು.ಬೆ. ರೂ. 2), ಹಿಂದೂಸ್ಥಾನ್ ಝಿಂಕ್ ಶೇ 80 (ಮು.ಬೆ. ರೂ2), ಮೈಂಡ್ ಟ್ರೀ ಶೇ 30 (ನಿಗದಿತ ದಿನ 29.10.12) ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್

ಸರ್ವಿಸ್ ಶೇ 100 (ಮು.ಬೆ. ರೂ1), ನವೀನ್ ಪ್ಲೋರಿನ್ ಇಂಟರ್‌ನ್ಯಾಶನಲ್ ಶೇ 75 (ನಿ.ದಿ. 30.10.12), ರ‌್ಯಾಲೀಸ್ ಇಂಡಿಯಾ ಶೇ 100 (ಮು.ಬೆ. ರೂ1), (ನಿಗದಿತ ದಿನ 30.10.12) ಎಕ್ಸೈಡ್ ಇಂಡಸ್ಟ್ರೀಸ್ ಶೇ 100 (ಮು.ಬೆ. ರೂ1), ಇಂಡಿಯಾ ಬುಲ್ ಸೆಕ್ಯುರಿಟಿ ಶೇ 50 (ಮು.ಬೆ. ರೂ1).

ಪೇಟೆಯಿಂದ ಹೊರಕ್ಕೆ
ಎಂಫೆಸಿಸ್ ಲಿಮಿಟೆಡ್ ಮತ್ತು ಪಿರಮಲ್ ಹೆಲ್ತ್‌ಕೇರ್ ಲಿ. ಕಂಪೆನಿಗಳನ್ನು ಅಕ್ಟೋಬರ್ ಸೀರೀಸ್ ಅಂತ್ಯದ ನಂತರ ಮೂಲಾಧಾರಿತ ಪೇಟೆಯಿಂದ ಮುಕ್ತಗೊಳಿಸಲಾಗಿದೆ. ಈಗಾಗಲೇ ಆಗಿರುವ ನವೆಂಬರ್ ಮತ್ತು ಡಿಸೆಂಬರ್ ಕಾಂಟ್ರಾಕ್ಟ್‌ಗಳ ನಂತರ ಹೊಸ ಕಾಂಟ್ರಾಕ್ಟ್ ಮಾಡಿಕೊಳ್ಳಲು ಆಸ್ಪದವಿರುವುದಿಲ್ಲ. ಈ ಎರಡು ಕಂಪೆನಿಗಳು ಮೂಲಾಧಾರಿತ ಪೇಟೆಯ ಚಟುವಟಿಕೆಯ ಅರ್ಹತಾ   ಮಟ್ಟದಲ್ಲಿರದ ಕಾರಣ ಈ ಕ್ರಮ.

ಮುಖಬೆಲೆ ಸೀಳಿಕೆ ವಿಚಾರ
*ಸಿಕೋಜಿ ರಿಯಲ್ಟಾರ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲು ನವೆಂಬರ್ 2 ನಿಗದಿತ ದಿನ.

*ಡಿಜೆಎಸ್ ಸ್ಟಾಕ್ಸ್ ಅಂಡ್ ಷೇರ್ಸ್‌ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲು 26ನೇ ಅಕ್ಟೋಬರ್ ನಿಗದಿತ ದಿನ.

*ಎ.ಸಿ.ಐ. ಇನ್‌ಫೋಕಾಂ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲಾಗುವುದು.

* ಟಿ. ಗುಂಪಿನ ಅನುಕರಣ ಕಮರ್ಷಿಯಲ್ ಎಂಟರ್‌ಪ್ರೈಸಸ್ ಕಂಪೆನಿ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲಿದೆ.

ಬೋನಸ್ ಷೇರಿನ ವಿಚಾರ
*ಡಿಜೆಎಸ್ ಸ್ಟಾಕ್ಸ್ ಲಿ. ಕಂಪೆನಿಯು 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

*ಅನುಕರಣ ಕಮರ್ಷಿಯಲ್ ಎಂಟರ್ ಪ್ರೈಸಸ್ 8:10ರ ಅನುಪಾತದ ಬೋನಸ್ ಪ್ರಕಟಿಸಿದೆ.

* ಪ್ರದೀಪ್ ಓವರ್ಸಿಸ್ 1:5ರ ಬೋನಸ್ ಪ್ರಕಟಿಸಿದೆ.

ವಾರದ ಪ್ರಶ್ನೆ
ನಾನು 1992ರ ಮಾಸ್ಟರ್‌ಗೇನ್‌ನಿಂದ ಪ್ರೇರಿತನಾಗಿ ಸುಮಾರು 45 ಸಾವಿರ ರೂಪಾಯಿಗಳನ್ನು ಷೇರು ಪೇಟೆಯಲ್ಲಿ ತೊಡಗಿಸಿದ್ದೇನೆ. ಈಗ ಈ ಷೇರುಗಳ ಕೊಟೆಷನ್ ಬರುತ್ತಿಲ್ಲ. ಇದರ ಬಗ್ಗೆ ನಿಮ್ಮ ಅಮೂಲ್ಯ ಸಲಹೆ ನೀಡಬೇಕೆಂದು ಕೋರುತ್ತೇನೆ (ಷೇರು ಸರ್ಟಿಫಿಕೇಟ್ ಲಗತ್ತಿಸಲಾಗಿದೆ)

ಉತ್ತರ: ಷೇರು ಪೇಟೆಯಲ್ಲಿ ಬದಲಾವಣೆಗಳು ಕ್ಷಿಪ್ರ ಹಾಗೂ ತ್ವರಿತ. ಹಾಗೆಯೇ ಅವಕಾಶಗಳು ಸಹ ಮಿಂಚಿನಂತೆ ಬಂದು ಕ್ಷಿಪಣಿ ವೇಗದಲ್ಲಿ ಮಾಯವಾಗುತ್ತವೆ. ಆದರೆ 1992 ರಲ್ಲಿನ ಪರಿಸ್ಥಿತಿಯೇ ಬೇರೆ.

ಆಗ ನಿರ್ದಿಷ್ಟವಾದ, ನಿಖರವಾದ ರೀತಿಯಲ್ಲಿ ಪೇಟೆಗಳು ಚಲಿಸುತ್ತಿದ್ದವು. ವಹಿವಾಟಿನ ಗಾತ್ರ, ಸೂಚ್ಯಂಕ ಇಂದಿನ ಮಟ್ಟದಲ್ಲಿರಲಿಲ್ಲ. ನೀವು ಕೊಂಡ ಷೇರುಗಳ ಪಟ್ಟಿಯಲ್ಲಿನ ಕಂಪೆನಿಗಳು ಆ ದಿನದಲ್ಲಿ ರಭಸದ ವಹಿವಾಟಿನಲ್ಲಿ ವಿಜೃಂಬಿಸಿದ್ದವು.
 
ನೀವು ಕೊಂಡ ನಂತರ ಈ ಕಂಪೆನಿಗಳು ಏರಿಕೆಯನ್ನು ಕಂಡು, ನೀವು ಹೆಚ್ಚಿನ ಲಾಭದ ಅಪೇಕ್ಷೆಯಿಂದ ಮಾರಾಟ ಮಾಡದೆಯೂ ಇರಬಹುದು. ಈ ಸಂದರ್ಭದಲ್ಲಿ ಒಂದು ಪ್ರಮುಖ ಅಂಶವನ್ನು ಸಣ್ಣ ಹೂಡಿಕೆದಾರರು ಗಮನದಲ್ಲಿರಿಸುವುದು ಅವಶ್ಯಕ, ಅದೆಂದರೆ ಪ್ರತಿಯೊಂದು ತೇಜಿ ಪೇಟೆಯ ನಂತರ ಬಹಳಷ್ಟು ಪ್ರಮಾಣದ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕಂಪೆನಿಗಳು ನಿಸ್ತೇಜನಗೊಳ್ಳುತ್ತವೆ.

 ಉದಾಹರಣೆಗೆ 2000ದಲ್ಲಿನ ಡಾಟ್‌ಕಾಂ ಹಾಗೂ ಸ್ಥಳೀಯ ಷೇರು ಹಗರಣದಲ್ಲಿ ಹೆಚ್ಚಿನ ಕಂಪೆನಿಗಳು ಮಾಯವಾಗಿವೆ. ಡಿಎಸ್‌ಕ್ಯು ಸಾಪ್ಟ್‌ವೇರ್, ಡಿಎಸ್‌ಕ್ಯು ಬಯೋಟೆಕ್, ನೆಕ್ಸಸ್ ಸಾಪ್ಟ್‌ವೇರ್, ಕಂಪ್ಯುಡೈಸ್ ವಿನ್‌ಫೋಸಿಸ್, ಇನ್‌ಫರ‌್ಮೇಷನ್ ಟೆಕ್ನಾಲಜೀಸ್, ನೆಕ್ಸಸ್ ಸಾಫ್ಟ್‌ವೇರ್, ಶಾಲಿಭದ್ರ ಇನ್ಫೋ, ಟ್ರಾನ್ಸ್‌ಸ್ಟ್ರೀಂ ಮುಂತಾದವುಗಳು.

ರಭಸದ ವಹಿವಾಟಿನಿಂದ ಮಾಯವಾಗಿವೆ. ಆದರೂ ಧೃತಿಗೆಡುವ ಅವಶ್ಯಕತೆಯಿಲ್ಲ. ಅವಕಾಶಗಳು ಮತ್ತೊಂದು ರೂಪದಲ್ಲಿ ಬರುವ ಸಾಧ್ಯತೆ ಇದೆ. ಬದಲಾದ ಪರಿಸ್ಥಿತಿಯಲ್ಲಿ ಕಂಪೆನಿಗಳು ಷೇರು ವಿನಿಮಯ ಕೇಂದ್ರದ ಲೀಸ್ಟಿಂಗ್‌ಗಾಗಿ ಹಾತೊರೆಯುತ್ತಿದ್ದು ಕೆಲವು ಕಂಪೆನಿಗಳು ಪುನಃಶ್ಚೇತನಗೊಂಡು ಪ್ರವೇಶಿಸಿದರೆ ಮತ್ತೆ ಕೆಲವು ಸ್ವಾಧೀನ ಪ್ರಕ್ರಿಯೆಗೊಳಗಾಗಿ ಹೊಸ ಅವತಾರದಲ್ಲಿ ವಹಿವಾಟಿಗೆ ಬಿಡುಗಡೆಯಾಗುತ್ತಿವೆ.

ಉದಾಹರಣೆಗೆ 1997 ರಲ್ಲಿ ಅಮಾನತುಗೊಂಡಿದ್ದ ಆರ್‌ಸಿಸಿ ಸಿಮೆಂಟ್ಸ್ ಕಳೆದ ಆಗಸ್ಟ್ ತಿಂಗಳಲ್ಲಿ ಅಮಾನತು ತೆರವುಗೊಳಿಸಿಕೊಂಡು ವಹಿವಾಟಿಗೆ ಮರು ಬಿಡುಗಡೆಯಾಗಿದೆ. 2001 ರಲ್ಲಿ ಅಮಾನತುಗೊಂಡಿದ್ದ ಇಂಡೋ ಅಮೆರಿಕನ್ ಅಡ್ವಾನ್ಸ್‌ಡ್

ಫಾರ್ಮಸ್ಯುಟಿಕಲ್ಸ್, 1995 ರಲ್ಲಿ ಅಮಾನತುಗೊಂಡಿದ್ದ ರಾಜಾಸ್ಥಾನ್ ಪೆಟ್ರೊ ಸಿಂಥೆಟಿಕ್ಸ್, 1997ರ ಶ್ರೀ ಸರ್ ಗೋವಿಂದ ಟ್ರೇಡ್ ಲಿಂಕ್ಸ್, 1998ರ ಮಿನೋಲ್ಟಿ ಫೈನಾನ್ಸ್, ರಿಂಗ್ ಇನ್‌ಫ್ರಾವೆಂಚರ್ಸ್ ಏಷಿಯನ್, 1999 ರಲ್ಲಿ ಅಮಾನತ್ತಾದ ಜ್ಯೋತಿ ಇನ್‌ಫ್ರಾವೆಂಚರ್ಸ್, ಶ್ಯಾಂ ಕಮಲ್ ಇನ್ವೆಸ್ಟ್‌ಮೆಂಟ್ಸ್, 2000 ದಲ್ಲಿ ಅಮಾನತ್ತಾದ ಪ್ರೀಮಿಯರ್ ಪೊಲಿಫಿಲಂ, 2001ರ ಪಾರ್ಥ್ ಅಲ್ಯುಮಿನಿಯಂ, ಪರೊಕ್ ಹರ್ಬಲ್ಸ್ ಮುಂತಾದವುಗಳ ಪಟ್ಟಿ ಬಹಳ ದೊಡ್ಡದಿವೆ.
 
ಇತ್ತೀಚೆಗೆ ವಹಿವಾಟಿಗೆ ಮರು ಬಿಡುಗಡೆಯಾಗಿ, ಹೊರಬರುವ ದಾರಿ ಸೃಷ್ಟಿಯಾಗಿದೆ. ಸಂಯಮ ಅಗತ್ಯ. ಮುಂದಿನ ಬೆಳವಣಿಗೆಯನ್ನು ಕೂಡ ಗಮನಿಸುತ್ತಿರಿ. ಇತ್ತೀಚೆಗೆ ಕಂಪೆನಿಗಳು ಬಂಡವಾಳ ಕಡಿತ, ವಿಲೀನ ಸ್ವಾಧೀನ, ಹೆಸರು ಬದಲಾವಣೆ ಮುಂತಾದವುಗಳ ಮೂಲಕ ಪೇಟೆ ಪ್ರವೇಶಕ್ಕೆ ಯತ್ನಿಸುತ್ತಿವೆ. ಇಂತಹವುಗಳ ಬಗ್ಗೆ ನಿಗಾ ವಹಿಸಿರಿ. ಶುಭವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.