ADVERTISEMENT

ಹೂಡಿಕೆದಾರರಿಗೆ ಎನ್‌ಎಸ್‌ಇ ಭೀತಿ..!

ಕೆ.ಜಿ ಕೃಪಾಲ್
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಷೇರುಪೇಟೆ ಸಂವೇದಿ ಸೂಚ್ಯಂಕವು ಕಳೆದ ಗುರುವಾರ 19 ಸಾವಿರದ ಗಡಿದಾಟಿದ್ದು ಮೈಲಿಗಲ್ಲು.  ಕೇಂದ್ರ ಸರ್ಕಾರ ಆರ್ಥಿಕ ಸುಧಾರಣಾ ಕ್ರಮಗಳ ಎರಡನೆಯ ಕಂತಿನಲ್ಲಿ ವಿಮಾ ವಲಯ ಮತ್ತು ಪಿಂಚಣಿ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಶುಕ್ರವಾರದಂದು ಪೇಟೆಗಳು ಮತ್ತೆ ವಿಜೃಂಭಿಸುವುದೆಂಬ ಕಲ್ಪನೆ ಇತ್ತು.
 
ಆದರೆ, ಶುಕ್ರವಾರ ಆರಂಭಿಕ ಕ್ಷಣಗಳಲ್ಲಿ 19,137 ಅಂಶಗಳನ್ನು ತಲುಪಿ ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿತ್ತು. ಆದರೆ ಸ್ವಲ್ಪ ಸಮಯದ ನಂತರ ಷೇರುಪೇಟೆಯ ಸಂವೇದಿ ಸೂಚ್ಯಂಕ ದಿಢೀರನೆ 379 ಅಂಶಗಳಷ್ಟು ಕುಸಿತ ದಾಖಲಿಸಿತು. ಕ್ಷಣಾರ್ಧದಲ್ಲಿಯೇ ಯಥಾಸ್ಥಿತಿಗೆ ಮರಳಿತು.

ಬ್ರೋಕಿಂಗ್ ಸಂಸ್ಥೆಯೊಂದರಲ್ಲಿ ಆರ್ಡರ್ ಗುಂಡಿ ಒತ್ತುವಲ್ಲಿ ಉಂಟಾದ ಲೋಪದ ಕಾರಣ ರೂ650 ಕೋಟಿಯ ವಹಿವಾಟು ದಾಖಲಾಯಿತು. ಇದರಿಂಧ ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ 900 ಅಂಶಗಳಷ್ಟು ದಿಢೀರ್ ಕುಸಿತ ಕಂಡಿತು.

ಸೋಜಿಗವೆಂದರೆ ಸುರಕ್ಷಿತ, ಸುಧಾರಿತ ವಹಿವಾಟು ಎಂಬ ಭಾವನೆಯಿಂದ ಹೆಚ್ಚಿನ ಆಸಕ್ತಿ ಪ್ರದರ್ಶಿಸುತ್ತಿದ್ದ `ಎನ್‌ಎಸ್‌ಇ~ಯಲ್ಲಿ ಕೇವಲ ರೂ650 ಕೋಟಿ ಮೌಲ್ಯದ ಆರ್ಡರ್ ಪೇಟೆಯ ದಿಶೆ ಬದಲಿಸುವಷ್ಟು ಪರಿಣಾಮಕಾರಿ ಆಗಿದೆ ಎಂದರೆ ಪೇಟೆಯಲ್ಲಿ ಆಳವಿಲ್ಲ-   ಟೊಳ್ಳು ಎಂಬ ಭಾವನೆ ಮೂಡುತ್ತದೆ. ಇದರಿಂದ 5815ರ ಗರಿಷ್ಠದಲ್ಲಿದ್ದ `ನಿಫ್ಟಿ~ ಮಿಂಚಿನಂತೆ 4888ಕ್ಕೆ ಕುಸಿದು ಪುಟಿದೆದ್ದಿತು.

ಶುಕ್ರವಾರದ ಈ ಬೆಳವಣಿಗೆಯು ಪೇಟೆಯ ಮರುಪ್ರವೇಶಕ್ಕೆ ಯೋಚಿಸುತ್ತಿದ್ದವರಿಗೆ ತಡೆಯೊಡ್ಡಿದಂತಾಗಿದೆ. ಒಟ್ಟಿನಲ್ಲಿ ಸುರಕ್ಷಿತವೆಂಬುದು ಷೇರುಪೇಟೆಗಳಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಸ್ವಯಂ ಸುರಕ್ಷಾ ವಿಧಾನ ಅಳವಡಿಸಿಕೊಂಡು ದುರಾಸೆಗೆ ಬಲಿಯಾಗದೆ ಲಭ್ಯವಿರುವ ಅವಕಾಶದ ಲಾಭ ಪಡೆಯುವುದು ಉತ್ತಮ.

 ಷೇರುಪೇಟೆಯಲ್ಲಿನ ಸೂಚ್ಯಂಕಗಳ ಏರಿಕೆಯು ಕಾರ್ಪೊರೇಟ್ ವಲಯದಲ್ಲಿ ಚೇತನ ಮೂಡಿಸಿದೆ. ವೆಸ್ಟ್‌ಕೋಸ್ಟ್ ಪೇಪರ್ ಮಿಲ್ಸ್‌ನಲ್ಲಿ ಭಾಗಿತ್ವ ಮಾರಾಟದ ಗಾಳಿ ಸುದ್ದಿಯು ಷೇರಿನ ಬೆಲೆಯನ್ನು ರೂ66 ರಿಂದ ರೂ92 ರವರೆಗೂ ಎಳೆದೊಯ್ದರೆ ಎಚ್‌ಡಿಎಫ್‌ಸಿಯ ಷೇರು ಗುರುವಾರ ರೂ793 ಗರಿಷ್ಠ ತಲುಪಿ ವಿಜೃಂಭಿಸಿದರೆ ಶುಕ್ರವಾರ 1.40 ಕೋಟಿ ಷೇರಿನ ಗಜಗಾತ್ರದ ಚಟುವಟಿಕೆ ಷೇರಿನ ಬೆಲೆಯನ್ನು ರೂ738ರವರೆಗೂ ಕುಸಿಯುವಂತೆ ಮಾಡಿತು.

ಎಸ್ಪೆಲ್ ಸಮೂಹವು ಐವಿಆರ್‌ಸಿಎಲ್‌ನಿಂದ ಹೊರಬರುವ ಸುದ್ದಿ ಷೇರಿನ ಬೆಲೆ ಕುಸಿಯುವಂತೆ ಮಾಡಿತು. ಕಾರ್ಪೊರೇಟ್ ಕಂಪೆನಿಗಳು ಲಭ್ಯವಾದ ಅವಕಾಶ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಸೂಚ್ಯಂಕಗಳ ವಿವರ
ಸಂವೇದಿ ಸೂಚ್ಯಂಕವು 175 ಅಂಶಗಳಷ್ಟು  ಏರಿಕೆ ಕಂಡರೆ ಮಧ್ಯಮಶ್ರೇಣಿ ಸೂಚ್ಯಂಕ 71 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 127 ಅಂಶಗಳಷ್ಟು ಏರಿಕೆ ಕಳೆದ ವಾರ ಕಂಡವು.

ಮಧ್ಯಮಶ್ರೇಣಿ ಸೂಚ್ಯಂಕವು ಅ.4ರಂದು 6778 ಅಂಶಗಳನ್ನು ತಲುಪಿ ವಾರ್ಷಿಕ ಗರಿಷ್ಠ ದಾಖಲಿಸಿದರೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 7240 ಅಂಶಗಳಲ್ಲಿದ್ದು, ಕೇವಲ 23 ಅಂಶಗಳಿಂದ ಫೆಬ್ರುವರಿಯಲ್ಲಿನ ವಾರ್ಷಿಕ ಗರಿಷ್ಠದಿಂದ ಹಿಂದಿದೆ. ಪೇಟೆಯ ಬಂಡವಾಳ  ಮೌಲ್ಯವು ರೂ66.33 ಲಕ್ಷ ಕೋಟಿಗೆ ಏರಿದೆ.

ಬೋನಸ್ ಷೇರಿನ ವಿಚಾರ
*ವಿಸಾಗರ್ ಫೈನಾನ್ಶಿಯಲ್ ಸರ್ವಿಸಸ್ ಲಿ. ಕಂಪೆನಿಯು 11 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

*ಝಡ್ ಗುಂಪಿನ ಒಲಿಂಪಿಕ್ ಆಯಿಲ್ ಇಂಡಸ್ಟ್ರೀಸ್ ಕಂಪೆನಿಯು 8 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಎ. ಗುಂಪಿಗೆ ಬಡ್ತಿ
ಬಾಯರ್ ಕ್ರಾಪ್‌ಸೈನ್ಸ್, ಬರ್ಜರ್    ಪೇಂಟ್ಸ್, ಸಿಇಎಸ್‌ಸಿ ಕೋರ್ ಎಜುಕೇಷನ್ ಅಂಡ್ ಟೆಕ್ನಾಲಜೀಸ್, ದೇನಾ ಬ್ಯಾಂಕ್, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್, ಜೆಟ್ ಏರ್‌ವೇಸ್, ಮದ್ರಾಸ್ ಸಿಮೆಂಟ್ಸ್, ಮ್ಯಾಕ್ಲಿಯಾಡ್ ರಸ್ಸಲ್ ಇಂಡಿಯಾ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ, ಸತ್ಯಂ ಕಂಪ್ಯೂಟರ್ ಸರ್ವಿಸಸ್, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಗಳನ್ನು ಅಕ್ಟೋಬರ್ 8 ರಿಂದ ಎ ಗುಂಪಿಗೆ ವರ್ಗಾಯಿಸಲಾಗಿದೆ.

 ಬಿ ಗುಂಪಿಗೆ
ಅಲ್‌ಸ್ತೊಕಿಂ ಟಿಅಂಡ್‌ಡಿ ಇಂಡಿಯಾ, ಚಂಬಲ್ ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್, ಇಐಎಚ್, ಫೋರ್ಟಿಸ್ ಹೆಲ್ತ್ ಕೇರ್, ಗುಜರಾತ್ ಗ್ಯಾಸ್ ಕಂ. ಇಂಡಿಯಾ ಬುಲ್‌ರಿಯಲ್ ಎಸ್ಟೇಟ್, ಮಣಪುರಂ ಜನರಲ್ ಫೈನಾನ್ಸ್ ಅಂಡ್ ಲೀಸಿಂಗ್, ಮೊಯಿಲ್, ಆರ್‌ಸಿಎಫ್. ರುಬಿ ಸೋಯಾ, ಇಂಡಸ್ಟ್ರೀಸ್, ವೆಲ್‌ಸ್ಪನ್ ಗುಜರಾತ್ ಕಂಪೆನಿಗಳನ್ನು  8 ರಿಂದ `ಬಿ~ ಗುಂಪಿಗೆ ವರ್ಗಾಯಿಸಲಾಗಿದೆ.

ಹೊಸ ಷೇರಿನ ವಿಚಾರ
ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯದಂತೆ ಸಾರ್ವಜನಿಕ ಉದ್ದಿಮೆ ರಾಷ್ಟ್ರೀಯ ಇಷ್ಪತ್ ನಿಗಮ್ ಲಿಮಿಟೆಡ್ ಷೇರುಗಳ ಸಾರ್ವಜನಿಕ ವಿತರಣೆ ಅಕ್ಟೋಬರ್ 15 ರಿಂದ ಮಾಡಲಿದ್ದು 18ರ ವರೆಗೂ ನಡೆಯಲಿದೆ. ಸಣ್ಣ ಹೂಡಿಕೆದಾರರಿಗೆ ಶೇ 5ರ ರಿಯಾಯಿತಿಪ್ರಕಟಿಸಿದ್ದು ರೂ2 ಲಕ್ಷ ಮಿತಿವರೆಗೂ ಹೂಡಿಕೆ ಮಾಡಬಹುದಾಗಿದೆ.

48,89, 84,620 ಷೇರುಗಳನ್ನು ವಿತರಿಸಲಿರುವ ಈ `ಐಪಿಒ~ ಬೆಲೆಯು ವಿತರಣೆಗೆ 2 ದಿನ ಮುಂಚಿತವಾಗಿ ಪ್ರಕಟಿಸಲಾಗುವುದು. ಈ ವಿತರಣೆಗೆ ಐದರಲ್ಲಿ ನಾಲ್ಕರ     ದರ್ಜೆ ನೀಡಲಾಗಿದೆ.

ಹಕ್ಕಿನ ಷೇರಿನ ವಿಚಾರ
ಅಸಾಹಿ ಇಂಡಿಯಾ ಗ್ಲಾಸ್ ಲಿ. 10 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿ   ಸಲಿದೆ.

ಮುಖ ಬೆಲೆ ಸೀಳಿಕೆ
ಕರಾನಿ ಇಂಡಸ್ಟ್ರೀಸ್ ಷೇರಿನ ಮುಖ ಬೆಲೆ     ರೂ 5 ರಿಂದ ರೂ1ಕ್ಕೆ ಸೀಳಲು ನವೆಂಬರ್ 1 ನಿಗದಿತ ದಿನ.

ತೆರೆದ ಕರೆ
ಗುಜರಾತ್ ಗ್ಯಾಸ್ ಕಂಪೆನಿಯ ಶೇ 65,12ರ ಭಾಗಿತ್ವವನ್ನು ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೊರೇಷನ್, ಗುಜರಾತ್ ಸ್ಟೇಟ್ ಪೆಟ್ರೊನೆಟ್, ಜಿ.ಎಸ್.ಪಿ.ಎಸ್. ಗ್ಯಾಸ್ ಕಂಪೆನಿ, ಜಿ.ಎಸ್.ಪಿ.ಸಿ. ಡಿಸ್ಟ್ರಿಬ್ಯೂಷನ್ ನೆಟ್ ವರ್ಕ್ಸ್, ಕಂಪೆನಿಗಳು ಪ್ರತಿ ಷೇರಿಗೆ ರೂ295 ರಂತೆ ಕೊಳ್ಳುವ ಪಕ್ಕಾ ಒಪ್ಪಂದ ಮಾಡಿಕೊಂಡ ಕಾರಣ `ಸೆಬಿ~ ನಿಯಮದಂತೆ ಶೇ 26ರ ಭಾಗಿತ್ವವನ್ನು ಸಾರ್ವಜನಿಕರಿಂದ ತೆರೆದ ಕರೆ ಮೂಲಕ ಪ್ರತಿ ಷೇರಿಗೆ ರೂ314.17ರಂತೆ ಕೊಳ್ಳಲು ಮುಂದಾಗಿವೆ.

ಈ  ಕಾರಣ ಷೇರಿನ ಬೆಲೆಯು ರೂ336.70ರಿಂದ     ರೂ 297 ವರೆಗೂ ಕುಸಿದು ಚೇತರಿಕೆಯಿಂದ ರೂ 308 ರಲ್ಲಿ ಅಂತ್ಯಗೊಂಡಿತು.

ವಾರದ ಪ್ರಶ್ನೆ
ಸಣ್ಣ ಹೂಡಿಕೆದಾರರು ಸುರಕ್ಷಿತವಾದ ಹೂಡಿಕೆಗೆ ಅಳವಡಿಸಿಕೊಳ್ಳಬೇಕಾದ ಮಾರ್ಗವೇನು?
ಉತ್ತರ: ಈಚೆಗೆ ಪ್ರಕಟವಾದ ಅಂಕಿ ಅಂಶಗಳ ಪ್ರಕಾರ ಸಾಮಾಜಿಕ ತಾಣವಾದ ಫೇಸ್‌ಬುಕ್ ಉಪಯೋಗಿಸುವವರ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಅಮೆರಿಕಕ್ಕೆ 5ನೇ ಸ್ಥಾನ ದೊರೆತಿದೆ. ಅಂದರೆ ಈ ತಾಣದ ಉಪಯೋಗಜನಸಾಮಾನ್ಯರೂ ಸಹ ಪಡೆಯುತ್ತಿರುವುದಕ್ಕೆ ಉದಾಹರಣೆ.

ಯಾವುದೇ ಯೋಜನೆಯ ಯಶಸ್ವಿಯಾಗಬೇಕಾದರೆ ಬಹುಜನತೆಯ ಬೆಂಬಲ ಅಗತ್ಯ. ಇದರ ಅರಿವು ಪಡೆದು ಉಪಯೋಗಿಸಿಕೊಂಡವರು ಉದ್ಯಮಿ ಧೀರೂಭಾಯಿ ಅಂಬಾನಿಯವರು.

ಇತ್ತೀಚಿನ ವಿದ್ಯಮಾನಗಳು ಸಣ್ಣ ಹೂಡಿಕೆದಾರರ ನಿರಾಸಕ್ತಿಗೆ ಕಾರಣವಾಗಿದೆ. ಆದರೆ, ಬಹಳಷ್ಟು ಉತ್ತಮ ಕಂಪೆನಿಗಳಲ್ಲಿ ಸಣ್ಣ ಹೂಡಿಕೆದಾರರ ಆಸಕ್ತಿ ಕ್ಷೀಣಿಸುತ್ತಿದ್ದು, ಕಂಪೆನಿಗಳ ಮಾಲಿಕತ್ವವು ಕೇವಲ ಕೆಲವೇ ಸಂಸ್ಥೆಗಳ ಕೈ ಸೇರುತ್ತದೆ.

ಉದಾಹರಣೆಗೆ ಗೃಹ ಸಾಲ ವಲಯದಅಗ್ರಮಾನ್ಯ ಕಂಪೆನಿಯಾದ ಎಚ್.ಡಿ. ಎಫ್. ಸಿ. ಕಂಪೆನಿಯಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ಸಣ್ಣ ಹೂಡಿಕೆದಾರರು ಶೇ 8.14ರಷ್ಟು ಭಾಗಿತ್ವ ಹೊಂದಿದ್ದರು. ವಿದೇಶಿ ವಿತ್ತೀಯ ಸಂಸ್ಥೆಗಳು ಶೇ 66.74ರಷ್ಟರ ಭಾಗಿತ್ವ ಹೊಂದಿದ್ದವು.

ಇದು ಸೆಪ್ಟೆಂಬರ್ ಅಂತ್ಯದಲ್ಲಿ ಶೇ 68.72ಕ್ಕೆ ಹೆಚ್ಚಾಗಿ ಸಣ್ಣ ಹೂಡಿಕೆದಾರರು ಶೇ 7.65 ರಷ್ಟರ ಭಾಗಿತ್ವ ಹೊಂದಿದ್ದರು. ಇಂತಹ ಕಾರಣಗಳಿಂದಾಗಿ ಪೇಟೆಯಲ್ಲಿ ಚಟುವಟಿಕೆಯು ಕೇಂದ್ರೀಕೃತವಾಗಿದ್ದು, ಕೇವಲ ಗಜಗಾತ್ರದ ಚಟುವಟಿಕೆಗೆ ಗುರಿಯಾಗಿದೆ.

ಈ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ತಮ್ಮ ಹೂಡಿಕೆ ಗುಚ್ಚದಲ್ಲಿ ಪ್ರತಿಯೊಂದು ಉತ್ತಮ ಕಂಪೆನಿಗಳಲ್ಲಿ ಕನಿಷ್ಠ 10 ಷೇರುಗಳನ್ನಾದರೂ ಸ್ಥಿರ ಹೂಡಿಕೆಯನ್ನಾಗಿಸಿಕೊಂಡಲ್ಲಿ ಆ ಕಂಪೆನಿಗಳ ಬೆಳವಣಿಗೆಯಲ್ಲಿ ಭಾಗಿಯಾದಂತಾಗುತ್ತದೆ ಹಾಗೂ ಅದರ ಲಾಭ ಪಡೆದಂತಾಗುತ್ತದೆ.

ಉಳಿದಂತೆ ಏರಿಳಿತಗಳನ್ನು ಆಧರಿಸಿ ಚಟುವಟಿಕೆ ನಡೆಸಬಹುದು. ಈ ರೀತಿಯ ಸ್ಥಿರ ಹೂಡಿಕೆಯು ಹೂಡಿಕೆ ಗುಚ್ಛವನ್ನು ಮೌಲ್ಯಭರಿತಗೊಳಿಸುವುದರೊಂದಿಗೆ ವೃದ್ಧಿಸುತ್ತದೆ. ಇದರಿಂದ ಇದು ಸುರಕ್ಷಿತ ಎನ್ನುವುದಕ್ಕಿಂತ ಉತ್ತಮ ಮಾರ್ಗ  ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT