ADVERTISEMENT

ಹೂಡಿಕೆಯ ಸುರಕ್ಷತೆಗೆ ಗಮನ ಇರಲಿ

ಕೆ.ಜಿ ಕೃಪಾಲ್
Published 24 ಡಿಸೆಂಬರ್ 2017, 20:16 IST
Last Updated 24 ಡಿಸೆಂಬರ್ 2017, 20:16 IST

ಶುಕ್ರವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು 33,964 ಅಂಶಗಳನ್ನು ತಲುಪಿದ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈ ಹಂತಕ್ಕೆ ಹೆಚ್ಚಿನ ಮಹತ್ವ ನೀಡಲೇಬೇಕಾಗಿದೆ.  ಸೋಮವಾರ 32,595 ಅಂಶಗಳಲ್ಲಿದ್ದ ಸೂಚ್ಯಂಕ ಶುಕ್ರವಾರ ದಾಖಲೆಯ ಹಂತಕ್ಕೆ ಜಿಗಿತ ಕಂಡಿದೆ. ಮತ್ತೊಂದು ವಿಶೇಷವೆಂದರೆ ಸೂಚ್ಯಂಕವು ವಾರ್ಷಿಕ ಗರಿಷ್ಠ ತಲುಪಿದ್ದರ ಜೊತೆಗೆ ಪೇಟೆಯ ಬಂಡವಾಳ ಮೌಲ್ಯವು ಸಹ ಪ್ರಥಮ ಬಾರಿಗೆ ₹ 150.67 ಲಕ್ಷ ಕೋಟಿಗೆ ಹೆಚ್ಚಿದೆ.

ಸೂಕ್ಷ್ಮ ಸೂಚ್ಯಂಕ (ಸೆನ್ಸಿಟಿವ್ ಇಂಡೆಕ್ಸ್)  ಈ ವಾರ ಹೆಸರಿಗೆ ತಕ್ಕಂತೆ ತನ್ನ ಸೆನ್ಸಿಟಿವಿಟಿ ಪ್ರದರ್ಶಿಸಿದೆ.  ಸೋಮವಾರ ಗುಜರಾತ್ ರಾಜ್ಯದ ಫಲಿತಾಂಶದ ಆರಂಭಿಕ ಅಂಕಿ ಅಂಶಗಳಿಗೆ ಬೆದರಿದ ಪೇಟೆ ಮೊದಲು   ದಿಢೀರ್  ಕುಸಿದು 32,595 ಅಂಶಗಳಿಗೆ ತಲುಪಿತಾದರೂ, ನಂತರದ ಅಲ್ಲಿಂದ ಪುಟಿದೆದ್ದು 33,801 ರವರೆಗೂ ಏರಿಕೆ ಕಂಡು 33,601 ರಲ್ಲಿ ಕೊನೆಗೊಂಡಿತು.

ಕೇವಲ ನಲವತ್ತು ನಿಮಿಷಗಳಲ್ಲಿ ಇಂತಹ ಭಾರಿ ಇಳಿಕೆ- ಚೇತರಿಕೆ ಪ್ರದರ್ಶಿತವಾಗಿದ್ದು ವಿಸ್ಮಯಕಾರಿ ಅಂಶವಾದರೂ ಪೇಟೆಯು ಪಕ್ವವಾಗಿದೆ ಎಂಬುದನ್ನು ಸಹ ಬಿಂಬಿತವಾಗುತ್ತದೆ.  ಕುಸಿತದ ರಭಸಕ್ಕೆ ತತ್ತರಿಸಿ ತರಗೆಲೆಗಳಂತೆ ಷೇರುಗಳ ಬೆಲೆಗಳು ಉದುರಿದವು. ಇದಕ್ಕೆ ಅಗ್ರಮಾನ್ಯ ಕಂಪನಿಗಳ ಷೇರುಗಳು ಹೊರತಾಗಲಿಲ್ಲ. ಪ್ರಮುಖ ಹಾಗೂ ಸಂವೇದಿ ಸೂಚ್ಯಂಕದಲ್ಲಿನ ಕಂಪನಿ ಮಾರುತಿ ಸುಜುಕಿ ಅಂದು ₹8,990 ಕ್ಕೆ ಕುಸಿದು ನಂತರ ₹9,344 ಕ್ಕೆ ಚೇತರಿಸಿಕೊಂಡಿತು.  ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ₹862 ಕ್ಕೆ ಕುಸಿದು ₹932 ಕ್ಕೆ ಚೇತರಿಕೆ ಕಂಡಿತು. ಅದಾನಿ ಪೋರ್ಟ್ಸ್ ಷೇರಿನ ಬೆಲೆ ₹374 ಕ್ಕೆ ಇಳಿದು ಅಲ್ಲಿಂದ ₹ 414 ಕ್ಕೆ ಏರಿಕೆ ಕಂಡಿತು. ಇತ್ತೀಚಿಗೆ ಹೆಚ್ಚು ಚಟುವಟಿಕೆಯಿಂದ ಬೀಗುತ್ತಿದ್ದ ಪರಾಗ್ ಮಿಲ್ಕ್ ಷೇರಿನ ಬೆಲೆ ₹269 ರ ಸಮೀಪಕ್ಕೆ ಕುಸಿದು ಅಲ್ಲಿಂದ ₹312ಕ್ಕೆ ಏರಿಕೆ ಕಂಡಿತು.

ADVERTISEMENT

ಷೇರುಪೇಟೆಯ ಚಟುವಟಿಕೆಯು ರಭಸದಿಂದ ಕೂಡಿದ್ದು ಕೆಳಮಧ್ಯಮ ಶ್ರೇಣಿ ಸೂಚ್ಯಂಕವು ಪ್ರವರ್ಧಮಾನದಲ್ಲಿದೆ. ದಿನಂಪ್ರತಿ ವಹಿವಾಟಿನ ಗಾತ್ರದಲ್ಲಿ ಹೆಚ್ಚಿನ ಪಾಲು ಪಡೆಯುತ್ತಿದ್ದು ಬದಲಾವಣೆಯ ವೇಗ ಎಲ್ಲರ ಗಮನ ಸೆಳೆಯುತ್ತಿದೆ.  ಸೋಮವಾರ ಪೇಟೆಯ ಕುಸಿತದ ದಿನ ಕೆಳಮಧ್ಯಮ ಶ್ರೇಣಿ ವಲಯದ ಚಟುವಟಿಕೆಯ ಗಾತ್ರ ಶೇ 42 ರಷ್ಟಿದೆ. ಬುಧವಾರ ಈ ಗಾತ್ರವು ಶೇ 51 ಕ್ಕೆ ಏರಿಕೆ ಕಂಡಿದೆ. ಈ ಅಂಶವು ಬಹಳಷ್ಟು ಸಣ್ಣಹೂಡಿಕೆದಾರರನ್ನು ತನ್ನತ್ತ ಸೆಳೆಯುತ್ತಿದೆ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಹಳಷ್ಟು ವಿದೇಶಿ ನಿಧಿಗಳಿಗೆ ಡಿಸೆಂಬರ್ ವಾರ್ಷಿಕ ಅಂತ್ಯವಾಗಿದ್ದು, ಅವುಗಳ ಸಾಧನೆಯನ್ನು ಮಾಪನಮಾಡಲು ಈ ತಿಂಗಳ ದರಗಳು ಪ್ರಮುಖಪಾತ್ರ ವಹಿಸುವ ಕಾರಣ ಷೇರಿನ ಬೆಲೆಗಳು ಪುಟಿದೆದ್ದಿವೆ. ಪುಟಿದೇಳುವುದು ಸ್ವಾಭಾವಿಕ ಅಂಶವಾಗಿದ್ದು ಇಂತಹ ದಿಢೀರ್ ಬದಲಾವಣೆಗೆ ಹೆಚ್ಚಿನ ಮಹತ್ವ ನೀಡದೆ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ತತ್ವದ ಆಧಾರದ ಮೇಲೆ ಚಟುವಟಿಕೆ ನಡೆಸಿದರೆ ಬಂಡವಾಳ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ. ಮಾರುತಿ ಸುಜುಕಿ ಕಂಪನಿಯ ಷೇರಿನ ಬೆಲೆಯು ಸೋಮವಾರದ ಕನಿಷ್ಠ ಬೆಲೆ ₹9,990 ರಿಂದ ಗುರುವಾರದ ಸಾರ್ವಕಾಲಿಕ ಗರಿಷ್ಠ  ₹10,999  ತಲುಪಿದ್ದು ಮತ್ತೊಂaದು ವಿಶೇಷವಾಗಿದೆ. 2016 ರ ಡಿ. 23 ರಂದು ₹5,042 ರಲ್ಲಿದ್ದಂತಹ ಈ ಕಂಪನಿಯ ಷೇರು ಸರಿಯಾಗಿ ಒಂದೇ ವರ್ಷದಲ್ಲಿ ₹10 ಸಾವಿರ ಗಡಿ ತಲುಪಿರುವುದು ಗಮನಾರ್ಹ ಅಂಶವಾಗಿದೆ.

ಮಂಗಳವಾರದ ಚೇತರಿಕೆಯು ಆಟೋ ವಲಯದ ಷೇರುಗಳ ಚಟುವಟಿಕೆ ಹೆಚ್ಚುವಂತೆ ಮಾಡಿತು. ಟಾಟಾ ಮೋಟಾರ್, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಹೀರೊ ಮೋಟೊಕಾರ್ಪ್ ಬಜಾಜ್ ಆಟೊ ಉತ್ತಮ ಏರಿಕೆಯಿಂದ ವಿಜೃಂಭಿಸಿದವು.   ಫಾರ್ಮಾ ವಲಯದ ಬಯೋಕಾನ್, ಅಲೆಂಬಿಕ್, ಬ್ಯಾಂಕಿಂಗ್ ವಲಯದ ಐಸಿಐಸಿಐ ಬ್ಯಾಂಕ್,  ಎಚ್‌ಡಿಎಫ್‌ಸಿ ಬ್ಯಾಂಕ್, ಇತರೆ ವಲಯದ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಕಂಪನಿಗಳಾದ ಡೆಲ್ಟಾ ಕಾರ್ಪ್, ಇಂಡಿಯಾ ಬುಲ್ ರಿಯಲ್ ಎಸ್ಟೇಟ್ , ಟಾಟಾ ಗ್ಲೋಬಲ್, ಟೈಟಾನ್, ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಅಶೋಕ್ ಲ್ಲ್ಯಾನ್ಡ್, ಪವರ್ ಫೈನಾನ್ಸ್, ಆರ್‌ಇಸಿ, ಬಾಲ್ಮರ್ ಲೌರಿ, ಬಾಂಬೆ ಡೈಯಿಂಗ್ ಮುಂತಾದವುಗಳು ಚುರುಕಾದ ಏರಿಕೆ ಕಂಡವು.  ಅತಿಯಾದ ಬೇಡಿಕೆಯ ಕಾರಣ ಆಟೊ ಇಂಡೆಕ್ಸ್ ಅಂದು 926 ಅಂಶಗಳ ಬೃಹತ್ ಏರಿಕೆ ಪ್ರದರ್ಶಿಸಿದೆ.

ಕಾರ್ಪೊರೇಟ್ ವಲಯದಲ್ಲಿ ಸ್ವಾಧೀನ ಪ್ರಕ್ರಿಯೆಗಳು ಹೆಚ್ಚಾಗಿದ್ದು,ಅದರ ಪ್ರಭಾವದಿಂದ ಅನೇಕ ಕಂಪನಿಗಳು ಚುರುಕಾದ ವಹಿವಾಟಿಗೆ ಗುರಿಯಾಗಿವೆ. ರೆಲಿಗೇರ್  ಎಂಟರ್ ಪ್ರೈಸಸ್ ಲಿ ಕಂಪನಿಯ ಷೇರಿನ ಬೆಲೆಯು ಒಂದು ತಿಂಗಳಲ್ಲಿ ₹47 ರ ಸಮೀಪದಿಂದ ₹80 ರವರೆಗೂ ಪುಟಿದೆದ್ದಿರುವುದು ಗಮನಾರ್ಹ ಅಂಶವಾಗಿದೆ. ಈ ಕಂಪನಿಯನ್ನು ಮತ್ತೊಂದು ವಿತ್ತೀಯ ಸೇವೆಗಳ ಕಂಪನಿ ಎಡೆಲ್ವಿಸ್ ಫೈನಾನ್ಶಿಯಲ್ ಸರ್ವಿಸಸ್ ಖರೀದಿಸಿದೆ ಎಂಬ ಸುದ್ಧಿಯು ಈ ರೀತಿಯ ದಿಢೀರ್ ಏರಿಕೆಗೆ ಕಾರಣವಾಗಿದೆ.

ಪೇಟೆಯು ಉತ್ತಮ ವಾತಾವರಣದಲ್ಲಿದ್ದರೂ,  ಕಾರ್ಪೊರೇಟ್ ವಲಯದ ಚಟುವಟಿಕೆ ಬಿರುಸಾಗಿದ್ದರೂ ಷೇರುದಾರರಲ್ಲಿ 'ಲಾಯಲ್ಟಿ' ಬೆಳೆಸುವಂತಹ ಕಾರ್ಪೊರೇಟ್ ಫಲಗಳು ಮಾಯವಾಗಿವೆ.  ಲಾಭಾಂಶ ಪ್ರಕಟಣೆಯಂತೂ ಶೂನ್ಯವಾಗಿದೆ.  ಹೀಗಿರುವಾಗ ಹೂಡಿಕೆದಾರರು ತಮಗೆ 'ರಾಯಲ್ಟಿ' ಗಳಿಸಿಕೊಡುವ ಕಂಪನಿಗಳತ್ತ ಗಮನಹರಿಸುವುದು ಅನಿವಾರ್ಯವಾಗಿದೆ.  ಇದು ಪೇಟೆಯಲ್ಲಿ ಹೆಚ್ಚು ಏರಿಳಿತಕ್ಕೆ ಕಾರಣವೂ ಆಗಿದೆ.

ಉತ್ತೇಜಕ ಪ್ರಕಟಣೆ: ಗುರುವಾರ ಕೆನರಾ ಬ್ಯಾಂಕ್ ತನ್ನ ಅಂಗ ಸಂಸ್ಥೆ ಕ್ಯಾನ್ ಫಿನ್ ಹೋಮ್ಸ್ ನ ಶೇ 4ರಷ್ಟನ್ನು ಪೇಟೆಯಲ್ಲಿ ಮಾರಾಟ ಮಾಡುವುದಾಗಿ ತಿಳಿಸಿದ ಕಾರಣ ಷೇರಿನ ಬೆಲೆ ₹480ರ ಸಮೀಪದಿಂದ ₹512 ರವರೆಗೂ ಏರಿಕೆ ಕಂಡು ₹495 ರಲ್ಲಿ ವಾರಾಂತ್ಯ ಕಂಡಿತು. 2002 ರ ಮೇ  13 ರಿಂದ ಅಮಾನತ್ತಿನಲ್ಲಿರುವ ರಾಮ್ ಗೋಪಾಲ್ ಪಾಲಿಟೆಕ್ಸ್ ಲಿಮಿಟೆಡ್ ಕಂಪನಿಯು ತನ್ನ ಅಮಾನತ್ತನ್ನು ತೆರವುಗೊಳಿಸಿಕೊಂಡು 2018 ರ ಜನವರಿ 1 ರಂದು ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಮರು ಬಿಡುಗಡೆಯಾಗಲಿದೆ. ಸುಮಾರು 16 ವರ್ಷದ ನಂತರ ಪುನರ್ಜೀವ ಪಡೆದುಕೊಳ್ಳುತ್ತಿರುವುದು ವಿಶೇಷ.

(9886313380, ಸಂಜೆ 4.30 ರನಂತರ)

ವಾರದ ವಿಶೇಷ 

ವಿತ್ತೀಯ ಸಂಸ್ಥೆಗಳು ನಡೆಸುವ ಗಜಗಾತ್ರದ ವಹಿವಾಟಿನ ಕಾರಣ ಆ ಕಂಪನಿಗಳ ಷೇರಿನ ಬೆಲೆಗಳು ದಿಢೀರ್ ಏರಿಕೆ ಕಾಣುವುದು ಇಂದಿನ ವೈಶಿಷ್ಟತೆಯಾಗಿದೆ. ಸೋಮವಾರ ಸಿಂಗಪುರ ಸರ್ಕಾರ  8.95 ಲಕ್ಷ ಕ್ರಿಧಾನ್ ಇನ್ಫ್ರಾ ಲಿಮಿಟೆಡ್  ಪ್ರತಿ ಷೇರಿಗೆ ₹92 ರಂತೆ ಖರೀದಿಸಿದ ನಂತರ ಷೇರಿನ ಬೆಲೆ ಕೇವಲ ಎರಡು ಮೂರೂ ದಿನಗಳಲ್ಲಿ ₹134 ರವರೆಗೂ ಜಿಗಿತ ಕಂಡಿತು.  ಬುಧವಾರ ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ 2.43 ಲಕ್ಷ ಶೈಲಿ  ಎಂಜಿಜಿನಿಯರಿಂಗ್ ಪ್ಲಾಸ್ಟಿಕ್ಸ್ ಲಿ ಷೇರನ್ನು ಖರೀದಿಸಿದೆ. ನಂತರದ ದಿನಗಳಲ್ಲಿ ಷೇರಿನ ಬೆಲೆಯು ₹1,069 ರವರೆಗೂ ಏರಿಕೆ ಕಂಡು ₹1,005 ರ ಸಮೀಪ ಕೊನೆಗೊಂಡಿದೆ. ಈ ರೀತಿಯ ತ್ವರಿತ ಏರಿಕೆ ಸ್ಥಿರತೆ ಕಾಣುವ ಸಾಧ್ಯತೆಗಳು ಬಹಳ ವಿರಳ. ಸಾಮಾನ್ಯವಾಗಿ ಇಂತಹ ಗರಿಷ್ಠ ದರಗಳನ್ನು ಲಾಭದ ನಗದೀಕರಣಕ್ಕೆ ಉಪಯೋಗಿಸಿಕೊಳ್ಳುವುದು ಹಿತಕರ.

ಪೇಟೆಯ ಇಂತಹ ತೇಜಿ ವಾತಾವರಣದಲ್ಲಿ ಅನೇಕ ಅಗ್ರಮಾನ್ಯ ಕಂಪನಿಗಳು ಪುಟಿದೇಳುತ್ತವೆ. ಇದಕ್ಕೆ ವೈವಿಧ್ಯಮಯ ಕಾರಣಗಳು ಸೃಷ್ಟಿಯಾಗುತ್ತವೆ.  ಉದಾಹರಣೆಗೆ ಈ ವಾರ ರಿಲಯನ್ಸ್ ಕ್ಯಾಪಿಟಲ್ ಕಂಪನಿ ಕಳೆದ ಒಂದು ವಾರದಲ್ಲಿ ₹397 ರ ಸಮೀಪಕ್ಕೆ ಕುಸಿದ ನಂತರ ಪುಟಿದೆದ್ದ ರೀತಿಯು ಹೆಚ್ಚು ಆಕರ್ಷಕವಾಗಿ ಕಂಡಿದೆ.  ಅಲ್ಲಿಂದ ₹504 ರವರೆಗೂ ಶುಕ್ರವಾರ ತಲುಪಿ ₹448 ರ ಸಮೀಪ ಅಂತ್ಯಕಂಡಿದೆ.  ಯುಟಿಲಿಟಿ ವಾಹನಗಳ ತಯಾರಿಕಾ ಕಂಪನಿ ಫೋರ್ಸ್ ಮೋಟಾರ್ಸ್  ಷೇರಿನ ಬೆಲೆ ₹3,350ರೆಗೂ ಚೇತರಿಕೆ ಕಂಡು ₹3,589 ರ ಸಮೀಪ ಕೊನೆಗೊಂಡಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರಿ ವಲಯದ ಕಂಪನಿಗಳಾದ ಎಂಎಂಟಿಸಿ,  ಬಿಎಚ್‌ಇಎಲ್,  ಸಣ್ಣ ಕಂಪನಿ ಪೆನ್ನಾರ್ ಇಂಡಸ್ಟ್ರೀಸ್, ದಾಲ್ಮಿಯಾ ಭಾರತ್ ಶುಗರ್ ಅಂಡ್ ಇಂಡಸ್ಟ್ರೀಸ್‌ಗಳು ಉತ್ತಮ ವ್ಯಾಲ್ಯೂ ಪಿಕ್  ಹೂಡಿಕೆಯಾಗಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.