ADVERTISEMENT

ಯುವಕರ ಸಾಹಸ; ಉದ್ಯಮಕ್ಕೆ ಮುನ್ನುಡಿ, ನಿಡಗುಂದಿಯಲ್ಲೊಂದು ಸಣ್ಣ ಕೈಗಾರಿಕೆ

ಚಂದ್ರಶೇಖರ ಕೊಳೇಕರ
Published 17 ಏಪ್ರಿಲ್ 2019, 19:45 IST
Last Updated 17 ಏಪ್ರಿಲ್ 2019, 19:45 IST
ಪೇಪರ್‌ ಪ್ಲೇಟ್‌ ತಯಾರಿಕಾ ಘಟಕ
ಪೇಪರ್‌ ಪ್ಲೇಟ್‌ ತಯಾರಿಕಾ ಘಟಕ   

ನಿಡಗುಂದಿ: ನಾಲ್ವರು ಯುವಕರು. ವೃತ್ತಿಯಲ್ಲಿ ಎಂಜಿನಿಯರ್‌ಗಳು. ವೃತ್ತಿಯ ಜತೆಯಲ್ಲೇ ಏನಾದರೊಂದು ಹೊಸತು ಮಾಡುವ ಬಯಕೆ. ಬೇರೆ ಬೇರೆ ಭಾಗಗಳಲ್ಲಿ ಕೆಲಸದಲ್ಲಿದ್ದರೂ, ಒಟ್ಟಾಗಿ ರೂಪಿಸಿದ ಉದ್ಯಮವೇ ಪೇಪರ್‌ ಟೀ ಕಪ್‌ ಹಾಗೂ ಅಗರಬತ್ತಿ (ಊದಿನಕಡ್ಡಿ) ತಯಾರಿಕಾ ಘಟಕ.

ನಿಡಗುಂದಿ, ಆಲಮಟ್ಟಿಯ ಯುವಕರಾದ ವಿಜಯಕುಮಾರ ಗೋನಾಳ, ಗುರುರಾಜ ನಾಗೂರ, ಮಹೇಶ ಮೇಗಾಡಿ, ಬಸವರಾಜ ಮಠ ಅವರೇ ಈ ಉದ್ಯಮದ ರೂವಾರಿಗಳು.

₹ 60 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೆಡ್‌ವೊಂದರಲ್ಲಿ ಸಂಪೂರ್ಣ ಸ್ವಯಂಚಾಲಿತ ಯಂತ್ರಗಳೊಂದಿಗೆ ಆರಂಭಗೊಂಡ ಈ ಪುಟ್ಟ ಕಾರ್ಖಾನೆಯ ಹೆಸರೇ ಎಸ್.ಕ್ಯೂ.ಬಿ. ಗ್ರೂಪ್ಸ್‌. (ಸ್ಕ್ವೇರ್ ಕ್ವಾಲಿಟಿ ಬ್ಯಾಂಡ್). ನಾಲ್ವರಲ್ಲಿ ಮೂವರು ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದರೂ; ಮಹೇಶ ಮೇಗಾಡಿ ಇದನ್ನು ನಿರ್ವಹಿಸುತ್ತಿದ್ದಾರೆ. ಉಳಿದವರು ಇದಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ADVERTISEMENT

2017ರಲ್ಲಿ ಪಟ್ಟಣ ಹೊರ ವಲಯದ ಕಾಶೀನಕುಂಟಿ ರಸ್ತೆಯಲ್ಲಿ ಎರಡು ಎಕರೆ ಹೊಲವನ್ನು ಬಾಡಿಗೆ ಪಡೆದು, ಅಲ್ಲಿ ಶೆಡ್‌ಗಳನ್ನು ಹಾಕಿ ಈ ಕಾರ್ಖಾನೆ ಆರಂಭಿಸಿದ್ದಾರೆ ಯುವಕರು.

ಪೇಪರ್ ಟೀ ಕಪ್‌:

ಪೇಪರ್ ಟೀ ಕಪ್ ತಯಾರಿಸುವ ಯಂತ್ರವಿದ್ದು, ಏಳು ಹಂತದ ನಂತರ ಟೀ ಕಪ್‌ ಸಿದ್ಧಗೊಳ್ಳುತ್ತದೆ. ಗಂಟೆಗೆ 1600 ಕಪ್‌ ಉತ್ಪಾದನೆಯ ಸಾಮರ್ಥ್ಯವಿದೆ. ಇನ್ನೊಂದು ಯಂತ್ರವಿದ್ದು, ಅಲ್ಲಿ 5 ಇಂಚಿನ ಅಳತೆಯಿಂದ ಹಿಡಿದು 15 ಇಂಚುವರೆಗೆ ವಿವಿಧ ಅಳತೆಯ ಪೇಪರ್ ಪ್ಲೇಟ್ ತಯಾರಿಸಲಾಗುತ್ತದೆ. ಒಮ್ಮೆಲೆ 10 ಪೇಪರ್‌ ಪ್ಲೇಟ್‌ ತಯಾರಿಸುವ ಸಾಮರ್ಥ್ಯ ಈ ಯಂತ್ರಕ್ಕಿದೆ. ಸಿಹಿ, ಸಾರು ಹಾಕಲು ಬೇಕಾಗುವ ಕಪ್‌ (ಪೇಪರ್ ಬೌಲ್‌) ಕೂಡಾ ಇಲ್ಲಿ ತಯಾರಿಸಲಾಗುತ್ತದೆ. ಈ ಎಲ್ಲ ಯಂತ್ರಗಳು ಸಂಪೂರ್ಣ ಆಟೋಮೆಟಿಕ್‌ ಆಗಿವೆ.

ಬೇಡಿಕೆಗೆ ತಕ್ಕಂತೆ ತಯಾರಿಕೆ

ಅಂಗಡಿಗಳ ಬೇಡಿಕೆ, ಅಗತ್ಯಕ್ಕೆ ಅನುಗುಣವಾಗಿ ಇಲ್ಲಿ ಈ ಕಪ್ ಹಾಗೂ ಪೇಪರ್ ಪ್ಲೇಟ್ ತಯಾರಿಸಲಾಗುತ್ತದೆ. ಗುಣಮಟ್ಟದಲ್ಲಿ ರಾಜಿ ಇಲ್ಲ, ಸ್ವಲ್ಪ ಹರಿದ ವಸ್ತುಗಳನ್ನು ಪ್ರತ್ಯೇಕಿಸಿ ರದ್ದಿ ಹಾಕಲಾಗುತ್ತದೆ.

‘ಈ ಉದ್ಯಮದಲ್ಲಿ ಹೆಚ್ಚಿನ ಲಾಭ ಇಲ್ಲ, ಮಾರುಕಟ್ಟೆಗಾಗಿ ತಿರುಗಾಟ ಅಗತ್ಯ. ಅದಕ್ಕಾಗಿ ಅವಳಿ ಜಿಲ್ಲೆಯ ಬಹುತೇಕ ಕಿರಾಣಿ ಅಂಗಡಿಗಳು, ಮಾಲ್‌ಗಳನ್ನು, ಸಗಟು ಮಾರಾಟದಾರರನ್ನು ಸಂಪರ್ಕಿಸಿ, ನಮ್ಮ ಉತ್ಪನ್ನಗಳನ್ನು ತೋರಿಸಿ ಮನವರಿಕೆ ಮಾಡಲಾಗಿದೆ.

ಗುಣಮಟ್ಟದ ಕಾರಣ ಕ್ರಮೇಣ ಹೆಚ್ಚೆಚ್ಚು ಆರ್ಡರ್‌ಗಳು ಬರುತ್ತಿದ್ದು, ನಿಗದಿಪಡಿಸಿದ ಸಮಯದೊಳಗೆ ಎಲ್ಲ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕತೆಯಿಂದ ಕೂಡಿದ್ದು, ಹೆಚ್ಚಿನ ಲಾಭ ಇಲ್ಲ. ಆದರೂ ಹೊಸತನಕ್ಕಾಗಿ ತುಡಿಯುತ್ತಿದ್ದ ನಮ್ಮೆಲ್ಲ ಮಿತ್ರರಿಗೆ ತೃಪ್ತಿ ಇದೆ’ ಎನ್ನುತ್ತಾರೆ ಘಟಕದ ನಿರ್ವಹಣೆ ಹೊಣೆ ಹೊತ್ತಿರುವ ಮಹೇಶ ಮೇಗಾಡಿ. ಮೂವರು ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಊದಿನ ಕಡ್ಡಿ ತಯಾರಿಕೆ ಉದ್ಯಮ

ಇನ್ನೊಂದು ಶೆಡ್‌ನಲ್ಲಿ ಸ್ವಯಂ ಚಾಲಿತ ಊದಿನಕಡ್ಡಿ ತಯಾರಿಸುವ ಯಂತ್ರ ತಂದಿದ್ದು, ತಯಾರಿಕೆ ಆರಂಭಗೊಂಡಿದೆ. ‘ಸ್ವರ’ ಎನ್ನುವ ಬ್ರ್ಯಾಂಡ್‌ನಲ್ಲಿ ಮೂರು ಬೇರೆ ಬೇರೆ ಫ್ಲೇವರ್‌ನಲ್ಲಿ ಊದಿನಕಡ್ಡಿ ಉತ್ಪನ್ನವನ್ನು ಮೇ ಅಂತ್ಯಕ್ಕೆ ಬಿಡುಗಡೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಗುರುರಾಜ ನಾಗೂರ ತಿಳಿಸಿದರು.

ಸಾರಿಗೆ ಸಮಸ್ಯೆ:

‘ಸದ್ಯ ಉತ್ಪನ್ನಗಳನ್ನು ಕಳುಹಿಸುವ, ಕಚ್ಚಾ ವಸ್ತುಗಳನ್ನು ತರಿಸಿಕೊಳ್ಳಲು ಸಾರಿಗೆ ಸಮಸ್ಯೆ ಹೆಚ್ಚಿದೆ. ನಿಡಗುಂದಿ ಪಟ್ಟಣದಲ್ಲಿ ಯಾವುದೇ ಕಂಪನಿಯ ಕಾರ್ಗೋ ಸರ್ವಿಸ್‌ಗಳಿಲ್ಲ. ಇಂಡಿಯನ್ ಮಾರ್ಟ್ ಎಂಬ ಆನ್‌ಲೈನ್‌ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳು ನಮೂದಾಗಿವೆ.

ಆನ್‌ಲೈನ್‌ನಲ್ಲಿ ಬೇಡಿಕೆ ಬಂದಾಗ ಉತ್ಪನ್ನಗಳನ್ನು ಕಳುಹಿಸಲು ಸಾರಿಗೆ ಸಮಸ್ಯೆ ಉಂಟಾಯಿತು. ಬಾಗಲಕೋಟೆಗೆ ಹೋಗಿ ಕಳುಹಿಸುತ್ತಿದ್ದೆವು. ಆದರೆ ಹೆಚ್ಚಿನ ಲಾಭವಾಗದ ಕಾರಣ, ಸದ್ಯಕ್ಕೆ ತಾತ್ಕಾಲಿಕವಾಗಿ ಆನ್‌ಲೈನ್ ವಹಿವಾಟು ಸ್ಥಗಿತಗೊಳಿಸಿದ್ದೇವೆ’ ಎಂದು ವಿಜಯಕುಮಾರ ಗೋನಾಳ ತಿಳಿಸಿದರು.

ಸಂಪರ್ಕ ಸಂಖ್ಯೆ 9538108707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.