ADVERTISEMENT

ಎಫ್‌ಪಿಐ: ಎಫ್‌ಎಂಸಿಜಿ, ವಾಹನ ಷೇರುಗಳತ್ತ ಆಸಕ್ತಿ

ಆಗಸ್ಟ್‌ನಲ್ಲಿ ಈವರೆಗೆ ₹ 18,828 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 18:22 IST
Last Updated 14 ಆಗಸ್ಟ್ 2022, 18:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ಷೇರುಪೇಟೆಗಳಲ್ಲಿ ಈಚೆಗೆ ವಾಹನ, ಬಂಡವಾಳ ಸರಕುಗಳು, ಎಫ್‌ಎಂಸಿಜಿ ಮತ್ತು ದೂರಸಂಪರ್ಕ ವಲಯದ ಷೇರುಗಳ ಖರೀದಿಗೆ ಹೆಚ್ಚಿನ ಗಮನ ಹರಿಸಿದ್ದಾರೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದರು.

ಇನ್ನೊಂದೆಡೆ, ವಿದೇಶಿ ಹೂಡಿಕೆದಾರರು ಮಾಹಿತಿ ತಂತ್ರಜ್ಞಾನ (ಐ.ಟಿ.) ಕಂಪನಿಗಳ ಷೇರು ಮಾರಾಟ ಮುಂದುವರಿಸಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಾಲರ್ ಮೌಲ್ಯ ಇಳಿಕೆ ಆಗುತ್ತಿದೆ. ಜಗತ್ತಿನ ಅತಿದೊಡ್ಡ ಆರ್ಥಿಕತೆಗಳ ಪೈಕಿ ಭಾರತದ ಆರ್ಥಿಕತೆಯು ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಈ ಅಂಶಗಳು ಬಂಡವಾಳ ಒಳಹರಿವಿಗೆ ಪ್ರಮುಖ ಕಾರಣಗಳು’ ಎಂದು ಹೇಳಿದರು.

ADVERTISEMENT

‘ಜುಲೈನಲ್ಲಿ ನಿವ್ವಳ ಖರೀದಿ ನಡೆಸಿದ ಹೂಡಿಕೆದಾರರು ಆಗಸ್ಟ್‌ನಲ್ಲಿ ಈವರೆಗೆ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. ನ್ಯಾಷನಲ್‌ ಸೆಕ್ಯುರಿಟಿ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಮಾಹಿತಿಯ ಪ್ರಕಾರ, ಆಗಸ್ಟ್‌ 1ರಿಂದ 12ರವರೆಗಿನ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 18,828 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರಕ್ಕೆ ಕೊನೆಗೊಂಡ ವಾರದ ವಹಿವಾಟಿನಲ್ಲಿ ₹ 7,850 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಅದಕ್ಕೂ ಹಿಂದಿನ ವಾರ ₹6,992 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಇದರಿಂದಾಗಿ ಆಗಸ್ಟ್‌ 12ರವರೆಗಿನ ಅವಧಿಯಲ್ಲಿ ಒಟ್ಟು ಹೂಡಿಕೆಯು ₹ 14,842 ಕೋಟಿಗೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.