ನವದೆಹಲಿ / ಮುಂಬೈ: ಮೂರು ದಿನಗಳ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ₹9.70 ಲಕ್ಷ ಕೋಟಿಯಷ್ಟು ವೃದ್ಧಿಸಿದೆ.
ಸೂಚ್ಯಂಕಗಳ ಏರಿಕೆಯಿಂದಾಗಿ ಬಿಎಸ್‌ಇ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ (ಎಂ–ಕ್ಯಾಪ್) ₹457 ಲಕ್ಷ ಕೋಟಿಗೆ ಹೆಚ್ಚಳ ಆಗಿದೆ.
ಜಾಗತಿಕ ರಾಜಕೀಯ ಬಿಕ್ಕಟ್ಟಿನ ತೀವ್ರತೆ ತಗ್ಗುತ್ತಿದ್ದು, ಹೂಡಿಕೆದಾರರಲ್ಲಿ ಆಶಾವಾದ ಹೆಚ್ಚುತ್ತಿದೆ. ಇದು ಗುರುವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ. ಅಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಖರೀದಿಯ ಹೆಚ್ಚಳ ಸಹ ಸೂಚ್ಯಂಕಗಳ ಏರಿಕೆಗೆ ಕಾರಣವಾದವು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1 ಸಾವಿರ ಅಂಶ (ಶೇ 1.21) ಏರಿಕೆಯಾಗಿ, 83,755ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ವೇಳೆ 1,056 ಅಂಶದವರೆಗೆ ಜಿಗಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 304 ಅಂಶ ಹೆಚ್ಚಳವಾಗಿ, 25,549ಕ್ಕೆ ಕೊನೆಗೊಂಡಿದೆ.
ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್, ಎಟರ್ನಲ್, ಬಜಾಜ್ ಫಿನ್‌ಸರ್ವ್, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಕ್ಸಿಸ್ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಟ್ರೆಂಟ್, ಎಸ್‌ಬಿಐ, ಟೆಕ್ ಮಹೀಂದ್ರ, ಮಾರುತಿ ಸುಜುಕಿ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.18ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರೆಲ್ ಬೆಲೆ 67.80 ಡಾಲರ್ ಆಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರದ ವಹಿವಾಟಿನಲ್ಲಿ ₹2,427 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹2,372 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ರಿಲಯನ್ಸ್ ಎಂ–ಕ್ಯಾಪ್ ಹೆಚ್ಚಳ: ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮೌಲ್ಯ ಶೇ 2ರಷ್ಟು ಹೆಚ್ಚಳವಾಗಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ ₹37,837 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ಮತ್ತೆ ₹20 ಲಕ್ಷ ಕೋಟಿ ದಾಟಿದೆ. ಕಳೆದ ವರ್ಷದ ಫೆಬ್ರುವರಿ 13ರಂದು ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹20 ಲಕ್ಷ ಕೋಟಿ ದಾಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.