ADVERTISEMENT

ಎರಡನೇ ದಿನವೂ ನಕಾರಾತ್ಮಕ ವಹಿವಾಟು

ಪಿಟಿಐ
Published 15 ಸೆಪ್ಟೆಂಬರ್ 2022, 13:33 IST
Last Updated 15 ಸೆಪ್ಟೆಂಬರ್ 2022, 13:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಐ.ಟಿ. ಮತ್ತು ಔಷಧ ವಲಯದ ಷೇರುಗಳ ಮೌಲ್ಯ ಇಳಿಕೆಯಿಂದಾಗಿ ದೇಶದ ಷೇರುಪೇಟೆಗಳು ವಹಿವಾಟಿನ ಆರಂಭದಲ್ಲಿ ಕಂಡುಕೊಂಡ ಗಳಿಕೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದವು.

ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಿಂದಾಗಿ ಐ.ಟಿ. ಮತ್ತು ಔಷಧ ಷೇರುಗಳು ಕುಸಿತ ಕಂಡವು. ಇದು ಷೇರುಪೇಟೆಗಳ ವಹಿವಾಟು ಇಳಿಕೆ ಕಾಣುವಂತೆ ಮಾಡಿತು.

ವಾಹನ ಮತ್ತು ಬಂಡವಾಳ ಸರಕುಗಳ ಮೌಲ್ಯ ಹೆಚ್ಚಳದಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿತು. ದಿನದ ಗರಿಷ್ಠ ಮಟ್ಟವಾದ 60,676 ಅಂಶಗಳಿಗೆ ತಲುಪಿತ್ತು. ಆದರೆ, ನಂತರ ಇಳಿಮುಖ ಹಾದಿಗೆ ಹೊರಳಿದ್ದರಿಂದ 413 ಅಂಶಗಳ ಇಳಿಕೆ ಕಂಡು ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 126 ಅಂಶ ಇಳಿಕೆ ಕಂಡು 17,877 ಅಂಶಗಳಿಗೆ ತಲುಪಿತು.

ADVERTISEMENT

ಸೆನ್ಸೆಕ್ಸ್‌ನಲ್ಲಿ ಟೆಕ್‌ ಮಹೀಂದ್ರ ಷೇರು ಮೌಲ್ಯ ಶೇ 3.13ರಷ್ಟು ಗರಿಷ್ಠ ನಷ್ಟ ಕಂಡಿತು.

‘ವಾರದ ವಹಿವಾಟಿನ ಅವಧಿ ಮುಕ್ತಾಯವಾಗಲಿರುವುದರಿಂದ ಷೇರುಪೇಟೆಗಳ ವಹಿವಾಟು ಅಸ್ಥಿರವಾಗಿತ್ತು. ಎಲ್ಲಾ ವಲಯಗಳಲ್ಲಿಯೂ ನಡೆದ ಲಾಭಗಳಿಕೆಯ ವಹಿವಾಟಿನಿಂದಾಗಿ ಶೇಕಡ ಅರ್ಧಕ್ಕೂ ಹೆಚ್ಚಿನ ನಷ್ಟವನ್ನು ಕಂಡವು’ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.