ADVERTISEMENT

ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:36 IST
Last Updated 2 ಅಕ್ಟೋಬರ್ 2022, 22:36 IST
   

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆಸೂಚ್ಯಂಕಗಳು ಕುಸಿತ ಕಂಡಿವೆ. 57,426 ಅಂಶಗಳಲ್ಲಿವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿಶೇ 1.16ರಷ್ಟು ಇಳಿಕೆ ದಾಖಲಿಸಿದೆ. 17,094 ಅಂಶಗಳಲ್ಲಿವಹಿವಾಟು ಮುಗಿಸಿರುವ ನಿಫ್ಟಿ ಶೇ 1.34ರಷ್ಟು ತಗ್ಗಿದೆ. ಹಣದುಬ್ಬರ ಹೆಚ್ಚಳದ ಆತಂಕ, ಆರ್ಥಿಕ ಚುಟುವಟಿಕೆಗಳು ಕೋವಿಡ್ ಪೂರ್ವದ ಸ್ಥಿತಿ ತಲುಪಿಲ್ಲ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೀಡಿರುವ ವರದಿ, ರೂಪಾಯಿ ಮೌಲ್ಯ ಕುಸಿತ, ವಿದೇಶಿ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ.

ಆರ್‌ಬಿಐ ರೆಪೊ ದರ ಹೆಚ್ಚಿಸಿದ ದಿನ (ಶುಕ್ರವಾರ) ದೇಶದ ಷೇರುಪೇಟೆಗಳು ದೊಡ್ಡ ಜಿಗಿತ ಕಂಡವು. ಇದಕ್ಕೆ ಕಾರಣಗಳಿವೆ.

ರೆಪೊ ದರ ಹೆಚ್ಚಾಗಿ, ಸಾಲದ ಮೇಲಿನ ಬಡ್ಡಿ ದರ ಜಾಸ್ತಿಯಾದಾಗ ಬ್ಯಾಂಕ್‌ಗಳ ವರಮಾನ ಹೆಚ್ಚಾಗುತ್ತದೆ. ಬ್ಯಾಂಕ್‌ಗಳ ಲಾಭ ಜಾಸ್ತಿಯಾಗುತ್ತದೆ. ಹೀಗಾಗಿ, ಶುಕ್ರವಾರ ಬ್ಯಾಂಕಿಂಗ್ ವಲಯದ
ಸೂಚ್ಯಂಕಗಳು ಏರಿಕೆ ಕಂಡವು. ಎಫ್‌.ಡಿ. ದರ ಹೆಚ್ಚಾಗಬಹುದು, ಜನ ಬ್ಯಾಂಕ್‌ಗಳಲ್ಲಿ ಹೆಚ್ಚು ಹಣ ತೊಡಗಿಸಬಹುದು ಎಂಬ ನಿರೀಕ್ಷೆಯಿಂದಲೂ ಬ್ಯಾಂಕಿಂಗ್ ವಲಯದ ಷೇರುಗಳು ಜಿಗಿತ ಕಂಡವು. ಹಣಕಾಸು ನೀತಿಸಮಿತಿ ಸಭೆಯಲ್ಲಿ ಆರ್‌ಬಿಐ, ದೇಶದ ಅರ್ಥವ್ಯವಸ್ಥೆಯನ್ನು ಹೊರಗಿನ ಪ್ರಭಾವಗಳಿಂದ ರಕ್ಷಿಸಲು ಎಲ್ಲ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಈ ಭರವಸೆ ಕೂಡ ಮಾರುಕಟ್ಟೆಯ ಓಟಕ್ಕೆ ಒಂದು ಕಾರಣ. ಶುಕ್ರವಾರದವಹಿವಾಟಿನಲ್ಲಿ ರೂಪಾಯಿ ತುಸು ಬಲಗೊಂಡಿದ್ದು ಸೂಚ್ಯಂಕಗಳ ನೆರವಿಗೆ ಬಂತು.

ADVERTISEMENT

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಶೇ 4.3ರಷ್ಟು, ಎನರ್ಜಿ ಸೂಚ್ಯಂಕ ಶೇ 3.4ರಷ್ಟು ಹಾಗೂ ನಿಫ್ಟಿ ಆಟೊ ಮತ್ತು ರಿಯಲ್ ಎಸ್ಟೇಟ್ ಸೂಚ್ಯಂಕಗಳು ತಲಾ ಶೇ 3ರಷ್ಟು ಕುಸಿತ ಕಂಡಿವೆ. ನಿಫ್ಟಿ ಫಾರ್ಮಾ ಶೇ 3ರಷ್ಟು ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 1.5ರಷ್ಟು ಜಿಗಿದಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 15,862.48 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 15,988.29 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿ 50 ಸೂಚ್ಯಂಕದ 15ಕ್ಕೂ ಹೆಚ್ಚು ಕಂಪನಿಗಳು ಗಳಿಕೆ ದಾಖಲಿಸಿವೆ. ಪವರ್ ಗ್ರಿಡ್ ಶೇ 4.7ರಷ್ಟು, ಡಾ ರೆಡ್ಡೀಸ್ ಲ್ಯಾಬೊರೇಟರಿ ಶೇ 4.7ರಷ್ಟು, ಸಿಪ್ಲಾ ಶೇ 4.4ರಷ್ಟು, ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 4.1ರಷ್ಟು, ಭಾರ್ತಿ ಏರ್‌ಟೆಲ್ ಶೇ 3.7ರಷ್ಟು, ಇನ್ಫೊಸಿಸ್ ಶೇ 3.5ರಷ್ಟು ಗಳಿಸಿಕೊಂಡಿವೆ.

ಅದಾನಿ ಪೋರ್ಟ್ಸ್, ಹಿರೋ ಮೋಟೊ ಕಾರ್ಪ್, ಮಾರುತಿ ಸುಜುಕಿ ಕ್ರಮವಾಗಿ ಶೇ 10.1, ಶೇ 7.7 ಮತ್ತು ಶೇ 5.6ರಷ್ಟು ಕುಸಿದಿವೆ.

ಮುನ್ನೋಟ: ಅಕ್ಟೋಬಅರ್ 3ರಂದು ಉತ್ಪಾದನಾ ದತ್ತಾಂಶ ಲಭಿಸಲಿದೆ. ಅಕ್ಟೋಬರ್ 6ರಂದು ಗ್ಲೋಬಲ್ ಸರ್ವಿಸಸ್ ಪಿಎಂಐ ಅಂಕಿ-ಅಂಶಗಳು ಸಿಗಲಿವೆ. ವಾಹನ ಮತ್ತು ಸಿಮೆಂಟ್ ಕಂಪನಿಗಳ ಮಾರಾಟ ದತ್ತಾಂಶ ಸಿಗಲಿದ್ದು ಅದಕ್ಕೆ ನಿರ್ದಿಷ್ಟ ಕಂಪನಿಗಳ ಷೇರುಗಳು ಪ್ರತಿಕ್ರಿಯಿಸಲಿವೆ.

ಅಕ್ಟೋಬರ್ 4ಕ್ಕೆ ಎಲೆಕ್ಟ್ರಾನಿಕ್ಸ್ ಮಾರ್ಟ್ ಐಪಿಒ ನಡೆಯಲಿದೆ. ಇದಲ್ಲದೆ ದೇಶಿಯ ಬೆಳವಣಿಗೆಗಳು ಮತ್ತು ಜಾಗತಿಕ ವಿದ್ಯಮಾನಗಳಿಗೆ ಸೂಚ್ಯಂಕಗಳು ಪ್ರತಿಕ್ರಿಯಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.