ADVERTISEMENT

689 ಅಂಶ ಏರಿಕೆ ಕಂಡ ಸೆನ್ಸೆಕ್ಸ್

ಪಿಟಿಐ
Published 8 ಜನವರಿ 2021, 16:31 IST
Last Updated 8 ಜನವರಿ 2021, 16:31 IST

ಮುಂಬೈ: ಶುಕ್ರವಾರದ ವಹಿವಾಟಿನಲ್ಲಿ 689 ಅಂಶಗಳ ಏರಿಕೆ ಕಂಡ ಬಿಎಸ್‌ಇ ಸೆನ್ಸೆಕ್ಸ್, ದಿನ ಕೊನೆಯಲ್ಲಿ ಹೊಸ ದಾಖಲೆಯ ಮಟ್ಟವಾದ 48,782 ಅಂಶಗಳಿಗೆ ತಲುಪಿತು. ಇನ್ಫೊಸಿಸ್‌, ಟಿಸಿಎಸ್‌ ಮತ್ತು ರಿಲಯನ್ಸ್‌ ಷೇರುಗಳ ಖರೀದಿ ಜೋರಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವಾದ ನಿಫ್ಟಿ 209 ಅಂಶಗಳ ಏರಿಕೆ ಕಂಡು, 14,347 ಅಂಶಗಳಿಗೆ ದಿನದ ವಹಿವಾಟು ಕೊನೆಗೊಳಿಸಿತು. ಸೆನ್ಸೆಕ್ಸ್‌ನಲ್ಲಿ ಮಾರುತಿ ಷೇರುಗಳು ಅತಿಹೆಚ್ಚಿನ ಏರಿಕೆ ದಾಖಲಿಸಿದವು. ಟೆಕ್ ಮಹೀಂದ್ರ, ಅಲ್ಟ್ರಾಟೆಕ್ ಸಿಮೆಂಟ್, ಪವರ್‌ಗ್ರಿಡ್‌ ಮತ್ತು ಎನ್‌ಟಿಪಿಸಿ ಷೇರುಗಳೂ ಏರಿಕೆ ಕಂಡವು. ಇಂಡಸ್‌ ಇಂಡ್ ಬ್ಯಾಂಕ್, ಭಾರ್ತಿ ಏರ್‌ಟೆಲ್‌, ಎಸ್‌ಬಿಐ, ಐಟಿಸಿ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಕುಸಿದವು.

2020ರ ಡಿಸೆಂಬರ್‌ನಲ್ಲಿ ಅರ್ಥ ವ್ಯವಸ್ಥೆಯ ಪ್ರಮುಖ ಸೂಚಕಗಳು ಉತ್ತೇಜನ ನೀಡುವ ರೀತಿಯಲ್ಲಿ ಏರಿಕೆ ಕಂಡಿರುವುದು ಹಾಗೂ ದೇಶದಲ್ಲಿ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಶೀಘ್ರವೇ ಶುರುವಾಗಲಿದೆ ಎಂಬ ನಿರೀಕ್ಷೆಯು ಷೇರುಪೇಟೆಗಳ ಪಾಲಿಗೆ ಶುಭಸೂಚಕವಾಗಿ ಕಂಡುಬಂದವು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ADVERTISEMENT

ಹಾಂಗ್‌ಕಾಂಗ್‌, ಟೋಕಿಯೊ ಮತ್ತು ಸೋಲ್‌ನ ಷೇರು ಮಾರುಕಟ್ಟೆಗಳಲ್ಲಿ ಕೂಡ ಏರಿಕೆ ಕಂಡುಬಂದಿದೆ. ಶಾಂಘೈ ಷೇರುಪೇಟೆ ಇಳಿಕೆ ದಾಖಲಿಸಿದೆ.

ಟಿಸಿಎಸ್‌ ಷೇರುಗಳ ದಿನದ ವಹಿವಾಟಿನಲ್ಲಿ ಶೇ 2.97ರಷ್ಟು ಮೌಲ್ಯ ವರ್ಧಿಸಿಕೊಂಡವು. ಕಂಪನಿಯ ತ್ರೈಮಾಸಿಕ ಫಲಿತಾಂಶ ಉತ್ತೇಜನಕಾರಿ ಆಗಿರಲಿದೆ ಎಂಬ ನಿರೀಕ್ಷೆಯ ಕಾರಣದಿಂದಾಗಿ, ದಿನದ ವಹಿವಾಟಿನ ಆರಂಭದಿಂದಲೇ ಟಿಸಿಎಸ್‌ ಷೇರು ಮೌಲ್ಯ ಹೆಚ್ಚುತ್ತ ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.