ADVERTISEMENT

ಷೇರುಪೇಟೆ: ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

ಪಿಟಿಐ
Published 1 ಜನವರಿ 2019, 17:31 IST
Last Updated 1 ಜನವರಿ 2019, 17:31 IST
   

ಮುಂಬೈ: ದೇಶದ ಷೇರುಪೇಟೆಗಳು ಗಳಿಕೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿವೆ.

ದಿನದ ವಹಿವಾಟು ಆರಂಭವಾದ ಬಳಿಕ ಸೂಚ್ಯಂಕ ಇಳಿಮುಖವಾಗಿಯೇ ಮುಂದುವರಿಯಿತಾದರೂ ಮಧ್ಯಾಹ್ನದ ಬಳಿಕ ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳ ಉತ್ತಮ ಗಳಿಕೆಯು ಷೇರುಪೇಟೆಯನ್ನು ಚೇತರಿಕೆ ಹಾದಿಗೆ ಮರಳುವಂತೆ ಮಾಡಿತು.

ಬ್ಯಾಂಕಿಂಗ್‌ ವಲಯ ಚೇತರಿಕೆಯ ಹಾದಿಯಲ್ಲಿದೆ ಎಂದು ಆರ್‌ಬಿಐ ತನ್ನ ಅರ್ಧವಾರ್ಷಿಕ ವರದಿಯಲ್ಲಿ ಹೇಳಿದೆ. ಇದರಿಂದ ಬ್ಯಾಂಕಿಂಗ್‌ ಷೇರುಗಳ ಮೌಲ್ಯ ಹೆಚ್ಚಾಯಿತು. ಇದು ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 186 ಅಂಶ ಹೆಚ್ಚಾಗಿ 36,254 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 48 ಅಂಶ ಹೆಚ್ಚಾಗಿ 10,910 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ವಾಣಿಜ್ಯ ಸಮರ, ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆ, ಕಚ್ಚಾ ತೈಲ ದರದಲ್ಲಿನ ಏರಿಳಿತ ಹಾಗೂ ಸಾರ್ವತ್ರಿಕ ಚುನಾವಣೆಯ ಕಾರಣಗಳಿಂದಾಗಿ 2019ರಲ್ಲಿಯೂ ಚಂಚಲ ವಹಿವಾಟು ಮುಂದುವರಿಯಲಿದೆ ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.

ಹೊಸ ವರ್ಷದ ಪ್ರಯುಕ್ತ ಸೋಮವಾರ ಜಾಗತಿಕ ಷೇರುಪೇಟೆಗಳಿಗೆ ಬಿಡುವು ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.