ADVERTISEMENT

ನಲಪಾಡ್‌ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು

ನಾರಾಯಣ ಎ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ನಲಪಾಡ್‌ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು
ನಲಪಾಡ್‌ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು   

ಭಾರಿ ಚರ್ಚೆಗೆ ಗ್ರಾಸವಾಗಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್‌ ಬೆಂಗಳೂರಿನ ಫರ್ಜಿ ಕೆಫೆಯಲ್ಲಿ ಯುವಕನೋರ್ವನನ್ನು ಸಾಯಹೊಡೆದ (attempt to murder) ಪ್ರಕರಣದ ಸುತ್ತ ಹೀಗೆ ಕೆಲ ಅವಲೋಕನಗಳು:

ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ ಅಂತ ಹೇಳಿಕೊಳ್ಳುವ ನಮಗೆ ನಾಚಿಕೆಯಾಗಬೇಕಾದ, ಹೇಸಿಕೆ ಹುಟ್ಟಿಸಬೇಕಾದ ಪದವೊಂದು ಇದೆ. ಆ ಪದವೇ ‘ವಿಐಪಿ’. ಇದು ಪದವಲ್ಲ. ಇಂಗ್ಲಿಷ್‌ನ ‘ವೆರಿ ಇಂಪಾರ್ಟೆಂಟ್ ಪರ್ಸನ್’ ಎನ್ನುವ ವಿವರಣೆಯ ಭಾರತೀಯ ಸಂಕ್ಷಿಪ್ತ ರೂಪ. ಇದಕ್ಕೆ ಗಣ್ಯರು ಎನ್ನುವ ಕನ್ನಡ ಪದವನ್ನು ಸಮಾನಾರ್ಥ ಪದ ಎನ್ನುವ ಹಾಗೆ ಮಾಧ್ಯಮಗಳು ಬಳಸುತ್ತವೆ. ಆ ಬಳಕೆ ಸರಿಯಲ್ಲ. ಯಾಕೆಂದರೆ ‘ವಿಐಪಿ’ ಎನ್ನುವ ಪದ ಅಧಿಕಾರದ ಸೂಚಕ. ಗಣ್ಯ ಎನ್ನುವ ಪದವನ್ನು ಅಧಿಕಾರ ಸೂಚಕದಾಚೆಗೂ ಬಳಸಬಹುದು.

ಯಾವುದೋ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳೂ ಗಣ್ಯರಾಗಬಹುದು. ಆಧುನಿಕ ಪ್ರಜಾತಂತ್ರದಲ್ಲಿ ಈ ಪದವೂ ಆಕ್ಷೇಪಾರ್ಹ ಎನ್ನುವ ವಿಷಯ ಬೇರೆ. ಆದರೆ ‘ವಿಐಪಿ‘ ಎಂಬ ಪದ ಇಂತಹವರನ್ನೆಲ್ಲ ಒಳಗೊಳ್ಳುವುದಿಲ್ಲ. ಅದು ಅಪ್ಪಟ ರಾಜ್ಯಾಧಿಕಾರಕ್ಕೆ (state power) ಸಂಬಂಧಿಸಿದ್ದು. ಇನ್ನೂ ಸರಳವಾಗಿ ಹೇಳುವುದಾದರೆ ಅದು ‘ಸರ್ಕಾರಿ’ ಮಂದಿಗೆ ಸಂಬಂಧಿಸಿದ್ದು. ಪ್ರಪಂಚದ ಇತರ ಗಣತಂತ್ರ ರಾಷ್ಟ್ರಗಳಲ್ಲಿ ಬಳಕೆಯಿಲ್ಲದ ಪದ ಇದು.

ADVERTISEMENT

ಜನರು ನೀಡಿದ ಅಧಿಕಾರವನ್ನು ನ್ಯಾಸವಾಗಿ ಹೊಂದಿದ ಮಂದಿಯನ್ನು ‘ವಿಐಪಿ’ಗಳು ಎಂದು ಆರಾಧಿಸುವ ಅಪ್ಪಟ ಭಾರತೀಯ ಸಂಸ್ಕೃತಿ ಎಂದಿನವರೆಗೆ ಮುಂದುವರಿಯುತ್ತದೋ ಅಂದಿನವರೆಗೆ ‘ವಿಐಪಿ’ಗಳೆನ್ನುವ ಮಂದಿ, ಅವರ ಕುಟುಂಬದ ಮಂದಿ, ಅವರ ಸೋಂಕು ತಗಲಿರುವ ಮಂದಿಗಳೆಲ್ಲಾ ನಲಪಾಡ್‌ ವರ್ತಿಸಿದಂತೆಯೇ ವರ್ತಿಸುತ್ತಿರುತ್ತಾರೆ.

ಬೆಳೆದ ಮಕ್ಕಳು ಮಾಡುವ ಅಪರಾಧಗಳಿಗೆಲ್ಲಾ ಹೆತ್ತವರ ಹೆಸರನ್ನು ಬೆರೆಸಬಾರದು ಎನ್ನುವುದು ಒಂದರ್ಥದಲ್ಲಿ ಸತ್ಯವಾದರೂ ನಲಪಾಡ್‌ ಪ್ರಕರಣ ಅಧಿಕಾರ ದುರುಪಯೋಗದ ಇನ್ನೊಂದು ಉದಾಹರಣೆ. ಅಧಿಕಾರದ ದುರುಪಯೋಗ ಹೊಸದಲ್ಲ. ಅದರಲ್ಲಿ ವಿಶೇಷವೂ ಇಲ್ಲ. ಭಾರತದ ಮಟ್ಟಿಗೆ ಹೆಚ್ಚು ಹೆಚ್ಚು ಸ್ಪಷ್ಟವಾಗಿ ಕಾಣುವ ವೈಶಿಷ್ಟ್ಯ ಎಂದರೆ ಇಂತಹ ಘಟನೆಗಳು ನಡೆದಾಗ ಅದನ್ನು ಪ್ರಶ್ನಿಸುವ, ಅದಕ್ಕೆ ಪ್ರತಿಭಟಿಸುವಂತಹ ನೈತಿಕ ಅಧಿಕಾರ  ಯಾರೊಬ್ಬರಲ್ಲೂ ಉಳಿದಿಲ್ಲ ಎನ್ನುವುದು.

ಇಂತಹ ಘಟನೆಗಳ ಮೂಲದಲ್ಲಿರುವ ವಿಐಪಿ ಸಂಸ್ಕೃತಿಯಲ್ಲಿ ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಪಾಲುದಾರರು ಅಥವಾ ಪ್ರೋತ್ಸಾಹಕರು. ಎಲ್ಲಿಯತನಕ ಕೆಲವರು ವಿಐಪಿಗಳು ಎನ್ನುವ ಸರ್ಕಾರಿ ವರ್ಗೀಕರಣವನ್ನು ಈ ದೇಶದ ನಾಗರಿಕ ಸಮಾಜ ತೆಪ್ಪಗೆ ಒಪ್ಪಿಕೊಳ್ಳುತ್ತದೋ ಅಲ್ಲಿಯವರೆಗೆ ವಿಐಪಿಗಳು ಅನ್ನಿಸಿಕೊಳ್ಳುವವರು ವಿಐಪಿಗಳಲ್ಲದವರ ಮೇಲೆ ಬೇರೆ ಬೇರೆ ರೀತಿಯಲ್ಲಿ ದಬ್ಬಾಳಿಕೆ ನಡೆಸುವುದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ವಿಐಪಿ ಎನ್ನುವುದು ಸರ್ಕಾರ ಸೃಷ್ಟಿಸಿದ ಆಧುನಿಕ ಮೇಲ್ಜಾತಿ. ಅದಕ್ಕೇ ಅದು ಭಾರತದ ಮಣ್ಣಲ್ಲಿ ಅಷ್ಟೊಂದು ಚೆನ್ನಾಗಿ ಬೇರುಬಿಟ್ಟದ್ದು.

ಹೌದು. ಪ್ರಕರಣದ ಮೂಲದಲ್ಲಿರುವುದು ಕಾಂಗ್ರೆಸ್‌ ಪಕ್ಷದ ಚುನಾಯಿತ ಪ್ರತಿನಿಧಿಯೊಬ್ಬರ ಮಗ. ಆದುದರಿಂದ ಮೊದಲಿಗೆ ಇದರ ವಿರುದ್ಧ ಪ್ರತಿಭಟನೆಯ ಧ್ವನಿ ಎತ್ತಬೇಕಾಗಿದ್ದು ವಿರೋಧ ಪಕ್ಷದವರು. ಇಂತಹ ಪ್ರಸಂಗಗಳಲ್ಲಿ ವಿರೋಧ ಪಕ್ಷಗಳಲ್ಲಿರುವ ಹರುಕುಬಾಯಿಯವರು, ಮುರುಕುಬಾಯಿಯವರು, ಕೊಳಕುಬಾಯಿಯವರು... ಎಲ್ಲ ಒಟ್ಟಾಗಿ ಸೇರಿ ಪ್ರತಿಭಟಿಸಿದರೆ ಅದು ಅಪೇಕ್ಷಣೀಯ ಬೆಳವಣಿಗೆ. ಆದರೆ ನಲಪಾಡ್‌ ಪ್ರಕರಣದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಅಪ್ಪಟ ಅಸಂಗತ ಪ್ರಹಸನದಂತೆ ಕಾಣಿಸುತ್ತಿದೆ.

ಮೊದಲಿಗೆ ಪ್ರಧಾನ ವಿರೋಧ ಪಕ್ಷವಾದ ಬಿಜೆಪಿಯ ವಿಚಾರ. ಆ ಪಕ್ಷದ ಸಂಸದ ಅನಂತಕುಮಾರ ಹೆಗಡೆ, ನಲಪಾಡ್‌ ಮಾದರಿಯಲ್ಲೇ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ. ಆ ವೈದ್ಯರಿಗೆ ಎರಡು ಪೆಟ್ಟು ಕಡಿಮೆ ಬಿದ್ದಿದೆ, ನಲಪಾಡ್‌ ಪ್ರಕರಣದಲ್ಲಿ ಹಲ್ಲೆಗೊಳಗಾದವರ ಮೈಮೂಳೆ ಜಖಂ ಆಗಿದೆ ಎನ್ನುವುದಷ್ಟೇ ವ್ಯತ್ಯಾಸ. ಉಳಿದಂತೆ ನಲಪಾಡ್‌ ಮತ್ತು ಹೆಗಡೆ ಈರ್ವರ ಮೈಯಲ್ಲೂ ಆವಾಹಿಸಿದ ಸೈತಾನ ಒಬ್ಬನೇ. ಈ ಘಟನೆಗೆ ಇಡೀ ಬಿಜೆಪಿಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ಆದರೆ ಘಟನೆಯನ್ನು ಬಿಜೆಪಿ ಖಂಡಿಸಲಿಲ್ಲ ಮಾತ್ರವಲ್ಲ, ಹಲ್ಲೆ ಮಾಡಿದ ಸಂಸದರಿಗೆ ಕೇಂದ್ರದಲ್ಲಿ ಮಂತ್ರಿಸ್ಥಾನ ನೀಡಿ ಪುರಸ್ಕರಿಸಿತು. ಅವರೀಗ ಕರ್ನಾಟಕದಲ್ಲಿ ಬಿಜೆಪಿಯ ಪೋಸ್ಟರ್ ಬಾಯ್.

ಹಾಗಿರುವಾಗ ಬಿಜೆಪಿಯವರು ಯಾವ ಬಾಯಲ್ಲಿ ನಲಪಾಡ್‌ ಪ್ರಕರಣವನ್ನು ಖಂಡಿಸುತ್ತಾರೆ ಹೇಳಿ? ಇನ್ನೊಂದು ವಿರೋಧ ಪಕ್ಷ ಜನತಾದಳ (ಎಸ್‌). ಅದರ ಅಧ್ಯಕ್ಷರ ಮಗ ದಶಕದ ಹಿಂದೆ ನಲಪಾಡ್‌ ಮಾದರಿಯಲ್ಲೇ ಬಡಪಾಯಿ ಹೋಟೆಲ್ ಮಕ್ಕಳಿಗೆ ಹೊಡೆದ ಪ್ರಖ್ಯಾತ. ಆ ಪ್ರಕರಣದಲ್ಲಿ ಕಾನೂನು ಕ್ರಮದ ಮಾತು ಹಾಗಿರಲಿ, ಆಗ ಅಧಿಕಾರದಲ್ಲಿದ್ದ ಅವರ ಕುಟುಂಬಸ್ಥರ ಬಾಯಿಂದ ಸರಿಯಾದ ಒಂದು ವಿಷಾದದ ಮಾತು ಕೂಡಾ ಬಂದಿರಲಿಲ್ಲ. ಆದುದರಿಂದ ನಲಪಾಡ್‌ ಪ್ರಕರಣವನ್ನು ಜನತಾದಳದವರು ಯಾವ ಮುಖ ಹೊತ್ತು ಖಂಡಿಸಬೇಕು ಹೇಳಿ.

ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳಗಳ ವಿಷಯ ಹಾಗಿರಲಿ. ಹೇಳಿ ಕೇಳಿ ಅವು ಫ್ಯೂಡಲ್ ಪಕ್ಷಗಳು. ನಲಪಾಡ್‌ ಪ್ರಕರಣದ ವಿರುದ್ಧ ಮೊದಲಿಗೆ ಧ್ವನಿ ಎತ್ತಿದ್ದು ಆಮ್ ಆದ್ಮಿ ಪಕ್ಷದವರು. ಆದರೆ ದುರಂತ ನೋಡಿ. ಬೆಂಗಳೂರಿನಲ್ಲವರು ಪ್ರತಿಭಟಿಸುತ್ತಿದ್ದರೆ ಅತ್ತ ದೆಹಲಿಯಲ್ಲಿ ಅವರ ಪಕ್ಷದ ಶಾಸಕರು ರಾಜ್ಯದ ಮುಖ್ಯಕಾರ್ಯದರ್ಶಿಗೇ ಥಳಿಸಿಬಿಟ್ಟರು! ಅದೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಮ್ಮುಖದಲ್ಲೇ? ಎಂಬಲ್ಲಿಗೆ ಈ ಪ್ರಕರಣವನ್ನು ರಾಜಕೀಯವಾಗಿ ಪ್ರಶ್ನಿಸುವ ನೈತಿಕತೆ ಎನ್ನುವ ಲವಲೇಶ ಸಾಧ್ಯತೆಯೂ ಮುಗಿದುಹೋಯಿತು.

ಇನ್ಯಾವುದೇ ವಿಷಯದಲ್ಲಿ ಬಿಜೆಪಿ, ಕಾಂಗ್ರೆಸ್, ಜನತಾದಳ, ಆಮ್ ಆದ್ಮಿ ಪಕ್ಷ ಇತ್ಯಾದಿಗಳ ನಡುವೆ ವ್ಯತ್ಯಾಸಗಳೇನಾದರೂ ಇದ್ದರೂ ಇದ್ದೀತು. ಆದರೆ ಅಧಿಕಾರದ ಮದ ಇದೆಯಲ್ಲಾ ಅದು ಎಲ್ಲರನ್ನೂ ಏಕಪ್ರಕಾರ ಬಾಧಿಸುತ್ತದೆ. ಪ್ರಜಾತಂತ್ರವು ಅಧಿಕಾರದ ನಿಯಂತ್ರಣ ಬಯಸುತ್ತದೆ. ಭಾರತೀಯ ಮನಸ್ಥಿತಿ ಅಧಿಕಾರವನ್ನು ಆರಾಧಿಸುತ್ತದೆ. ಈ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಇರುವವರೆಗೆ ಏನೂ ಬದಲಾಗುವುದಿಲ್ಲ. ನಿನ್ನೆ ಹೆಗಡೆ, ಇಂದು ನಲಪಾಡ್‌, ನಾಳೆ ಇನ್ಯಾರೋ...

ಪ್ರಕರಣದ ನಂತರ ಬೆಂಗಳೂರಿನ ಡಿಸಿಪಿಯೊಬ್ಬರು ನಡೆಸಿದ ಪತ್ರಿಕಾಗೋಷ್ಠಿಯೊಂದನ್ನು ಸೂಕ್ಷ್ಮವಾಗಿ ಗಮನಿಸಬೇಕು (ಯೂ ಟ್ಯೂಬ್‌ನಲ್ಲಿ ಲಭ್ಯವಿದೆ). ಅಲ್ಲಿದ್ದ ವರದಿಗಾರರು, ‘ಘಟನೆಯಲ್ಲಿ ಭಾಗಿಯಾದವರ ಹಿನ್ನೆಲೆ ಸ್ವಲ್ಪ ತಿಳಿಸಿ’ ಎಂದು ಕೇಳುತ್ತಾರೆ. ಡಿಸಿಪಿಯು ಪ್ರತಿಯೊಬ್ಬರ ಹೆಸರನ್ನೂ ಹೇಳಿ ಅವರ ಹಿನ್ನೆಲೆಯನ್ನು ಅಲ್ಪಸ್ವಲ್ಪ ವಿವರಿಸುತ್ತಾರೆ. ಹಾಗೆ ವಿವರಿಸುವಾಗ ನಲಪಾಡ್‌ ಹೆಸರನ್ನು ಗೌರವದಿಂದ ಬಹುವಚನ ಬಳಸಿ ಹೇಳುತ್ತಾರೆ. ಉಳಿದವರ ವಿವರ ನೀಡುವಾಗ ಯಥಾಪ್ರಕಾರ ಏಕವಚನದ ಪ್ರಯೋಗವಾಗುತ್ತದೆ. ಇಲ್ಲಿ ಎಲ್ಲರೂ ಆಪಾದಿತರು.

ಅವರ ಮೇಲಿನ ಆಪಾದನೆಗಳು ಇನ್ನೂ ಸಾಬೀತಾಗದ ಕಾರಣ ಉದಾರ ದೃಷ್ಟಿಯಿಂದ ಎಲ್ಲರ ವಿಚಾರದಲ್ಲೂ ಗೌರವಯುತವಾಗಿಯೇ ಮಾತನಾಡಿದರೆ ಅದೊಂದು ರೀತಿ. ಇಲ್ಲವಾದರೆ ಎಲ್ಲರೂ ಒಂದೇ ಪ್ರಕರಣದಲ್ಲಿ ಸಿಲುಕಿದವರು. ನಲಪಾಡ್‌ ಮುಖ್ಯ ಆಪಾದಿತ. ಹಾಗಿರುವಾಗ ನಲಪಾಡ್‌ ವಿಚಾರದಲ್ಲಿ ಮಾತ್ರ ಎಲ್ಲಿಂದ ಬಂತು ಅಷ್ಟೊಂದು ಗೌರವ? ಎಲ್ಲಿಂದ ಬಂತು ಎಂದರೆ ವಿಐಪಿಗಳನ್ನು ಆರಾಧಿಸುವ ಭಾರತೀಯ ಡೀಫಾಲ್ಟ್ ಮನಸ್ಥಿತಿಯಿಂದ. ಈ ವ್ಯಕ್ತಿ ಭಾರತೀಯ ಪೊಲೀಸ್ ಸೇವೆಗೆ ನೇರವಾಗಿ ಆಯ್ಕೆಯಾದವರು. ಇವರ ಮನಸ್ಥಿತಿಯೇ ಹೀಗಾದರೆ ಮತ್ತೆ ಇನ್‌ಸ್ಪೆಕ್ಟರ್, ಸಬ್-ಇನ್‌ಸ್ಪೆಕ್ಟರ್ ಮಟ್ಟದ ಪೊಲೀಸ್ ಮಂದಿ ವಿಐಪಿಗಳ ಪಕ್ಷಪಾತಿಯಾಗಿದ್ದಾರೆ ಎನ್ನುವುದರಲ್ಲಿ ಏನಿದೆ ವಿಶೇಷ?

ಮಾಧ್ಯಮದವರ ವಿಚಾರಕ್ಕೆ ಬರೋಣ. ಈ ಹಿಂದಿನ ಈ ರೀತಿಯ ಹಲ್ಲೆ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಗೀರುವ, ಚೀರುವ ಮಾಧ್ಯಮಗಳು ಒಂದು ಕ್ಷಣ ತಮ್ಮ ಎದೆ ಮುಟ್ಟಿ ನೋಡಿಕೊಳ್ಳಬೇಕು. ಹಿಂದೆ ನಡೆದ ಪ್ರಕರಣಗಳನ್ನು ಸರ್ಕಾರ, ಪೊಲೀಸ್ ವ್ಯವಸ್ಥೆ ಕಡೆಗಣಿಸಿವೆ ಸರಿ. ಆದರೆ ಮಾಧ್ಯಮಗಳೇನು ಮಾಡಿವೆ? ಈ ಹಿಂದಿನ ಅದೆಷ್ಟು ಇಂತಹ ಪ್ರಕರಣಗಳನ್ನು ಮಾಧ್ಯಮಗಳು ಬೆನ್ನುಹತ್ತಿವೆ ನೋಡೋಣ.

ಈಗ್ಗೆ ತಿಂಗಳುಗಳ ಹಿಂದೆ ಒಬ್ಬ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ) ಸುಖಾಸುಮ್ಮನೆ ಒಬ್ಬ ಬಡಪಾಯಿ ಹೋಟೆಲ್ ಮಾಲೀಕರಿಗೆ ಲಾಠಿಯಲ್ಲಿ ಮನಸೋ ಇಚ್ಛೆ ಥಳಿಸುತ್ತಾನೆ. ಅದಕ್ಕೆ ಸಿ.ಸಿ. ಟಿ.ವಿ.ಯ ಸಾಕ್ಷ್ಯ ಬೇರೆ ಇತ್ತು. ಈ ‘ಖಾಕಿ ತೊಟ್ಟ ನಲಪಾಡ್‌ ಪ್ರಕರಣ’ವನ್ನು ಯಾವ ಮಾಧ್ಯಮದವರು ತಾರ್ಕಿಕ ಅಂತ್ಯದವರೆಗೆ ಬೆಂಬತ್ತಿದ್ದಾರೆ ಹೇಳಿ? ಅದು ಅಧಿಕಾರದ ದುರುಪಯೋಗ ಅಲ್ಲವೇನು? ಯಾವುದು ದೊಡ್ಡ ಸುದ್ದಿ? ರೌಡಿ ರೌಡಿಯಂತೆ ವರ್ತಿಸುವುದು ದೊಡ್ಡ ಸುದ್ದಿಯೋ? ಅಥವಾ ಪೊಲೀಸರು ರೌಡಿಗಳಂತೆ ವರ್ತಿಸುವುದು ದೊಡ್ಡ ಸುದ್ದಿಯೋ?

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಳ್ಳುವುದಕ್ಕೆ ಕೆಲವೇ ದಿನಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬನ ಮನೆಮಂದಿಯನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್‌ನಲ್ಲಿ ತಡೆದದ್ದಕ್ಕಾಗಿ ಬಡಪಾಯಿ ಖಾಸಗಿ ಸೆಕ್ಯುರಿಟಿ ಗಾರ್ಡ್ ಒಬ್ಬರ ಮೇಲೆ ಲಾಠಿ ಹಿಡಿದ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸರಣಿಯಲ್ಲಿ ನಿಂತು ಬಡಿದೂ ಬಡಿದೂ ಸ್ವಾಮಿ ಸೇವೆ ಮಾಡಿದರು. ಈ ‘ಖಾಕಿ ನಲಪಾಡ್‌ ಪ್ರಕರಣ’ ಮಾಧ್ಯಮದವರ ಸ್ಮೃತಿಪಟಲದಲ್ಲೇ ಉಳಿದಿರಲಾರದು.

ಐಎಎಸ್‌ ಅಧಿಕಾರಿಯೋರ್ವನ ಪತ್ನಿ, ಅದೇ ಸ್ಟೇಡಿಯಂನಲ್ಲಿ ತನ್ನ ಪಾಡಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಇನ್‌ಸ್ಪೆಕ್ಟರ್‌ ಒಬ್ಬರ ಮೇಲೆ ಹಲ್ಲೆ ಮಾಡಿದರಲ್ಲವೇ? ಏನಾಯಿತು ಪ್ರಕರಣ...? ಅನಂತಕುಮಾರ ಹೆಗಡೆ ಕೇಂದ್ರ ಮಂತ್ರಿಯಾಗಿ ನೇಮಕಗೊಂಡಾಗ, ಆ ವ್ಯಕ್ತಿ ಕೆಲ ಸಮಯದ ಹಿಂದೆ ವೈದ್ಯರ ಮೇಲೆ ಪ್ರದರ್ಶಿಸಿದ್ದ ನಲಪಾಡ್‌ಗಿರಿಯನ್ನು ಎಷ್ಟು ಪತ್ರಿಕೆಗಳು ನೆನಪಿಸಿಕೊಂಡು ಬರೆದಿದ್ದಾವೆ? ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳ ಹಿನ್ನೆಲೆ ಮುನ್ನೆಲೆ ನೋಡಿಕೊಂಡು ಮಾಧ್ಯಮಗಳ ನೈತಿಕ ನಿಲುವು ಪ್ರಕಟವಾಗುತ್ತದೆ. ನಲಪಾಡ್‌ ಇರುವುದು ಜೈಲಿನ ವಿಐಪಿ ಸೆಲ್‌ನಲ್ಲಿ ಅಂತ ಪತ್ರಿಕೆಗಳು ವರದಿ ಮಾಡುತ್ತವೆ. ಜೈಲಿನಲ್ಲಿ ಯಾರನ್ನಾದರೂ ವಿಶೇಷ ಭದ್ರತೆ ಇರುವ ಸೆಲ್‌ನಲ್ಲಿ ಇರಿಸಿದರೆ ಅದು ವಿಷಯ ಬೇರೆ.

ರಾಜಕೀಯ ಕೈದಿಗಳಿಗೆ (ಅಪರಾಧ ಮಾಡಿದ ರಾಜಕಾರಣಿಗಳಿಗಲ್ಲ) ಒಂದು ಪ್ರತ್ಯೇಕ ಸೆಲ್ ಅಂತ ಇದ್ದರೆ ಅದು ಬೇರೆ ವಿಚಾರ. ಆದರೆ ಜೈಲಿನಲ್ಲೊಂದು ವಿಐಪಿ ಸೆಲ್ ಎನ್ನುವುದು ಇದೆ ಎನ್ನುವುದೇ ಹುಚ್ಚುತನ. ಪತ್ರಿಕೆಗಳು ಪ್ರಶ್ನಿಸಬೇಕಾದದ್ದು ನಲಪಾಡ್‌ ಎಂಬ ಆಪಾದಿತ ವ್ಯಕ್ತಿ ಯಾಕೆ ಅಲ್ಲಿರುವುದು ಅಂತ ಅಲ್ಲ, ಪ್ರಶ್ನಿಸಬೇಕಾದದ್ದು ಜೈಲಿನಲ್ಲಿ ಒಂದು ‘ವಿಐಪಿ ಸೆಲ್’ ಯಾಕಿರಬೇಕು ಅಂತ.

ನಮ್ಮ ಮಧ್ಯೆ ನೂರಾರು ನಲಪಾಡ್‌ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಯಾವ ಪ್ರಕರಣದಲ್ಲೂ ಏನೂ ಆಗುವುದಿಲ್ಲ. ಯಾಕೆಂದರೆ ಈ ವಿಐಪಿಗಳಿಗೆಲ್ಲಾ ಹೀಗೆ ಮಾಡುವ ದೈವದತ್ತ ಹಕ್ಕು ಇದೆ ಎಂದು ಭಾರತೀಯ ಸಮಾಜ ತನ್ನ ಹೃದಯದಾಳದಲ್ಲಿ ಒಪ್ಪಿಕೊಂಡುಬಿಟ್ಟಿದೆ. ಇಲ್ಲದೆ ಇದ್ದರೆ ಇಂತಹ ಪ್ರಕರಣಗಳು ಜನಮನದಲ್ಲಿ ಹುಟ್ಟುಹಾಕುವ ಹತಾಶೆ-ಕ್ರೋಧ ದೊಡ್ಡದಾಗಿ ಬೆಳೆದು ಅಧಿಕಾರಸ್ಥರು ತತ್ತರಿಸುವಂತೆ ಮಾಡುತ್ತಿತ್ತು.

ಒಂದು ಸಮಾಜಕ್ಕೆ ಯಾವ ಕಾರಣಕ್ಕೆ ಕೋಪ ಬರುತ್ತದೆ, ಯಾವ ಕಾರಣಕ್ಕೆ ನಾಚಿಕೆಯಾಗುತ್ತದೆ ಎನ್ನುವುದು ಆ ಸಮಾಜದ ಪ್ರಬುದ್ಧತೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ಜನ ’ವಿಐಪಿ‘ ಅನ್ನುವ ಪದ ಕಂಡಲ್ಲಿ ಅದಕ್ಕೆ ಮಸಿ ಬಳಿಯುವ, ಕ್ಯಾಕರಿಸಿ ಉಗಿಯುವ ಸಾತ್ವಿಕ ಕೋಪವನ್ನು ಎಲ್ಲಿಯವರೆಗೆ ಪ್ರದರ್ಶಿಸುವುದಿಲ್ಲವೋ ಅಲ್ಲಿಯವರೆಗೂ ರಾಜಕೀಯದವರು, ಪೊಲೀಸರು, ಮತ್ತಿತರ ಸರ್ಕಾರಿ ‘ವಿಐಪಿ’ಗಳು ನಲಪಾಡ್‌ಗಳಾಗುವುದನ್ನು, ಹೆಗಡೆಗಳಾಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲಾಗದು. ಅಧಿಕಾರದಲ್ಲಿರುವ ಕೆಲವರಿಗೆ ವಿಶೇಷ ಭದ್ರತೆ ಬೇಕಾದರೆ ನೀಡಬಹುದು. ಹಾಗಂತ ಪ್ರಜಾತಂತ್ರದಲ್ಲಿ ಯಾವನೂ ವಿಐಪಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.