ADVERTISEMENT

ಗುಡಿ ಕಟ್ಟಿಸ್ತಾರಂತೆ ರಾಮ ರಾಮ!

ಆರೋಗ್ಯ ವ್ಯವಸ್ಥೆಯ ಅನಾರೋಗ್ಯ ಸರಿಪಡಿಸಲು, ಸಚಿವರಿಗೆ ಪಾಸಿಟಿವ್‌ ಎನರ್ಜಿ ಕರುಣಿಸಲಿ

ರವೀಂದ್ರ ಭಟ್ಟ
Published 24 ಅಕ್ಟೋಬರ್ 2019, 19:46 IST
Last Updated 24 ಅಕ್ಟೋಬರ್ 2019, 19:46 IST
   

‘ಗುಡಿ ಚರ್ಚ್ ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ, ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’– ಇದು ರಾಷ್ಟ್ರಕವಿ ಕುವೆಂಪು ಅವರ ಕರೆ. ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಂತೆ ಬದುಕಿದ್ದ ಕುವೆಂಪು ಅವರು ವೈಚಾರಿಕತೆಗೆ ಮಹತ್ವ ನೀಡುತ್ತಿದ್ದರು. ಆದರೆ ನಮ್ಮನ್ನು ಆಳುವ ರಾಜಕಾರಣಿಗಳಿಗೆ ವೈಚಾರಿಕತೆಗಿಂತ ಮೌಢ್ಯದ ಮೇಲೇ ಹೆಚ್ಚಿನ ಆಸಕ್ತಿ. ಇತ್ತೀಚೆಗೆ ನಮ್ಮ ಆರೋಗ್ಯ ಸಚಿವ ಶ್ರೀರಾಮುಲು ಅವರು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಡಿ, ಮಸೀದಿ, ಚರ್ಚ್ ನಿರ್ಮಾಣ ಮಾಡುವ ಆಲೋಚನೆಯನ್ನು ಹೊರಹಾಕಿದ್ದಾರೆ. ಆ ಮಟ್ಟಿಗೆ ಸಚಿವರು ಜಾತ್ಯತೀತ ಮತ್ತು ಧರ್ಮಾತೀತ. ಬರೀ ಗುಡಿ ಕಟ್ಟಿಸುವುದಾಗಿ ಹೇಳಿಲ್ಲ. ಮಸೀದಿ, ಚರ್ಚ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಪ್ರಾರ್ಥನಾ ಮಂದಿರ ಇರುವುದರಿಂದ ಪಾಸಿಟಿವ್ ಎನರ್ಜಿ ಪ್ರಸಾರವಾಗಿ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಸಚಿವರ ಪಾಸಿಟಿವ್ ಥಿಂಕಿಂಗ್‌ಗೆ ಯಾರಾದರೂ ಸೈ ಎನ್ನಲೇಬೇಕು.

ಸಚಿವರ ಈ ಪಾಸಿಟಿವ್ ಎನರ್ಜಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವುದರ ಪರವಾಗಿರಬೇಕು, ಎಲ್ಲ ಆಸ್ಪತ್ರೆಗಳಲ್ಲಿಯೂ ವೈದ್ಯರು ಕಡ್ಡಾಯವಾಗಿ ಇರಬೇಕು, ಔಷಧ, ಅಗತ್ಯ ಸೌಲಭ್ಯಗಳು ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆ ಇರಬೇಕು. ವೈದ್ಯಕೀಯ ಸೌಲಭ್ಯ ನಮ್ಮ ರಾಜ್ಯದ ಎಲ್ಲರಿಗೂ ಸಿಗುವಂತಾಗಬೇಕು. ಹೀಗಾದರೆ ಮಾತ್ರ ಸಚಿವರು ನಂಬಿದ ಶ್ರೀರಾಮನೂ ಕೂಡ ಪಾಸಿಟಿವ್ ಎನರ್ಜಿಗೆ ಜೈ ಎನ್ನುತ್ತಾನೆ.

ರಾಜ್ಯದ ತಾಲ್ಲೂಕು, ಜಿಲ್ಲೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2,600 ತಜ್ಞ ವೈದ್ಯರು ಇರಬೇಕು. ಆದರೆ ಅದರ ಅರ್ಧದಷ್ಟೂ ತಜ್ಞ ವೈದ್ಯರು ಇಲ್ಲ. 200ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯರ ಕೊರತೆ ಇದೆ. ಶಸ್ತ್ರಚಿಕಿತ್ಸಕರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಕೊರತೆ ಕಾಡುತ್ತಿದೆ. ಔಷಧದ ಕೊರತೆಯಂತೂ ವಿಪರೀತವಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಸಿ’ ದರ್ಜೆ ಹುದ್ದೆಗಳು 10 ಸಾವಿರಕ್ಕೂ ಹೆಚ್ಚು ಖಾಲಿ ಇವೆ. 5 ಸಾವಿರಕ್ಕೂ ಹೆಚ್ಚು ‘ಡಿ’ ದರ್ಜೆ ಸಿಬ್ಬಂದಿಯ ಕೊರತೆ ಇದೆ. ವೈದ್ಯ ಉಪಕರಣಗಳ ಕೊರತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ರೋಗಿಗಳು, ದೇವರ ಪಾಸಿಟಿವ್ ಎನರ್ಜಿಯ ಮೇಲೆ ನಂಬಿಕೆ ಇಟ್ಟೇ ಹೋಗುತ್ತಿದ್ದಾರೆ. ಯಾಕೆಂದರೆ ಅವರಿಗೆ ಬೇರೆ ಗತಿ ಇಲ್ಲ. ಅಂತಹದ್ದರಲ್ಲಿ ನಮ್ಮ ಆರೋಗ್ಯ ಸಚಿವರಿಗೆ ಪ್ರಾರ್ಥನಾ ಮಂದಿರದ ಆಲೋಚನೆ ಹೊಳೆದದ್ದು ಯಾವ ದೇವರ ಕೃಪೆ ಎಂದು ಗೊತ್ತಾಗುವುದಿಲ್ಲ.

ADVERTISEMENT

2019ರ ಜಾಗತಿಕ ಸಮೀಕ್ಷಾ ವರದಿ ಪ್ರಕಾರ, ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಜಾಗತಿಕ ಸೂಚ್ಯಂಕದಲ್ಲಿ ಭಾರತ ಈಗ 145ನೇ ಸ್ಥಾನದಲ್ಲಿದೆ. ನಮ್ಮ ಪಕ್ಕದ ಭೂತಾನ್ 134ನೇ ಸ್ಥಾನದಲ್ಲಿದೆ. ಶ್ರೀಲಂಕಾ 71ನೇ ಸ್ಥಾನದಲ್ಲಿದೆ. ಚೀನಾ 48ನೇ ಸ್ಥಾನದಲ್ಲಿದೆ. ಈಗಲೂ ಭಾರತದಲ್ಲಿ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡುವ ಅಸಂಖ್ಯಾತ ತಾಯಂದಿರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಆಧುನಿಕ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ. ಆಸ್ಪತ್ರೆ ಇದ್ದರೆ ವೈದ್ಯರಿಲ್ಲ, ವೈದ್ಯರಿದ್ದರೆ ದಾದಿಯರಿಲ್ಲ, ಔಷಧ ಇಲ್ಲ. ಕರ್ನಾಟಕದ ಬಹಳಷ್ಟು ಹಳ್ಳಿಗಳಲ್ಲಿ ಈಗಲೂ ರೋಗಿಗಳನ್ನು ಕಂಬಳಿ ಜೋಲಿಯಲ್ಲಿ ಹೊತ್ತುಕೊಂಡು ಬಂದು ನಗರದ ಆಸ್ಪತ್ರೆಗಳಿಗೆ ದಾಖಲಿಸುವ ಹೀನಾಯ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಅತಿಹೆಚ್ಚು ವೈದ್ಯಕೀಯ ಕಾಲೇಜುಗಳು ಇವೆ. ನಗರ ಪ್ರದೇಶಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಗಳೂ ಇವೆ. ಆದರೆ ಇವೆಲ್ಲವೂ ಶ್ರೀಮಂತರಿಗೆ ಸಿಗುವ ಸೌಲಭ್ಯಗಳೇ ವಿನಾ ಬಡವರಿಗೆ ಆರೋಗ್ಯ ಸೌಭಾಗ್ಯ ಇನ್ನೂ ಗಗನಕುಸುಮ.

ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೈದ್ಯರಿದ್ದಾರೆ. ಆದರೆ ಗ್ರಾಮೀಣ ಭಾಗದ ಜನರಿಗೆ ಇವರ ಸೇವೆ ಲಭ್ಯವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಂದು ಸಾವಿರ ಜನರಿಗೆ ಒಬ್ಬರು ವೈದ್ಯರು ಇರಬೇಕು. ಆದರೆ ನಮ್ಮಲ್ಲಿ 13,257 ಮಂದಿಗೆ ಒಬ್ಬ ಸರ್ಕಾರಿ ವೈದ್ಯರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುವುದಿಲ್ಲ. ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯೇ ಅನಾರೋಗ್ಯದಿಂದ ನರಳುತ್ತಿದೆ. ಹರೇ ರಾಮ, ಇನ್ನಾದರೂ ನಮ್ಮ ಆರೋಗ್ಯ ಸಚಿವರಿಗೆ ಇದನ್ನೆಲ್ಲಾ ಸರಿ ಮಾಡುವ ಪಾಸಿಟಿವ್ ಎನರ್ಜಿ ಕೊಡಪ್ಪಾ ತಂದೆ.

ಒಂದು ಆಸ್ಪತ್ರೆಯಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ವೈದ್ಯರೊಂದಿಗೆ ಮಾತನಾಡುತ್ತಾ ಕುಳಿತಿದ್ದರಂತೆ. ಆಗ ಒಬ್ಬ ನರ್ಸ್ ಒಳಕ್ಕೆ ಬಂದಳು. ಮುನ್ಸೂಚನೆ ನೀಡದೆ ಕೊಠಡಿಯೊಳಕ್ಕೆ ಬಂದ ಬಗ್ಗೆ ಆಕೆ ಕ್ಷಮೆ ಕೇಳಿದಾಗ ಆ ಶ್ರೀಮಂತರು ‘ನೀವು ಯಾವ ವಿಭಾಗದಲ್ಲಿ ಕೆಲಸ ಮಾಡುತ್ತೀರಿ?’ ಎಂದು ಕೇಳಿದರು. ‘ನಾನು ಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿ ಕೆಲಸ ಮಾಡುತ್ತೇನೆ’ ಎಂದಳಾಕೆ. ‘ಓಹೋ ಹೌದೇ, ಮುಖಕ್ಕೆ ಮುಸುಕು, ಕೈಗೆ ಗ್ಲೌಸ್ ಎಲ್ಲಾ ಹಾಕಿಕೊಳ್ಳುತ್ತೀರಿ ತಾನೆ’ ಎಂದು ಶ್ರೀಮಂತರು ಕೇಳಿದ್ದಕ್ಕೆ ಆಕೆ ‘ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತೇನೆ. ಆದರೆ ಕೈಗೆ ಗ್ಲೌಸ್ ಹಾಕಿಕೊಳ್ಳುವುದಿಲ್ಲ’ ಎಂದಳು. ಅದಕ್ಕೆ ಆ ವ್ಯಕ್ತಿ ‘ಅಯ್ಯೋ ಇದು ಬಹಳ ಅಪಾಯಕಾರಿ. ನಿಮಗೂ ಸೋಂಕು ತಗುಲಬಹುದು’ ಎಂದಾಗ ಆ ನರ್ಸ್ ‘ಇಲ್ಲ ಸ್ವಾಮಿ, ನನ್ನ ಉಸಿರಿನಿಂದ ರೋಗಿಗಳಿಗೆ ತೊಂದರೆಯಾಗಬಾರದು ಎಂದು ಮುಖಕ್ಕೆ ಮುಸುಕು ಹಾಕಿಕೊಳ್ಳು
ತ್ತೇನೆ. ಆದರೆ ಕೈಗೆ ಗ್ಲೌಸ್ ಹಾಕಿಕೊಳ್ಳುವುದಿಲ್ಲ. ನಾನು ಬರಿಗೈಯಿಂದ ಶುಶ್ರೂಷೆ ಮಾಡಿದಾಗ ರೋಗಿಗಳಿಗೆ ಓಹೋ ತಮಗೇನೂ ಅಂತಹ ಗಂಭೀರ ರೋಗ ಇಲ್ಲ, ಗುಣವಾಗುತ್ತದೆ ಎಂಬ ಭಾವನೆ ಬರುತ್ತದೆ’ ಎಂದು ಉತ್ತರಿಸುತ್ತಾಳೆ. ಆಗ ಆ ಶ್ರೀಮಂತ ‘ನಿಮ್ಮ ಪಾಸಿಟಿವ್ ಥಿಂಕಿಂಗ್ ನನಗೆ ಇಷ್ಟವಾಯ್ತು. ನಿಮಗೆ ಏನಾದರೂ ಸಹಾಯ ಬೇಕೆ?’ ಎಂದು ಕೇಳಿದರು. ಅದಕ್ಕೆ ನರ್ಸ್ ‘ನನಗೇನೂ ಸಹಾಯ ಬೇಡ. ಸಾಂಕ್ರಾಮಿಕ ರೋಗಿಗಳ ವಿಭಾಗದಲ್ಲಿ ಹಾಸಿಗೆಯ ಕೊರತೆ ಇದೆ. ಅದನ್ನು ಒದಗಿಸಿದರೆ ನಾನು ಇನ್ನಷ್ಟು ರೋಗಿಗಳಿಗೆ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ’ ಎನ್ನುತ್ತಾಳೆ. ಈಗ ನಮಗೆ ಬೇಕಿರುವುದು ಅಂತಹ ನರ್ಸ್‌ಗಳು.

ಒಬ್ಬ ಶ್ರೀಮಂತ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಒಂದು ದೇವಾಲಯ ಕಟ್ಟಿಸಿದ. ಅದು ಬಹಳ ಪ್ರಸಿದ್ಧಿ ಪಡೆಯಿತು. ಒಂದು ದಿನ ಒಬ್ಬ ಶ್ರೇಷ್ಠ ಸನ್ಯಾಸಿ ಆ ಊರಿಗೆ ಬಂದರು. ಗ್ರಾಮಸ್ಥರು ಆ ಸನ್ಯಾಸಿಗೆ ತಮ್ಮ ಊರಿನ ಹೆಮ್ಮೆಯಾಗಿರುವ ದೇವಾಲಯದಲ್ಲಿ ಉಪನ್ಯಾಸ ಮಾಡಲು ಕೇಳಿಕೊಂಡರು. ಅದರಂತೆ ಸನ್ಯಾಸಿ ದೇವಾಲಯದ ಬಳಿಗೆ ಬಂದರು. ಆದರೆ ಒಳಕ್ಕೆ ಹೋಗಲಿಲ್ಲ. ಮರದ ಕೆಳಗೇ ಆಶೀರ್ವಚನ ನೀಡಿದರು. ಇದು ಆ ಶ್ರೀಮಂತನಿಗೆ ಗೊತ್ತಾಯಿತು. ಆತ ಬಂದು ‘ಸ್ವಾಮೀಜಿ, ತಾವು ಯಾಕೆ ದೇವಾಲಯದ ಒಳಕ್ಕೆ ಹೋಗಲಿಲ್ಲ. ಇದು ಬಹಳ ಪ್ರಸಿದ್ಧ ದೇವಾಲಯ. ಗೋಪುರವನ್ನು ಚಿನ್ನದಿಂದಲೇ ಮಾಡಲಾಗಿದೆ. ನಿಮ್ಮಂಥವರು ದೇವಾಲಯದಲ್ಲಿ ಉಪನ್ಯಾಸ ನೀಡಿದರೆ ಚೆಂದ’ ಎಂದು ವಿನಂತಿಸಿಕೊಂಡ. ಅದಕ್ಕೆ ಸನ್ಯಾಸಿ ‘ನಾನು ಗ್ರಾಮದ ಜನರಿಂದ ಈ ದೇವಾಲಯದ ಕತೆ ಕೇಳಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದಾಗ ಇದನ್ನು ಕಟ್ಟಲಾಗಿದೆಯಂತೆ. ಅದಕ್ಕೆ ದೇವಾಲಯದಿಂದ ಕೆಟ್ಟ ವಾಸನೆ ಬರುತ್ತಿದೆ. ಒಳಕ್ಕೆ ಹೋಗಲು ಆಗಲ್ಲ’ ಎಂದರು.

ಈಗ ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಚರ್ಚ್, ಮಸೀದಿ ಅಥವಾ ಗುಡಿ ಕಟ್ಟಿದರೆ ಬರೀ ವಾಸನೆಯಲ್ಲ, ದುರ್ವಾಸನೆ, ಕೆಟ್ಟ ನಾತ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.