ADVERTISEMENT

ಅತಿಯಾದ ಮೋಹದ ಫಲ

ಡಾ. ಗುರುರಾಜ ಕರಜಗಿ
Published 19 ಜೂನ್ 2018, 17:06 IST
Last Updated 19 ಜೂನ್ 2018, 17:06 IST
   

ಬ್ರಹ್ಮದತ್ತ ವಾರಾಣಸಿಯ ರಾಜನಾಗಿದ್ದಾಗ ಬೋಧಿಸತ್ವ ಒಂದು ಗ್ರಾಮದ ಕುಂಬಾರನ ಮಗನಾಗಿ ಹುಟ್ಟಿದ. ಅವನು ಬೆಳೆದಂತೆ ಮಣ್ಣಿನ ವಿದ್ಯೆಯಲ್ಲಿ ಪಾರಂಗತನಾಗಿ ಅದನ್ನೇ ವೃತ್ತಿಯಾಗಿ ಬೆಳೆಸಿದ. ಅವನಿಗೆ ಮದುವೆಯಾಗಿ ಮಕ್ಕಳು ಹುಟ್ಟಿ ಸಂತೋಷವಾಗಿದ್ದ. ತನ್ನ ವೃತ್ತಿಯನ್ನು ಪ್ರೀತಿಸುತ್ತಿದ್ದ.

ಆ ಸಮಯದಲ್ಲಿ ವಾರಾಣಸಿಯ ಸಮೀಪದಲ್ಲೇ, ಗಂಗಾನದಿಯ ಪಕ್ಕದಲ್ಲೇ ಒಂದು ದೊಡ್ಡ ಸರೋವರವಿತ್ತು. ನದಿ ಮತ್ತು ಕೊಳ ಎಷ್ಟು ಹತ್ತಿರವಿದ್ದುವೆಂದರೆ ಮಳೆಗಾಲದಲ್ಲಿ ನದಿಗೆ ಪ್ರವಾಹ ಬಂದಾಗ ಕೊಳತುಂಬಿಕೊಂಡು ಎರಡೂ ಒಂದರಲ್ಲೊಂದು ಸೇರಿ ಒಂದೇ ಪಾತ್ರ ಎನ್ನುವಂತಾಗುತ್ತಿದ್ದವು. ನೀರಿನಲ್ಲಿದ್ದ ಮೀನುಗಳಿಗೆ, ಆಮೆಗಳಿಗೆ ಮಳೆಗಾಲ ಹಾಗೂ ಬೇಸಿಗೆಕಾಲಗಳು ಯಾವಾಗ ಬರುತ್ತವೆಂಬುದು ಅನುಭವದಿಂದಲೇ ತಿಳಿದಿರುತ್ತಿತ್ತು. ಹಾಗಾಗಿ ಬೇಸಿಗೆ ಬರುವ ಹೊತ್ತಿಗೆ ಜಲಚರಗಳು ಕೊಳವನ್ನು ಬಿಟ್ಟು ನದಿಯನ್ನು ಸೇರುತ್ತಿದ್ದವು.

ಒಂದು ಬೇಸಿಗೆ ಕಾಲದಲ್ಲಿ ನದಿಯ ನೀರು ಕಡಿಮೆಯಾಗುತ್ತಿರುವಾಗ ಮೀನುಗಳು, ಆಮೆಗಳು ಈ ವಿಷಯವನ್ನು ಚರ್ಚಿಸಿದವು. ಈ ಬಾರಿ ಬೇಸಿಗೆ ಪ್ರಖರವಾಗಿರುವುದರಿಂದ ಸರೋವರ ಪೂರ್ತಿಯಾಗಿ ಒಣಗಿ ಹೋಗಬಹುದು. ಆದ್ದರಿಂದ ಎಲ್ಲರೂ ಈಜಿಕೊಂಡು ನದಿಯನ್ನು ಸೇರುವುದು ಕ್ಷೇಮ ಎಂದು ತೀರ್ಮಾನಿಸಿದವು. ಆದರೆ ಒಂದು ಆಮೆ ಮಾತ್ರ ಹೋಗಲು ಒಪ್ಪಲಿಲ್ಲ. ಹಿರಿಯರು, ಸ್ನೇಹಿತರು ಅದಕ್ಕೆ ಬಗೆಬಗೆಯಾಗಿ ಹೇಳಿದರೂ ಕೇಳದೇ ಮೊಂಡುಹಿಡಿಯಿತು.

ADVERTISEMENT

‘ನಾನು ಹುಟ್ಟಿದ್ದು ಇಲ್ಲಿಯೇ, ಬೆಳೆದದ್ದು ಇಲ್ಲಿಯೇ, ನಾನಷ್ಟೇ ಅಲ್ಲ, ನನ್ನ ತಂದೆ, ಅಜ್ಜ, ಮುತ್ತಜ್ಜರೆಲ್ಲರೂ ಇದ್ದ ಕೆರೆ ಇದು. ಇದನ್ನು ತೊರೆದು ನಾನು ಹೋಗಲಾರೆ. ಇದು ನನ್ನ ಸರೋವರ’ ಎಂದೆಲ್ಲ ವಾದಿಸಿ ಅಲ್ಲೇ ಉಳಿಯಿತು. ಬೇಸಿಗೆ ಬಲಿತಂತೆ ಸರೋವರ ಪೂರ್ತಿಯಾಗಿ ಒಣಗಿತು. ನಮ್ಮ ಮೊಂಡು ಆಮೆ ಹೇಗಾದರೂ ಬದುಕಬೇಕೆಂದು ಹಸಿ ಮಣ್ಣಿನಲ್ಲಿ ಒಂದು ದೊಡ್ಡ ತೂತನ್ನು ತೆಗೆದು ಅದರಲ್ಲಿ ಅಡಗಿಕೊಂಡು ಕುಳಿತಿತು. ಬೋಧಿಸತ್ವ ಮಡಕೆ ಮಾಡಲು ಕೆರೆಯಮಣ್ಣು ತರಬೇಕೆಂದು ಈ ಆಮೆ ಅಡಗಿ ಕುಳಿತ ಸ್ಥಾನಕ್ಕೇ ಬಂದ. ಅವನಿಗೆ ಈ ಆಮೆ ಮಣ್ಣಲ್ಲಿ ಮುಚ್ಚಿಕೊಂಡು ಕುಳಿತಿದ್ದು ತಿಳಿಯಲಿಲ್ಲ. ಅವನು ಸಲಿಕೆಯಿಂದ ಮಣ್ಣನ್ನು ಅಗಿದು ತೆಗೆಯುವಾಗ ಸಲಿಕೆಯ ಪೆಟ್ಟು ಆಮೆಯ ಚಿಪ್ಪಿನ ಮೇಲೆ ಬಿದ್ದು ಚಿಪ್ಪು ಒಡೆಯಿತು. ಆಮೆ ಗೋಳಿಟ್ಟಿತು. ಬೋಧಿಸತ್ವ ಅದನ್ನು ಎತ್ತಿ ದಂಡೆಯ ಮೇಲೆ ಹಾಕಿದ. ಮಣ್ಣಿನ ದೊಡ್ಡ ಹೆಂಟೆ ಎಂದು ಭಾವಿಸಿದ್ದವನಿಗೆ ಅದೊಂದು ಆಮೆ ಎಂದು ತಿಳಿದಾಗ ಆಶ್ಚರ್ಯವೂ ಆಯಿತು, ದುಃಖವೂ ಆಯಿತು.

ಆಮೆಯ ನರಳಾಟ ಹೆಚ್ಚಿತು. ಅಯ್ಯೋ, ನನ್ನ ಮನೆ, ನನ್ನ ಸರೋವರ ಎಂದು ನಂಬಿ ಬದುಕಿದ್ದಕ್ಕೆ ಈ ಶಿಕ್ಷೆಯೇ? ನನ್ನ ಸರೋವರ, ನನ್ನ ಮಣ್ಣು ಎಂದು ನಂಬಿದ ನನಗೆ ಕೆರೆಯ ಮಣ್ಣೇ ನನ್ನ ಪ್ರಾಣಕ್ಕೆ ಮುಳುವಾಯಿತೇ? ನರಳುತ್ತ, ನರಳುತ್ತ ಆಮೆ ಪ್ರಾಣ ಬಿಟ್ಟಿತು.

ಬೋಧಿಸತ್ವ ಸುತ್ತ ನೆರೆದ ಜನರಿಗೆ ಹೇಳಿದ, ದಯವಿಟ್ಟು ಇದನ್ನು ಗಮನಿಸಿ ಸ್ನೇಹಿತರೆ. ಈ ಆಮೆ ಕೊಳದ ಬಗ್ಗೆ, ಈ ಮಣ್ಣಿನ ಬಗ್ಗೆ ಯಾವ ಮಟ್ಟದ ಮೋಹವನ್ನು ಹೊಂದಿತ್ತು. ದಯವಿಟ್ಟು ತಾವೂ ಈ ಆಮೆಯಂತೆ ಆಗದಂತೆ ನೋಡಿಕೊಳ್ಳಿ. ಅತಿಯಾದ ಮೋಹಕ್ಕೆ ಗುರಿಯಾಗಬೇಡಿ. ಅತಿಯಾದ ಮೋಹವೇ ಅತಿಯಾದ ದುಃಖಕ್ಕೆ ಕಾರಣ ಇಂದಿನ ನಮ್ಮ ಪರಿಸ್ಥಿತಿ ಅಂದಿನ ಆಮೆಯ ಪರಿಸ್ಥಿತಿಗಿಂತ ಬಹಳ ಭಿನ್ನವೇನಿಲ್ಲ. ನಮ್ಮ ಮೋಹಪಾಶ ಗಳೂ ಬಿಗಿಯಾಗಿವೇ ಇವೆ. ಬಂಧನ ಅತಿಯಾದಷ್ಟೂ ದುಃಖದ ಬಲೆ ಬಿಗಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.