ADVERTISEMENT

ನಾನಾ ಮುಖಗಳು

ಡಾ. ಗುರುರಾಜ ಕರಜಗಿ
Published 10 ಅಕ್ಟೋಬರ್ 2019, 20:15 IST
Last Updated 10 ಅಕ್ಟೋಬರ್ 2019, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ |
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ||
ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು |
ಬಗೆಯೆಷ್ಟೊ ಮೊಗವಷ್ಟು – ಮಂಕುತಿಮ್ಮ || 195 ||

ಪದ-ಅರ್ಥ: ನರನಿಗಂತೆಯೆ=ನರನಿಗೆ+ಅಂತೆಯೆ, ಸೊಗಸಿನೆಳಸಿಕೆಗೊಂದು=ಸೊಗಸಿನ+ಎಳಸಿಕೆಗೆ(ಬಯಕೆಗೆ)+ಒಂದು,
ವಾಚ್ಯಾರ್ಥ: ಪುರುಷ, ಸ್ತ್ರೀಯರಿಗಿಬ್ಬರಿಗೂ ನಾಲ್ಕು ಮುಖಗಳು. ಜಗತ್ತಿಗೆ ಕಾಣುವುದೊಂದು, ಮನೆಯ ಜನರಿಗೊಂದು, ತನ್ನ ಸಂತೋಷದ ಬಯಕೆಗಳಿಗೆ ಮತ್ತೊಂದು, ತನ್ನ ಆತ್ಮಸಾಕ್ಷಿಯಾಗಿರುವುದೊಂದು. ಹೀಗೆ ಎಷ್ಟು ಬಗೆಗಳೋ, ಅಷ್ಟು ಮುಖಗಳು.

ವಿವರಣೆ: ನಮ್ಮ ಬದುಕಿನ ಅನುಭವಗಳಿಂದ ಕೆಲವರನ್ನು ಒಳ್ಳೆಯವರೆಂದು, ಕೆಲವರನ್ನು ಕೆಟ್ಟವರೆಂದು ಭಾವಿಸುತ್ತೇವೆ. ಆದರೆ ಅವರು ನಿಜವಾಗಿಯೂ ಹಾಗೆಯೇ ಇದ್ದಾರೆಯೇ? ಒಮ್ಮೆ ನಾನು ಮಾಸ್ತಿ ವೆಂಕಟೇಶ ಐಯಂಗಾರ್‍ರವರಿಗೆ ಕೇಳಿದ್ದೆ, ಸರ್, ‘ನಿಮ್ಮ ಯಾವ ಕೃತಿಯಲ್ಲೂ ಕೆಟ್ಟ ಪಾತ್ರಗಳೇ ಕಾಣುವುದಿಲ್ಲ. ಜಗತ್ತಿನಲ್ಲಿ ಕೆಟ್ಟವರಿಲ್ಲವೇ?’ ಅವರು ಹುಬ್ಬೇರಿಸಿ, ‘ಕೆಟ್ಟವರು ಇದ್ದಾರೆಯೇ? ಒಬ್ಬರ ಹೆಸರು ಹೇಳಿ ನೋಡೋಣ’ ಎಂದರು. ನಾನು ತಕ್ಷಣ, ‘ರಾವಣ’ ಎಂದೆ. ಅವರು, ‘ಅಯ್ಯೋ, ರಾವಣ ಕೆಟ್ಟವನೇನ್ರೀ? ಮಂಡೋದರೀನ್ನ ಕೇಳಿದೀರೇನ್ರಿ? ಅಲ್ರೀ, ಶಿವ ಎಷ್ಟು ಜನರಿಗೆ ತನ್ನ ಆತ್ಮಲಿಂಗವನ್ನು ಕೊಟ್ಟಿದ್ದಾನೆ? ರಾಮಾಯಣದಲ್ಲಿ ಆಂಜನೇಯ ಮೊದಲ ಬಾರಿಗೆ ರಾವಣನನ್ನು ನೋಡಿದಾಗ ಅದೆಷ್ಟು ಹೊಗಳುತ್ತಾನೆ, ಈತ ಇಂದ್ರನಿಗಿಂತ ಕಾಂತಿಯುತವಾಗಿದ್ದಾನೆ ಎನ್ನುತ್ತಾನೆ. ರಾವಣ ಮಹಾಜ್ಞಾನಿ, ಶ್ರೇಷ್ಠ ಆಡಳಿತಗಾರ. ಹೌದು, ಆತ ಮುಠ್ಠಾಳತನ ಮಾಡಿದ, ಸೀತಮ್ಮನನ್ನು ಕದ್ದುಕೊಂಡು ಹೋದ. ಅದಕ್ಕೆ ತಕ್ಕ ಶಿಕ್ಷೆಯನ್ನೂ ಪಡೆದ. ಅವನು ಕೆಟ್ಟ ಕೆಲಸ ಮಾಡಿದ, ಆದರೆ ಕೆಟ್ಟ ಮನುಷ್ಯನಲ್ಲ‘ ಎಂದರು. ಅವರ ಮಾತು ನನಗೊಂದು ಚಿಂತನೆಯ ಬೆಳಕಿಂಡಿಯನ್ನು ತೆರೆದಿತ್ತು. ಯಾವ ವ್ಯಕ್ತಿಯೂ ಪೂರ್ತಿ ಕೆಟ್ಟವನು ಅಥವಾ ಪೂರ್ತಿ ಒಳ್ಳೆಯವನು ಆಗಿರುವುದಿಲ್ಲ. ತನ್ನ ಕೆಲಸಗಳಿಂದ ಕೆಲವರಿಗೆ ಅನುಕೂಲವಾದಾಗ ಅವರು ಆತನನ್ನು ಒಳ್ಳೆಯವ ಎಂದು ಭಾವಿಸುತ್ತಾರೆ. ಆದರೆ ಕೆಲವು ಕೆಲಸಗಳಿಂದ ಅನೇಕರಿಗೆ ತೊಂದರೆಯಾಗಬಹುದು. ಅವರು ಆತನನ್ನು ಕೆಟ್ಟವ ಎಂದು ತಿಳಿಯುತ್ತಾರೆ. ಅಂದರೆ ಒಬ್ಬನೇ ವ್ಯಕ್ತಿ ಬೇರೆಬೇರೆಯವರಿಗೆ ಬೇರೆಬೇರೆಯಾಗಿಯೇ ಕಾಣುತ್ತಾನೆ. ಹಾಗಾದರೆ ಒಬ್ಬ ಮನುಷ್ಯನಿಗೆ ಒಂದೇ ಮುಖವಿಲ್ಲ ಎಂದಾಯಿತು.

ADVERTISEMENT

ಅದನ್ನು ಈ ಕಗ್ಗ ವಿವರಿಸುತ್ತದೆ. ಮನುಷ್ಯನಿಗೆ ಅದೆಷ್ಟೋ ಮುಖಗಳಿವೆ. ಅವುಗಳಲ್ಲಿ ನಾಲ್ಕನ್ನು ಅದು ವರ್ಣಿಸುತ್ತದೆ. ಜಗತ್ತಿಗೆ ಕಾಣುವುದು ಒಂದು ಮುಖ. ಅಥವಾ ಅದು ಜಗತ್ತಿಗೆ ವ್ಯಕ್ತಿ ತೋರುವ ಮುಖ. ಬಹಳ ಕಾಲ ಅದೇ ಸತ್ಯವೆಂದು ಜನ ನಂಬುತ್ತಾರೆ. ಇದೊಂದು ಮುಖ ತನ್ನ ಮನೆಯವರಿಗೆ ಕಾಣುವಂಥದ್ದು. ಹೊರಗಡೆಗೆ ಯಾವುದೇ ಮುಖವನ್ನು ತೋರಿದರೂ ದಿನನಿತ್ಯವೂ ಅವನೊಂದಿಗೇ ಇರುವ ಮನೆಯ ಮಂದಿಗೆ ಇನ್ನೊಂದು ಮುಖದ ದರ್ಶನವಾಗಿರುತ್ತದೆ. ಹೊರಗೆ ಒರಟಾಗಿ, ಬಿರುಸಾಗಿ ಕಾಣುವ ವ್ಯಕ್ತಿ ಮನೆಯಲ್ಲಿ ಮೃದುವಾಗಿರಬಹುದು ಅಥವಾ ಹೊರಗೆ ಸಾತ್ವಿಕನಂತೆ, ಸಂತನಂತೆ ತೋರುವವ ಮನೆಯಲ್ಲಿ ರಾಕ್ಷಸನಾಗಿರಬಹುದು. ಇವೆರಡಲ್ಲದೆ ತನ್ನ ಸುಖಕ್ಕಾಗಿ, ಸಂತೋಷಕ್ಕಾಗಿ ಸಂಭ್ರಮದ ಶಿಖರದಲ್ಲಿದ್ದಾಗಿನ ಮುಖವೇ ಬೇರೆ. ಆದರೆ ಇವೆಲ್ಲ ಮುಖಗಳ ಹಿಂದೆ ತನ್ನದೇ ಆದ, ಆತ್ಮಪ್ರಜ್ಞೆಯಲ್ಲಿ ನಿಂತಾಗ ಇರುವ ಮುಖ ಮತ್ತೊಂದು.

ಅಂತೆಯೇ ಪ್ರತಿಯೊಂದು ಸಂದರ್ಭಕ್ಕೊಂದು ಮುಖ ನಮಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.