ADVERTISEMENT

ಬ್ರಹ್ಮಸತ್ವದ ಲೀಲೆ

ಡಾ. ಗುರುರಾಜ ಕರಜಗಿ
Published 29 ಮೇ 2019, 19:30 IST
Last Updated 29 ಮೇ 2019, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ |
ನಾನೆನುವ ಚೇತನದಿ ರೂಪಗೊಂಡಿಹುದೋ ? ||
ನಾನೆನುವ ಕೇಂದ್ರದಿನೆ ಹೊರಟ ಸತ್ತ್ವ್ಪದ ಪರಿಧಿ |
ಬಾನಾಚೆ ಹಬ್ಬಿಹುದೊ? – ಮಂಕುತಿಮ್ಮ || 138 ||

ಪದ-ಅರ್ಥ: ಬಾನಾಚೆಯಿಂ=ಬಾನಿನ ಆಚೆಯಿಂದ, ತಾನಿಳಿದಿಳೆಗೆ=ತಾನು+ಇಳಿದು+ಇಳೆಗೆ
ವಾಚ್ಯಾರ್ಥ: ವಿಶ್ವಸತ್ವ ಆಕಾಶದಿಂದಾಚೆಯಿಂದ ಧರೆಗೆ ಇಳಿದು ಬಂದು ನಾನು ಎನ್ನುವ ಚೇತನದ ರೂಪ ಪಡೆದುಕೊಂಡಿಹುದೋ ಅಥವಾ ನಾನು ಎನ್ನುವ ಕೇಂದ್ರದಿಂದ ಹೊರಟ ಸತ್ವದ ಗಡಿ ಆಕಾಶದಿಂದಾಚೆ ಹಬ್ಬಿಹುದೋ?

ವಿವರಣೆ: ಈ ಪ್ರಶ್ನೆ ಶತಶತಮಾನಗಳಿಂದ ಚಿಂತಕರನ್ನು ಕಾಡಿದ್ದಿರಬೇಕು. ಹಿರಿದಾದ ವಿಶ್ವಸತ್ವ ಕೆಳಗಿಳಿದು ಬಂದು ಸಣ್ಣ ಚೈತನ್ಯವಾಯಿತೋ ಅಥವಾ ಚೈತನ್ಯವೇ ತನ್ನ ಅರಿವನ್ನು ವಿಸ್ತರಿಸುತ್ತ ಜಗದ್ವ್ಯಾಪಕವಾಯಿತೋ? ಈ ಎರಡೂ ಸರಿಯೇ. ಒಂದು ಆಕುಂಚನ, ಇನ್ನೊಂದು ವಿಸ್ತರಣ. ಇವೆರಡೂ ಪರಸತ್ವದ ಕಾರ್ಯವೇ. ಇದು ಒಂದು ಎರಡಾಗಿ ತೋರುವ ಬೆರಗು. ಕಗ್ಗದ ಈ ಮಾತನ್ನೇ ಎಷ್ಟು ಕಾವ್ಯಾತ್ಮಕವಾಗಿ ಹನ್ನೆರಡನೇ ಶತಮಾನದ ಚೆನ್ನಬಸವಣ್ಣ ತಮ್ಮ ವಚನದಲ್ಲಿ ಹೇಳುತ್ತಾರೆ.

ADVERTISEMENT

ಕಿರಿದಾದ ಬೀಜದಲ್ಲಿ ಹಿರಿಯ ತರುವಡಗಿದ ಪರಿಯಂತೆ, ಕರಗತವಾದ ಕನ್ನಡಿಯಲ್ಲಿ ಕರಿಗಿರಿಗಳು ತೋರುವ ಪರಿಯಂತೆ,
ಜಗದ್ಪ್ಯಾಪಕವಾದ ಪರವಸ್ತುವು ಖಂಡಿತಾಕಾರಮಾದ ಶರೀರದಲ್ಲಿಅತಿ ಸೂಕ್ಷ್ಮಪ್ರಮಾಣದಲ್ಲಿರ್ಪಂತೆ,ಪರತರ ಶಿವಲಿಂಗವು ಸದ್ಭಕ್ತರನುದ್ಧರಿಪ ಸದಿಚ್ಛೆಯಿಂದಲಿಂಗಾಕಾರವಾಗಿ ನೆಲೆಗೊಂಡಿರ್ಪುದು‘ಅಣೋರಣೀಯಾನ್ ಮಹತೋ ಮಹೀಯಾನ್’ ಎಂದುದಾಗಿ,ಪರಬ್ರಹ್ಮರೂಪವಾದ ಲಿಂಗವು ಮಹದ್ರೂಪದಿಂದ ಅಖಂಡವಾಗಿಯೂ ಅಣುರೂಪದಿಂದ ಖಂಡಿತವಾಗಿಯೂ ತೋರುವುದು. ಕೂಡಲ ಚೆನ್ನಸಂಗಮದೇವಾ ಇದು ನಿಮ್ಮ ದಿವ್ಯಲೀಲೆಯಯ್ಯಾ !

ಕಗ್ಗದ ಧ್ವನಿಯಂತೆಯೇ ಈ ವಚನದ ಮೊದಲನೆಯ ಭಾಗ ಹೇಗೆ ಜಗದ್ಪ್ಯಾಪಕವಾದ ಪರವಸ್ತು, ಕನ್ನಡಿಯೊಳಗಿನ ಪರ್ವತದಂತೆ, ಬೀಜದಲ್ಲಿ ಅಡಗಿದ ಮರದಂತೆ, ಖಂಡಿತಾಕಾರವಾದ ಪುಟ್ಟ ದೇಹದಲ್ಲಿ ಚೈತನ್ಯವಾಗಿ ಬರುತ್ತದೆ.

ಅದಕ್ಕೆ ಎರಡೂ ಸಾಧ್ಯ. ಅಣುವಿನಲ್ಲಿ ಅಣುವಾಗಬಹುದು, ಮಹತ್ತಿನಲ್ಲಿ ಮಹತ್ತಾಗಬಹುದು. ಮುಂದಿನದು ತೀರ್ಮಾನರೂಪವಾದ, ಖಚಿತವಾದ ಮಾತು, ತುಂಬ ಚೆಂದದ ಮಾತು.

‘ಪರಬ್ರಹ್ಮರೂಪವಾದ ಲಿಂಗವು ಮಹದ್ರೂಪದಿಂದ ಅಖಂಡವಾಗಿಯೂ, ಅಣುರೂಪದಿಂದ ಖಂಡಿತವಾಗಿಯೂ ತೋರುವುದು’.

ಇಡೀ ಪ್ರಪಂಚವನ್ನು ಆವರಿಸಿದ ಬ್ರಹ್ಮಸತ್ವ ಅಣುವಿನಂತಿರುವ ವ್ಯಕ್ತಿ ಚೈತನ್ಯವನ್ನು ಸೇರುತ್ತದೆ. ಅಂತೆಯೇ ಚೈತನ್ಯದ ರೂಪದಲ್ಲಿದ್ದದ್ದು ಮಹದ್‍ರೂಪವನ್ನು ಪಡೆದು ಅಖಂಡವಾಗುತ್ತದೆ. ಈ ಎರಡೂ ಪ್ರಕ್ರಿಯೆಗಳು ಬ್ರಹ್ಮಸತ್ವದ ಲೀಲೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.