ADVERTISEMENT

ಬೆಂಬಿಡದ ದುಷ್ಟರ ಸಂಗ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:30 IST
Last Updated 29 ಜನವರಿ 2019, 20:30 IST
   

ಮಗಧ ರಾಜ ಅಜಾತಶತ್ರು. ಆತ ಬುದ್ಧನ ವಿರೋಧಿ, ದ್ವೇಷಿಯಾದ ದೇವದತ್ತನಿಗೆ ಮಾರುಹೋಗಿ, ಅವನಿಗೆ ಉನ್ನತ ಸ್ಥಾನವನ್ನು ಕೊಡುವುದಲ್ಲದೆ ಅವನಿಗಾಗಿ ಬಹಳ ಹಣ ಖರ್ಚು ಮಾಡಿ ಗಯಾ-ಸೀಸದಲ್ಲಿ ಒಂದು ದೊಡ್ಡ ಆಶ್ರಯ ಕಟ್ಟಿಸಿದ. ದೇವದತ್ತನ ಕೆಟ್ಟ ಮಾತುಗಳನ್ನು ಕೇಳಿ ಅಜಾತಸತ್ತು ತನ್ನ ತಂದೆಯನ್ನೇ ಬಂಧಿಸಿ, ಕೊಲ್ಲಿಸಿದ. ತಾನೂ ಧರ್ಮಕಾರ್ಯದಲ್ಲಿ ಮುಂದುವರೆಯಲಿಲ್ಲ.

ದೇವದತ್ತ ತೀರಿಹೋದ ಎಂಬ ಸುದ್ದಿ ಕೇಳಿ ರಾಜ ಭಯಭೀತನಾದ. ಭಯದಿಂದಾಗಿ ಅವನಿಗೆ ಯಾವ ಸುಖವೂ ಇಲ್ಲದಂತಾಯಿತು. ರಾಜಭೋಗದಲ್ಲಿದ್ದೂ ಕೈದಿಯಂತಾದ. ರಾಜ್ಯಸುಖವಿಲ್ಲ, ನಿದ್ರೆಯಿಲ್ಲ, ಸದಾಕಾಲ ಯಾರೋ ಬೆನ್ನ ಮೇಲೆ ಕಾದ ಕಬ್ಬಿಣದ ಸಲಾಕೆಯನ್ನು ಇಟ್ಟಂತಾಗುತ್ತಿತ್ತು. ಅವನಿಗೆ ಒಂದು ಭಾವನೆ ಬಂತು, ತಾನು ಸಮ್ಮಕ್ ಬುದ್ಧರ ದರ್ಶನಮಾಡಿ ಅವರ ಮುಂದೆ ಕ್ಷಮಾಪಣೆ ಕೇಳಿದರೆ ಅವರು ತನಗೆ ಶಾಂತಿಯನ್ನು ಪ್ರದಾನ ಮಾಡಬಹುದು. ಆದರೆ ಅವರ ಮುಂದೆ ಹೋಗಲು ಭಯ, ಅಪರಾಧೀ ಭಾವ ಕಾಡುತ್ತಿತ್ತು.

ಕಾರ್ತೀಕೋತ್ಸವ ಬಂದಿತು. ನಗರವೆಲ್ಲ ಸುಂದರವಾಗಿ ಶೃಂಗಾರವಾಗಿದೆ. ಅಜಾತಶತ್ರು ಸ್ವರ್ಣಸಿಂಹಾಸನದಲ್ಲಿ ಅಮಾತ್ಯರೊಡನೆ ಕುಳಿತಿದ್ದಾನೆ. ಅವನ ಮಗ ಕೌಮಾರಭೃತ್ಯಜೀವಕನೂ ಪಕ್ಕದಲ್ಲೇ ಇದ್ದ. ಸಮ್ಯಕ್ ಬುದ್ಧರ ಕಡೆಗೆ ಹೋಗೋಣವೇ ಎಂದು ರಾಜನಿಗೆ ಕೇಳಬೇಕೆನ್ನಿಸಿತು. ಮತ್ತೆ ಅಪರಾಧಿಭಾವ ತಲೆ ಎತ್ತಿ ಕೇಳದಂತೆ ಮಾಡಿತು. ರಾಜ ಒಂದು ಉಪಾಯ ಮಾಡಿದ. “ಇಂದು ಸಂಭ್ರಮದ ರಾತ್ರಿ. ಚಂದಿರನ ಬೆಳಕು ತುಂಬ ಹಿತವಾಗಿದೆ. ನಗರ ವಧುವಿನಂತೆ ಅಲಂಕಾರಗೊಂಡಿದೆ.

ADVERTISEMENT

ಮನಸ್ಸು ಯಾಕೋ ಒಬ್ಬ ಮಹಾನುಭಾವನ ಅಥವಾ ಶ್ರಮಣನೊಂದಿಗೆ ಸತ್ಸಂಗ ಮಾಡಿದರೆ ಇನ್ನೂ ಪ್ರಸನ್ನವಾಗುತ್ತದೆ ಎನ್ನಿಸುತ್ತಿದೆ. ಯಾರೊಡನೆ ಸತ್ಸಂಗ ಮಾಡೋಣ?” ಎಂದು ಸಭಾಸದರನ್ನು ಕೇಳಿದ. ಯಾರಾದರೂ ಒಬ್ಬರು ಸಮ್ಯಕ್ ಬುದ್ಧರ ಹೆಸರು ಹೇಳಿದರೆ ಸಾಕು, ಆಯ್ತು ಅಲ್ಲಿಗೇ ಹೋಗೋಣ ಎನ್ನಬೇಕೆಂದು ಸಿದ್ಧನಾಗಿದ್ದ.

ಒಬ್ಬ ಅಮಾತ್ಯ ಪೂರಣ ಕಸ್ಯಪನನ್ನು ಹೊಗಳಿದ, ಮತ್ತೊಬ್ಬ ಕಕುಧ ಕುಚ್ಯಾಯನ ಬಗ್ಗೆ ಹೇಳಿದ, ಇನ್ನೊಬ್ಬ ಅಜಿತಕೇಶಕಂಬಲನ ವರ್ಣನೆ ಮಾಡಿದ, ಮಗುದೊಬ್ಬ ಮಕ್ಖಿಲ ಗೋಸಾಲನ ಕಡೆಗೆ ಹೋಗೋಣವೆಂದ. ಯಾರೂ ಸಮ್ಯಕ್ ಬುದ್ಧರ ಹೆಸರೇ ಹೇಳಿದಿದ್ದಾಗ ರಾಜನಿಗೆ ತುಂಬ ನಿರಾಸೆ, ತಳಮಳವಾಯಿತು.

ಕೊನೆಗೆ ಹತಾಶನಾಗಿ ಮಗ ಜೀವಕನ ಕಡೆಗೆ ನೋಡಿ, “ಮಗೂ ನೀನು ಯಾರನ್ನು ಬಯಸುತ್ತೀಯಾ?” ಎಂದ. ಜೀವಕ ಇದನ್ನೇ ಕಾಯುತ್ತಿರುವವನಂತೆ, “ದೇವ, ಸಮ್ಯಕ್ ಬುದ್ಧರ ಹೊರತು ಇನ್ನಾರು ಮನಸ್ಸಿಗೆ ಶಾಂತಿ ಕೊಟ್ಯಾರು? ಅರ್ಹತ ಬುದ್ಧರು ನಮ್ಮ ಆಮ್ರವನದಲ್ಲಿ ಸಾವಿರಾರು ಭಿಕ್ಷುಗಳೊಡನೆ ವಾಸವಾಗಿದ್ದಾರೆ. ದಯವಿಟ್ಟು ಅವರೊಡನೆ ಸತ್ಸಂಗ ಮಾಡೋಣ. ನಾವೂ ಅರ್ಹತರಾಗಬಹುದು” ಎಂದ.

ತಕ್ಷಣ ರಾಜ, “ಹಾಗಾದರೆ ನಡೆಯಿರಿ ಅಲ್ಲಿಗೇ ಹೋಗೋಣ” ಎಂದು ಆನೆಯ ಮೇಲೆ ಕುಳಿತು ವೈಭವದಿಂದ ಆಮ್ರವನಕ್ಕೆ ಬಂದ. ಪ್ರಶಾಂತ ಮುದ್ರೆಯಿಂದ ಭಿಕ್ಷುಗಳ ನಡುವೆ ಕೂತಿದ್ದ ಬುದ್ಧನನ್ನು ಕಂಡ. ನಂತರ ಬುದ್ಧನಿಗೆ ಪ್ರಣಾಮಗಳನ್ನು ಸಲ್ಲಿಸಿ ಶ್ರಮಣತ್ವದ ಬಗ್ಗೆ ಕೇಳಿದ. ಬುದ್ಧ ಅತ್ಯಂತ ಪ್ರೀತಿಯಿಂದ ಉಪದೇಶ ನೀಡಿದ. ನಂತರ ರಾಜ ಕೃತಜ್ಞತೆ ಸಲ್ಲಿಸಿ ಅರಮನೆಗೆ ತೆರಳಿದ.

ಭಿಕ್ಷುಗಳು ಬುದ್ಧನನ್ನು ಕೇಳಿದರು, “ಭಂತೇ, ತಮ್ಮ ಇಷ್ಟು ಉಪದೇಶ ಕೇಳಿದ ಮೇಲೆ ರಾಜನಿಗೆ ಯಾಕೆ ಸೋತಾಪತ್ತಿ ಫಲ ದೊರಕಲಿಲ್ಲ? ಯಾಕೆ ಅವನ ಮನಸ್ಸು ಧಾರ್ಮಿಕವಾಗಲಿಲ್ಲ?” ಬುದ್ಧ ಹೇಳಿದ, ಇದು ದುಷ್ಟರ ಸಹವಾಸ ಮಾಡಿ ತಂದೆಯನ್ನು ವಧಿಸಿದ ಪಾಪದಿಂದ ಹೀಗಾಯಿತು”.

ದುಷ್ಟರ ಸಹವಾಸ ಬೆಂಬಿಡದ ಭೂತ. ಅವರ ಸಹವಾಸವನ್ನು ಬಿಟ್ಟರೂ ಆಗ ಮಾಡಿದ ತಪ್ಪು-ಮುಂದೆ ಬೆನ್ನಟ್ಟಿ ಕಾಡುತ್ತದೆ, ಸದಾಚಾರದ ಮಾರ್ಗಕ್ಕೆ ಬರುವಲ್ಲಿ ತಡೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.