ADVERTISEMENT

ಕೃತಜ್ಞತೆ ಮೆರೆದ ರಣಹದ್ದುಗಳು

ಡಾ. ಗುರುರಾಜ ಕರಜಗಿ
Published 3 ಮಾರ್ಚ್ 2019, 20:01 IST
Last Updated 3 ಮಾರ್ಚ್ 2019, 20:01 IST

ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಬೋಧಿಸತ್ವ ಒಂದು ರಣಹದ್ದಾಗಿ ಹುಟ್ಟಿದ್ದ. ಅವನು ಶ್ರದ್ಧೆಯಿಂದ ತನ್ನ ವಯಸ್ಸಾದ ತಂದೆ ತಾಯಿಯರ ಸೇವೆ ಮಾಡಿ, ಪೋಷಣೆ ಮಾಡುತ್ತಿದ್ದ.

ಒಮ್ಮೆ ಜೋರಾಗಿ ಬಿರುಗಾಳಿ ಬೀಸಿ ಭಯಂಕರವಾದ ಮಳೆ ಬಂದಿತು. ಮುದಿ ರಣಹದ್ದುಗಳು ಗಾಳಿಯ ಹೊಡೆತಕ್ಕೆ ಸಿಕ್ಕು ಹಾರಿ ಕೋಟೆಯ ಬದಿಯ ಕಂದಕದಲ್ಲಿ ಬಿದ್ದು ಚಳಿಗೆ ನಡುಗುತ್ತಿದ್ದವು. ಅದೇ ಸಮಯಕ್ಕೆ ಮನೆಗೆ ಹೋಗುತ್ತಿದ್ದ ಶ್ರೇಷ್ಠಿ ಇವುಗಳ ಕಷ್ಟವನ್ನು ನೋಡಿ ಸೇವಕರಿಂದ ಅವುಗಳನ್ನು ಒಂದು ಆಶ್ರಯಕ್ಕೆ ತಲುಪಿಸಿದ. ಚಳಿಯಾಗದಂತೆ ಬೆಂಕಿ ಹಾಕಿಸಿ ಬೆಚ್ಚಗೆ ಮಾಡಿದ. ಹಸಿವು ತಣಿಯುವಂತೆ ಮಾಂಸದ ತುಂಡುಗಳನ್ನು ಹಾಕಿಸಿದ. ಬಿರುಗಾಳಿ, ಮಳೆ ನಿಂತ ಮೇಲೆ ವೃದ್ಧ ರಣಹದ್ದುಗಳು ಆರೋಗ್ಯವಂತವಾದವು. ನಂತರ ಹಾರಿ ತಮ್ಮ ವಸತಿಗೆ ಹೋಗಿಬಿಟ್ಟವು. ನಂತರ ಬೋಧಿಸತ್ವನನ್ನು, ಉಳಿದ ರಣಹದ್ದುಗಳನ್ನು ಕೂಡ್ರಿಸಿಕೊಂಡು ನಡೆದ ವಿಷಯವನ್ನು ತಿಳಿಸಿ, ‘ಆ ಶ್ರೇಷ್ಠಿ ನಮಗೆ ಬಹುದೊಡ್ಡ ಉಪಕಾರ ಮಾಡಿದ್ದಾರೆ. ನಾವು ಅದರ ಋಣ ತೀರಿಸಬೇಕು. ಆದ್ದರಿಂದ ನಿಮಗೆ ಯಾವುದಾದರೂ ಬೆಲೆಬಾಳುವ ವಸ್ತುಗಳು ದೊರೆತರೆ ಅವುಗಳನ್ನು ಶ್ರೇಷ್ಠಿಯ ಮನೆಯ ಅಂಗಳದಲ್ಲಿ ಹಾಕಿಬಿಡಿ’ ಎಂದರು. ಎಲ್ಲ ರಣಹದ್ದುಗಳು ಅದನ್ನು ಒಪ್ಪಿದವು.

ಮರುದಿನದಿಂದ ಮನೆಯ ಮುಂದೆ ಒಣಹಾಕಿದ್ದ ಬೆಲೆಬಾಳುವ ಬಟ್ಟೆಗಳು, ನದಿತೀರದಲ್ಲಿ ಮಹಿಳೆಯರು ತೆಗೆದಿಟ್ಟಿದ್ದ ಆಭರಣಗಳು ರಣಹದ್ದುಗಳ ಪಾಲಾಗತೊಡಗಿದವು. ಹದ್ದುಗಳು ವಸ್ತುಗಳನ್ನು ತಂದು ತಂದು ಶ್ರೇಷ್ಠಿಯ ಮನೆಯಂಗಳಕ್ಕೆ ಹಾಕಿದವು. ಶ್ರೇಷ್ಠಿಗೆ ಇದು ಅರ್ಥವಾಗಿ ಮನೆಯ ಪ್ರಾಂಗಣದಲ್ಲಿ ಬಿದ್ದ ವಸ್ತುಗಳನ್ನೆಲ್ಲ ಜತನದಿಂದ ಒಂದೆಡೆಗೆ ತೆಗೆದಿಟ್ಟ.

ADVERTISEMENT

ನಗರದ ಜನರೆಲ್ಲ ರಾಜನ ಬಳಿಗೆ ಹೋಗಿ ದೂರು ಸಲ್ಲಿಸಿದರು. ರಾಜನೇ ಬೇಟೆಗಾರರಿಗೆ ಹೇಳಿ ಎಲ್ಲೆಲ್ಲಿಯೂ ಬಲೆಗಳನ್ನು ಹಾಕಿಸಿ ಹದ್ದುಗಳನ್ನು ಹಿಡಿಯಹೇಳಿದ. ಅಂಥ ಒಂದು ಬಲೆಯಲ್ಲಿ ಬೋಧಿಸತ್ವ ರಣಹದ್ದು ಸಿಕ್ಕಿಕೊಂಡಿತು. ಅದನ್ನು ದೂತರು ಹಿಡಿದುಕೊಂಡು ಅರಮನೆಗೆ ಹೊರಟರು. ಅದನ್ನು ದಾರಿಯಲ್ಲಿ ಕಂಡ ಶ್ರೇಷ್ಠಿ ತಾನೂ ರಾಜಭವನಕ್ಕೆ ನಡೆದ. ರಾಜ ಬೋಧಿಸತ್ವನಿಗೆ ಕೇಳಿದ, ‘ನೀವೆಲ್ಲ ಸೇರಿ ನಗರದ ಮನೆಮನೆಗಳನ್ನು ಕೊಳ್ಳೆ ಹೊಡೆಯುತ್ತಿದ್ದೀರಾ?’

‘ಇಲ್ಲ ರಾಜಾ, ನಾವು ಕೊಳ್ಳೆಹೊಡೆಯುತ್ತಿಲ್ಲ. ಹೊರಗಡೆ ಬಿದ್ದ ಸಾಮಾನುಗಳನ್ನು ತೆಗೆದುಕೊಳ್ಳುತ್ತೇವೆ’

‘ಆ ವಸ್ತುಗಳನ್ನೆಲ್ಲ ಏನು ಮಾಡುತ್ತೀರಿ?’

‘ನಾವು ಅವುಗಳನ್ನೆಲ್ಲ ಶ್ರೇಷ್ಠಿಯ ಮನೆಯ ಅಂಗಳದಲ್ಲಿ ಹಾಕಿ ಬರುತ್ತೇವೆ. ಅವರು ಅತ್ಯಂತ ದಯಾಳುವಾದವರು. ನನ್ನ ವೃದ್ಧ ತಂದೆ-ತಾಯಿಗಳನ್ನು ಕಾಪಾಡಿ ರಕ್ಷಿಸಿದವರು. ಅದರ ಕೃತಜ್ಞತೆಯಾಗಿ ಹೀಗೆ ಮಾಡುತ್ತಿದ್ದೇವೆ’ ಎಂದಿತು ಬೋಧಿಸತ್ವ ರಣಹದ್ದು.

ಶ್ರೇಷ್ಠಿಯನ್ನು ಸಭೆಯಲ್ಲಿ ಕಂಡು ರಾಜ ಕೇಳಿದ, ‘ಈ ಹದ್ದು ಹೇಳುವುದು ಸರಿಯೇ?’

‘ಅವುಗಳನ್ನೆಲ್ಲ ಏನು ಮಾಡುತ್ತೀ?’ ಕೇಳಿದ ರಾಜ.

‘ಅವು ನನ್ನವಲ್ಲ ಎಂದು ನನಗೆ ಗೊತ್ತಿದೆ. ಅವನ್ನೆಲ್ಲ ಒಂದೆಡೆಗೆ ತೆಗೆದಿಟ್ಟಿದ್ದೇನೆ. ಅವುಗಳನ್ನು ವಾರಸುದಾರರಿಗೆ ಒಪ್ಪಿಸಬಹುದು. ಆದರೆ ಋಣಸಂದಾಯಕ್ಕಾಗಿ ಈ ಪಕ್ಷಿಗಳು ಇಂಥ ಕೆಲಸ ಮಾಡಿವೆ. ದಯವಿಟ್ಟು ಅವುಗಳನ್ನು ಶಿಕ್ಷಿಸದೆ ಬಿಟ್ಟುಬಿಡಿ’ ಎಂದ. ರಾಜ ಪಕ್ಷಿಗಳನ್ನು ಹಾರಲು ಬಿಟ್ಟ ಮತ್ತು ವಸ್ತುಗಳನ್ನು ಅವುಗಳ ಮಾಲಿಕರಿಗೆ ಒಪ್ಪಿಸಿದ.

ಅಂಥ ರಣಹದ್ದುಗಳೇ ಕೃತಜ್ಞತೆಯನ್ನು ಮರೆಯದಿರುವಾಗ ಮನುಷ್ಯನೇಕೆ ಕೃತಜ್ಞತೆಯನ್ನು ಮರೆತು ರಣಹದ್ದುಗಳಂತಾಗುತ್ತಿದ್ದಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.