ADVERTISEMENT

ಸಣ್ಣದಕ್ಕಾಗಿ ದೊಡ್ಡದರ ತ್ಯಾಗ

ಡಾ. ಗುರುರಾಜ ಕರಜಗಿ
Published 21 ಮಾರ್ಚ್ 2019, 19:27 IST
Last Updated 21 ಮಾರ್ಚ್ 2019, 19:27 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಅವನ ಮಂತ್ರಿಯಾಗಿದ್ದ. ಆತ ತುಂಬ ತಿಳಿವಳಿಕೆಯುಳ್ಳವನಾಗಿದ್ದ. ರಾಜನಿಗೆ ಯಾವಾಗಲೂ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ನೀಡುತ್ತಿದ್ದ. ಅದರಿಂದ ಪ್ರತಿಬಾರಿಯೂ ರಾಜ್ಯಕ್ಕೆ ಹಿತವೇ ಅಗುತ್ತಿತ್ತು.

ಹೀಗಿರುವಾಗ ದೇಶದ ಈಶಾನ್ಯ ಭಾಗದಲ್ಲಿ ಕೆಲವು ಕಳ್ಳರು, ದಾಳಿಕೋರರು ದಂಗೆಯನ್ನೆಬ್ಬಿಸಿದರು. ಅಲ್ಲಿದ್ದ ಅಲ್ಪ ಸೈನ್ಯದ ಯೋಧರು ಹೋರಾಡಿದರಾದರೂ ತಮ್ಮ ಸಂಖ್ಯೆ ತುಂಬ ಚಿಕ್ಕದಾದುದ್ದರಿಂದ ಸಹಾಯ ಬೇಕು ಎಂದು ರಾಜನಿಗೆ ಸಂದೇಶ ಕಳುಹಿಸಿದರು. ರಾಜನಿಗೆ ಭಾರಿ ಕೋಪ ಬಂದಿತು. ನನ್ನ ದೇಶದ ಮೇಲೆ ದಂಗೆ ಎದ್ದ ಆ ನೀಚರನ್ನು ಅಡಗಿಸಿಬಿಡುತ್ತೇನೆ ಎಂದು ಗರ್ಜಿಸಿ, ಇಡೀ ಸೈನ್ಯ ಸನ್ನದ್ಧವಾಗಿರುವಂತೆಯೂ, ತಾನೇ ಅದರ ನೇತೃತ್ವ ವಹಿಸುವಾಗಿಯೂ ಹೇಳಿಬಿಟ್ಟ. ಎರಡು ದಿನದಲ್ಲಿ ಭಾರಿ ಸಂಖ್ಯೆಯ ಸೈನ್ಯ ಆನೆ, ಕುದುರೆ, ಪದಾತಿದಳದೊಂದಿಗೆ ಸಿದ್ಧವಾಯಿತು. ಆಗ ಅದು ಮಳೆಗಾಲ. ಊರಹೊರವಲಯದಲ್ಲಿ ಸೇನೆ ಬೀಡುಬಿಟ್ಟಿತು. ರಾಜ ಬೋಧಿಸತ್ವನೊಡನೆ ಬಂದು ತನ್ನ ಕುದುರೆಗಳನ್ನು ನೋಡುತ್ತಿದ್ದ. ಆಗ ಸೇವಕರು ಕುದುರೆಗಳಿಗಾಗಿ ನೆನೆದ ಕಡಲೆಗಳನ್ನು ಕಲ್ಲಿನ ದೋಣಿಗಳಲ್ಲಿ ತುಂಬುತ್ತಿದ್ದರು. ಅದು ಕುದುರೆಗಳ ಪ್ರಿಯವಾದ ಆಹಾರ.

ಆಗ ಮರದ ಮೇಲಿದ್ದ ಕೋತಿಯೊಂದು ಕಡಲೆ ತಿನ್ನುವ ಆಸೆಯಿಂದ ಮರದಿಂದ ಕೆಳಗೆ ಇಳಿಯಿತು. ದೋಣಿಯಲ್ಲಿ ಕೈಹಾಕಿ ಕೈ ತುಂಬ ಕಡಲೆಕಾಳುಗಳನ್ನು ತುಂಬಿಕೊಂಡು ಮತ್ತೆ ಮರವನ್ನು ಹತ್ತಿ ಒಂದೊಂದೇ ಕಾಳುಗಳನ್ನು ತಿನ್ನತೊಡಗಿತು. ಹಾಗೆ ತಿನ್ನುತ್ತಿರುವಾಗ ಒಂದು ಕಾಳು ಕೈಜಾರಿ ಕೆಳಕ್ಕೆ ಬಿತ್ತು. ಆ ಬಿದ್ದ ಕಾಳನ್ನು ಕಳೆದುಕೊಳ್ಳಬಾರದೆಂದು ಕೈಯಲ್ಲಿ, ಬಾಯಲ್ಲಿದ್ದ ಕಡಲೆಕಾಳುಗಳನ್ನು ಮರೆತು ಮತ್ತೆ ಕೆಳಗಿಳಿದು ಬಿದ್ದ ಕಾಳನ್ನು ಹುಡುಕತೊಡಗಿತು. ಹುಡುಕುವ ಭರದಲ್ಲಿ ಅದು ಕುದುರೆಯ ಹಿಂದೆ ಬಂದು ಒಂದೆರಡು ಒದೆಗಳನ್ನು ತಿಂದಿತು. ಆದರೂ ಹುಡುಕುವುದನ್ನು ಬಿಡಲಿಲ್ಲ. ಕೊನೆಗೆ ಅದು ಸಿಗದಾದಾಗ ಮರ ಹತ್ತಿ ಮೋರೆ ಸೊಟ್ಟ ಮಾಡಿ ಕುಳಿತುಕೊಂಡಿತು. ಅದನ್ನು ಕಂಡ ರಾಜ ಬೋಧಿಸತ್ವನನ್ನು ಕೇಳಿದ, ‘ಇದೇನು ಈ ಕೋತಿಯ ನಡವಳಿಕೆ?’ ಬೋಧಿಸತ್ವ ಹೇಳಿದ, ‘ಇದು ಆಸೆಬುರುಕ ಮೂರ್ಖ ಕೋತಿ. ಕೈಯಲ್ಲಿದ್ದ ಅನೇಕ ಕಾಳುಗಳನ್ನು ಬಿಟ್ಟು ಕಳೆದುಹೋದ ಒಂದು ಕಾಳನ್ನೇ ಹುಡುಕುತ್ತ ದು:ಖಪಡುತ್ತಿದೆ. ದೊಡ್ಡದಾದದ್ದನ್ನು ಗುರುತಿಸದೆ ಸಣ್ಣದಕ್ಕೆ ಮಹತ್ವ ಕೊಡುವ ಎಲ್ಲರೂ ಹೀಗೆಯೇ ಮಾಡುತ್ತಾರೆ. ಈಗ ನಾವು ಮಾಡುತ್ತಿರುವುದು ಅದೇ’. ರಾಜನಿಗೆ ಆಶ್ಚರ್ಯವಾಯಿತು ‘ಹಾಗಾದರೆ ನಾವು ಈಗ ದಂಡೆತ್ತಿ ಹೋಗುವುದು ತಪ್ಪೇ’ ಎಂದು ಕೇಳಿದ. ಅದಕ್ಕೆ ಬೋಧಿಸತ್ವ. ‘ಹೌದು, ಮಹಾರಾಜ, ನಾಲ್ಕು ಜನ ಕಳ್ಳರು ದಂಗೆ ಎದ್ದರೆಂದು ಇಡೀ ಸೈನ್ಯ ತೆಗೆದುಕೊಂಡು ಅವೇಶದಲ್ಲಿ ಹೋಗುವುದು ಸರಿಯೇ? ಅದರಲ್ಲೂ ಇದು ಮಳೆಗಾಲ. ವಿನಾಕಾರಣ ನಾವು ಆನೆ, ಕುದುರೆ, ಸೈನ್ಯವನ್ನು ತೊಂದರೆಗೆ ಈಡುಮಾಡುತ್ತೇವೆ. ಇದರ ಬದಲು ಒಂದು ಸಣ್ಣ ಪಡೆಯನ್ನು ಕಳುಹಿಸಿದರೆ ಸಾಕು ದಂಗೆಕೋರರ ನಿಗ್ರಹವಾಗುತ್ತದೆ. ಅಷ್ಟೇ ಏಕೆ, ಸೈನ್ಯ ಹೊರಟಿದೆ ಎಂಬ ಸುದ್ದಿಯೇ ಅವರನ್ನು ಓಡಿಸಿಬಿಡುತ್ತದೆ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಏಕೆ?’ ಎಂದ. ರಾಜನಿಗೆ ಸರಿ ಎನ್ನಿಸಿ ಸೈನ್ಯವನ್ನು ಮರಳಿಸಿದ. ಆದರೆ ಸೈನ್ಯ ಹೊರಟಿದೆ ಎಂಬ ವಿಷಯ ತಿಳಿದೇ ದಂಗೆಕೊರರು ದೇಶಬಿಟ್ಟು ಓಡಿ ಹೋದರು.

ADVERTISEMENT

ಯಾವುದು ದೊಡ್ಡದು ಯಾವುದು ಸಣ್ಣದು, ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬುದರ ಕಲ್ಪನೆ ಇರಬೇಕು. ಇಲ್ಲದಿದ್ದರೆ ಸಣ್ಣದನ್ನು ಪಡೆಯುವುದಕ್ಕಾಗಿ ದೊಡ್ಡದ್ದನ್ನು ಕಳೆದುಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.