ADVERTISEMENT

ಕೃತಘ್ನರೊಡನೆ ಸಹವಾಸ

ಡಾ. ಗುರುರಾಜ ಕರಜಗಿ
Published 19 ಮಾರ್ಚ್ 2019, 19:13 IST
Last Updated 19 ಮಾರ್ಚ್ 2019, 19:13 IST
   

ಒಮ್ಮೆ ಬುದ್ಧ ಧರ್ಮಸಭೆಯಲ್ಲಿ ಕುಳಿತು ಭಿಕ್ಷುಗಳೊಡನೆ ಸಂವಾದ ಮಾಡುತ್ತಿರುವಾಗ ಒಬ್ಬ ಭಿಕ್ಷು ದೇವದತ್ತನ ಬಗ್ಗೆ ಮಾತು ತೆಗೆದ. ಬುದ್ಧ ದೇವದತ್ತನಿಗೆ ಸದಾ ಒಳ್ಳೆಯದನ್ನೇ ಮಾಡುತ್ತಿದ್ದರೂ ಆತ ಪ್ರತಿಯಾಗಿ ಅನ್ಯಾಯವನ್ನೇ ಮಾಡುತ್ತ ಬಂದಿದ್ದಾನೆ. ಅದು ಮಿತ್ರದ್ರೋಹವಲ್ಲವೇ? ಆಗ ಬುದ್ಧ, ‘ಭಿಕ್ಷುಗಳೇ, ದೇವದತ್ತ ಈಗ ಮಾತ್ರ ಮಿತ್ರದೋಹಿಯಾಗಿಲ್ಲ. ಹಿಂದಿನ ಒಂದು ಜನ್ಮದಲ್ಲೂ ಹೀಗೆಯೇ ಕೃತಘ್ನತೆಯನ್ನು ತೋರಿದ್ದ’ ಎಂದು ಆ ಕಥೆಯನ್ನು ಹೇಳಿದ.

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಗ್ರಾಮದಲ್ಲಿ ಬ್ರಾಹ್ಮಣ ಪುತ್ರನಾಗಿ ಹುಟ್ಟಿದ್ದ. ಅವನು ದೊಡ್ಡವನಾದಂತೆ ತಕ್ಷಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು ಕಲಿತು ಬಂದು ಗೃಹಸ್ಥನಾದ. ಅವನು ಜನರಿಗೆ ಧರ್ಮಬೋಧೆ ಮಾಡಲು ಊರಿಂದ ಊರಿಗೆ ಹೋಗುತ್ತಿದ್ದ. ಕಾಶಿಯಿಂದ ಉಜ್ಜೈನಿಗೆ ಹೋಗುವ ದಾರಿಯ ಪಕ್ಕದಲ್ಲಿ ಒಂದು ದೊಡ್ಡದಾದ ಬಾವಿಯಿತ್ತು. ಅದು ಬಹಳ ಆಳದ ಬಾವಿ. ಪ್ರವಾಸಿಗರಿಗೆ ಅನುಕೂಲವಾಗಲೆಂದು ಉದ್ದವಾದ ಹಗ್ಗ ಮತ್ತು ಒಂದೆರಡು ಮಡಕೆಗಳನ್ನು ಇಟ್ಟಿದ್ದರು. ಅದರ ಪಕ್ಕದಲ್ಲೇ ಒಂದು ತೊಟ್ಟಿ ಇತ್ತು. ಪ್ರವಾಸಿಗರು ತಮಗೆ ಬೇಕಾದಷ್ಟು ನೀರನ್ನು ಸೇದಿಕೊಂಡು ಕುಡಿದ ಮೇಲೆ, ಇನ್ನೂ ನಾಲ್ಕು ಬಿಂದಿಗೆ ನೀರು ಸೇದಿ ತೊಟ್ಟಿಯನ್ನು ತುಂಬಿಸಬೇಕಿತ್ತು. ಅದು ಸುತ್ತಮುತ್ತಲಿನ ಪ್ರಾಣಿಗಳಿಗೆ. ಬಾವಿ ಆಳವಾದ್ದರಿಂದ ಪ್ರಾಣಿಗಳಿಗೆ ನೀರು ದೊರೆಯುತ್ತಿರಲಿಲ್ಲ. ಬಾವಿಯ ಸುತ್ತ ದಟ್ಟವಾದ ಕಾಡು ಇತ್ತು. ಅಲ್ಲಿ ನೂರಾರು ಕೋತಿಗಳು ವಾಸವಾಗಿದ್ದವು.

ಒಂದು ದಿನ ಬೋಧಿಸತ್ವ ಮೊದಲನೆಯ ಬಾರಿಗೆ ಈ ಮಾರ್ಗವಾಗಿ ಹೋಗುತ್ತಿದ್ದ. ಅವನಿಗೆ ನೀರಡಿಕೆಯಾಗಿದ್ದರಿಂದ ಬಾವಿಯ ಹತ್ತಿರ ಬಂದು, ನೀರನ್ನು ಸೇದಿಕೊಂಡು, ಕೈಕಾಲು ತೊಳೆದು, ನೀರು ಕುಡಿದ. ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವಾಗ ಅವನ ಮುಂದೆ ಒಂದು ದೊಡ್ಡ ಕೋತಿ ಬಂದು ನಿಂತುಕೊಂಡಿತು. ಅದರ ಮುಖ ಒಣಗಿಹೋಗಿತ್ತು. ಅದು ತುಟಿಯ ಮೇಲೆ ನಾಲಿಗೆಯನ್ನಾಡಿಸುವುದನ್ನು ಕಂಡು ಅದಕ್ಕೆ ವಿಪರೀತ ಬಾಯಾರಿಕೆಯಾಗಿರಬೇಕೆಂದು ಅರಿವಾಯಿತು. ಎದ್ದು ನಿಂತು ನೋಡಿದ. ಪಕ್ಕದ ತೊಟ್ಟಿಯಲ್ಲಿ ಒಂದು ಹನಿ ನೀರಿಲ್ಲದೆ ಒಣಗಿಹೋಗಿದೆ. ಬಹುಶಃ ಈ ಮಾರ್ಗವಾಗಿ ಎರಡು ಮೂರು ದಿನ ಯಾರೂ ಪ್ರಯಾಣ ಮಾಡಿರಲಿಕ್ಕಿಲ್ಲ. ಆದ್ದರಿಂದ ಪ್ರಾಣಿಗಳಿಗೆ ನೀರಿಲ್ಲದೆ ತೊಂದರೆಯಾಗಿದೆ ಎಂದುಕೊಂಡು ನಾಲ್ಕಾರು ಬಿಂದಿಗೆ ನೀರು ಸೇದಿ ತೊಟ್ಟಿಯನ್ನು ತುಂಬಿಸಿದ. ಕೋತಿ ಆತುರದಿಂದ ಹೋಗಿ ನೀರು ಕುಡಿಯಿತು. ಬೋಧಿಸತ್ವ ತನ್ನ ಚೀಲದಿಂದ ನಾಲ್ಕು ಹಣ್ಣುಗಳನ್ನು ತೆಗೆದು ಕೋತಿಗೆ ಕೊಟ್ಟ. ಪಾಪ! ಅದಕ್ಕೆ ಹಸಿವೆಯೂ ಅಗಿದ್ದಿರಬೇಕು. ಗಬಗಬನೇ ಹಣ್ಣಗಳನ್ನು ತಿಂದಿತು. ಬೋಧಿಸತ್ವ ವಿಶ್ರಾಂತಿಗೆಂದು ಮರದ ಕೆಳಗೆ ಮಲಗಿದ.

ADVERTISEMENT

ಎಚ್ಚರವಾದ ಮೇಲೆ ನೋಡುತ್ತಾನೆ, ಈ ಕಪಿ ಅವರ ಮುಂದೆ ನಿಂತು ಅವನನ್ನು ಅಣಕಿಸುತ್ತಿದೆ! ಇವನು ಸುಮ್ಮನೆ ಕುಳಿತರೆ ಹತ್ತಿರ ಬಂದು ಕಡಿಯುವಂತೆ ಹೆದರಿಸಿತು. ಅದರ ದುರ್ನಡತೆಯನ್ನು ಕಂಡು ಬೋಧಿಸತ್ವ, ‘ಎಲಾ ಕೆಟ್ಟಕಪಿ, ನಿನಗೆ ಸಹಾಯವಾಗಲೆಂದು ಹಣ್ಣು, ನೀರು ಕೊಟ್ಟರೆ ನನಗೆ ಹೆದರಿಸುತ್ತೀಯಾ?’ ಎಂದ. ಆಗ ದುಷ್ಟಕಪಿ ತನ್ನ ಹಲ್ಲು ಕಿರಿದು ಹೇಳಿತು, ‘ಇಷ್ಟೇ ಮಾಡುತ್ತೇನೆಂದು ತಿಳಿದಿದ್ದೀಯಾ? ನೋಡು, ನೀನು ಇಲ್ಲಿ ಕುಳಿತಿರುವಾಗಲೆ ನಿನ್ನ ತಲೆಯ ಮೇಲೆ ಮಲವಿಸರ್ಜನೆ ಮಾಡುತ್ತೇನೆ’. ಹೀಗೆ ಹೇಳಿದ್ದೇ ಸರಸರನೆ ಮರವನ್ನೇರಿ ಬೋಧಿಸತ್ವನ ತಲೆಯ ಮೇಲೆ ಮಲವಿರ್ಸಜನೆ ಮಾಡಿ ಹಾರಿ ಹೋಯಿತು. ಬೇಜಾರಿನಿಂದ ಬೋಧಿಸತ್ವ ಅಲ್ಲೇ ಬಾವಿಯ ದಂಡೆಯ ಮೇಲೆ ಸ್ನಾನ ಮಾಡಿ ಶುದ್ಧನಾಗಿ ಹೊರಟ.

ಬುದ್ಧ ಹೇಳಿದ, ‘ದೇವದತ್ತನೇ ಆ ಕಪಿಯಾಗಿದ್ದ. ಇಂಥ ಕೃತಘ್ನರ ಹತ್ತಿರ ನಾವು ಹೋಗಬಾರದು. ಅವರು ಕಸದ ವಾಹನವಿದ್ದಂತೆ. ಹತ್ತಿರ ಹೋದರೆ ಕೆಟ್ಟ ವಾಸನೆ ಬರುತ್ತದೆ. ಇನ್ನೂ ಹತ್ತಿರ ಹೋದರೆ ಮೈಮೇಲೆ ಕಸ ಬೀಳುತ್ತದೆ. ಆದ್ದರಿಂದ ಕೃತಘ್ನರನ್ನು ಕಂಡಾಗ ದೂರವಿಡುವುದೇ ಲೇಸು’. ಇದು ಇಂದಿಗೂ ಸರಿಯಾದ ಉಪದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.