ADVERTISEMENT

ಸಹನೆಯ ಮಿತಿ

ಡಾ. ಗುರುರಾಜ ಕರಜಗಿ
Published 21 ಮೇ 2019, 19:43 IST
Last Updated 21 ಮೇ 2019, 19:43 IST
   

ಹಿಂದೆ ವಾರಾಣ‌ಸಿಯಲ್ಲಿ ಪಾಯಸಪಾಣಿ ಎಂಬ ರಾಜ ಆಡಳಿತ ನಡೆಸುತ್ತಿರುವಾಗ ಕಾಳಕ ಎನ್ನುವವ ಸೇನಾಪತಿಯಾಗಿದ್ದ. ಬೋಧಿಸತ್ವ ಪುರೋಹಿತನಾಗಿದ್ದ. ಅವನ ಹೆಸರು ಧರ್ಮಧ್ವಜ.

ರಾಜ ಪ್ರಾಮಾಣಿಕನಾಗಿದ್ದರೂ ಅವನ ಸೇನಾಪತಿ ಕಾಳಕ ಭ್ರಷ್ಟನಾಗಿದ್ದ. ಲಂಚ ತೆಗೆದುಕೊಂಡು ಅನ್ಯಾಯದ ಪರ ತೀರ್ಪುಗಳನ್ನು ಕೊಡುತ್ತಿದ್ದ. ಒಂದು ಬಾರಿ ಈ ತರಹದ ಅನ್ಯಾಯದಿಂದ ತನ್ನ ಮನೆ-ಮಾರುಗಳನ್ನು ಕಳೆದುಕೊಂಡವನು ಅಳುತ್ತ ಬಂದು ಬೋಧಿಸತ್ವನ ಕಾಲು ಹಿಡಿದು ನ್ಯಾಯ ಕೇಳಿದ. ಬೋಧಿಸತ್ವ ತಾನೇ ನ್ಯಾಯಾಲಯಕ್ಕೆ ನಡೆದು ಸಾಕ್ಷಿಗಳನ್ನು ಪರೀಕ್ಷಿಸಿ ತೀರ್ಮಾನಿಸಿ ಸರಿಯಾದ ನ್ಯಾಯ ನೀಡಿದ. ಜನ ಜೈಕಾರ ಹಾಕಿದರು. ರಾಜನಿಗೂ ಈ ವಿಷಯ ತಲುಪಿ ಮುಂದೆ ಎಲ್ಲ ಮೊಕದ್ದಮೆಗಳನ್ನು ಧರ್ಮಧ್ವಜನೇ ತೀರ್ಮಾನಿಸಲಿ ಎಂದು ಆಜ್ಞೆ ನೀಡಿದ.

ತನಗೆ ಬರುವ ಲಂಚ ನಿಂತು ಹೋದದ್ದರಿಂದ ಕೋಪಗೊಂಡ ಕಾಳಕ ರಾಜನಿಗೆ ದುರ್ಬೋಧೆ ಮಾಡುತ್ತ ಅವನ ಮನಸ್ಸನ್ನು ಕೆಡಿಸತೊಡಗಿದ. ಈ ಧರ್ಮಧ್ವಜನ ಹಿಂದೆ ಒಂದು ಬಹುದೊಡ್ಡ ಗುಂಪಿದೆ. ಯಾವಾಗಲೂ ಅವನ ಹಿಂದೆ ಜನ ಇದ್ದೇ ಇರುತ್ತಾರೆ. ಆತ ರಾಜನನ್ನು ಕೊಂದು ತಾನೇ ರಾಜನಾಗಲು ಹೊಂಚುಹಾಕುತ್ತಿದ್ದಾನೆ ಎಂದೆಲ್ಲ ಹೇಳುತ್ತ ಬಂದು ರಾಜನ ಮನಸ್ಸನ್ನು ಗೆದ್ದ. ಹಾಗಾದರೆ ಇವನನ್ನು ನಿವಾರಿಸುವುದು ಹೇಗೆ? ಜನರೆಲ್ಲ ಅವನನ್ನು ತುಂಬ ಮೆಚ್ಚಿಕೊಳ್ಳುತ್ತಾರಲ್ಲ ಎಂದು ರಾಜ ಕೇಳಿದಾಗ, ಧರ್ಮಧ್ವಜನಿಂದ ಮಾಡಲಾಗದ ಕೆಲಸವನ್ನು ಹೇಳಿ, ಅವನು ಮಾಡದಿದ್ದಾಗ ಮರಣದಂಡನೆಯನ್ನು ನೀಡಬಹುದು ಎಂದು ಸಲಹೆ ನೀಡಿದ ಕಾಳಕ.

ADVERTISEMENT

ಕಾಳಕನ ಉಪದೇಶದಂತೆ ಮರುದಿನ ರಾಜ ಧರ್ಮಧ್ವಜನನ್ನು ಕರೆದು, ‘ನಾಳೆ ಸಾಯಂಕಾಲದೊಳಗೆ ನಮಗೊಂದು ವಿಶಾಲವಾದ ಉದ್ಯಾನವನವನ್ನು ರಚಿಸಿಕೊಡು. ಆಗದಿದ್ದರೆ ನಿನ್ನ ಪ್ರಾಣ ಉಳಿಯಲಾರದು’ ಎಂದ. ಧರ್ಮಧ್ವಜ ಚಿಂತೆಯಲ್ಲಿ ಚಡಪಡಿಸಿದಾಗ ಅದರ ಬಿಸಿ ಇಂದ್ರನಿಗೆ ತಾಗಿ ಧರ್ಮಧ್ವಜನಿಗೆ ಸಹಾಯ ಮಾಡಲೆಂದು ಮುಂದೆ ಬಂದು ನಿಂತ. ಧರ್ಮಧ್ವಜ ತನಗಾದ ತೊಂದರೆಯನ್ನು ಹೇಳಿಕೊಂಡಾಗ, ಇಂದ್ರ ಚಿಂತೆ ಮಾಡಬೇಡವೆಂದು ಹೇಳಿ ತನ್ನ ಶಕ್ತಿಯಿಂದ ಕ್ಷಣಾರ್ಧದಲ್ಲಿ ಊರ ಹೊರಗೆ ಅತ್ಯಂತ ಸುಂದರವಾದ ಉದ್ಯಾನವನವನ್ನು ನಿರ್ಮಿಸಿದ.

ಅದನ್ನು ಕಂಡು ರಾಜನಿಗೆ ಮತ್ತು ಕಾಳಕನಿಗೆ ಆಶ್ಚರ್ಯವಾಯಿತು. ಆದರೂ ಮತ್ತೆ ಅವನನ್ನು ಸಿಕ್ಕಿಹಾಕಿಸಲು ಕಾಳಕನ ಸೂಚನೆಯಂತೆ, ಉದ್ಯಾನವನದ ಮುಂದೆ ಒಂದು ದೊಡ್ಡ ಪುಷ್ಕರಣಿಯನ್ನು ಮರುದಿನ ಸಂಜೆಯೊಳಗೆ ನಿರ್ಮಿಸಲು ಆಜ್ಞೆ ಮಾಡಿದ. ಮತ್ತೆ ಇಂದ್ರ ಮರುದಿನ ಅತ್ಯದ್ಭುತವಾದ ಪುಷ್ಕರಣಿಯನ್ನು ರಚಿಸಿಬಿಟ್ಟ. ಕಾಳಕನಿಗೆ ಮತ್ತಷ್ಟು ಹೊಟ್ಟೆ ಉರಿಯಿತು. ರಾಜನ ಕಿವಿಯೂದಿ, ಮರುದಿನ ಸಂಜೆಯೊಳಗೆ ಉದ್ಯಾನವನದಲ್ಲಿ ಒಂದು ಅತ್ಯಂತ ವಿಸ್ತಾರವಾದ ದಂತದ ಮನೆಯನ್ನು ಕಟ್ಟಲು ಹೇಳಿದ. ಈಗ ಇಂದ್ರನಿಗೆ ಕೋಪ ಬಂತು. ನ್ಯಾಯಪರವಾದ, ಸತ್ಯವಾದಿಯಾದ ಧರ್ಮಧ್ವಜನಿಗೆ ರಾಜ ಮತ್ತು ಕಾಳಕ ಈ ರೀತಿ ತೊಂದರೆ ಕೊಡುವದನ್ನು ಕಂಡು ರಾಜ್ಯದ ಜನತೆಗೆ ಈ ಅನ್ಯಾಯವನ್ನು ತಿಳಿಸಿದ. ಜನ ರೊಚ್ಚಿಗೆದ್ದು ರಾಜನನ್ನು ಹಾಗೂ ಕಾಳಕನನ್ನು ಬೀದಿಗೆಳೆದು ಹೊಡೆದು ಕೊಂದುಹಾಕಿದರು. ನಂತರ ಧರ್ಮಧ್ವಜನನ್ನೇ ರಾಜನನ್ನಾಗಿ ಮಾಡಿದರು.

ದೈವ ಹಾಗೂ ಸಮಾಜಗಳು ಅನ್ಯಾಯವನ್ನು, ಅನ್ಯಾಯ ಮಾಡುವವರನ್ನು ಕೆಲಕಾಲ ಸಹಿಸಿಕೊಳ್ಳುತ್ತವೆ. ಈ ಸಹನೆಯನ್ನು ಸಮಾಜದ ಒಪ್ಪಿಗೆಯಂತಾಗಲಿ, ಅಶಕ್ತತೆಯಂತಾಗಲಿ ಭಾವಿಸುವುದು ತಪ್ಪು. ಅನ್ಯಾಯ ಒಂದು ಹಂತವನ್ನು ದಾಟಿದಾಗ ಸುಮ್ಮನೆ ನೋಡುತ್ತಿದ್ದ ಸಮಾಜ ಮತ್ತು ಜನಗಳು ರೊಚ್ಚಿಗೆದ್ದು ಸರಿಯಾದ ಮತ್ತು ಎಂದೂ ಮರೆಯಲಾರದ ಶಿಕ್ಷೆಯನ್ನು ಕೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.