ADVERTISEMENT

ಉಪಕಾರ ಸ್ಮರಣೆ

ಡಾ. ಗುರುರಾಜ ಕರಜಗಿ
Published 11 ನವೆಂಬರ್ 2018, 20:15 IST
Last Updated 11 ನವೆಂಬರ್ 2018, 20:15 IST

ಗಡಿನಾಡು ಪ್ರದೇಶದ ವ್ಯಾಪಾರಿಯೊಬ್ಬ ತನ್ನ ದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ಐನೂರು ಬಂಡಿಗಳಲ್ಲಿ ತುಂಬಿಸಿ ತನ್ನ ಜನರಿಗೆ ಹೇಳಿದ, ‘ಈ ಸಾಮಾನುಗಳನ್ನು ಸಾವತ್ಥಿಗೆ ತೆಗೆದುಕೊಂಡು ಹೋಗಿ. ಅಲ್ಲಿ ನನ್ನ ಮಿತ್ರನಾದ ಅನಾಥಪಿಂಡಕ ಬಹುದೊಡ್ಡ ಶ್ರೇಷ್ಠಿಯಾಗಿದ್ದಾನೆ. ಆತ ನಿಮಗೆ ಸಹಾಯ ಮಾಡಿ ಒಳ್ಳೆಯ ಬೆಲೆ ಕೊಡಿಸುತ್ತಾನೆ’. ಅದರಂತೆ ಅವರು ಬಂದು ಅನಾಥಪಿಂಡಕ ಶ್ರೇಷ್ಠಿಯನ್ನು ಕಂಡರು. ಆತ ತುಂಬ ವಿಶ್ವಾಸದಿಂದ ಅವರನ್ನು ಸ್ವಾಗತಿಸಿ, ಅವರಿಗೆ ಇರಲು ಹಾಗೂ ಭೋಜನಕ್ಕೆ ತಕ್ಕ ವ್ಯವಸ್ಥೆ ಮಾಡಿ ವ್ಯಾಪಾರವೆಲ್ಲ ಲಾಭಪ್ರದವಾಗುವಂತೆ ಮಾಡಿದ. ವ್ಯಾಪಾರಿಗಳು ಮರಳಿ ತಮ್ಮ ಊರಿಗೆ ಬಂದು ಅನಾಥಪಿಂಡಕನ ಉದಾರಗುಣದ ವರ್ಣನೆ ಮಾಡಿದರು.

ಮುಂದೆ ಕೆಲವು ತಿಂಗಳುಗಳ ನಂತರ ಅನಾಥಪಿಂಡಕನೂ ತನ್ನ ಪ್ರದೇಶದ ವ್ಯಾಪಾರಿಗಳ ಒಂದು ತಂಡವನ್ನು ಐನೂರು ಬಂಡಿ ಸಾಮಾನುಗಳೊಂದಿಗೆ ಈ ಗಡಿನಾಡಿನ ಶ್ರೇಷ್ಠಿಯ ಕಡೆಗೆ ಕಳುಹಿಸಿದ. ಈ ಶ್ರೇಷ್ಠಿ ಅಹಂಕಾರದಿಂದ, ‘ಅವನಾರೋ ಅನಾಥಪಿಂಡಕನಂತೆ, ಅವನಿಗೆ ನಾನೇಕೆ ಸಹಾಯ ಮಾಡಬೇಕು’ ಎಂದು ತಿರಸ್ಕಾರದಿಂದ ಮಾತನಾಡಿದ. ಅವರಿಗೆ ತಂಗಲು ವ್ಯವಸ್ಥೆ, ಊಟಕ್ಕೂ ದಾರಿ ಮಾಡಲಿಲ್ಲ. ಪಾಪ! ವರ್ತಕರೇ ಎಲ್ಲೆಲ್ಲೋ ಇದ್ದುಕೊಂಡು ತಾವೇ ವ್ಯಾಪಾರ ಮಾಡಿಕೊಂಡು ನಷ್ಟವನ್ನೂ ಹೊಂದಿ ಮರಳಿ ಸಾವತ್ಥಿಗೆ ಬಂದರು. ನಡೆದದ್ದನ್ನು ಅನಾಥಪಿಂಡಕನಿಗೆ ವರದಿ ಮಾಡಿದರು.

ಮರುವರ್ಷ ಗಡಿನಾಡಿನ ಶ್ರೇಷ್ಠಿ ಮತ್ತೆ ಐನೂರು ಬಂಡಿಗಳೊಂದಿಗೆ ವ್ಯಾಪಾರಿಗಳನ್ನು ಸಾವತ್ಥಿಗೆ ಕಳುಹಿಸಿದ. ಅನಾಥಪಿಂಡಕ ಶ್ರೇಷ್ಠಿ ಎಲ್ಲ ಅನುಕೂಲಗಳನ್ನು ಮಾಡುತ್ತಾನೆ ಎಂದು ಹೇಳಿದ. ಕಳೆದ ವರ್ಷ ಅನಾಥಪಿಂಡಕನ ಔದಾರ್ಯವನ್ನು ಕಂಡಿದ್ದ ವ್ಯಾಪಾರಿಗಳು ಉತ್ಸಾಹದಿಂದ ಹೋದರು. ಕಳೆದ ಬಾರಿ ಗಡಿನಾಡು ಪ್ರದೇಶಕ್ಕೆ ಬಂದು ಫಜೀತಿಯಾಗಿ ಹೋಗಿದ್ದ ವ್ಯಾಪಾರಿಗಳಿಗೆ ಇವರು ಬಂದದ್ದು ತಿಳಿಯಿತು. ಅನಾಥಪಿಂಡಕನಿಗೆ ತಾವೇ ಈ ವ್ಯಾಪಾರಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಆಶ್ವಾಸನೆ ಕೊಟ್ಟು ಬಂದು, ಊರಿಂದ ಬಂದ ವ್ಯಾಪಾರಿಗಳನ್ನು ಊರಹೊರಗೆಲ್ಲೋ ಇಳಿಸಿ ಬಿಟ್ಟು ಊಟ, ನೀರು ಸಿಗದ ಹಾಗೆ ಮಾಡಿದರು. ಮಧ್ಯರಾತ್ರಿಯಲ್ಲಿ ಅವರ ಮೇಲೆ ದಾಳಿ ಮಾಡಿಸಿ ಎತ್ತುಗಳನ್ನು ಓಡಿಸಿ ಬಂಡಿಗಳನ್ನು ಮುರಿದು ಹಾಕಿದರು. ವ್ಯಾಪಾರಿಗಳು ಬದುಕಿದರೆ ಸಾಕೆಂದುಕೊಂಡು ಉಟ್ಟಬಟ್ಟೆಯಲ್ಲೇ ಮರಳಿ ಗಡಿನಾಡಿಗೆ ಬಂದು ಸೇರಿದರು. ಈಗ ಗಡಿನಾಡ ಶ್ರೇಷ್ಠಿಗೆ ಜ್ಞಾನೋದಯವಾಯಿತು. ಇದು ತಾನು ಅಹಂಕಾರದಿಂದ ಮೆರೆದ ಘಟನೆಗೆ ಪ್ರತಿಫಲ ಎಂದು ತಿಳಿಯಿತು. ನಂತರ ತಾನೇ ಸ್ವತಃ ಸಾವತ್ಥಿಗೆ ಹೋಗಿ ಅನಾಥಪಿಂಡಕ ಶ್ರೇಷ್ಠಿಯ ಕ್ಷಮೆ ಕೇಳಿಕೊಂಡ.

ADVERTISEMENT

ಬುದ್ಧ ಹೇಳಿದ, ‘ಉಪಕೃತನಾದ ವ್ಯಕ್ತಿ ತನಗೆ ಮಾಡಿದ ಉಪಕಾರವನ್ನು ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹಾಗೆ ಅವನು ಮಾಡದೇ ಅಪಕಾರ ಮಾಡಿದರೆ ಮುಂದೆ ಅವನಿಗೆ ಉಪಕಾರ ಮಾಡಲು ಯಾರೂ ಮುಂದೆ ಬರಲಾರರು. ಉಪಕಾರ ಎಂಬುದು ದೊಡ್ಡ ಋಣ. ಅದನ್ನು ಯಾವಾಗಲೂ ತಲೆಯ ಮೇಲೆ ಹೊತ್ತು ನಡೆಸಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.