ADVERTISEMENT

ಬೆರಗಿನ ಬೆಳಕು | ದೇಹಕಾಂತಿಯ ಕಾರಣ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 17:41 IST
Last Updated 18 ಏಪ್ರಿಲ್ 2020, 17:41 IST
   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ನಗರದಲ್ಲೊಂದು ಲೋಭಿ ಕಾಗೆಯಿತ್ತು. ಅದು ರಸ್ತೆಬದಿಯಲ್ಲಿ ಸತ್ತುಬಿದ್ದ, ಸ್ಮಶಾನದ ಹತ್ತಿರವಿದ್ದ ಪ್ರಾಣಿಗಳ ದೇಹಗಳನ್ನು ತಿಂದು ಹಾರಾಡುತ್ತಿತ್ತು. ಅದಕ್ಕೆ ತೃಪ್ತಿಯೇ ಇಲ್ಲ. ನಾನು ಗಂಗಾತೀರಕ್ಕೆ ಹೋಗಿ ಅಲ್ಲಿಯ ಕೊಬ್ಬಿದ ಮೀನುಗಳನ್ನು ತಿನ್ನುತ್ತೇನೆ ಎಂದುಕೊಂಡು ನದಿತೀರಕ್ಕೆ ಬಂದು ಬಿದ್ದ ಸತ್ತ ಮೀನುಗಳನ್ನು ತಿಂದಿತು. ಇನ್ನೂ ತೃಪ್ತಿಯಾಗದೆ ಹಿಮಾಲಯಕ್ಕೆ ಹಾರಿ ಬಂದಿತು. ಅಲ್ಲಲ್ಲಿ ಸುತ್ತಾಡುತ್ತ ಕೊನೆಗೆ ಒಂದು ಅತ್ಯಂತ ಸುಂದರವಾದ ಕೊಳದ ತೀರಕ್ಕೆ ಬಂದು ಮರದಲ್ಲಿ ವಸತಿ ಮಾಡಿತು.

ಆ ಕೊಳದ ಅತ್ಯಂತ ಸ್ವಚ್ಛವಾದ ನೀರಿನಲ್ಲಿ ಅನೇಕ ಮೀನುಗಳು ಮತ್ತು ಆಮೆಗಳು ಸಂತೋಷದಿಂದ ಜೀವಿಸಿದ್ದವು. ಹತ್ತಿರದ ಇನ್ನೊಂದು ಮರದ ಮೇಲೆ ಎರಡು ಚಕ್ರವಾಕ ಪಕ್ಷಿಗಳಿದ್ದವು. ಅವು ತುಂಬ ಸುಂದರವಾದ ಬಂಗಾರ ಬಣ್ಣದ ಹಕ್ಕಿಗಳು. ಕಾಗೆಗೆ ಅವುಗಳನ್ನು ನೋಡಿ ಅಸೂಯೆಯಾಯಿತು. ಅವುಗಳ ದೇಹ ಮತ್ತು ಬಣ್ಣ ಇಷ್ಟು ಸುಂದರವಾಗಬೇಕಾದರೆ ಅವು ಏನನ್ನು ತಿನ್ನುತ್ತವೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿತು ಕಾಗೆಗೆ. ನಿಧಾನವಾಗಿ ತಾನೂ ಆ ಮರಕ್ಕೆ ಹಾರಿಹೋಗಿ ಚಕ್ರವಾಕ ಪಕ್ಷಿಗಳ ಸ್ನೇಹ ಮಾಡಿಕೊಂಡಿತು. ಒಂದು ದಿನ ಅವರ ಕುಶಲವನ್ನು ಕೇಳಿ ಮಾತನಾಡಿ, ‘ಹೇ ಬಂಗಾರ ಬಣ್ಣದ, ಸದಾ ಸಂತೋಷವಾಗಿರುವ ಪಕ್ಷಿಗಳೇ, ತಮ್ಮ ಪ್ರಕಾರ ಪ್ರಪಂಚದಲ್ಲಿ ಅತ್ಯಂತ ಸುಂದರವಾದ ಪಕ್ಷಿಗಳು ಯಾವುವು?’ ಚಕ್ರವಾಕ ಪಕ್ಷಿಗಳು ತುಂಬ ಸಂಕೋಚ ಸ್ವಭಾವದವು. ಒಂದು ಪಕ್ಷಿ ಬಹಳ ಮೃದುವಾಗಿ ಹೇಳಿತು, ‘ಜಗತ್ತಿನಲ್ಲಿ ತುಂಬ ಸುಂದರವಾದ ಲಕ್ಷಾಂತರ ಪಕ್ಷಿಗಳಿವೆ. ನೀನೂ ತುಂಬ ಸುಂದರವಾಗಿದ್ದೀ. ಆದರೆ ಬಹಳ ಪಕ್ಷಿಗಳ ಅಭಿಪ್ರಾಯದಂತೆ ಚಕ್ರವಾಕ ಪಕ್ಷಿಗಳೇ ತುಂಬ ಸುಂದರವಾದವುಗಳು’. ಕಾಗೆ ಕುತೂಹಲದಿಂದ ಕೇಳಿತು, ‘ಇಷ್ಟು ಸುಂದರವಾದ ಬಣ್ಣ, ರೂಪ ಬರಬೇಕಾದರೆ ನೀವು ಯಾವ ಹಣ್ಣುಗಳು, ಯಾವ ಮಾಂಸವನ್ನು ತಿನ್ನುತ್ತೀರಿ, ಯಾವ ನೀರನ್ನು ಕುಡಿಯುತ್ತೀರಿ?’ ಚಕ್ರವಾಕ ಪಕ್ಷಿ ಹೇಳಿತು, ‘ಹೇ ಕಾಗೆ, ನಾವು ಎಂದಿಗೂ ಮಾಂಸವನ್ನು ತಿನ್ನುವವರಲ್ಲ. ಈ ಕೊಳದ ದಂಡೆಯಲ್ಲಿ ಬೆಳೆದ ಪಾಚಿಯನ್ನು ತಿಂದು ಅದೇ ನೀರನ್ನು ಕುಡಿಯುತ್ತೇವೆ. ನಾವು ಮರದಲ್ಲಿದ್ದ ಹಣ್ಣನ್ನು ತಿನ್ನುವುದಿಲ್ಲ. ನೆಲಕ್ಕೆ ಬಿದ್ದ ಹಣ್ಣುಗಳನ್ನು ಮಾತ್ರ ಸ್ವಲ್ಪ ತಿನ್ನುತ್ತೇವೆ. ಮಾಂಸವನ್ನು ತಿಂದು ಯಾವ ಪಾಪವನ್ನೂ ನಾವು ಮಾಡಬಯಸುವುದಿಲ್ಲ. ನೀನು ಏನು ತಿನ್ನುತ್ತೀ?’.

ಕಾಗೆ ತನ್ನ ಚುಂಚನ್ನು ಮೇಲೆತ್ತಿ ಅಹಂಕಾರದಿಂದ ಹೇಳಿತು, ‘ನಾನು ಸಮೃದ್ಧ ಭೋಜನವನ್ನು ಇಷ್ಟಪಡುತ್ತೇನೆ. ಯಾವುದೇ ಪ್ರಾಣಿಯ ಮಾಂಸವನ್ನು, ಯಾವುದೇ ಹಣ್ಣನ್ನು ತಿನ್ನುತ್ತೇನೆ. ಮನುಷ್ಯರು ತಿನ್ನುವ ಎಲ್ಲ ಉಪ್ಪು, ಎಣ್ಣೆಗಳಿರುವ ಪದಾರ್ಥಗಳನ್ನು ಬಿಡದೆ ತಿನ್ನುತ್ತೇನೆ. ಮನುಷ್ಯರ ಮಧ್ಯೆಯೇ ಓಡಾಡುತ್ತೇನೆ. ಕೆಲವೊಮ್ಮೆ ಅವರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಹಾರುತ್ತೇನೆ. ಇಷ್ಟು ಚೆನ್ನಾಗಿ ಊಟ ಮಾಡಿದರೂ, ಏನೂ ತಿನ್ನದ ನಿಮಗಿಂತ ನನ್ನ ಬಣ್ಣ ಯಾಕೆ ಚೆನ್ನಾಗಿಲ್ಲ?’. ಚಕ್ರವಾಕ ಹೇಳಿತು, ‘ನೀನು ಕದ್ದು ತಿನ್ನುವುದರಿಂದ ಅಶುದ್ಧಾಹಾರಿ, ಯಾವ ಪದಾರ್ಥವನ್ನು ತಿಂದರೂ ತೃಪ್ತಿಯಾಗದ್ದರಿಂದ ನಿನ್ನ ಶಕ್ತಿ ಪತನವಾಗುತ್ತದೆ, ಅಹಂಕಾರದಿಂದ ಮನಸ್ಸಿನ ಮೃದುತ್ವ ಮಾಯವಾಗುತ್ತದೆ. ನೀನು ಪ್ರಾಣಿಗಳ ಮಾಂಸ ತಿನ್ನುವುದರಿಂದ, ಸಾಯುವಾಗ ಅವುಗಳು ನರಳಿದ್ದರ ಶಾಪ ನಿನಗೆ ತಟ್ಟಿ ಮಾನಸಿಕ ಶಾಂತಿ ಕಳೆದುಹೋಗುತ್ತದೆ, ದೇಹದ ಕಾಂತಿ ಬರುವುದು ಕೇವಲ ಆಹಾರದಿಂದಲ್ಲ, ಮನಸ್ಸಿನ ನಿರ್ಮಲತೆಯಿಂದ. ಆದ್ದರಿಂದ ದಯವಿಟ್ಟು ನೀನು ಇಲ್ಲಿಂದ ಹಾರಿ ಹೋಗು. ಇಲ್ಲವಾದರೆ ನಾವೇ ಇಲ್ಲಿಂದ ಹೋಗಿಬಿಡುತ್ತೇವೆ’. ಕಾಗೆ ಸೊಕ್ಕಿನಿಂದಹಾರಿಹೋಯಿತು. ಅದರ ರೂಪ ಎಂದಿಗೂ ಕಾಂತಿಯುತವಾಗಲೇ ಇಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.