ADVERTISEMENT

ದಾನದ ಬಳಕೆ

ಡಾ. ಗುರುರಾಜ ಕರಜಗಿ
Published 6 ಫೆಬ್ರುವರಿ 2019, 4:57 IST
Last Updated 6 ಫೆಬ್ರುವರಿ 2019, 4:57 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಆನಂದ ಕೋಸಲರಾಜನ ಅರಮನೆಯಲ್ಲಿ ರಾಣಿಯರಿಗೆಲ್ಲ ಧರ್ಮೋಪದೇಶ ಮಾಡುತ್ತಿದ್ದ. ಒಮ್ಮೆ ರಾಜನಿಗೆ ವಿದೇಶದವರು ಸಾವಿರಾರು ಕಹಾಪಣ ಬಾಳುವ ಸಾವಿರ ಬಟ್ಟೆಗಳನ್ನು ಕಾಣಿಕೆಯಾಗಿ ಕೊಟ್ಟರು. ರಾಜ ತನ್ನ ಐದು ನೂರು ಜನ ರಾಣಿಯರಿಗೆ ಅವುಗಳನ್ನು ಕೊಟ್ಟುಬಿಟ್ಟ. ಮರುದಿನವೇ ಅವರೆಲ್ಲರೂ ತಮ್ಮ ಹೊಸ ಬಟ್ಟೆಗಳನ್ನು ಆನಂದನಿಗೆ ನೀಡಿಬಿಟ್ಟರು. ರಾಣಿಯರು ಮತ್ತೆ ಹಳೆಯ ಬಟ್ಟೆಗಳಲ್ಲೇ ಬಂದಾಗ ಹೊಸ ಬಟ್ಟೆಗಳನ್ನು ಏಕೆ ಧರಿಸಲಿಲ್ಲ ಎಂದು ಕೇಳಿದ ರಾಜ.

‘ನಾವು ಅವನ್ನೆಲ್ಲ ಆನಂದ ಥೇರನಿಗೆ ಕೊಟ್ಟುಬಿಟ್ಟೆವು’ ಎಂದರವರು.

‘ಆನಂದ ಥೇರ ಅವನ್ನೆಲ್ಲವನ್ನೂ ಸ್ವೀಕರಿಸಿದನೆ?’ ಕೇಳಿದ ರಾಜ.

ADVERTISEMENT

ಅವರು ಹೌದೆಂದಾಗ ರಾಜನಿಗೆ ಕೋಪ ಬಂದಿತು. ಯಾಕೆಂದರೆ ಸಮ್ಯಕ್ ಬುದ್ಧರು ಎಲ್ಲ ಸನ್ಯಾಸಿಗಳಿಗೆ ಕೇವಲ ಮೂರು ಚೀವರಗಳನ್ನು (ಬಟ್ಟೆಗಳನ್ನು) ಮಾತ್ರ ಹೊಂದಿರಲು ಅಪ್ಪಣೆ ಮಾಡಿದ್ದಾರೆ. ಅಂಥದ್ದರಲ್ಲಿ ಆನಂದ ಇಷ್ಟೊಂದು ಬಟ್ಟೆಗಳನ್ನು ಸ್ವೀಕರಿಸಿದ್ದು ಸರಿಯಲ್ಲ. ಮರುದಿನ ಕೋಪದಿಂದಲೇ ರಾಜ ಆನಂದನ ಬಳಿಗೆ ಹೋದ.

‘ಭಂತೇ, ನಮ್ಮ ಅರಮನೆಯ ಹೆಣ್ಣುಮಕ್ಕಳು ತಮ್ಮ ಬಳಿಗೆ ಧರ್ಮಶ್ರವಣಕ್ಕೆ ಬರುತ್ತಿದ್ದಾರೆ. ಅದರಿಂದ ಅವರಿಗೇನಾದರೂ ಪ್ರಯೋಜನವಾದಂತೆ ಎನ್ನಿಸುವುದೇ?’

‘ರಾಜಾ, ಅವರು ನಾನು ಹೇಳುವುದನ್ನು ಕೇಳುತ್ತಾರೆ. ಅವರು ಅದನ್ನು ಎಷ್ಟರ ಮಟ್ಟಿಗೆ ಆಚರಣೆಯಲ್ಲಿ ಇಳಿಸುತ್ತಾರೆ ಎನ್ನುವುದು ಅವರ ಪ್ರಯತ್ನಕ್ಕೆ ಬಿಟ್ಟಿದ್ದು’ ಎಂದ ಆನಂದ.

‘ಅವರು ಬರೀ ಧರ್ಮಶ್ರವಣವನ್ನು ಮಾಡುತ್ತಾರೋ ಅಥವಾ ಬಟ್ಟೆಗಳನ್ನು ಕೊಡುತ್ತಾರೋ?’

‘ರಾಜಾ, ನಿನ್ನೆ ನನಗೆ ಅವರು ಸಾವಿರಾರು ಬೆಲೆಬಾಳುವ ಐದುನೂರು ಬಟ್ಟೆಗಳನ್ನು ಕೊಟ್ಟರು’

‘ನೀವು ಅವೆಲ್ಲವನ್ನೂ ಸ್ವೀಕರಿಸಿದಿರಾ?’

‘ಹೌದು ರಾಜಾ, ಸ್ವೀಕರಿಸಿದೆ’

‘ಬುದ್ಧರು ತಮಗೆ ಮೂರಕ್ಕಿಂತ ಹೆಚ್ಚು ಚೀವರಗಳನ್ನು ಹೊಂದಬಾರದೆಂದು ಆಜ್ಞೆ ಮಾಡಿಲ್ಲವೇ’

‘ಹೌದು, ಮಾಡಿದ್ದಾರೆ, ಆದರೆ ಸ್ವೀಕರಿಸಬಾರದೆಂದು ಹೇಳಲಿಲ್ಲ. ಸ್ವೀಕರಿಸಿದ ಬಟ್ಟೆಗಳನ್ನು ತೀರಾ ಹರಿದು ಹೋಗಿರುವ, ಯಾವ ಬಟ್ಟೆಗಳೂ ಇಲ್ಲದ ಸನ್ಯಾಸಿಗಳಿಗೆ ಹಂಚಿಬಿಟ್ಟಿದ್ದೇನೆ’.

‘ಆ ಭಿಕ್ಷುಗಳು ಹೊಸಬಟ್ಟೆ ಪಡೆದ ಮೇಲೆ ಹಳೆಯ ಬಟ್ಟೆಗಳನ್ನು ಏನು ಮಾಡುವರು?’

‘ಅವುಗಳನ್ನು ಒಗೆದು ಶುದ್ಧಮಾಡಿ ಹೆಗಲವಸ್ತ್ರವನ್ನಾಗಿ ಮಾಡಿಕೊಳ್ಳುವರು’.

‘ಹಳೆಯ ಹೆಗಲವಸ್ತ್ರಗಳು ಏನಾದವು?’

‘ಅವುಗಳನ್ನು ಲಂಗೋಟಿಗಳನ್ನಾಗಿ ಮಾಡಿಕೊಳ್ಳುತ್ತಾರೆ’

‘ಮತ್ತೆ ಹಳೆಯ ಲಂಗೋಟಿಗಳು ಏನಾಗುತ್ತವೆ?’

‘ಅವುಗಳನ್ನು ಕಾಲು ಒರೆಸುವುದಕ್ಕಾಗಿ ಇಟ್ಟುಕೊಳ್ಳುತ್ತಾರೆ’

‘ಹಾಗಾದರೆ ಹಳೆಯ ಕಾಲೊರಸುಗಳು ಎಲ್ಲಿ ಹೋದವು?’

‘ಮಹಾರಾಜಾ, ಶ್ರದ್ಧೆಯಿಂದ ಕೊಟ್ಟ ಯಾವ ದಾನವನ್ನು ದುರ್ಬಳಿಕೆ ಮಾಡುವಂತಿಲ್ಲ. ಹಳೆಯ ಕಾಲೊರಸುಗಳನ್ನು ಕುಟ್ಟಿ ಸೋಸಿದ ಮಣ್ಣಿನೊಡನೆ ಕಲೆಸಿ ಗುಡಿಸಲಿನ ಗೋಡೆಗಳಿಗೆ ಆದ ತೂತುಗಳನ್ನು ಮುಚ್ಚುತ್ತೇವೆ’

‘ಭಂತೇ, ತಮಗೆ ನೀಡಿದ ಯಾವ ವಸ್ತುವೂ ವ್ಯರ್ಥವಾಗುವುದಿಲ್ಲವೇ?’

‘ಇಲ್ಲ ರಾಜಾ, ಜನರು ನೀಡಿದ ಭಿಕ್ಷೆ ನಮಗೆ ವರವಿದ್ದಂತೆ. ಅದರಲ್ಲಿ ಒಂದಿಷ್ಟು ವ್ಯರ್ಥವಾದರೂ ಅವರಿಗೆ ಅಪಮಾನಮಾಡಿದಂತೆ ಎಂದು ಭಾವಿಸುತ್ತೇವೆ’.

ರಾಜನಿಗೆ ಅತ್ಯಂತ ಸಂತೋಷವಾಯಿತು. ಅರಮನೆಯಲ್ಲಿ ಉಳಿದಿದ್ದ ಹೊಸಬಟ್ಟೆಗಳನ್ನು ತರಿಸಿ ಥೇರನಿಗೆ ನೀಡಿದ. ಮತ್ತೊಬ್ಬರಿಂದ ಕಾಣಿಕೆಯನ್ನು ಸ್ವೀಕರಿಸುವುದು ಸಂತೋಷಮಾತ್ರವಲ್ಲ, ಜವಾಬ್ದಾರಿಯೂ ಹೌದು. ಅದರ ಸರಿಯಾದ ಬಳಕೆಯಾಗದಿದ್ದರೆ ಅದು ನೀಡಿದವರಿಗೆ ಮಾಡಿದ ಅಪಮಾನ ಎಂಬ ಸತ್ಯ ನಮ್ಮನ್ನು ಸದಾಕಾಲ ಎಚ್ಚರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.