ADVERTISEMENT

ಬೆರಗಿನ ಬೆಳಕು: ಆಸೆಯ ವಿಷಗಾಳಿ

ಡಾ. ಗುರುರಾಜ ಕರಜಗಿ
Published 17 ಜನವರಿ 2022, 14:57 IST
Last Updated 17 ಜನವರಿ 2022, 14:57 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ |
ಬೀಸೆ ಮನದುಸಿರು ಮತಿದೀಪವಲೆಯುವುದು ||
ವಾಸನೆಗಳನುಕೂಲ ಸತ್ಯತರ್ಕಕೆ ಶೂಲ |
ಶೋಷಿಸಾ ವಾಸನೆಯ – ಮಂಕುತಿಮ್ಮ || 542 ||

ಪದ-ಅರ್ಥ: ನರವಿವೇಚನೆ=ಮನುಷ್ಯನ ವಿವೇಕ, ಮನದುಸಿರು=ಮನದ+ಉಸಿರು, ಮತಿದೀಪವಲೆಯುವುದು=ಮತಿದೀಪವು(ಬುದ್ಧಿಯೆಂಬ ದೀಪವು)+ಅಲೆಯುವುದು (ಹೊಯ್ದಾಡುವುದು), ವಾಸನೆಗಳನುಕೂಲ=ವಾಸನೆಗಳ+ಅನುಕೂಲ, ಶೂಲ=ಇರಿಯುವ ಉಪಕರಣ, ಶೋಷಿಸು=ಒಣಗಿಸು, ಇಂಗಿಸು.

ವಾಚ್ಯಾರ್ಥ: ಮಂಥರೆ ಆಸೆಯ ಪ್ರತೀಕ, ಕೈಕೇಯಿ ಮನುಷ್ಯನ ವಿವೇಚನೆಯ ಸಂಕೇತ. ಆಸೆಯ ಬಿಸಿಯ ಉಸಿರು ಬೀಸಿದಾಗ ತಿಳುವಳಿಕೆಯ ದೀಪ ಹೊಯ್ದಾಡುತ್ತದೆ. ಅದಕ್ಕೆ ಸರಿಯಾಗಿ ಪೂರ್ವಕರ್ಮದ ವಾಸನೆಗಳು ಅನುಕೂಲವಾಗಿ ಸತ್ಯಕ್ಕೆ ದಾರಿಯಾದ ತರ್ಕಕ್ಕೆ ಶೂಲವಾಗುತ್ತವೆÉ. ಆ ವಾಸನೆಗಳನ್ನು ಒಣಗಿಸು.

ADVERTISEMENT

ವಿವರಣೆ: ರಾಮಾಯಣದ ಒಂದು ಪ್ರಸಂಗ ಮನುಷ್ಯ ಜೀವನಕ್ಕೆ ಹೇಗೆ ಮಾರ್ಗದರ್ಶಿಯಾದೀತು ಎಂಬುದನ್ನು ಈ ಕಗ್ಗ ತಿಳಿಸುತ್ತದೆ. ರಾಮಾಯಣದ ಮತ್ತು ನಮ್ಮ ಪುರಾಣದ ಕಥೆಗಳಲ್ಲಿ ಬರುವ ಪಾತ್ರಗಳು ಸಂಕೇತ ರೂಪದವು. ಕೈಕೇಯಿ ಸುಮನಸ್ಸಿನ, ವಿವೇಕದ ಪ್ರತೀಕ. ಆಕೆಗೆ ರಾಮನ ಮೇಲೆ ಅಪಾರ ಪ್ರೀತಿ. ಬಹುಶ: ಭರತನಿಗಿಂತಲೂ, ರಾಮನ ಮೇಲೆಯೇ ಅವಳ ವಾತ್ಸಲ್ಯ. ಆಕೆ ನಾಲ್ಕು ಮಕ್ಕಳನ್ನು ಆತ್ಯಂತಿಕವಾಗಿ ಪ್ರೀತಿಸಿದವಳು. ಅದು ಮನುಷ್ಯನ ಸಹಜ ಸ್ವಭಾವ. ಕೈಕೇಯಿ ಹಾಗೆಯೇ ಉಳಿದಿದ್ದರೆ ರಾಮಾಯಣವೆಲ್ಲಿ ಆಗುತ್ತಿತ್ತು? ಆಕೆಯೊಂದಿಗೇ ಅಯೋಧ್ಯೆಗೆ ಬಂದ ದಾದಿ ಮಂಥರೆಗೆ ಕೈಕೇಯಿಯ ಕಲ್ಯಾಣವೊಂದೇ ಮುಖ್ಯ. ಅದು ತಪ್ಪೂ ಅಲ್ಲ. ಯಾಕೆಂದರೆ ಕೈಕೇಯಿ ಮಂಥರೆಯ ಬದುಕಿನ ಕೇಂದ್ರಬಿಂದು. ಆಕೆಯ ಒಳಿತನ್ನು ಬಿಟ್ಟು ಮಂಥರೆಗೆ ಬೇರೆ ಯಾವ ಸ್ವಾರ್ಥ ಚಿಂತನೆಯೂ ಇಲ್ಲ. ಆಕೆಯ ಆಸೆಯೆಂದರೆ ತನ್ನ ಪ್ರೀತಿಯ ಕೈಕೇಯಿಯ ಮಗ ಭರತ ಚಕ್ರವರ್ತಿಯಾದರೆ ಕೈಕೇಯಿ ಭದ್ರವಾಗುತ್ತಾಳೆ, ಪ್ರಮುಖಳಾಗುತ್ತಾಳೆ. ಆಕೆಗೂ ರಾಮನ ಮೇಲೆ ದ್ವೇಷವಿಲ್ಲ. ಇದ್ದದ್ದು ಕೈಕೇಯಿಯ ಮತ್ತು ಭರತನ ಮೇಲಿನ ಅನನ್ಯ ಪ್ರೀತಿ. ಅದಕ್ಕಾಗಿ ಆಕೆ ಆಸೆಯ ಪ್ರತಿರೂಪವಾಗಿ ಕೈಕೇಯಿಯ ಮನಸ್ಸನ್ನು ಕೆಡಿಸುತ್ತಾಳೆ. ಅದನ್ನು ಕಗ್ಗ ಸುಂದರವಾಗಿ, “ಮನದುಸಿರು ಬೀಸೆ ಮತಿದೀಪವಲೆಯುವುದು” ಎನ್ನುತ್ತದೆ. ಆ ಆಸೆಯ ವಿಷಗಾಳಿ ಬೀಸಿದಾಗ ಕೈಕೇಯಿಯ ಸುಮನಸ್ಸು ಹೊಯ್ದಾಡುತ್ತದೆ, ಆಸೆಯ ಬಲೆಗೆ ಬೀಳುತ್ತದೆ.

ಈ ವಿಷಗಾಳಿಗೆ ಮತ್ತಷ್ಟು ಪುಷ್ಠಿ ದೊರೆತರೆ ಏನಾದೀತು? ಮತಿಯ ದೀಪವೇ ಆರಿಹೋಗುತ್ತದೆ. ಈ ಆಸೆಯ ಗಾಳಿಗೆ ಮತ್ತಷ್ಟು ವೇಗವನ್ನು ಕೊಡುವುದು ನಮ್ಮ ವಾಸನೆಗಳು. ಅವು ನಾವು ಹಿಂದೆ ಮಾಡಿದ ಕರ್ಮಗಳ ಪ್ರತಿಫಲ. ಹಿಂದೂಸಿದ್ಧಾಂತದ ಪ್ರಕಾರ, ಬಾಹ್ಯಪ್ರಪಂಚದಲ್ಲಿ, ಅದು ಈ ಜನ್ಮದಲ್ಲೂ ಆಗಬಹುದು ಅಥವಾ ಹಿಂದಿನ ಜನ್ಮಗಳಲ್ಲೂ ಆಗಿರಬಹುದು, ಮಾಡಿದ ಪ್ರತಿಯೊಂದು ಕರ್ಮವೂ ಪರಿಣಾಮವನ್ನು ಮಾಡಿಯೇ ತೀರುತ್ತದೆ. ವೃಕ್ಷವೊಂದನ್ನು ಕತ್ತರಿಸುವಾಗ ಕೊಡಲಿಯಿಂದ ಹಾಕುವ ಪ್ರತಿಯೊಂದು ಹೊಡೆತವೂ ಮರವನ್ನು ಹೇಗೆ ಅಸ್ಥಿರಗೊಳಿಸುವುದೋ ಹಾಗೆಯೇ ಅದು ನಮ್ಮ ಅಸ್ತಿತ್ವದ ಮೇಲೂ ತನ್ನ ಗುರುತನ್ನು ಉಳಿಸುತ್ತದೆ.

ಆಸೆ ಮತ್ತು ವಾಸನೆಗಳು ಸೇರಿ ಪ್ರಬಲವಾದಾಗ, ನಮ್ಮನ್ನು ಸತ್ಯದ ದಾರಿಯಲ್ಲಿ ಕರೆದೊಯ್ಯುವ ತರ್ಕಕ್ಕೆ ಅವು ತಡೆಗೋಡೆಯಾಗುತ್ತವೆ, ಶೂಲವಾಗುತ್ತವೆ. ಆಗ ಸತ್ಯ ಹೊಳಪನ್ನು ಕಳೆದುಕೊಂಡು ಮರೆಯಾಗುತ್ತದೆ. ಕೈಕೇಯಿಗೆ ಆದದ್ದು ಅದೇ. ಕಗ್ಗದ ಸಂದೇಶವೇ ಇದು. ವಾಸನೆಗಳನ್ನು ನಿಗ್ರಹಿಸಬೇಕು, ಅವುಗಳನ್ನು ಒಣಗಿಸಬೇಕು. ಬರೀ ಕುಡಿ ಚಿವುಟಿದರೆ ಸಾಲದು. ಅದು ಮತ್ತೆ ಚಿಗುರುತ್ತದೆ. ಅದನ್ನು ಬೇರುಸಹಿತ ಒಣಗಿಸಬೇಕು. ಆಗ ಮಾನವನ ವಿವೇಚನೆ ಸ್ಥಿರವಾಗುತ್ತದೆ, ಆಸೆಯ ಗಾಳಿಗೆ ನಲುಗಿ ಹೋಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.