ADVERTISEMENT

ಬೆರಗಿನ ಬೆಳಕು | ಚಂಚಲವಾಗದ ಮನಸ್ಸು

ಡಾ. ಗುರುರಾಜ ಕರಜಗಿ
Published 22 ಫೆಬ್ರುವರಿ 2023, 22:15 IST
Last Updated 22 ಫೆಬ್ರುವರಿ 2023, 22:15 IST
   

ಕಳವಳವ ನೀಗಿಬಿಡು, ತಳಮಳವ ದೂರವಿಡು |

ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ ||
ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು |
ತಿಳಿ ತಿಳಿವು ಶಾಂತಿಯಲಿ - ಮಂಕುತಿಮ್ಮ || 828 ||

ಪದ-ಅರ್ಥ: ಕಳವಳ=ಚಿಂತೆ, ತಳಮಳ=ಸಂಕಟ, ಕಣ್ಗೆ=ಕಣ್ಣಿಗೆ.

ವಾಚ್ಯಾರ್ಥ: ಚಿಂತೆಯನ್ನು ಕಳೆದುಬಿಡು, ಸಂಕಟವನ್ನು ದೂರವಿಡು, ಮನದಿಂದ ಗಾಬರಿ, ಗಲಭೆಗಳನ್ನು ಕಳೆದು ತಳ್ಳು. ದೀಪ ಅಲುಗಾಡುತ್ತಿರಲು ಕಣ್ಣಿನ ಗುರಿ ತಪ್ಪುತ್ತದೆ. ಶಾಂತಿಯಲ್ಲಿ ಮಾತ್ರ ತಿಳಿವು ದೊರೆತೀತು.

ವಿವರಣೆ: ಕಗ್ಗದ ಅಪೇಕ್ಷೆ ನಮ್ಮೆಲ್ಲರ ಅಪೇಕ್ಷೆಯೂ ಆಗಿದೆ. ನಾವೆಲ್ಲರೂ ಕಳವಳ ಬೇಡ, ತಳಮಳ ನಮ್ಮ ಬಳಿ ಬರುವುದೇ ಬೇಡ. ಮನದಲ್ಲಿ ಗಾಬರಿ ಗಲಭೆಗಳು ಏಳುವುದು ಬೇಡ ಎಂದೇ ಬಯಸುತ್ತೇವೆ. ಎಲ್ಲರಿಗೂ ಬೇಕಾದದ್ದು ಮನದ ಶಾಂತಿ. ಆದರೆ ಅದನ್ನು ಪಡೆಯುವುದು ಹೇಗೆಂಬುದೆ ತಿಳಿಯದು, ನಮ್ಮ ಸಾಧು, ಸಂತರು, ತತ್ವಜ್ಞಾನಿಗಳು, ಮನಃಶಾಸ್ತ್ರಜ್ಞರು ಎಲ್ಲರೂ ಹೇಳುವುದು ಈ ಮನಃಶಾಂತಿಯ ಬಗೆಗೇ. ಆದರೆ ಮನದ ಶಾಂತಿ ಪಡೆಯುವುದು ಹೇಗೆ? ಮನದಲ್ಲಿ ತಳಮಳ ಉಂಟಾಗುವುದು ಏಕೆ ಎಂಬುದನ್ನು ಗಮನಿಸಿದರೆ, ಕಾರಣ ಸ್ಪಷ್ಟವಾಗುತ್ತದೆ. ನಮಗೆ ಇಷ್ಟವಾಗುವಂತೆ ಯಾರಾದರೂ ನಡೆದುಕೊಳ್ಳದಿದ್ದರೆ, ನಮಗೆ ಇಷ್ಟವಾಗದ್ದು ನಡೆದರೆ ಬೇಸರ, ಉದ್ವಿಗ್ನತೆ ಉಂಟಾಗುತ್ತದೆ. ಆದರೆ ಬದುಕಿನಲ್ಲಿ ಎಲ್ಲವೂ ನಾವು ಅಪೇಕ್ಷಿಸಿದಂತೆ ಆಗುವುದು ಅಸಾಧ್ಯ. ಆಗ ಭಾವ ಕೆರಳುತ್ತದೆ, ಋಣಾತ್ಮಕವಾಗಿ ಚಿಂತಿಸಲು ತೊಡಗುತ್ತದೆ.

ADVERTISEMENT

ಅದರಿಂದ ಮತ್ತೆ ತಳಮಳ. ಕಗ್ಗ ಇದಕ್ಕೊಂದು ಸಲಹೆಯನ್ನು ನೀಡುತ್ತದೆ. ಮನಸ್ಸಿನ ಅಲೆದಾಟವನ್ನು ಕಡಿಮೆಮಾಡಿಕೊಳ್ಳಬೇಕು. ನೀವು ಸೂಜಿಯಲ್ಲಿ ದಾರವನ್ನು ಪೋಣಿಸುತ್ತಿದ್ದೀರಿ ಎಂದು ಭಾವಿಸಿಕೊಳ್ಳಿ. ದೀಪದ ಬೆಳಕು ಬೇಕು. ಆದರೆ ಗಾಳಿಗೆ ದೀಪ ಹೊಯ್ದಾಡುತ್ತಿದ್ದರೆ ಗುರಿ ಸಾಧ್ಯವಾಗುವುದಿಲ್ಲ. ದೀಪ ಹೊಯ್ದಾಡದಂತೆ ನೋಡಿದಾಗ ಮಾತ್ರ ಕಾರ್ಯಸಾಧ್ಯ. ಇದನ್ನು ಮಾಡಲು ಸಾಧ್ಯವಾಗುವುದು ಸಾಕ್ಷೀಭಾವದಿಂದ.

ನಮ್ಮಲ್ಲಿ ಏಳುವ ಭಾವೋದ್ವೇಗಗಳನ್ನು ನಾವು ಸಾಕ್ಷಿಯಂತೆ ಗಮನಿಸಲು ಸಾಧ್ಯವಾದರೆ ಅವು ನಿಧಾನವಾಗಿ ಸತ್ವಹೀನವಾಗಿ ಮನಕ್ಕೆ ಶಾಂತಿ ಬರುತ್ತದೆ. ಅದಕ್ಕೆ ಶ್ರೀ ರಾಮಕೃಷ್ಣರು ಒಂದು ಘಟನೆಯನ್ನು ಹೇಳುತ್ತಿದ್ದರು. ಒಂದು ತರಗತಿಯಲ್ಲಿ ಜೋರಾದ, ಗದ್ದಲ, ಹಾರಾಟ ನಡೆಯುತ್ತಿತ್ತು. ಇನ್ಸಪೆಕ್ಟರ್ ಅಅಲ್ಲಿಗೆ ಧಾವಿಸಿದರು. ಮಕ್ಕಳು ಅವರನ್ನು ಗಮನಿಸದೆ ಹಾರಾಡುತ್ತಲೇ ಇದ್ದರು. ಆಗ ಇನ್ಪಪೆಕ್ಟರ್ ತರಗತಿಯಲ್ಲಿದ್ದ ಒಬ್ಬ ಎತ್ತರದ ಹುಡುಗನನ್ನು ಹಿಡಿದು, ಬೈದು ‘ನಡೆ ಹೊರಗೆ’ ಎಂದು ಕಳುಹಿಸಿದರು. ತರಗತಿ ಶಾಂತವಾಯಿತು. ಶಾಂತತೆಯ ಅವಶ್ಯಕತೆಯ ಬಗ್ಗೆ ಸಾಹೇಬರು ಉಪನ್ಯಾಸ ಮಾಡಿದರು. ಆಗ ಹುಡುಗನೊಬ್ಬ ಕೇಳಿದ, “ಸರ್, ಈಗ ನಮ್ಮ ಉಪಾಧ್ಯಾಯರು ಒಳಗೆ ಬರಬಹುದೆ?” ಇನ್ಪಪೆಕ್ಟರ್ ಬೈದು ಹೊರಗೆ ಕಳುಹಿಸಿದ್ದು ವಿದ್ಯಾರ್ಥಿಯನ್ನಲ್ಲ, ಶಿಕ್ಷಕನನ್ನು.
ಗಲಾಟೆಯನ್ನು ನಿಲ್ಲಿಸಬೇಕಾದ ಶಿಕ್ಷಕ ತಾನೇ ಗಲಾಟೆಯಲ್ಲಿ ಸೇರಿಕೊಂಡಿದ್ದ. ಅದಕ್ಕೆ ರಾಮಕೃಷ್ಣರು ಹೇಳಿದರು, ಮನಸ್ಸುಸಾಕ್ಷಿಯಂತಿದ್ದರೆ ಅದು ಹೆಚ್ಚು ಅಲುಗಾಡದೆ ಸ್ಥಿಮಿತದಲ್ಲಿರುತ್ತದೆ. ಅದು ಚಂಚಲವಾಗದೆ ಇದ್ದಷ್ಟು ಮನಸ್ಸು ತಿಳಿಯಾಗಿ, ಶಾಂತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.