ADVERTISEMENT

ವಿಶ್ವಸತ್ವದ ತೆರೆ

ಡಾ. ಗುರುರಾಜ ಕರಜಗಿ
Published 18 ಡಿಸೆಂಬರ್ 2019, 19:42 IST
Last Updated 18 ಡಿಸೆಂಬರ್ 2019, 19:42 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ |
ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ||
ಹೊರಗೊಳಗುಗಳಲ್ಲಿ ಸಂತತ ನೆರೆದು ಹರಿಯುತ್ತ |
ಭರಿಸುತಿರುವುದು ಬಾಳ – ಮಂಕುತಿಮ್ಮ || 225 ||

ಪದ-ಅರ್ಥ: ಶರಧಿ=ಸಮುದ್ರ, ಅಲಚಿ=ಅಲುಗಾಡಿಸಿ,
ಜಾಲಿಸುವ=ಸೋಸುವ, ಲಹರಿ=ತೆರೆ, ಭರಿಸು=ತುಂಬು, ರಕ್ಷಿಸು.
ವಾಚ್ಯಾರ್ಥ: ಸಮುದ್ರದಲ್ಲಿರುವ ವಸ್ತುಗಳನ್ನು ಅಲುಗಾಡಿಸಿ, ಸೋಸಿ ಶುದ್ಧಗೊಳಿಸುವ ತೆರೆಯಂತೆ ವಿಶ್ವಸತ್ವದ ತೆರೆಯೊಂದು ನಮ್ಮ ಬದುಕಿನ ಒಳಗೆ, ಹೊರಗೆ ಸತತವಾಗಿ ಹಬ್ಬಿ, ಹರಿದು ಬಾಳನ್ನು ತುಂಬುತ್ತಿದೆ, ರಕ್ಷಿಸುತ್ತಿದೆ.

ವಿವರಣೆ: ಅಮೆರಿಕದ ಖ್ಯಾತ ಖಗೋಳ ವಿಜ್ಞಾನಿ ಕಾರ್ಲ ಸಗಾನ್ ತಮ್ಮ ಪ್ರಸಿದ್ಧವಾದ ‘ಕಾಸ್ಮಾಸ್’ ಎಂಬ ಪುಸ್ತಕದಲ್ಲಿ ಒಂದು ಸುಂದರವಾದ ಮಾತು ಹೇಳುತ್ತಾರೆ. ‘ಎಲ್ಲ ಮನುಷ್ಯರಿಗೂ ಸಮುದ್ರವೆಂದರೆ ತುಂಬ ಕುತೂಹಲ, ಸಂತೋಷ. ಸಮುದ್ರದ ತಡಿಯಲ್ಲಿ ಕುಳಿತಾಗ ಬಂದು ಬಂದು ಅಪ್ಪಳಿಸುವ ತೆರೆಗಳನ್ನು ಎಷ್ಟು ನೋಡಿದರೂ ಬೇಸರವಾಗುವುದಿಲ್ಲ, ಹೊತ್ತು ಸರಿದದ್ದೇ ತಿಳಿಯುವುದಿಲ್ಲ. ಅಂತೆಯೇ ಆಗಸದ ನಕ್ಷತ್ರಗಳು, ಆಕಾಶಕಾಯಗಳನ್ನು ನೋಡಿದಾಗ ಅದೇ ಕುತೂಹಲ ಮೂಡುತ್ತದೆ.

ADVERTISEMENT

ಏಕೆ ಗೊತ್ತೇ? ನಾವೆಲ್ಲ ಬಂದಿದ್ದು ಅಲ್ಲಿಂದಲೇ. ಒಂದು ಕಾಲದಲ್ಲಿ ಆವಿಯಾದದ್ದು, ನಂತರ ನಂತರ ಗ್ರಹವಾಗಿ, ಅದರಲ್ಲಿ ಜೀವಿಯಾಗಿ ಹುಟ್ಟಿದ್ದೊಂದು ಬಹುದೊಡ್ಡ ರಮ್ಯ ಕಥೆ. ಜೀವ ಹುಟ್ಟಿದ್ದು ನೀರಿನಲ್ಲಿ, ಸಮುದ್ರದಲ್ಲಿ. ನಂತರ ವಿಕಾಸವಾಗುತ್ತ ಮನುಷ್ಯನಾದದ್ದು ಮತ್ತೊಂದು ಅದ್ಭುತ ಕಥೆ. ಅದಕ್ಕೇ ಸಮುದ್ರವನ್ನು, ಆಕಾಶವನ್ನು ಕುತೂಹಲದಿಂದ ನೋಡುವುದು ನಮ್ಮ ಬದುಕಿನ ಮೂಲಕ್ಕೆ ಹೋಗುವ ಪ್ರಕ್ರಿಯೆ’.

ನಾವೆಲ್ಲರೂ ಬಂದದ್ದು ಒಂದೇ ಮೂಲದಿಂದ. ಬಹುಶಃ ಹೋಗುವುದೂ ಅದೇ ಮೂಲಕ್ಕೆ. ಹೀಗೆ ನಮ್ಮೆಲ್ಲರನ್ನೂ ಒಂದೇ ಸೂತ್ರದಲ್ಲಿ ಬಂಧಿಸಿದ್ದೇ ಈ ವಿಶ್ವತತ್ವ. ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ, ಕೈಗೆ ನಿಲುಕುವುದಿಲ್ಲ ಆದರೆ ನಮ್ಮ ಒಳಹೊರಗನ್ನು ಆವರಿಸಿ ಬದುಕನ್ನು ನಿರ್ದೇಶಿಸುತ್ತದೆ.

ಕಗ್ಗ ಅದಕ್ಕೊಂದು ಸುಂದರವಾದ ಉದಾಹರಣೆಯನ್ನು ಕೊಡುತ್ತದೆ. ಸಮುದ್ರದ ಹೊಟ್ಟೆಯಲ್ಲಿರುವ ಪ್ರತಿಯೊಂದು ವಸ್ತುವನ್ನು ತೆರೆಗಳು ತೂರಾಡಿ, ಅಲುಗಾಡಿಸುತ್ತವೆ, ಅವುಗಳನ್ನು ಬೇರ್ಪಡಿಸುತ್ತವೆ. ಅಷ್ಟೇ ಅಲ್ಲ, ಅವುಗಳನ್ನು ಶೋಧಿಸಿ, ಪರಿಷ್ಕರಿಸುತ್ತವೆ. ನಂತರ ಒಂದು ಚೂರನ್ನೂ ಉಳಿಸಿಕೊಳ್ಳದೆ ತಂದು ತೀರಕ್ಕೆ ಎಸೆದು ನಿರುಮ್ಮಳವಾಗುತ್ತವೆ.

ಇದೊಂದು ಪ್ರಪಂಚ ಸಮುದ್ರವಿದ್ದಂತೆಯೇ. ಅದರಲ್ಲಿ ಅದೆಷ್ಟು ವಸ್ತುಗಳು! ಅದೆಷ್ಟು ಜೀವಗಳು! ಈ ಪ್ರಪಂಚದ ಮೆರುಗು, ಗದ್ದಲ, ಸಂಭ್ರಮಗಳು ಕಣ್ಣು ತುಂಬುತ್ತವೆ. ಆದರೆ ನಮಗಾರಿಗೂ ಅರಿವಿಲ್ಲದಂತೆ ಶಕ್ತಿಯೊಂದು ಪ್ರತಿಯೊಂದನ್ನು ಗಮನಿಸಿ, ಪರೀಕ್ಷಿಸುತ್ತದೆ. ಅದು ಎಲ್ಲವನ್ನು ಸರಿಯಾಗಿ ಅಲುಗಾಡಿಸಿ, ತಟ್ಟಿ ಹದಕ್ಕೆ ತರುತ್ತದೆ. ಹದಕ್ಕೆ ಬರಲಾಗದ್ದನ್ನು
ಕುಟ್ಟಿ ಪುಡಿ ಮಾಡುತ್ತದೆ. ಕೊನೆಗೆ ಎಲ್ಲ ಹಂತಗಳು ಮುಗಿದ ಮೇಲೆ, ಸರಿಯಾದ ಸಮಯ ಬಂದಾಗ ಅವುಗಳನ್ನು ಸಮುದ್ರದಾಚೆಗೆ ಎಸೆದು ನಿರ್ಮಮತೆಯನ್ನು ತೋರುತ್ತದೆ.

ಈ ವಿಶ್ವಸತ್ವ ನಮ್ಮೆಲ್ಲರನ್ನು ಸರಿಯಾದ ವ್ಯವಸ್ಥೆಗೆ ತರುವ ತೆರೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.