ADVERTISEMENT

ಬೆರಗಿನ ಬೆಳಕು: ಕರ್ಮದ ಫಲ

ಡಾ. ಗುರುರಾಜ ಕರಜಗಿ
Published 18 ಸೆಪ್ಟೆಂಬರ್ 2022, 15:46 IST
Last Updated 18 ಸೆಪ್ಟೆಂಬರ್ 2022, 15:46 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ! |
ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ ? ||
ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ |
ಮಣ್ಣೆ ತರ್ಪಣ ನಿನಗೆ – ಮಂಕುತಿಮ್ಮ || 717 ||

ಪದ-ಅರ್ಥ: ಎಂದಳುವುದೇಕೋ=ಎಂದು+ಅಳುವುದು+ಏಕೋ, ನಿನ್ನೊಡಲೆ=ನಿನ್ನ+ಒಡಲೆ(ದೇಹವೆ), ಸವುದೆಯುರಿ=ಸವುದೆ(ಸೌದೆ)+ಉರಿ,

ವಾಚ್ಯಾರ್ಥ: ನಿನ್ನ ಹೆಣವನ್ನು ನೀನೇ ಹೊತ್ತು ಸಾಗಿಸುವುದು ಸರಿ. ಆಗ ಜೊತೆಗಾರರನ್ನು ಸಂಬಂಧಿಕರನ್ನು ಕರೆಯುವುದು ಏಕೆ? ನಿನ್ನ ದೇಹವೆ ಚಿತೆ, ಪ್ರಪಂಚದ ನಂಟುತಂಟೆಗಳೇ ಸೌದೆ
ಮತ್ತು ಉರಿ. ಮಣ್ಣೇ ತರ್ಪಣ.

ADVERTISEMENT

ವಿವರಣೆ: ಭಗವದ್ಗೀತೆಯ ಒಂದು ಮಾತು ಹೀಗಿದೆನಾದತ್ತೇ ಕಸ್ಯಚಿತ್ ಪಾಪಂ ನ ಚೈವ ಸುಕೃತಂ ವಿಭು: ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯಂತಿ ಜಂತವ: || (5-15) “ಯಾರ ಪಾಪವನ್ನೂ ನಾವು ತೆಗೆದುಕೊಳ್ಳಲಾಗುವುದಿಲ್ಲ ಹಾಗೂ ಇನ್ನೊಬ್ಬರ ಪುಣ್ಯ ನಮಗೆ ಸಿಗುವುದಿಲ್ಲ. ನಾವು ಏನು ಅನುಭವಿಸುತ್ತೇವೋ ಅದು ನಾವು ಮಾಡಿದ ಕರ್ಮಫಲ”. ಕಗ್ಗ, ಗೀತೆಯ ಮಾತನ್ನು ವಿಶದಪಡಿಸುತ್ತದೆ. ಅದನ್ನು ಕಠಿಣವಾಗಿ ಹೇಳುತ್ತದೆ. “ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ”. ಇದರರ್ಥ ನಿನ್ನ ಕರ್ಮದ ಫಲವನ್ನು ನೀನೇ ಹೊರಬೇಕು. ಪ್ರತಿಯೊಂದು ಕರ್ಮಕ್ಕೆ ಅದರದೇ ಆದ ಫಲವಿದೆ. ಸತ್ಕರ್ಮಕ್ಕೆ-ಸತ್ಫಲ, ದುಷ್ಕರ್ಮಕ್ಕೆ –ದುಷ್ಫಲ. ಈ ನಿಯಮ ಧರ್ಮಪ್ರವೃತ್ತಿಗೆ ಆಧಾರವಾಗಿದೆ. ಪುರಂದರದಾಸರು ಹಾಡಿದರು, “ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೋ ದೇವಾ?”. ಹಾಗೆಂದರೆ, ನಾನು ಮಾಡಿದ ಕರ್ಮಕ್ಕೆ ದೊರೆತ ಫಲವನ್ನು ದೇವರೂ ತಪ್ಪಿಸಲಾರ. ಹಾಗಿರುವಾಗ ಅಣ್ಣ ಬಾ, ತಮ್ಮ ಬಾ ಎಂದು ಎಲ್ಲರನ್ನು ಕರೆಯುವುದರಲ್ಲಿ ಯಾವ ಅರ್ಥವಿದೆ?

ಭಗವಂತ ಒಳ್ಳೆಯ ವ್ಯಾಪಾರಿ. ಒಂದನ್ನೂ ಮರೆಯದೆ ದಾಖಲಿಸುತ್ತಾನೆ. ಎಂದೋ ಮಾಡಿದ ತಪ್ಪನ್ನು, ಉದಾರ ಕಾರ್ಯವನ್ನು ಸರಿಯಾಗಿ ಪಟ್ಟಿಮಾಡಿ ನಮ್ಮ ಖಾತೆಗೆ ಸೇರಿಸುತ್ತಾನೆ. ಅವುಗಳ ಫಲವನ್ನು ಆಗಿಂದಾಗ್ಗೆಯೇ ಕೊಡಬಹುದು ಅಥವಾ ಬೇರೆ ಕಾಲದಲ್ಲಿ ಕೊಡಬಹುದು. ಅದು ಅವನ ಇಚ್ಛೆ. ಆದರೆ ಫಲ ಬರದೇ ಹೋಗುವುದಿಲ್ಲ. ಫಲ ಬಂದಾಗ, ವ್ಯಕ್ತಿಗೆ ಹಿಂದೆ ಮಾಡಿದ್ದು ಮರೆತು ಹೋಗಿ, “ನನಗೇಕೆ ಈ ಶಿಕ್ಷೆ?” ಎಂದು ಕೇಳುತ್ತಾನೆ. ಕರ್ಮದ ನಂತರದ ಬದುಕಿನಲ್ಲಿ ಸನ್ನಡತೆ ತೋರಿದರೆ ಫಲದಲ್ಲಿ ಕೊಂಚ ರಿಯಾಯಿತಿಯನ್ನು ಆತ ತೋರಬಹುದೇನೋ. ಆದರೆ ಫಲ ತಪ್ಪದು. ಎಂದೋ ಲಂಚ ತಿಂದಿದ್ದಕ್ಕೆ ಯಾವಾಗಲೋ ಜೈಲು ಶಿಕ್ಷೆ. ರಾಜಕಾರಣದಲ್ಲಿ ನಂಬಿಸಿ, ಹಿಂದಿನಿಂದ ಚೂರಿ ಹಾಕಿದ್ದಕ್ಕೆ ಮುಂದೊಂದು ದಿನ ಭೃಷ್ಟತೆಯ ಅನಾವರಣ. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸದೆ, ಆಡಂಬರದ ಬದುಕು ತೋರಿದರೆ ಮುಂದೆ ವೃದ್ಧಾಶ್ರಮ ತಪ್ಪೀತೇ? ನಿಷ್ಕರುಣೆಯಿಂದ ನಿಸರ್ಗವನ್ನು ಶತಮಾನಗಳ ಕಾಲ ಹೊಸಕಿಹಾಕಿದರೆ ಅಕಾಲದ ಮಳೆ, ಚಳಿಗಾಲದ ಉರಿಬಿಸಿಲು, ಸಮುದ್ರದ ಉಬ್ಬರ, ಸುನಾಮಿ, ಭೂಕಂಪ ತಪ್ಪೀತೇ? ಇದನ್ನು ಕಗ್ಗ ಒರಟಾಗಿ ಹೇಳುತ್ತದೆ. ನಿನ್ನ ಕರ್ಮಕ್ಕೆ ನೀನೇ ಹೊಣೆ, ಇನ್ನಾರನ್ನೂ ಹೊಣೆಗಾರರನ್ನಾಗಿ ಮಾಡಬೇಡ. ನಿನ್ನ ದೇಹವೆ ಚಿತೆ, ಜಗತ್ತಿನಲ್ಲಿ ಎದುರಾಗುವ ಸಮಸ್ಯೆಗಳೇ ಸೌದೆ, ಉರಿ. ಕೊನೆಗೆ ನಿನಗೆ ತರ್ಪಣ ಸಿಗುವುದು ಮಣ್ಣಿಂದಲೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.