ADVERTISEMENT

ಬೆರಗಿನ ಬೆಳಕು: ಅಮೃತವಾದ ಕ್ಷಣಗಳು

ಡಾ. ಗುರುರಾಜ ಕರಜಗಿ
Published 2 ಆಗಸ್ಟ್ 2021, 15:35 IST
Last Updated 2 ಆಗಸ್ಟ್ 2021, 15:35 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕ್ಷಣವದೊಂದೆ ಅನಂತಕಾಲ ತಾನಾಗುವುದು |
ಅನುಭವಕೆ ಸತ್ತ್ವ ಶಿವ ಸುಂದರಗಳಮರೆ ||
ಮನ ತುಂಬುಶಶಿಯಾಗಿ, ನೆನಪಮೃತವಾಗುವುದು |
ಕ್ಷಣದೊಳಕ್ಷಯ ಕಾಣೊ – ಮಂಕುತಿಮ್ಮ || 445 ||

ಪದ-ಅರ್ಥ: ಕ್ಷಣವದೊಂದೆ=ಕ್ಷಣವು+
ಅದು+ಒಂದೆ, ಸುಂದರಗಳಮರೆ=
ಸುಂದರಗಳು+ಅಮರೆ(ಅಂಟಿಕೊಂಡರೆ), ನೆನಪಮೃತವಾಗುವುದು=ನೆನಪು+

ಅಮೃತವಾಗುವುದು, ಕ್ಷಣದೊಳಕ್ಷಯ=
ಕ್ಷಣದೊಳು+ಅಕ್ಷಯ.

ADVERTISEMENT

ವಾಚ್ಯಾರ್ಥ: ಯಾವ ಅನುಭವಕ್ಕೆ ಸತ್ತ್ವ, ಶಿವ, ಸುಂದರತೆಗಳ ಸಂಪರ್ಕವಾಗುವುದೋ, ಅದೊಂದೇ ಕ್ಷಣ ಅನಂತವಾಗುವುದು. ಮನಸ್ಸು ಪೂರ್ಣಿಮೆಯ ಚಂದ್ರನ ಬೆಳಕಿನಂತೆ ತಂಪಾಗುತ್ತದೆ, ನೆನಪು ಅಮೃತವಾಗುತ್ತದೆ. ಹೀಗೆ ಪ್ರತಿಯೊಂದು ಕ್ಷಣ ಅಕ್ಷಯವಾಗುತ್ತದೆ.

ವಿವರಣೆ: ನಾನೊಮ್ಮೆ ಬದರಿನಾಥನಲ್ಲಿದ್ದೆ. ಬೆಳಿಗ್ಗೆ ಎದ್ದು ಹಿಮಾಚ್ಛಾದಿತವಾದ ಪರ್ವತಗಳನ್ನು ನೋಡುತ್ತ ನಿಂತಿದ್ದೆ. ಆಗ ಸೂರ್ಯೋದಯವಾಯಿತು. ಒಂದರೆಕ್ಷಣದಲ್ಲಿ ನಾನು ನೋಡುತ್ತಿದ್ದ ಹಿಮಶಿಖರಗಳಿಗೆ ಬೆಂಕಿ ಹೊತ್ತಿ ಧಗಧಗನೆ ಉರಿಯುವಂತೆ ಕಂಡಿತು. ನಾನು ಬೆರಗಾಗಿ ನೋಡುತ್ತಿದ್ದಂತೆ ಆ ಬೆಂಕಿಯ ಜ್ಞಾಲೆಗಳು ನಿಧಾನಕ್ಕೆ ಕರಗಿದರೂ ಶಿಖರಗಳು ಹೊನ್ನ ಕಳಶಗಳಂತೆ ಹೊಳೆಯತೊಡಗಿದವು. ಇದು ಬೆಳಕಿನ ಸೂರ್ಯಕಿರಣಗಳು ಹಿಮದ ಕೋಡುಗಳ ಮೇಲೆ ಬಿದ್ದು ಪ್ರತಿಫಲಿಸಿದಾಗ ಆದ ವೈಭವದ ದೃಶ್ಯ. ಅದು ಎಷ್ಟು ಹೊತ್ತು ಆಗಿದ್ದೀತು? ಐದು ನಿಮಿಷವೋ, ಹೆಚ್ಚಿದರೆ ಹತ್ತು ನಿಮಿಷವಾಗಿದ್ದೀತು. ಆದರೆ ಅದು ನನ್ನ ಮನಃಪಟಲದಲ್ಲಿ ಅಚ್ಚೊತ್ತಿ ನಿಂತು, ಬದುಕಿರುವವರೆಗೂ ಪುನಃ ಪುನಃ ಸ್ಮರಿಸಿಕೊಳ್ಳುವಂತೆ ಮಾಡುತ್ತಿದೆ. ಆ ನಿಸರ್ಗದ ಅನನ್ಯ ಸೌಂದರ್ಯದ ಕ್ಷಣ ಅಮೃತವಾಗಿದೆ.

ಎರಡು ದಶಕಗಳ ಹಿಂದೆ ವಾರಾಣಸಿಗೆ ಹೋದಾಗ ಭಾರತರತ್ನ, ಪಂಡಿತ ಬಿಸ್ಮಿಲ್ಲಾ ಖಾನ್ ಸಾಹೇಬರ ಮನೆಗೆ ಹೋಗಿದ್ದೆ. ಆಗ ಅವರಿಗೆ, ‘ಸರ್, ನೀವು ಇಷ್ಟೊಂದು ದೇಶಗಳಲ್ಲಿ, ಅಷ್ಟೊಂದು ದೊಡ್ಡ ದೊಡ್ಡವರ ಮುಂದೆ ಕಾರ್ಯಕ್ರಮ ಕೊಟ್ಟಿದ್ದೀರಿ. ನಿಮ್ಮ ಬದುಕಿನಲ್ಲಿ ಮರೆಯಲಾರದಂತಹ ಘಟನೆ ಯಾವುದು?’ ಎಂದು ಕೇಳಿದೆ. ಅದಕ್ಕವರು, ‘ಒಂದು ನಿಮಿಷ ಇರಿ’ ಎಂದು ಮೂಲೆಯಲ್ಲಿದ್ದ ಕಪಾಟಿನಿಂದ ಒಂದು ಪ್ಲಾಸ್ಟಿಕ್ ಲಕೋಟೆಯನ್ನು ತಂದರು. ನನ್ನ ಭುಜ ಹಿಡಿದು ಮನೆಯ ಮುಂದಿನ ಬಾಗಿಲಿಗೆ ಕರೆತಂದು ತೋರಿಸಿದರು. ಆ ಲಕೋಟೆಯಲ್ಲಿದ್ದದ್ದು, ಸಂಗೀತಗಾರರು ಕಾರ್ಯಕ್ರಮ ನೀಡುವಾಗ ಶೇರ್‌ವಾನಿಯ ಮೇಲೆ ಹಾಕಿಕೊಳ್ಳುವಂಥ ಜಾಕೆಟ್. ಅದನ್ನು ದಿಟ್ಟಿಸಿ ನೋಡುತ್ತ, ಜಾಕೆಟ್‌ನ ಒಂದು ಭಾಗವನ್ನು ತೋರಿಸುತ್ತ, ‘ನೋಡಿ, ಇಲ್ಲಿಯೇ ಗಾಂಧೀಜಿ ಕೈ ಇಟ್ಟಿದ್ದರು’ ಎಂದರು! ಅದು ಆದದ್ದು 1939 ರ ಸುಮಾರಿನಲ್ಲಿ. ಇವರ ಶಹನಾಯಿಯ ವಾದವನ್ನು ಮೆಚ್ಚಿಕೊಂಡ ಗಾಂಧೀಜಿ, ಇವರ ಹೆಗಲ ಮೇಲೆ ಕೈ ಇಟ್ಟು ‘ಬಹುತ್ ಅಚ್ಛಾ’ ಎಂದಿದ್ದರಂತೆ. ಕೈ ಇಟ್ಟಿದ್ದು ಎಷ್ಟು ಹೊತ್ತು? ಐದು ಸೆಕೆಂಡೋ, ಹತ್ತು ಸೆಕೆಂಡೋ? ಆದರೆ ಅ ಕ್ಷಣ ಪಂಡಿತ್‌ಜೀಯವರ ಬಾಳಿನುದ್ದಕ್ಕೂ ಬೆಳದಿಂಗಳಾಗಿ ಹರಡಿತ್ತು. ಮೃತಕ್ಷಣ ಅಮೃತಕ್ಷಣವಾಗಿತ್ತು!

ಇದು ಎಲ್ಲರ ಅನುಭವಕ್ಕೂ ಬಂದ ವಿಷಯ. ನಮ್ಮ ಬದುಕಿನಲ್ಲಿ ಆದ ಸಂತಸದ, ಆತಂಕದ, ಸಾಧನೆಯ, ಧನ್ಯತೆಯ ಕ್ಷಣಗಳು ಬದುಕಿದ್ದು ಕೆಲವೇ ಕಾಲ. ಆದರೆ ಅವುಗಳ ನೆನಪು ಬಾಳಿನಲ್ಲಿ ತುಂಬಿಕೊಂಡಿದೆ. ಈ ಮಾತನ್ನು ಕಗ್ಗ ಹೇಳುತ್ತದೆ. ಯಾವ ಅನುಭವಕ್ಕೆ ಸತ್ತ್ವದ (ಸತ್ಯದ), ಶಿವದ, ಸುಂದರದ ಸ್ಪರ್ಶವಾಗಿದೆಯೋ ಅದರ ನೆನಪು ಬೆಳದಿಂಗಳಾಗಿ ಮನ ತುಂಬುತ್ತದೆ, ಅಮೃತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.